ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶೀರ್ಕಾಳಿ


 ಶೀರ್ಕಾಳಿ ಗೋವಿಂದರಾಜನ್


'ರಾಮನ ಅವತಾರ' ಗೀತೆಯನ್ನು ಕೇಳಿ ಆನಂದಿಸದ ಕನ್ನಡಿಗರೇ ಇಲ್ಲ.  ಸಂಪೂರ್ಣ ರಾಮಾಯಣದ ಪರಿಕಲ್ಪನೆಯನ್ನು ಅವಿಸ್ಮರಣೀಯವಾಗಿ ಭೂಕೈಲಾಸ ಚಿತ್ರಕ್ಕಾಗಿ ಏಳು ನಿಮಿಷಗಳ ಒಂದು ಗೀತೆಯಲ್ಲಿ ಕಟ್ಟಿಕೊಟ್ಟ ಕು. ರ. ಸೀತಾರಾಮಶಾಸ್ತ್ರಿಗಳ ಸಾಹಿತ್ಯವನ್ನು ತಮ್ಮ ಕಂಚಿನಕಂಠದಲ್ಲಿ ಸುಶ್ರಾವ್ಯವಾಗಿ ಅಮರರಾಗಿಸಿದವರು ಶೀರ್ಕಾಳಿ ಗೋವಿಂದರಾಜನ್.

ಶೀರ್ಕಾಳಿ ಗೋವಿಂದರಾಜನ್ ಕರ್ನಾಟಕ ಸಂಗೀತದ ಪ್ರಮುಖ ಗಾಯಕರು ಮತ್ತು ದಕ್ಷಿಣ ಭಾರತ ಚಿತ್ರರಂಗದ ಮಹಾನ್ ಹಿನ್ನೆಲೆ ಗಾಯಕರು. 

ಗೋವಿಂದರಾಜನ್ ಅವರು ತಮಿಳುನಾಡಿನ ಶೀರ್ಕಾಳಿ ಎಂಬ ಊರಿನಲ್ಲಿ 1933ರ ಜನವರಿ 19ರಂದು ಜನಿಸಿದರು.  ತಂದೆ ಶಿವ ಚಿದಂಬರಂ. ತಾಯಿ ಅವಯಾಂಬಳ್.  ಗೋವಿಂದರಾಜನ್  ತಮ್ಮ ಎಂಟನೇ ವಯಸ್ಸಿನಲ್ಲಿ ತಿರುಪುರಸುಂದರಿ ದೇವಸ್ಥಾನದಲ್ಲಿ ಜ್ಞಾನಪಾಲ್ ಉತ್ಸವದ ಸಂದರ್ಭದಲ್ಲಿ ಬಾಲ ಪ್ರತಿಭೆಯಾಗಿ ಪ್ರಸಿದ್ಧಿಗೆ ಬಂದರು. 1949 ರಲ್ಲಿ ಚೆನ್ನೈನ ಕಾಲೇಜಿನಲ್ಲಿ 'ಇಸೈಮಣಿ' ಪದವಿಯನ್ನು ಪಡೆದರು.‘ಸಂಗೀತ ವಿದ್ವಾನ್’ ಪದವಿಯನ್ನೂ ಪಡೆದರು. ಅದೇ ಸಮಯದಲ್ಲಿ, ಅವರು ತಮ್ಮ ಗುರು ಮದ್ರಾಸಿನ ಸೆಂಟ್ರಲ್ ಕಾಲೇಜ್ ಆಫ್ ಕರ್ನಾಟಿಕ್ ಮ್ಯೂಸಿಕ್‌ನಲ್ಲಿ ಪ್ರಾಧ್ಯಾಪಕರಾಗಿದ್ದ ತಿರುಪ್ಪಂಪುರಂ ಸ್ವಾಮಿನಾಥ ಪಿಳ್ಳೈ ಅವರ
ಮಾರ್ಗದರ್ಶನದಲ್ಲಿ ಗುರುಕುಲ ಮಾದರಿಯ ಕಠಿಣ ಅಭ್ಯಾಸದಲ್ಲಿ ಭಾರತೀಯ ಸಂಗೀತದ ಸೂಕ್ಷ್ಮತೆಗಳ, ಅದರಲ್ಲೂ ವಿಶೆಷವಾಗಿ ಶಾಸ್ತ್ರೀಯ ಕರ್ನಾಟಕ ಸಂಗೀತದ ಆಳವಾದ ಜ್ಞಾನವನ್ನು ಪಡೆದರು.1951-1952 ಅವಧಿಯಲ್ಲಿ ಅವರು ಸಂಗೀತ ವಿದ್ವತ್ ಸಭಾ (ಮ್ಯೂಸಿಕ್ ಅಕಾಡೆಮಿ) ಮತ್ತು ರಸಿಕ ರಂಜನಿ ಸಭಾ ನಡೆಸಿದ ಅನೇಕ ಸ್ಪರ್ಧೆಗಳಲ್ಲಿ ಗೆದ್ದರು. ಸಂಗೀತ ವಿದ್ವತ್ ಸಭಾದಲ್ಲಿ ಶ್ರೀ ತ್ಯಾಗರಾಜ ಸ್ವಾಮಿಗಳ ಅಪೂರ್ವ ಕೃತಿಗಳು, ರಾಗಂ-ತಾಳಂ-ಪಲ್ಲವಿ, ಮತ್ತು ತಮಿಳು ಶಾಸ್ತ್ರೀಯ ಹಾಡುಗಳು ಈ ಮೂರೂ ವಿಭಾಗಗಳಲ್ಲಿನ  ಚಿನ್ನದ ಪದಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದರು.

ಗೋವಿಂದರಾಜನ್ ಶಾಸ್ತ್ರೀಯ ಸಂಗೀತ ಕಚೇರಿಗಳಿಗೆ ಹೆಸರಾಗಿದ್ದರಲ್ಲದೆ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನು ಮಾಡಿದ್ದರು. ಭೂಕೈಲಾಸದ ರಾಮನ ಅವತಾರ ಗೀತೆಯಲ್ಲದೆ ಶ್ರೀಕೃಷ್ಣದೇವರಾಯ ಚಿತ್ರದಲ್ಲಿ ಶ್ರೀಚಾಮುಂಡೇಶ್ವರಿ ಗೀತೆಗೆ ಪೂರ್ವಭಾವಿಯಾಗಿ  ಬರುವ "ಮಹಾಮಾಯೆ ಮಹೋತ್ಸಾಹೇ ಮಹಿಷಾಸುರ ಮರ್ಧನಿ" ಸ್ತೋತ್ರವೂ ಇಂದಿಗೂ ಜನಪ್ರಿಯ. ತಮಿಳಿನಲ್ಲಿ ಅವರು ಕರ್ಣನ್ ಚಿತ್ರದಲ್ಲಿ ಹಾಡಿರುವ 'ಉಲ್ಲತ್ತಿಲ್ಲ ನಲ್ಲ ಉಲ್ಲಮ್'  ಮತ್ತು 'ವಿನಾಯಕನೇ ವಿನೈ ತೀರ್ಪವನೇ' ಅಂತಹ ಅನೇಕ ಭಕ್ತಿಗೀತೆಗಳೂ ಇಂದಿಗೂ ಅಮರವೆನಿಸಿವೆ.

ಶೀರ್ಕಾಳಿ ಗೋವಿಂದರಾಜನ್ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ, ಮದ್ರಾಸ್ ವಿಶ್ವವಿದ್ಯಾನಿಲಯದ  ಡಾಕ್ಟರೇಟ್ ಅಲ್ಲದೆ ಅನೇಕ ಗೌರವಗಳು ಸಂದಿದ್ದವು.

ಶೀರ್ಕಾಳಿ ಗೋವಿಂದರಾಜನ್ 1988ರ ಮಾರ್ಚ್ 24ರಂದು ಕೇವಲ 55ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.

On the birth anniversary of great voice Shirkazhi Govindarajan

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ