ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿ. ಕೆ. ಎನ್. ರಾಜ


 ಸಿ. ಕೆ. ಎನ್.  ರಾಜ 


ಪ್ರೊ. ಸಿ. ಕೆ. ಎನ್. ಕಾನೂನು ತಜ್ಞರು, ಪ್ರಾಧ್ಯಾಪಕರು ಮತ್ತು ಬರಹಗಾರರು. ಇವರ ಮೂಲ ಹೆಸರು ಸಿ.ಎನ್. ಕೇಶವಮೂರ್ತಿ.

ಸಿ. ಕೆ. ಎನ್.  ರಾಜ 1932ರ ಫೆಬ್ರವರಿ 19ರಂದು ನಂಜನಗೂಡಿನಲ್ಲಿ ಜನಿಸಿದರು. ತಂದೆ ಸಿ.ಕೆ. ನಾಗಪ್ಪ.  ತಾಯಿ ಸೀತಾಲಕ್ಷ್ಮಮ್ಮ. ಪ್ರೌಢಶಾಲೆಯವರೆವಿಗೂ ನಂಜನಗೂಡಿನಲ್ಲೇ ಇವರ ವಿದ್ಯಾಭ್ಯಾಸ ನಡೆಯಿತು. ಇವರು ಶಾಲಾ ದಿನಗಳಿಂದಲೂ ಉತ್ತಮ ವಾಗ್ಮಿಯಾಗಿದ್ದರು.   ಶಾಲೆಗೆ ತಂದ ಷೀಲ್ಡ್ ನೋಡಿದ ಮುಖ್ಯೋಪಾಧ್ಯಾಯರಾದ ಶೆಲ್ಪ ಪುಳ್ಳೆ ಅಯ್ಯಂಗಾರ‍್ಯರು ಇವರಿಗಿದ್ದ  ಸಿ.ಎನ್. ಕೇಶವಮೂರ್ತಿ ಎಂಬ ಹೆಸರು ಬದಲಿಸಿ ಸಿ.ಕೆ.ಎನ್. ರಾಜ ಎಂದು ಕರೆದರು. ಅದೇ ಶಾಶ್ವತವಾಯಿತು. 

ಸಿ. ಕೆ. ಎನ್.  ರಾಜ ಇಂಟರ್ ಮೀಡಿಯೆಟ್ ಓದಿದ್ದು ಮೈಸೂರಿನ ಯುವರಾಜ ಕಾಲೇಜಿನಲ್ಲಿ. ಸೇಂಟ್ ಫಿಲೋಮಿನ ಕಾಲೇಜಿನಲ್ಲಿ ಬಿ.ಎಸ್ಸಿ ಓದಿ, ಬೆಂಗಳೂರಿನ ಸರಕಾರಿ ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡಿದರು. ಅಂದಿನ ದಿನಗಳಲ್ಲಿ ಪ್ರಾಂಶುಪಾಲರಾಗಿದ್ದ ಎಮ್. ನಾರಾಯಣರಾಯರು ಭಾರತದ ಸರ್ವೋಚ್ಛನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಎಂ.ಎನ್. ವೆಂಕಟಾಚಲಯ್ಯನವರ ತಂದೆ.  ಮುಂದೆ ರಾಜ ಅವರು ಕಾನೂನು ವಿಭಾಗದಲ್ಲಿ ಪಿಎಚ್.ಡಿ ಪಡೆದರು.  

ಸಿ. ಕೆ. ಎನ್.  ರಾಜ ಅವರು ಕಾನೂನು ವಿದ್ಯಾಭ್ಯಾಸದ ನಂತರ ವಕೀಲಿವೃತ್ತಿ ಆರಂಭಿಸಿದರು. ನಂತರ ಮೈಸೂರು ಶಾರದಾ ವಿಲಾಸ್ ಕಾನೂನು ಕಾಲೇಜಿನಲ್ಲಿ ಅಧ್ಯಾಪಕರ ಹುದ್ದೆ ಅಲಂಕರಿಸಿದರು. 1966ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಲಾ ಕಾಲೇಜಿನಲ್ಲಿ ರೀಡರ್ ಆಗಿ ನೇಮಕಗೊಂಡರು. ಧಾರವಾಡದ ವಿದ್ಯಾವರ್ಧಕ ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತ ಬಂದರು. ಹೀಗೆ ಅವರಿಗೆ ದೊರೆತ ಆಪ್ತ ಸ್ನೇಹಿತರಾದವರಲ್ಲಿ ಚೆನ್ನವೀರಕಣವಿ, ಬಸವರಾಜ ಕಟ್ಟೀಮನಿ, ಸಿದ್ದಲಿಂಗ ಪಟ್ಟಣಶೆಟ್ಟಿ, ಚಂದ್ರಶೇಖರ ಪಾಟೀಲ, ಬೆಟಗೇರಿ ಕೃಷ್ಣಶರ್ಮ, ಶಂಬಾ ಜೋಶಿ, ದೇವೇಂದ್ರಕುಮಾರ ಹಕಾರಿ, ಎಂ.ಎಂ. ಕಲಬುರ್ಗಿ ಮುಂತಾದವರು ಪ್ರಮುಖರು. ಹೀಗೆ ಸಾಹಿತ್ಯದತ್ತ ರಾಜ ಅವರಿಗೆ ಒಲವು ಮೂಡಿತು. 

ರಾಜ ಅವರಿಗೆ ಮಾತಾಮಹರ ಕಡೆಯಿಂದ ಬಂದದ್ದು ಹಾಸ್ಯಪ್ರಜ್ಞೆ. ಬರೆದ ಹಾಸ್ಯಲೇಖನ ಕೊರವಂಜಿಗೆ ರವಾನೆ ಮಾಡಿದಾಗ ರಾಶಿಯವರಿಂದ ಬಂದ ಉತ್ತರ "ಲೇಖನ ತಲುಪಿದೆ, ಕ.ಬು.ನಲ್ಲಿ ಭದ್ರವಾಗಿದೆ".  ಹುಡುಗುಬುದ್ಧಿ, "ಓ ! ಭದ್ರಪಡಿಸಿದ್ದಾರೆ" ಎಂದು ನಂಬಿಬಿಟ್ಟಿದ್ದರು.  ಆದರೆ, ಅರ್ಥ ತಿಳಿದಾಗ ಕಂಗಾಲಾದರು. ಹಠತೊಟ್ಟು ಲೇಖನ ಬರೆದರು. ‘ಪಂಡಿತ್‌ಜೀಗೆ ಸೈನೊಸೈಟಿಸ್’ ರಾಜಕೀಯ ವಿಡಂಬನೆ ಬರೆದಾಗ, ರಾಶಿಯವರು ಬೆನ್ನು ತಟ್ಟಿ ಪ್ರಕಟಿಸಿ 2 ರೂ ಸಂಭಾವನೆ ಕಳುಹಿಸಿದ್ದಲ್ಲದೆ ಮುಂದೆ ಅನೇಕ ಬರಹಗಳಿಗೆ ಪ್ರೇರಕರಾದರು. ನಂತರ ಸುಮಾರು 2000ಕ್ಕೂ ಮಿಕ್ಕ ವಿಡಂಬನೆಗಳು ಪ್ರಕಟಗೊಂಡವು. ಇವರು ಯಾವುದನ್ನೂ ಸಂಗ್ರಹಿಸಿಟ್ಟುಕೊಳ್ಳದ ಉದಾರವಾದಿ. ಎರಡು ಕಾದಂಬರಿಗಳಾದ ‘ಪುನರುತ್ಥಾನ’ ಕನ್ನಡಪ್ರಭದಲ್ಲಿ ಮತ್ತು 'ರಾಯರ ವಠಾರ' ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡವು.

ಸಿ. ಕೆ. ಎನ್.  ರಾಜ ಅವರು ನಕ್ಕು ನಗಿಸಲು ಒಂದೆಡೆ ಸಾವಿರಾರು ಭಾಷಣಗಳನ್ನೂ  ಮತ್ತೊಂದೆಡೆ ಸಾಮಾನ್ಯರಿಗೂ ಸಂವಿಧಾನದ ತಿಳುವಳಿಕೆ ನೀಡಲಿಕ್ಕಾಗಿ ಭಾಷಣಗಳನ್ನೂ ಮಾಡಿದರು. Constitutional Literacy  campaign ಮೂಲಕ ಶಿರಸಿ, ಸಿದ್ಧಾಪುರ, ಕುಮಟಾ, ಕಾರವಾರ, ಅಂಕೋಲ ಮುಂತಾದೆಡೆ ಮನೆಮನೆ ಹೋಗಿ ಸಂವಿಧಾನದ ಬಗ್ಗೆ ತಿಳುವಳಿಕೆ ನೀಡಿದ ಏಕವ್ಯಕ್ತಿ ಸಾಧನೆ ಇವರದ್ದು. 

ಮುಂದೆ ಪುನಃ ಮೈಸೂರಿಗೆ ಬಂದ ಸಿ. ಕೆ. ಎನ್.  ರಾಜ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿ 1992ರಲ್ಲಿ ನಿವೃತ್ತರಾದರು. ನಂತರದಲ್ಲಿ ಮಹಾಜನ ಲಾ ಕಾಲೇಜಿನ ಪ್ರಾಂಶುಪಾಲರಾಗಿ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಹೈದರಾಬಾದಿನ ವಲ್ಲಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡಮಿ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆ, ಪೊಲೀಸ್ ಅಕಾಡಮಿ, ಅಕಾಡಮಿ ಆಫ್ ಸ್ಟಾಫ್ ಕಾಲೇಜುಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಸಿ. ಕೆ. ಎನ್.  ರಾಜ ಅವರು ಮೈಸೂರಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿನ ಮಹತ್ವದ ಪಾತ್ರಧಾರಿ ಆಗಿದ್ದರು. ಮೈಸೂರಿನ ಪ್ರಸಿದ್ಧ ಸಂಗೀತ ಸಾಂಸ್ಕೃತಿಕ ವೇದಿಕೆಯಾದ 'ಗಾನಭಾರತೀ' ಸ್ಥಾಪಕರಲ್ಲಿ ಒಬ್ಬರಾದ ರಾಜ ಅವರೇ, ಅದಕ್ಕೆ 'ಗಾನಭಾರತೀ' ಎಂಬ ಹೆಸರು ಸೂಚಿಸಿದವರು.  

ಸಿ. ಕೆ. ಎನ್. ರಾಜ ಅವರು 2023ರ ಏಪ್ರಿಲ್ 12ರಂದು ನಿಧನರಾದರು.

On the birth day of great legal expert, writer and scholar Prof. C. K. N. Raja 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ