ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿ. ಟಿ. ಕಾಳೆ


 ವಿ. ಟಿ. ಕಾಳೆ


ಡಾ. ವಿ. ಟಿ. ಕಾಳೆ ನಾಡಿನ ಪ್ರಖ್ಯಾತ ಚಿತ್ರ ಕಲಾವಿದರು.

ವಿ.ಟಿ. ಕಾಳೆಯವರು 1934ರ ಫೆಬ್ರವರಿ 12ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಜನಿಸಿದರು. ತಂದೆ ತುಳಜಾರಾಮ, ತಾಯಿ ಭರಮವ್ವ. ಕಾಳೆ ಅವರ ಪ್ರಾಥಮಿಕ ಶಿಕ್ಷಣ ಹುನಗುಂದದಲ್ಲಿ ನಡೆದು, ಕಲಾ ಶಿಕ್ಷಣ ಗದುಗಿನ ಮುನಿಸಿಪಲ್ ಹೈಸ್ಕೂಲಿನಲ್ಲಿ ನೆರವೇರಿತು.  ಉಚ್ಚ ಕಲಾ ಶಿಕ್ಷಣ ವಿಜಯ ಕಲಾಮಂದಿರದಲ್ಲಿ ನಡೆಯಿತು.  ಎಲಿಮೆಂಟರಿ ಮತ್ತು ಇಂಟರ್‌ಮೀಡಿಯೆಟ್ ಪೇಯಿಂಟಿಂಗ್ಸ್‌ನಲ್ಲಿ ಎರಡು ಮತ್ತು ಮೂರನೆಯ ರ್‍ಯಾಂಕ್ ಗಳಿಸಿದರು. ಮುಂಬಯಿಯ ಜೆ.ಜೆ. ಕಲಾಶಾಲೆಯಿಂದ ಡಿಪ್ಲೊಮಾ ಪಡೆದರು.

ವಿ. ಟಿ. ಕಾಳೆ ತಾವು ಓದಿದ ವಿಜಯಾ ಕಲಾಮಂದಿರದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇರಿದರು. ನಂತರ ಸಂಡೂರಿನ ವಸತಿ ಸಂಯುಕ್ತ ಕಿರಿಯ ಮಹಾ ವಿದ್ಯಾಲಯದಲ್ಲಿ ಕಲಾ ಶಿಕ್ಷಕರಾಗಿ, ನಿವೃತ್ತಿಯ ನಂತರವೂ ಅದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. 

ವಿ. ಟಿ. ಕಾಳೆ ಅವರು ಕರ್ನಾಟಕ ಸರಕಾರದ ಶೈಕ್ಷಣಿಕ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಸಂಶೋಧನೆ ಮತ್ತು ತರಬೇತಿ ಕೇಂದ್ರ ಪಠ್ಯ ನವೀಕರಣ, ಅನೌಪಚಾರಿಕ ಶಿಕ್ಷಣದ ಪಠ್ಯ ಪುಸ್ತಕಗಳು, ಕೇಂದ್ರ ಸರಕಾರದ ಯೋಜನೆ, ಕೇಂದ್ರ ಸರಕಾರದ ನೂತನ ಪಠ್ಯಕ್ರಮ ಮುಂತಾದುವುಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜವಾಬ್ದಾರಿ ನಿರ್ವಹಿಸಿದರು. 

ವಿ. ಟಿ. ಕಾಳೆ ಅವರು ನಾಟಕ ರಚನಕಾರರಾಗಿ, ನಟರಾಗಿ, ಕಲಾ ನಿರ್ದೇಶಕರಾಗಿ, ಲೇಖಕರಾಗಿಯೂ ಅನೇಕ ಕೆಲಸ ಮಾಡಿದ್ದಾರೆ.  ಕೇಪ್ ಸಲಹಾ ಸಮಿತಿಯ ಸದಸ್ಯರಾಗಿ, ಪಠ್ಯ ಪುಸ್ತಕಗಳ ಕಲಾವಿದ ಸದಸ್ಯರಾಗಿ, ಡ್ರಾಯಿಂಗ್ ಗ್ರೇಡ್ ಉಚ್ಚ ಕಲಾ ಪರೀಕ್ಷೆಗಳ ಪರೀಕ್ಷಕರಾಗಿ, ಧಾರವಾಡದ ಆರ್ಟ್ಸ್ ಸೊಸೈಟಿ ಸದಸ್ಯರಾಗಿ, ಕರ್ನಾಟಕ ಲಲಿತ ಕಲಾ ಅಕಾಡಮಿ ಸದಸ್ಯರಾಗಿ, ಕರ್ನಾಟಕ ಲಲಿತ ಕಲಾ ಅಕಾಡಮಿ ಅಧ್ಯಕ್ಷರಾಗಿ ಹಾಗೂ ಅನೇಕ ಸಾಂಸ್ಕೃತಿಕ ಸಂಸ್ಥೆಗಳ ಸಲಹಾ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಹಂಪಿ ಕಲಾಶಿಬಿರ, ವಿಶ್ವ ಕನ್ನಡ ಸಮ್ಮೇಳನ ಕಲಾಶಿಬಿರ, ಲಲಿತಕಲಾ ಅಕಾಡಮಿ ಕಲಾ ಶಿಬಿರ, ಬೀಳಗಿಯ ರಾಜ್ಯಮಟ್ಟದ ಕಲಾ ಶಿಬಿರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ವಿ. ಟಿ. ಕಾಳೆ ಅವರ ಕಲಾಕೃತಿಗಳು ಪಂಚಾಕ್ಷರಿ ಗವಾಯಿಯವರ ವೀರೇಶ್ವರ ಪುಣ್ಯಾಶ್ರಮ, ವಿಜಯ ಮಹಂತೇಶ ಲಲಿತ ಕಲಾ ಅಕಾಡಮಿ, ಎಂ.ವೈ. ಘೋರ್ಪಡೆಯವರ ಅರಮನೆ, ಶಿವ ವಿಲಾಸ ಅರಮನೆ, ಪಾಕಿಸ್ತಾನ, ಲಂಡನ್, ಅಮೆರಿಕಾ ಮುಂತಾದ ಖಾಸಗಿ ಸಂಗ್ರಹಗಳಲ್ಲಿ ಸಂಗ್ರಹಗೊಂಡಿವೆ.  ಇವರು ರಚಿಸಿದ ಬಸವಣ್ಣನವರ ಚಿತ್ರ ನಾಡಿನ ಎಲ್ಲೆಡೆ ಶೋಭಿಸುತ್ತಿದೆ.

ವಿ. ಟಿ. ಕಾಳೆ ಅವರಿಗೆ ಮೈಸೂರು ದಸರಾ ವಸ್ತುಪ್ರದರ್ಶನ ಪ್ರಶಸ್ತಿ, ವಿಜಯ ಕಲಾಮಂದಿರದ ಸುವರ್ಣ ಮಹೋತ್ಸವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಛತ್ರಪತಿ ಶಿವಾಜಿ ರಾಜ್ಯ ಪ್ರಶಸ್ತಿ, ಅಮೋಘವರ್ಷ ನೃಪತುಂಗ ಪ್ರಶಸ್ತಿ, ಹಂಪಿಯ ನಾಡೋಜ ಗೌರವ ಸೇರಿದಂತೆ ಅನೇಕ ಗೌರವಗಳು ಸಂದಿವೆ. 

On the birthday of artiste V. T. Kale

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ