ಕುಮಾರವ್ಯಾಸನು ಹಾಡಿದನೆಂದರೆ
ಕುಮಾರವ್ಯಾಸನು ಹಾಡಿದನೆಂದರೆ,
ಕಲಿಯುಗ ದ್ವಾಪರವಾಗುವುದು!
ಭಾರತ ಕಣ್ಣಲಿ ಕುಣಿವುದು;
ಮೆಯ್ಯಲಿ ಮಿಂಚಿನ ಹೊಳೆ
ತುಳುಕಾಡುವುದು!
ಆ ಕುರುಭೂಮಿಯು ತೋರುವುದು;
ಆ ರಣರಂಗದಲಿ,
ಆ ಸಂಗ್ರಾಮದಲಿ,
ಪಟುಭಟರಾರ್ಭಟ ಕೇಳುವುದು!
ಮೈ ನವಿರೇಳುವುದು !
ಹೊಳೆಯುವ ಕೈದುಗಳಾಟದಲಿ,
ಕಲಿಗಳ ಕದನದ ಕೂಟದಲಿ,
ತಾಗುವ ಗದೆಗಳ ಸಂಘಟ್ಟಣೆಯಲಿ, ರಥಚಕ್ರಧ್ವನಿ ಚೀತ್ಕಾರದಲಿ,
ಸಾಯ್ವರ ಶಾಪದಲಿ,
ಬೀಳ್ವರ ತಾಪದಲಿ
ನಸುಸೋತಿರುವರ ಕೋಪದಲಿ,
ನೆರೆ ಗೆದ್ದಿಹರಾಟೋಪದಲಿ,
ಕೆನೆಯುವ ಹಯಗಳ ಹೇಷಾರವದಲಿ,
ಕಿವಿ ಬಿರಿಯುವುದು!
ಎದೆ ಮುರಿಯುವುದು!
ಬಸಿಯುವ ಮಜ್ಜೆಯ ಪಂಕದೊಳೂಡಿ
ಚಿಮ್ಮುವ ರಕ್ತನ ಬುಗ್ಗೆಯ ನೋಡಿ
ಕಣ್ಣೊಡೆಯುವುದು!
ಮೈ ನಡುಗುವುದು!
ಕೇಳಿರಿ! ಪಾರ್ಥನ ಸಾರಥಿಯು
ರಣ ಗೀತೆಯನು,
ರಣ ನೀತಿಯನು,
ಬೋಧಿಸುವನು ನಿರ್ಭೀತಿಯನು!
ಕುರುರಂಗದ ಶರಶಯ್ಯೆಯಲಿ
ಭೀಷ್ಮನು ಮಲಗಿಹನು!
ಹೆಣಗಳ ಬಣಬೆಯ ಮಂಚದಲಿ
ದ್ರೋಣನು ಬಿದ್ದಿಹನು!
ನೆತ್ತರವೀಂಟುತಲಿರುವನು ಭೀಮನು
ಅಯ್ಯೋ, ನೋಡಲ್ಲಿ! ರಥದಿಂದುರುಳುತಲಿರುವನು ಕರ್ಣನು,
ಹಾ! ಹಾ! ನೋಡಿಲ್ಲಿ!
ರಣಚಂಡಿಯು ಆ ಬೆಂಕಿಯ ಮಗಳು
ಹೆಣ್ಣಿನ ರೂಪದ ಬರಸಿಡಿಲವಳು!
ಮುಗುಳ್ಳಗೆ ಬೀರುತ ನೋಡಲ್ಲಿ
ನಿಂತಿರುವಳು ರಣರಂಗದಲಿ
ದ್ರೌಪದಿ ಮುಡಿಗೆದರಿ!
ವೈಶಂಪಾಯನ ಸರಸಿಯ ತೀರದಿ ತೋರುವರಾರಲ್ಲಿ!
ಕೌರವದೇವನು ಸಿಡಿಲಾಗಿರುವನು
ಭೀಮನ ಸರಿಸದಲಿ!
ವೈರಿಯ ಎದೆಯನು
ಒಡೆಯುವ ಗದೆಯನು
ಮೇಲೆತ್ತಿರುವನು ನೋಡಲ್ಲಿ!
ಭೀಮನು ಬಿದ್ದನೆ!
ಕೌರವ ಗೆದ್ದನೆ!
ಮುಂದಾಗುವುದನು ಕಾಣಲ್ಲಿ!
ಇದಾವ ನ್ಯಾಯ!
ಏನನ್ಯಾಯ!
ಕೃಷ್ಣನ ಕುಹಕವ ನೋಡಲ್ಲಿ!
ಏನನು ನೋಡುವೆ? ತಡೆಯುವೆ ಏಕೆ? ಕೌರವರಾಯನು ಮಡಿಯಲೆ ಬೇಕೆ ?
ಯುವಕನೆ ತುಡುಕು ಕಠಾರಿಯನು!
ಹೊಡೆ ರಣಭೇರಿಯನು!
ನಡೆ, ನಡೆ, ಊದು ತುತ್ತೂರಿಯನು !
ಕರೆ, ರಣಮಾರಿಯನು!
ಕುಮಾರವ್ಯಾಸನು ಹಾಡಿದನೆಂದರೆ,
ಕಲಿಯುಗ ದ್ವಾಪರವಾಗುವುದು !
ಭಾರತ ಕಣ್ಣಲಿ ಕುಣಿವುದು ; ಮೆಯ್ಯಲಿ
ಮಿಂಚಿನ ಹೊಳೆ ತುಳುಕಾಡುವುದು !
ಕಲಿ ಕೆಚ್ಚಾಗುವನು !
ಕವಿ ಹುಚ್ಚಾಗುವನು !
ಸಾಹಿತ್ಯ: ಕುವೆಂಪು
ಕಾಮೆಂಟ್‌ಗಳು