ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೂತ್ರಧಾರ ರಾಮಯ್ಯ


 ಸೂತ್ರಧಾರ ರಾಮಯ್ಯ


ಸೂತ್ರಧಾರ ನಾಟಕ ತಂಡದ ಸಂಸ್ಥಾಪಕ ಸದಸ್ಯರಾದ ರಾಮಯ್ಯನವರು ನಾಡಿನ ಹೆಸರಾಂತ ರಂಗಕರ್ಮಿ ಮತ್ತು ಬರಹಗಾರರು. 

ರಾಮಯ್ಯ 1946ರ ಜನವರಿ 16ರಂದು
ಕನಕಪುರದ ತಾಲ್ಲೂಕಿನ ದೊಡ್ಡ ಆಲನಹಳ್ಳಿಯಲ್ಲಿ ಜನಿಸಿದರು. ತಂದೆ ವೆಂಕಟೇಶಯ್ಯ. ತಾಯಿ ಮಂಗಳಮ್ಮ. ಅವರು ಬಿ.ಎಸ್‌ಸಿ. ಮತ್ತು ಎಲ್.ಎಲ್.ಬಿ. ಪದವಿ ಗಳಿಸಿದರು. 

ರಾಮಯ್ಯ  ಅವರು ಉದ್ಯೋಗಕ್ಕೆ ಸೇರಿದ್ದು ವಿಮಾ ಇಲಾಖೆಯಲ್ಲಿ. 29 ವರ್ಷದ ಸೇವೆಯ ನಂತರ ಸ್ವಯಂ ನಿವೃತ್ತಿ ಪಡೆದು ವಕೀಲಿ ವೃತ್ತಿಗೆ ತೊಡಗಿದರು. 

ರಾಮಯ್ಯ ಅವರು ಹೆಸರಾಗಿದ್ದು ಅವರು ಹವ್ಯಾಸಕ್ಕಾಗಿ ಆಯ್ದುಕೊಂಡ ರಂಗಭೂಮಿಯಿಂದ. ಶಾಲಾ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರದ್ದು ಸಕ್ರಿಯ ಪಾತ್ರ. 1967ರಲ್ಲಿ ಎಂ.ಇ.ಎಸ್. ಕಾಲೇಜಿನ ‘ಸಂಧ್ಯಾಕಾಲ’ ನಾಟಕದ ಮೂಲಕ ಹವ್ಯಾಸಿ ರಂಗಭೂಮಿಗೆ ಪಾದಾರ್ಪಣ ಮಾಡಿದರು. ವಿಮಾ ಇಲಾಖೆಗೆ ಸೇರಿದ ನಂತರ ಸಚಿವಾಲಯ ಕ್ಲಬ್ ಮುಖಾಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ನಾಟಕದಲ್ಲಿ ಭಾಗಿಯಾಗುತ್ತಿದ್ದರು. ಆರ್. ನಾಗೇಶ್ ಅವರಿಂದ ಗುರುತಿಸಲ್ಪಟ್ಟು ಈಡಿಪಸ್, ಚೋಮ, ಆ ಸ್ಫೋಟ, ಕಫನ್, ಕಾಮಗಾರಿ, ದೊಡ್ಡಪ್ಪ, ರಣಹದ್ದು, ಕತ್ತಲೆ ಬೆಳಕು, ಹುತ್ತದಲ್ಲಿ ಹುತ್ತ, ಜೈಸಿದ ನಾಯಕ, ತೆರೆಗಳು, ಸೀತಾಪಹರಣ, ಮುಂತಾದ ನಾಟಕಗಳಲ್ಲಿ ಪಾತ್ರಧಾರಿಯಾದರು. ಆಕಾಶವಾಣಿ, ದೂರದರ್ಶನ ನಾಟಕಗಳಲ್ಲೂ ಭಾಗಿಯಾದರು. ವಾರ್ತಾ ಮತ್ತು ಪ್ರಚಾರ ಇಲಾಖೆ ನಡೆಸಿದ ಸುಮಾರು 300 ನಾಟಕಗಳಲ್ಲಿ ಭಾಗಿಯಾಗಿದ್ದರು.

ಸೂತ್ರಧಾರ ರಾಮಯ್ಯ ಎಂದೇ ಖ್ಯಾತರಾದ ರಾಮಯ್ಯ, ಸೂತ್ರಧಾರ ನಾಟಕ ತಂಡವನ್ನು ಕಟ್ಟಿದ್ದಲ್ಲದೆ ಸೂತ್ರಧಾರ ವಾರ ಪತ್ರಿಕೆಯ ಸಂಪಾದಕರಾಗಿ 1986 ರಿಂದ 1993ರವರೆಗೆ ರಂಗ ಚಟುವಟಿಕೆಗಳನ್ನು ಪ್ರತಿಬಿಂಬಿಸಿದ ಖ್ಯಾತಿವಂತರು. ಮುಂದೆ ಅವು ’ಈ ಮಾಸ ನಾಟಕ’ಗಳ ರೂಪ ಪಡೆದು ಎರಡು ದಶಕಗಳಿಗೂ ಮೀರಿ ನಡೆದಿದೆ.  ಅವರು ರಂಗಭೂಮಿ ಏಳುಬೀಳುಗಳು, ಕನ್ನಡದಲ್ಲಿ ಹಾಸ್ಯ ನಾಟಕಗಳು, ನೇಪಥ್ಯ ಸಂಚಿಕೆ, ರಂಗಶಿಕ್ಷಣ ಮುಂತಾದ ಹಲವಾರು ವಿಶೇಷ ಸಂಚಿಕೆಗಳ ಪ್ರಕಟಣೆ ಮಾಡಿದರು. ‘ಕಲಾಕ್ಷೇತ್ರದ ಮೆಟ್ಟಿಲು ಮಹಿಮೆ’ ಹಲವು ಸಂಪುಟಗಳಲ್ಲಿ ಪ್ರಕಟಗೊಂಡಿದೆ.  ಪನ್ ಮಾಡುವ ಹವ್ಯಾಸದಿಂದ ಪನ್ನು ಸ್ವಾಮಿ, ಪನ್ನೇಶ್ವರ ರಾಮ, ಪನ್‌ಜುರ್ಲಿ ಎಂಬ ಹೆಸರುಗಳೂ ಇವರ ಹೆಸರಿನೊಂದಿಗೆ ಬೆಸೆದಿವೆ. ವಕೀಲರಾಗಿರುವುದಷ್ಟೇ ಅಲ್ಲದೆ ‘ನ್ಯಾಯಾಂಗ ರಂಗ’ ನಾಟಕ ತಂಡದ ಸ್ಥಾಪನೆಗೂ ಶ್ರಮವಹಿಸಿದರು. 

ರಾಮಯ್ಯನವರಿಗೆ ಕರ್ನಾಟಕ ನಾಟಕ ಅಕಾಡಮಿಯಿಂದ 2000ದ ವರ್ಷದ ಪ್ರಶಸ್ತಿ ಸಂದಿದೆ. 

On the birthday of theatre activist, artiste and writer Sutradhara Ramaiah 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ