ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ99


ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ದ್ರೋಣ ಪರ್ವ - ಎಂಟನೆಯ ಸಂಧಿ


ಸೂ.   ಹಾ ಮಗನೆ ರಣರಂಗಧೀರನೆ

ಹಾ ಮದೀಯ ಕುಮಾರ ವೀರನೆ ಬಾ ಮಗನೆ ಮೊಗದೋರೆನುತ ಹಲುಬಿದನು ಕಲಿ ಪಾರ್ಥ  

 

ಕೇಳು ಜನಮೇಜಯ ಧರಿತ್ರೀ

ಪಾಲ ಸಮಸಪ್ತಕರ ಬಲ ನಿಜ

ಪಾಳೆಯಕೆ ತಿರುಗಿದುದು ತೀರಿತು ತರಣಿಯಾಟೋಪ

ಕಾಳೆಗವ ತೆಗೆಸಿದರು ಕೌರವ

ರೇಳು ಫಲುಗುಣ ಎನುತ ಲಕ್ಷ್ಮೀ

ಲೋಲ ವಾಘೆಯ ಮರಳಿ ಕೊಂಡನು ಹಯವ ಬೋಳೈಸಿ    

 

ಅಳಿಯನಳಿವನು ಹೇಳಬಾರದು

ತಿಳಿಯಲಿದನಿನ್ನೆನುತ ಚಿಂತಿಸಿ

ನಳಿನಲೋಚನ ಬರುತ ಕಂಡನು ವರ ಸರೋವರವ

ಇಳಿದು ರಥವನು ರಣ ಪರಿಶ್ರಮ

ಗಳೆವೆನೆನುತವೆ ಪಾರ್ಥ ಸಹಿತಾ

ಕೊಳನ ಹೊಕ್ಕನು ಜಗದುದರ ಲೀಲಾವತಾರಕನು       

 

ಧುರದ ಕೋಳಾಹಳದ ಢಗೆ ಡಾ

ವರಿಸಿ ಬಳಲಿ ಧನಂಜಯನು ವರ

ಸರಸಿಯಲಿ ಮುಳುಗಿರಲು ನಸು ನಗುತೊಂದುಪಾಯದಲಿ

ನರನೊಳಿನ್ನರುಹುವೆನು ಘನ ಸಂ

ಗರದೊಳಡಗಿದ ರಾಜಕುವರನ

ಮರಣವಾರ್ತೆಯನೆಂದು ಮನದಲಿ ನೆನೆದನಸುರಾರಿ    

 

 

ಎಲೆ ಸುರೇಂದ್ರ ಕುಮಾರ ಕೇಳ್ ನಿ

ನ್ನೊಲುಮೆಯಣುಗನು ರಣದೊಳಗೆ ರಿಪು

ಬಲವ ಕೋಳಾಹಳಿಸಿ ಕೌರವ ಸುತರು ನೂರ್ವರನು

ತಲೆಯನರಿದನು ಬಳಿಕ ತಾ ಸುರ

ಲಲನೆಯರ ಚೆಲುವಿಂಗೆ ಸೋತನು

ಕಳಿದನೆನುತವೆ ನುಡಿದು ಹರಿ ಮುಳುಗಿದನು ಜಲದೊಳಗೆ    

 

 ಸುತನ ಶೋಕದ ಮರುಕವಾ

ಕಾಶ ವಚನದೊಳಾಯ್ತು ಶಿವ ಶಿವ

ವಾಸುದೇವ ಎನುತ್ತ ಫಲುಗುಣ ಜಲವ ಬಗಿದೆದ್ದು

ಘಾಸಿಯಾದನು ಮಗನಕಟ ಸಂ

ತೋಷವೆಲ್ಲಿಯದೆನುತ ಮಾಯಾ

ವೇಷಿಯನು ಕರೆದನು ವಿಲೋಚನ ವಾರಿಪೂರದಲಿ              

 

ಎನಲು ಧಿಮ್ಮನೆ ಕೊಳದೊಳಗೆ ನಿಂ

ದನು ಮುಕುಂದನು ಸುರಪ ಸುತನಾ

ನನವ ನೋಡುತದೇನದೇನೆನೆ ಬಿಕ್ಕಿ ಬಿರಿದಳುತ

ತನಯನಳಿಯದೆ ಮಾಣ ಗಗನ

ಧ್ವನಿಯೊಳಾದುದು ವಾರ್ತೆ ಚಿತ್ತಕೆ

ಮೊನೆಯ ಸರಳೆನೆ ಮರುಳೆ ಬಾ ಎಂದೇರಿದನು ರಥವ    

 

ಹರಿ ಕಿರೀಟಿಗಳಿತ್ತ ಶಿಬಿರಕೆ

ತಿರುಗಿದರು ಸುತಶೋಕ ಸೂಚನೆ

ನರನ ಚಿತ್ತದೊಳಾಯ್ತು ವೆಂಠಣಿಸಿತ್ತು ಪರಿತಾಪ

ಕೊರಳ ಸೆರೆ ಹಿಗ್ಗಿದವು ಕಂಬನಿ

ದುರುಗಿದವು ಕಡುಶೋಕ ಜಠರದ

ಲುರವಣಿಸಲಾಕಸ್ಮಿಕದ ಭಯವಾಯ್ತು ಪಾರ್ಥಂಗೆ       

 

 

ತರಣಿ ತೊಲಗಿದ ಗಗನವೋ ಪಂ

ಕರುಹವಿಲ್ಲದ ಸರಸಿಯೋ ಕೇ

ಸರಿಯ ಲೀಲಾಳಾಪವಿಲ್ಲದ ಬಹಳ ಕಾನನವೊ

ಪರಮತತ್ತ ್ವನಿಧಾನವರಿಯದ

ನರನ ವಿದ್ಯಾರಚನೆಯೋ ನಿ

ರ್ಭರ ಭಯಂಕರವಾಯ್ತು ಪಾಳೆಯವೆನುತ ಬರುತಿರ್ದ    

 

ದೆಸೆದೆಸೆಯ ನೋಡಿದರೆ ಕತ್ತಲೆ

ಮಸಗುವುದು ಪರಿತಾಪ ತನುವನು

ಮುಸುಕುವುದು ಮನ ಮರುಗುವುದು ಕಳವಳಿಸುವುದು ಧೈರ‍್ಯ

ಮಸೆದ ಸರಳೊಡಲೊಳಗೆ ಮುರಿದವೊ

ಲುಸುರಿಗುಬ್ಬಸವಾಯ್ತು ಬಲ್ಲಡೆ

ಬೆಸಸು  ಮುರಹರ ಹಿರಿದು ಬಳಲಿಸಬೇಡ ಹೇಳೆಂದ    

 

ತಂದೆ ಧೃತಿಗೆಡಬೇಡ ನಡೆ ನಿಜ

ನಂದನನನಾರೈವೆವೆನುತೈ

ತಂದು ಕೋಟೆಯ ಕಳೆದು ಬಂದರು ರಾಜ ಬೀದಿಯಲಿ

ಕಂದನಿರವನು ಕಾಣಲಾಪೆನೊ

ಕೊಂದರೆಂಬುದ ಕೇಳುವೆನೊ ತನ

ಗಿಂದು ಗತಿಯೇನೆನುತ ಬಂದನು ರಾಜ ಮಂದಿರಕೆ  ೧೦  

 

ಸುರನಗರಿ ನಡುಗಿತ್ತು ಸುರಪತಿ

ಹರನ ನೆನೆದನು ಯಮನ ಪಟ್ಟಣ

ಸರಕುದೆಗೆಯಿತು ಮೃತ್ಯು ಮರೆಹೊಕ್ಕಳು ಮಹೇಶ್ವರನ

ಬಿರುದರಂಜಿತು ದೇಶದೇಶದ

ಧರಣಿಪತಿಗಳಪಾಯವಾಯ್ತೆನೆ

ನರನ ಕಡುದುಮ್ಮಾನ ನೆರೆ ಹೆದರಿಸಿತು ಮೂಜಗವ  ೧೧  

 

ವೀರರಿದಿರುಗ್ಗಡಣೆಗಳ ಕೈ

ವಾರಿಗಳ ಮಾಣಿಸುತಲೈತಹ

ನಾರಿಯರ ರತುನಾರತಿಯ ತಳಿಗೆಗಳ ನೂಕಿಸುತ

ಸಾರಿ ಕೈಗೊಡುವದಟರನು 

ಣ್ಣೋರೆಯಲಿ ಕೋಪಿಸುತ ತನ್ನಯ

ತೇರನಿಳಿದನು ಪಾರ್ಥನಸುರಾರಿಯ ನಿರೂಪದಲಿ     ೧೨  

 

ಹರಿ ರಥವನಿಳಿದಂತೆ ಪಾರ್ಥನ

ಭರದ ಕೋಪವ ಕಂಡು ನಿಜಮಂ

ದಿರಕೆ ಮೆಲ್ಲನೆ ಜುಣುಗಿದನು ಯಾದವರ ಗಡಣದಲಿ

ವರ ಧನುವ ಶಸ್ತ್ರಾಸ್ತ್ರ ಕವಚವ

ನಿರಿಸಿ ಕೈಗೊಡುವವರ ಕನಲು

ತ್ತರಮನೆಯ ಹೊಕ್ಕನು ಯುಧಿಷ್ಠಿರ ರಾಯನೋಲಗವ  ೧೩  

 

ಧರಣಿಪನನಿರಿಗೆಯಲಿ ಕಂದನ

ಮರಣವನು ನಿಶ್ಚಯಿಸಿ ಪ್ರಳಯದ

ಹರನ ಕೋಪವ ಕೇಣಿಗೊಂಡನು ತನ್ನ ಚಿತ್ತದಲಿ

ಸುರಿವ ನಯನಾಂಬುಗಳ ಜಲನಿಧಿ

ಗುರವಣಿಸಿದನೊ ವಡಬನೆನೆ ಮುರ

ಹರನ ಮೈದುನನೊಯ್ಯನೈದಿದನವನಿಪಾಲಕನ  ೧೪  

 

ಉಕ್ಕಿ ಶೋಕದ ಕಡಲು ಪಾರ್ಥನ

ಮುಕ್ಕುಳಿಸಿತಾ ಶೋಕಶರಧಿಯ

ಹೊಕ್ಕು ಬೆಳೆದುದು ಕೋಪಶಿಖಿವಡಬಾಗ್ನಿಯಂದದಲಿ

ಮಕ್ಕಳೊಳು ನೋಡಿದನು ಕಂದನ

ನಿಕ್ಕಿದಿರಲಾ ಲೇಸು ಮಾಡಿದಿ

ರೆಕ್ಕತುಳದಾಳುಗಳೆನುತ ಭೂಪತಿಗೆ ಪೊಡವಂಟ  ೧೫  

 

ತಲೆಯ ಮುಸುಕಿನ ಕಂಗಳೊರತೆಯ

ಜಲದ ದುಗುಡದ ಮುಖದ ಜನಪತಿ

ಫಲುಗುಣನನೆತ್ತಿದನು ತಲೆಗುತ್ತಿದನು ಭೀತಿಯಲಿ

ಮಲಗಿದನು ವರ ಭೀಮ ಸಭೆ 

ಲ್ಲಳಿಸಿತರ್ಜುನ ಬಂದನೆನೆ ಬಸ

ವಳಿದು ಬಂದು ಸುಭದ್ರೆ ಪತಿಯಂಘ್ರಿಯಲಿ ಹೊರಳಿದಳು  ೧೬  

 

 

ಕಂದನಾವೆಡೆ ತನ್ನ ಮೋಹದ

ಸಿಂಧುವಾವೆಡೆ ತನುಜವನ ಮಾ

ಕಂದನಾವೆಡೆ ಹೇಳೆನುತ ಫಲುಗುಣನು ತೊದಳಿಸುತ

ನೊಂದು ಮನದಲಿ ಪಾರ್ಥನಾ ಸತಿ

ಯಂದವನು ಕಾಣುತ್ತ ಬೆದೆಬೆದೆ

ಬೆಂದು ಯಮರಾಜನ ಕುಮಾರನ ಮೊಗವ ನೋಡಿದನು  ೧೭  

 

ಪತಿಯಳಿದ ಸತಿಯಿರವು ನಾಯಕ

ರತುನವಿಲ್ಲದ ಪದಕ ದೈವ

ಸ್ತುತಿಗಳಿಲ್ಲದ ಕಾವ್ಯರಚನಾ ಭಾವದಂದದಲಿ

ಕೃತಕವಲ್ಲಭಿಮನ್ಯುವಿಲ್ಲದೆ

ಕ್ಷಿತಿಪ ನಿನ್ನಾಸ್ಥಾನ ಮೆರೆಯದು

ಸುತನ ಸುದ್ದಿಯದೇನು ಮರುಗಿಸಬೇಡ ಹೇಳೆಂದ  ೧೮  

 

ಬರಲು ಬಹನಿದಿರಾಗಿ ತನ್ನಯ

ವರ ರಥವ ಬಂದೇರುವನು ನಿಜ

ಕರತಳದಿ ಮೈದಡವಿ ಘಾಯವ ನೋಡಿ ಮರುಗುವನು

ತರುಣನಿದಿರೈತರಲು ತನ್ನಯ

ಧುರದ ಬಳಲಿಕೆ ಹಿಂಗುವುದು ಹೇ

ಳರಸ ಕಂದನ ಸುಳಿವ ಕಾಣೆನು ಕರೆಸಿ ತೋರೆಂದ  ೧೯

 

ಮಗನ ಮಣಿರಥವೆಲ್ಲಿ ಹೂಡಿದ

ವಿಗಡ ತೇಜಿಗಳೆಲ್ಲಿ ಮಣಿವೆಳ

ಗುಗಳ ಛತ್ರವದೆಲ್ಲಿ ಚಾಮರವೆಲ್ಲಿ ಧನುವೆಲ್ಲಿ

ಹಗೆಯರಲಿ ಹತವಾದನೇ ಹಾ

ಸುಗುಣನಿಲ್ಲಿಗೆ ಬಾರನೇ ತಾ

ಮೊಗವ ಕಾಣದೆ ಹೋದನೇ ಎನಗೇನು ಗತಿಯೆಂದ  ೨೦  

 

ಕಂದ ಬಾರೋ ಎನ್ನ ಮನಕಾ

ನಂದ ಬಾರೋ ಬಾಲಕರ ಪೂ      

ರ್ಣೇಂದು ಬಾರೋ ರಿಪುಕುಲಾಂತಕ ನಿಪುಣ ಮುಖದೋರೋ 

ತಂದೆ ನಿನಗೆನ್ನಲ್ಲಿ ಋಣ ಸಂ

ಬಂಧ ಸವೆದುದೆ ಶಿವ ಶಿವಾ ತಾ

ಮಂದಭಾಗ್ಯಂಗಣುಗ ದಕ್ಕುವನಲ್ಲ ಎನಗೆಂದ         ೨೧  

 

ಅಸಮ ಪದ್ಮವ್ಯೂಹವನು ಭೇ

ದಿಸುವನಾವವನೆನಲು ಕೇಳಿದು

ಶಿಶುತನದಲಾಹವಕೆ ನಡೆದನು ನಾವು ಬೇಡೆನಲು

ಹೊಸ ಮದದ ವನದಂತಿ ಕದಳಿಯ

ಕುಸುರಿದರಿದಂದದಲಿ ಘನ ಪೌ

ರುಷವ ಮಾಡಿದನೆಂದನವನೀಪಾಲನನುಜಂಗೆ        ೨೨  

 

ಅರಿನೃಪಾಲರ ನೂರು ಮಕ್ಕಳ

ಶಿರವನರಿದನು ಷಡುರಥರ ಮಿಗೆ

ಪರಿಭವಿಸಿದನು ಬಲವನಡಹಾಯ್ದಾನೆವರಿವರಿದು

ಧುರಕೆ ಹೆರತೆಗೆದೆಮ್ಮ ನಾಲ್ವರ

ಸರಿದು ಹೋದಭಿಮಾನವನು ಕಾ

ಯ್ದುರವಣಿಸಿ ಮಗನೇರಿದನು ವಾಸವನ ಗದ್ದುಗೆಯ  ೨೩  

 

 ನಕುಳನೀ ಭೀಮನೀ ಪಾಂ

ಚಾಲನೀ ಸಹದೇವನೀ ಭೂ

ಪಾಲನೀ ಸಾತ್ಯಕಿ ಯುಧಾಮನ್ಯೂತ್ತಮೌಂಜಸರು

ಕಾಳೆಗದೊಳಂಗೈಸಲಮ್ಮದೆ

ಬಾಲಕನ ನೂಕಿದಿರಲಾ ನಿ

ಮ್ಮಾಳುತನವನು ತೋರಿದಿರಲಾ ತನ್ನ ಮೇಲೆಂದ  ೨೪  

 

ವೀರರಿನಿಬರು ನೆರೆದು ರಿಪುಪರಿ

ವಾರವನು ಹೊಗಲಂಜಿ ಹೊರಗಣ

ಮಾರಿ ಹೊರಹೊರಗೆಂಬವೊಲು ನಂದನನ ನೂಕಿದಿರಿ

ಆರ ನಂಬಲುಬಹುದು ನಿಮಿಷವು

ದೂರ ತಾ ತೊಲಗಿದರೆ ತನ್ನ ಕು

ಮಾರನಿದ್ದರೆ ಹರಿವ ಕಂಡಿರಿ ಹೊಲ್ಲಹೇನೆಂದ        ೨೫  

 

ಕೆಡೆನುಡಿದು ಫಲವೇನು ಸಾಕಿ

ನ್ನೊಡೆಯರಿಲ್ಲದ ವಸ್ತುವಾದೆನು

ಕಡೆಗೆ ಧರ್ಮಜ ಹೇಳು ಕೊಂದವನಾರು ನಂದನನ

ಕಡುವಗೆಯದಾರವರ ಬಲದಲಿ

ನುಡಿ ನಿದಾನವನವನ ಜೀವಕೆ

ಹಿಡಿ ಮಹೀಪತಿ ಸಂಚಕಾರವನೆಂದನಾ ಪಾರ್ಥ  ೨೬  

 

ಹೇಳಿ ಫಲವೇನಿನ್ನು ಶೋಕ

ಜ್ವಾಲೆಗಿಂಧನವೆನ್ನ ನುಡಿ ರಿಪು

ಜಾಲವನು ನೀ ಖಂಡಿಗಳೆ ಬಹೆವಾವು ಬಳಿಸಲಿಸಿ

ಕಾಳೆಗವ ಜಯಿಸುವೆವು ನಡೆಯೆನೆ

ಬಾಲನುರವಣಿಸಿದನು ಮಸಗಿದ

ಕಾಲರುದ್ರನ ರೂಪ ತಾಳ್ದನು ವೈರಿ ಸೇನೆಯಲಿ        ೨೭  

 

ಅರಸು ಮಕ್ಕಳ ಕೊಂದನೈನೂ

ರ್ವರನು ಮೂರಕ್ಷೋಣಿ ಸೈನ್ಯವ

ನೊರಸಿದನು ಮಸೆಗಾಣಿಸಿದನಗ್ಗದ ಮಹಾರಥರ

ಧುರವ ಗೆಲಿದನು ಪಡಿತಳಿಸಿ ನಾ

ವುರವಣಿಸಲಡಹಾಯ್ದು ನಮ್ಮನು

ಹರನ ವರವುಂಟೆಂದು ತಡೆದನು ಸಿಂಧು ಭೂಪಾಲ  ೨೮  

 

ವಿರಥನಾದನು ಭೀಮ ನಕುಳನು

ತಿರುಗಿದನು ಸಹದೇವ ಕೊರಳಿನ

ಹರಣದಲಿ ಹಿಮ್ಮೆಟ್ಟಿದನು ದ್ರುಪದಾದಿ ನಾಯಕರು

ಧುರದೊಳೋಸರಿಸಿದರು ಸೈಂಧವ

ಹರನ ವರದಲಿ ನಮ್ಮ ಗೆಲಿದನು 

ಮರಣವನು ಕಂದಂಗೆ ತಂದವನವನು ಕೇಳೆಂದ     ೨೯  

 

ಇನ್ನು ಹೇಳುವುದೇನೆನುತ ಕೈ

ಸನ್ನೆಯಲಿ ಮಾತಾಡಿ ಭೂಪತಿ

ಬೆನ್ನತೆತ್ತನು ಭೀಮಸೇನನ ವಿಪುಲ ವಕ್ಷದಲಿ

ತನ್ನ ಮರೆದನು ನಯನ ಧಾರಾ

ಭಿನ್ನ ಚಾರು ಕಪೋಲನಿರೆ ಸಂ

ಪನ್ನ ಶೋಕಾಗ್ನಿಯಲಿ ಬೆಂದುದು ಸಕಲ ಜನಹೃದಯ  ೩೦  

 

ಮುಚ್ಚಿದನು ಕಂಗಳನು ಧೈರ‍್ಯದ

ಕೆಚ್ಚಿನೆದೆ ಕರಗಿತ್ತು ಶೋಕದ

ಕಿಚ್ಚು ಕೊಂಡುದು ಮನವನಖಿಳೇಂದ್ರಿಯದ ಸುಳಿವಡಗೆ

ಎಚ್ಚರಡಗಿತು ನೆಲಕೆ ಕೈಗಳ

ಬಿಚ್ಚಿ ಬಿದ್ದನು ಪುತ್ರವಿರಹದ

ಹೆಚ್ಚಿಗೆಯ ತಾಪವನು ಹೆಸರಿಡಲರಿಯೆನರ್ಜುನನ  ೩೧  

 

ಘನ ವಿಕರ್ಮದ ವಿಲಗದಲಿ ನಿಜ

ತನುಜಶೋಕದ ತಗಹಿನೊಳಗ

ರ್ಜುನನು ಧೈರ‍್ಯ ದರಿದ್ರನಾದನದೇನ ಹೇಳುವೆನು

ಮನ ಬಳಲಿ ಮೈ ಮರೆದು ತಾಪದಿ

ಕನಸ ಕಂಡನು ಝಡಿಕೆ ಮಿಗೆ ಝೊ

ಮ್ಮಿನ ಸುಷುಪ್ತಿಯೊಳಿದ್ದು ನಿಮಿಷದೊಳೆದ್ದು ಕಣ್ದೆರೆದ  ೩೨  

 

ಅಳಲ ಮುಕ್ಕುಳಿಸಿದನು ಮೋಹದ

ಬೆಳವಿಗೆಯ ಗವಸಣಿಸಿದನು ಕಳ

ಕಳಿಕೆ ಹಿಂಗಿದುದಶ್ರುಜಲವನು ಕಂಗಳಲಿ ಕುಡಿದು

ಪ್ರಳಯ ರುದ್ರನ ಕೋಪಶಿಖಿ ವೆ

ಗ್ಗಳಿಸಿತೆನೆ ಕಂಗಳಲಿ ಕಿಡಿಗಳು

ತುಳುಕಿದವು ರೌದ್ರಾನುಭಾವದ ರಸದ ಭಂಗಿಯಲಿ  ೩೩  

 

ಹೇಳು ಹೇಳಿನ್ನೇನು ಮಾರಿಯ

ಮೇಳವಾಡಿದನೇ ಜಯದ್ರಥ

ನಾಳುತನವನು ಬವರದಲಿ ತನ್ನೊಡನೆ ತೋರಿದನೆ

ನಾಳೆ ಬೈಗಿಂದೊಳಗೆ ರಿಪುವನು

ಸೀಳುವೆನು ಸೀಳದಿರೆ ಧರ್ಮಜ

ಕೇಳು ಭಾಷೆಯನೆಂದು ಮಿಗೆ ಗರ್ಜಿಸಿದನಾ ಪಾರ್ಥ  ೩೪  

 

 ಹರನ ದುರ್ಗದಲಿರಲಿ ಮೇಣಾ

ಹರಿಯ ಕಡಲೊಳಗಿರಲಿ ಬ್ರಹ್ಮನ

ಕರಕಮಂಡಲದೊಳಗೆ ಹುದುಗಲಿ ರವಿಯ ಮರೆಹೊಗಲಿ

ಉರಗ ಭುವನದೊಳಿರಲಿ ಮೇಣ್ ಸಾ

ಗರವ ಮುಳುಗಲಿ ನಾಳೆ ಪಡುವಣ

ತರಣಿ ತೊಲಗದ ಮುನ್ನ ಕೊಲುವೆನು ವೈರಿ ಸೈಂಧವನ  ೩೫  

 

ಕುರುಬಲವ ಬಿಟ್ಟರೆ ಯುಧಿಷ್ಠಿರ

ನರಮನೆಯ ಹೊಕ್ಕರೆ ಮುರಾರಿಯ

ಶರಣುವೊಕ್ಕರೆ ಸರ್ವಥಾ ಕೊಲ್ಲೆನು ಜಯದ್ರಥನ

ಧುರದೊಳುಳಿದಂತಿಂದ್ರ ಯಮ ಭಾ

ಸ್ಕರ ವಿರಂಚಿಗಳಡ್ಡವಿಸಿದರೆ

ಶಿರವನರಿವೆನು ನಾಳೆ ಬೈಗಿಂದೊಳಗೆ ಸೈಂಧವನ       ೩೬  

 

ಗುರುವಿಘಾತಿಯ ವೇದನಿಂದಾ

ಪರನ ಪರದಾರಾಭಿಗಾಮಿಯ

ಹರ ಮುರಾರಿಯ ಭೇದವಾದಿಯ ವಿಪ್ರನಿಂದಕನ

ಪರಗುಣಾಸೂಯಕನ ಹಿಂಸಾ

ಪರನ ಹಿಸುಣನ ಶಠನ ಕೃಪಣನ

ನರಕವಾಗಲಿ ಕೊಲ್ಲದಿದ್ದರೆ ನಾಳೆ ಸೈಂಧವನ  ೩೭  

 

ಖಳನ ಧೂರ್ತನ ನಾಸ್ತಿಕನ ಚಂ

ಚಳನ ಪರನಿಕ್ಷೇಪಹಾರಿಯ

ದಳಿತ ಮರ‍್ಯಾದನ ಕೃತಘ್ನನ ಭರ್ತೃನಿಂದಕನ

ಸ್ಖಲಿತ ವಚನನ ಯೋಗಿ ನಿಂದಾ

ಕುಳನ ವಿಕಳವ್ರತನ ಲೋಕಾ

ವಳಿಗಳಾಗಲಿ ಕೊಲ್ಲದಿದ್ದರೆ ನಾಳೆ ಸೈಂಧವನ          ೩೮  

 

 ನಾಳೆ ಖಚರೀಜನದ ತೊಡವಿನ

ತೋಳನವನಸು ನೆಮ್ಮದಿದ್ದರೆ

ಕಾಳೆಗದೊಳೆನ್ನೊಡಲ ಬಿಸುಡುವೆನಗ್ನಿ ಕುಂಡದಲಿ

ಕೇಳು ಧರ್ಮಜ ಎಂಬ ನುಡಿಗಳು

ಕಾಳೆಗದ ಸೊಗಸಾಗೆ ಲಕ್ಷ್ಮೀ                 

ಲೋಲ ಕೇಳುತ ಬಂದು ಪಾರ್ಥನ ಬಿರುದ ಹೊಗಳಿದನು  ೩೯

 

ನಳಿನನಾಭನು ಪಾಂಚಜನ್ಯವ

ಮೊಳಗಿದನು ನಿಜದೇವದತ್ತವ

ಸೆಳೆದು ಫಲುಗುಣನೂದಿದನು ಗಾಂಡಿವವನೊದರಿಸುತ

ಪ್ರಳಯ ದಿನದಲಿ ತಿವಿವ ಸಿಡಿಲ

ವ್ವಳಿಸುವಂತಿರೆ ರೌದ್ರರವ ಘುಳು

ಘುಳಿಸಿ ತಲ್ಲಣಿಸಿತ್ತು ಕೌರವರಾಯ ಪರಿವಾರ         ೪೦

 

ಏನಿದೆತ್ತಣ ರಭಸ ತ್ತೈಲೋ

ಕ್ಯಾನುಕಂಪನವಾಯ್ತು ಶಿವ ಎನು

ತಾ ನರೇಂದ್ರನಿಕಾಯ ನಡುಗಿತು ಕೌರವೇಶ್ವರನ

ಸೇನೆ ತಲೆಕೆಳಕಾಯ್ತು ಪಾರ್ಥನ

ಸೂನುವಿನ ಮರಣದಲಿ ಮಂತ್ರ

ಧ್ಯಾನ ನಮಗಾಯ್ತೆಂದು ತಲ್ಲಣಿಸಿತ್ತು ನೃಪಕಟಕ      ೪೧

 

ಎಲೆಲೆ ಕವಿ ಕಳ್ಳೇರ ಹಾಯ್ದರು

ಕೊಲೆಗಡಿಗರೋ ನೃಪರು ಮಗ ಮಡಿ

ದಳಲು ಮಿಗಲನ್ಯಾಯಕೆಳಸಿದನೇ ಯುಧಿಷ್ಠಿರನು

ಬಲವ ಕರೆ ಕರೆ ಎನುತ ಕಾಹಿನ

ತೊಳಲಿಕೆಯ ನಾಯಕರು ಗಜರಲು

ಬೆಳಗಿದವು ಬೊಂಬಾಳ ದೀವಿಗೆ ನೆರೆದುದತಿರಥರು  ೪೨ 

 

ಪಾಳಯವು ಗಜಬಜಿಸೆ ತೊಳಲಿಕೆ

ಯಾಳು ನೆರೆದುದು ಕೋರಡಿಯ ಮುಳು

ವೇಲಿಗಾಂತರು ಬೇಹ ಹರಿಸಿದರಖಿಳ ದೆಸೆದೆಸೆಗೆ

ಮೇಲುಗುದುರೆಗಳೊದಗಿದವು ಭೂ

ಪಾಲಕರು ತಲೆಗೆದರಿ ಹುಯ್ಯಲ

ನಾಲಿಸುತ ಹೊರವಂಟು ತಳಕೆಳಕಾಯ್ತು ನೃಪಕಟಕ  ೪೩  

 

ಕಡಿವಣವನಾನೆಗಳ ಮೋರೆಗೆ

ತೊಡಸಿದರು ದಂತಿಗಳ ಹೆಗಲಲಿ

ನಿಡು ನೊಗನ ಕಟ್ಟಿದರು ಕಿವಿಯಲಿ ಕೀಲಿಗಳ ಸರಿಸಿ

ಜಡಿವ ಗುಳವನು ಹಾಯ್ಕಿ ಬೀಸಿದ

ರೊಡನೊಡನೆ ಹಕ್ಕರಿಕೆ ಜೋಡಿನ

ಲಡಸಿ ಗಾಲಿಯ ಬಿಗಿದು ಗಜಬಜಿಸಿತ್ತು ನೃಪಕಟಕ  ೪೪

 

ಶಿರದೊಳಾಂತರು ಮೊಚ್ಚೆಯವನಾ

ಚರಣದಲಿ ಸೀಸಕವ ತೋಳಲಿ

ಬರಿಯ ಕವಚವ ಬೆನ್ನಿನಲಿ ಕಟ್ಟಿದರು ಕೈಹೊಡೆಯ

ಸುರಗಿಗಳನೀಡಾಡಿ ತಿರುಹಿದ

ರೊರೆಗಳನು ಬತ್ತಳಿಕೆಯನು ಬಿಲು

ದಿರುವಿನಲಿ ಮೋಹಿದರು ತಲ್ಲಣಿಸಿತ್ತು ತಮತಮಗೆ             ೪೫  

 

ಕರಿಗಳನು ರಾವುತರು ಜೋಧರು

ತುರಗವನು ಕಾಲಾಳು ರಥವನು

ವರಮಹಾರಥರಿಟ್ಟಿ ಸಬಳ ಕಠಾರಿಯುಬ್ಬಣವ

ಧುರದ ಭರ ಮಿಗೆ ಕೊಂಡು ಬೆದರ

ಳ್ಳಿರಿಯೆ ಬೆರಗಿನ ಬಳಿಯಲೊದಗಿ

ತ್ತರರೆ ಪಾಂಡವರೆನುತ ಹೊಯ್ದಾಡಿದರು ತಮ್ಮೊಳಗೆ  ೪೬

 

ಹರಿದು ಬೇಹಿನ ಚರರು ಪಾಂಡವ            

ರರಮನೆಯ ಹೊಕ್ಕರಿದು ಮರಳಿದು

ಬರುತ ಕಟಕದ ಗಜಬಜವನಲ್ಲಲ್ಲಿ ಮಾಣಿಸುತ

ನೆರವಿ ನಗೆಗೆಡೆಯಾಗೆ ಮುಸುಕಿನ

ಮುರುವಿನಲಿ ಪಾಳಯವ ಹೊಕ್ಕರು

ಗರುವ ಮನ್ನೆಯ ಮಂಡಳೀಕರು ಕೇಳ್ದರೀ ಹದನ              ೪೭ 

 

ರವಿತನುಜ ಗುರುಸೂನು ಭೂರಿ

ಶ್ರವ ಸುಲೋಚನ ಶಲ್ಯ ಕೃಪ ಸೈಂ

ಧವ ವಿವಿಂಶತಿ ಚಿತ್ರಸೇನರು ಕರ್ಣನಂದನರು

ತವತವಗೆ ಬೆದರಿದರು ರಿಪು ಕೌ

ರವನ ಹೊರೆಗೈತಂದರಂದಿನ

ರವದ ರೌದ್ರದ ರಾಜಕಾರ‍್ಯವ ತಿಳಿವ ತವಕದಲಿ        ೪೮ 

 

ಇರುಳು ಬೇಹಿನ ಚರರು ಪಾರ್ಥನ

ನಿರುಪಮಿತ ಗಾಢ ಪ್ರತಿಜ್ಞಾ

ಚರಿತವನು ಕೌರವನ ಸಭೆಯಲಿ ತಂದು ಹರಹಿದರು

ಮರಣ ಸೈಂಧವಗಲ್ಲದಿದ್ದರೆ

ಮರಣ ಪಾರ್ಥಂಗಲ್ಲದೆಡೆಯಲಿ

ಪರಿಹರಿಸುವುದ ಕಾಣೆವೆಂದರು ಚರರು ಭೂಪತಿಗೆ  ೪೯

 

ಲೇಸು ಲೇಸಭಿಮನ್ಯುವೀ ದು

ಶ್ಯಾಸನನ ಮಗನಿಂದ ರಣದಲಿ

ಘಾಸಿಯಾದನು ನಾವು ಮಾಡಿದುದೇನು ಪಾರ್ಥಂಗೆ

ಈಸನೇರಿಸಿ ನುಡಿದ ಪಾರ್ಥನ

ಭಾಷೆ ಹೊಳ್ಳಾಗದು ಸುಯೋಧನ

ದೇಶವನು ಬೀಳ್ಕೊಂಡೆನೆಂದನು ಸೈಂಧವನು ಸಭೆಗೆ  ೫೦ 

 

ಅಳಲಿ ಮನೆಯಲಿ ಕಾಳುಗೆಡೆದಡೆ

ಫಲವಹುದೆ ನಿಜಸತಿಯ ಹಿಡಿದಾ

ನೆಳಸುವಂದಿನ ಭೀಮ ಮಾಡಿದ ಭಾಷೆಯೇನಾಯ್ತು

ಅಳುಕದಿರು ಪರಿವಾರವಿದೆ ಕೊಳು

ಗುಳಕೆ ವಜ್ರದ ಜೋಡು ದ್ರೋಣನು

ಬಲವಿಹೀನನೆ ತಾನೆನುತ ಕುರುರಾಯ ಗರ್ಜಿಸಿದ      ೫೧

 

ಆವನೋಲೆಯಕಾರತನ ಗಾಂ

ಡೀವಿಯಿದಿರಲಿ ಫಲಿಸುವುದು ಮೇ

ಣಾವನದ್ಭುತ ಮಂತ್ರಶಕ್ತಿಗೆ ಮಣಿವನಸುರಾರಿ

ಕಾವರಿಲ್ಲರ್ಜುನನ ಕೈಯಲಿ

ಸಾವವರು ನಾವಲ್ಲೆನಲು ನರ

ದೇವ ಕುರುಪತಿ ಮತ್ತೆ ನುಡಿದನು ನಗುತ ಸೈಂಧವಗೆ  ೫೨

 

ಗರುಡನೂರವರೆರೆವರೇ ನಾ

ಗರಿಗೆ ತನಿಯನು ನಮ್ಮ ಬಲದಲಿ

ಗುರುವಲಾ ಪಾಲಕನು ಕೈಕೊಂಬನೆ ಧನಂಜಯನ

ನರನ ನುಡಿಯನು ಹೊಳ್ಳುಗಳೆವರೆ

ಚರಣದಲಿ ಬೀಳುವೆವು ನಡೆಯೆಂ

ದಿರುಳು ದ್ರೋಣನ ಮನೆಗೆ ಬಂದನು ಕೌರವರ ರಾಯ  ೫೩

 

ನೆಗಹಿದವು ಕೈದೀವಿಗೆಯ ಸಾ

ಲುಗಳು ಹೊಂದಂಡಿಗೆಯ ದೂವಾ

ರಿಗಳು ವೆಂಠಣಿಸಿದರು ಸೀಗುರಿ ಮೊಗವ ಮೋಹಿದವು

ಉಗಿದ ಕಡಿತಲೆ ಮುಸುಕಿದವು ಚೌ

ರಿಗಳ ಡೊಂಕಣಿ ತುರುಗಿದವು ಮೌ

ಳಿಗಳ ಮಸ್ತಕದವರು ನೆಲನುಗ್ಗಡಿಸಲೈತಂದ           ೫೪  

 

ಗರುಡಿಯೊಡೆಯನ ಪಾಳೆಯಕೆ ಕಡು

ಭರದಲೈತರೆ ಕೌರವೇಂದ್ರನ

ಬರವಿದೇನೆಂದೆನುತ ಬಂದನು ದ್ರೋಣನಿದಿರಾಗಿ

ಧರಣಿಪನ ಸತ್ಕರಿಸಿ ನೆಲೆಯು

ಪ್ಪರಿಗೆಗೊಯ್ದನು ನುಸುಳುಗಂಡಿಯೊ

ಳುರವಣಿಸಿದರು ಕರ್ಣ ಕೃಪ ಮೊದಲಾದ ಬೇಹವರು  ೫೫  

 

ವೀಳೆಯವ ಕರ್ಪುರವನಿತ್ತು ನೃ

ಪಾಲರನು ಕರ್ಣಾದಿ ಸುಭಟರ

ಸಾಲ ಮನ್ನಿಸಿ ದ್ರೋಣ ಬೆಸಕೊಂಡನು ಸುಯೋಧನನ

ಕಾಳಿಕೆಯ ಕೈಕೊಂಡು ಸಿರಿಮೊಗ

ಹೇಳುತಿದೆ ಭೀತಿಯನು ನಿನ್ನಿನ

ಕಾಳೆಗದ ಜಯ ನಮ್ಮದೀ ದುಮ್ಮಾನವೇನೆಂದ        ೫೬  

 

ಏನ ಹೇಳುವೆನುರ್ಜುನನು ನಿಜ

ಸೂನು ಮಡಿಯೆ ದುರಾಭಿಮಾನದ

ಲೇನನೆಂದನು ಕೇಳಿರೈ ಕರ್ಣಾದಿ ಮಂತ್ರಿಗಳು

ತಾನು ಗಡ ಸೈಂಧವನ ತಲೆಯನು

ಭಾನುವಡಗದ ಮುನ್ನ ಕೊಂಬೆನು

ಹೀನನಾದರೆ ಹೊಗುವೆನೆಂದನು ಹವ್ಯವಾಹನನ       ೫೭ 

 

ಕೊಂದವನು ದುಶ್ಯಾಸನನ ಮಗ

ಬಂದುದಪರಾಧವು ಜಯದ್ರಥ

ಗಿಂದಿವನ ಪತಿಕರಿಸಬೇಹುದು ರಣದೊಳರ್ಜುನನ

ಮುಂದುಗೆಡಿಸಲೆಬೇಕು ಭೀಷ್ಮರು

ಸಂದ ಬಳಿಕೆಮಗಾಪ್ತ ನೀನೇ

ತಂದೆ ನೀನೆಂದರಸನೆರಗಿದನವರ ಚರಣದಲಿ         ೫೮ 

 

ಮಕುಟವನು ನೆಗಹಿದನು ಭೂಪಾ

ಲಕ ನಿದಾನಿಸಿ ಕೇಳು ಶಶಿಕುಲ

ಮುಕುರವಿತ್ತಂಡದಲಿ ನೆನೆಯೆವು ಭೇದಬುದ್ಧಿಗಳ

ಯುಕುತಿಯಿನ್ನಿದಕಿಲ್ಲ ಪಾರ್ಥನ

ಶಕುತಿ ಘನವೀ ರಾಜಕಾರ‍್ಯಕೆ

ಚಕಿತರಾದೆವು ರಾಯ ಚಿತ್ತೈಸೆಂದನಾ ದ್ರೋಣ        ೫೯ 

 

ಕಾವಡೆನ್ನಳವಲ್ಲ ಮೇಣ್ ಗಾಂ

ಡೀವಿ ಕೊಲುವವನಲ್ಲ ಕೃಷ್ಣನು

ಕಾವರೆಯು ಕೊಲುವರೆ ಸಮರ್ಥನು ವೇದಸಿದ್ಧವಿದು

ಜೀವಜಾತಕ್ಕೊಡೆಯನಾ ರಾ

ಜೀವನಾಭನು ಬರಿಯಹಂಕಾ

ರಾವಲಂಬನದಿಂದ ಕೆಡುತಿಹುದಖಿಳ ಜಗವೆಂದ       ೬೦

 

ಇದು ಮುರಾರಿಯ ಲೀಲೆಗೋಸುಗ

ಉದಯಿಸಿದ ಜಗವಿದರೊಳೊಬ್ಬನ

ಸದೆವನೊಬ್ಬನ ಹಿಡಿದು ಸಲಹುವನೊಬ್ಬನೊಬ್ಬನಲಿ

ಇದರೊಳಾತಂಗಿಲ್ಲ ಕರುಣಾ

ಸ್ಪದತೆ ನಿಷ್ಕಾರುಣ್ಯ ಭೂಯಂ

ತ್ರದ ವಿನೋದಕ್ರೀಡೆ ಕೃಷ್ಣನದೆಂದನಾ ದ್ರೋಣ       ೬೧  

 

ನರನ ನುಡಿಯೆಂದಿರದಿರವು ಮುರ

ಹರನ ನುಡಿಗಳು ಕೇಳು ಗಿರಿಗ

ಹ್ವರದ ನುಡಿಯೋ ಜಂಗಮ ಧ್ವನಿಯೋ ವಿಚಾರಿಸಲು

ನರನ ನುಡಿ ಹೊಳ್ಳಾಗದಾ ಮುರ

ಹರನ ಬಲುಹುಳ್ಳನ್ನಬರವೆನ

ಲರಸನಾಲಿಸಿ ಕೇಳುತಿರ್ದನು ಕೈಯ ಗಲ್ಲದಲಿ         ೬೨ 

 

ಕೇಳುತಿರ್ದೈ ಕರ್ಣ ಬೊಮ್ಮವ

ಕೇಳ ಬಂದೆವೆ ನಾವು ನಾಳಿನ

ಕಾಳೆಗದ ಜಯಮುಖವ ಬೆಸಗೊಳ ಬಂದೆವಿಂದೀಗ

ಹೇಳುತಿದ್ದರಸಂಗತವನಿದು

ಹೋಲುವುದಲೇ ಮುನಿ ಕುಮಾರರು

ಕಾಳೆಗವನೇಗುವರು ಬಳಿಕೇನೆಂದನಾ ಭೂಪ          ೬೩

 

ಕಟಕಿಯೇಕಿದು ವಿಪ್ರರಹೆವು

ತ್ಕಟದ ಶೌರಿಯವಿಲ್ಲ ನಾವ್ ದಿಟ

ಪುಟವ ನುಡಿದರೆ ಖಾತಿಯಾದುದೆ ನಿಮ್ಮ ಚಿತ್ತದಲಿ

ನಿಟಿಲಲೋಚನ ನೋಡುವರೆ ದು

ರ್ಘಟವೆನಿಪ ಮೋಹರದ ಬಲು ಸಂ

ಘಟನೆಯನು ತೋರುವೆನು ಚಿಂತಿಸಬೇಡ ನೀನೆಂದ  ೬೪

 

ವ್ಯೂಹವನು ರಚಿಸುವೆನು ನಾಳಿನೊ

ಳಾಹವಕೆ ತಳತಂತ್ರವೊಂದೇ

ಮೋಹರಕೆ ನಡೆತರಲಿ ಷಡುರಥರಾದಿ ಯಾದವರು

ಸಾಹಸವನುದಯದಲಿ ತೋರುವೆ

ಬಾಹುಬಲವನು ಸೈಂಧವನ ಮೈ

ಗಾಹ ಬಲಿವೆನು ಕಾಂಬೆ ಕೃಷ್ಣನ ನೆನಹ ಬಳಿಕೆಂದ     ೬೫  

 

ಸಾಕು ನೀ ಚಿಂತಿಸಲು ಬೇಡ ಪಿ

ನಾಕಧರನಡಹಾಯ್ದಡೆಯು ನಾ

ವಾಕೆವಾಳರು ರಣಕೆ ಕೃಷ್ಣಾರ್ಜುನರ ಪಾಡೇನು 

ನೂಕಿ ನೋಡಾ ಸೈಂಧವನನೇ

ಕೈಕವೀರರು ಕಾವೆವೆಂದು

ದ್ರೇಕ ಮಿಗೆ ಗರ್ಜಿಸಿತು ಕರ್ಣಾದಿಗಳು ತಮತಮಗೆ             ೬೬  

 

ಬೀಳುಕೊಂಡುದು ರಾಜಸಭೆ 

ಮ್ಮಾಲಯಕೆ ಸೈಂಧವನು ಚಿಂತಾ

ಲೋಲನಿರ್ದನು ಮರಣಜೀವನ ಜಾತ ಸಂಶಯನು

ಕೋಲಗುರುವಿನ ವಿವಿಧ ರಚನೆಯ

ಕೇಳಿದನು ನಸುನಗುತ ಪಾರ್ಥಗೆ

ಹೇಳಿದನು  ಕರುಣದಲಿ ಗದುಗಿನ ವೀರ ನಾರಯಣ  ೬೭


ಸಂಕ್ಷಿಪ್ತ ಭಾವ


ಮಗನ ಬಗ್ಗೆ ಅರ್ಜುನನ ಶೋಕಜಯದ್ರಥನನ್ನು ಸಂಹರಿಸಲು ಪ್ರತಿಜ್ಞೆ.


ಅಭಿಮನ್ಯುವಿನ ಮರಣ ಕೃಷ್ಣನಿಗೆ ಗೊತ್ತಾಯಿತುಇದನ್ನು ಅರ್ಜುನನಿಗೆ ತಿಳಿಸಲು ಒಂದುಉಪಾಯ ಮಾಡಿದನುಸರೋವರದಲ್ಲಿ ದಣಿವು ತೀರಿಸುವ ನೆಪದಲ್ಲಿ ಮುಳುಗಿದರು ಇಬ್ಬರೂಆಗ ಕೃಷ್ಣ ಅಭಿಮನ್ಯುವು ಪರಾಕ್ರಮದಿಂದ ಹೋರಾಡಿ ಮಡಿದನೆಂದು ಹೇಳಿದನುಅರ್ಜುನನಿಗೆಇದು ಅಶರೀರವಾಣಿ ಎಂದು ಭಾಸವಾಯಿತುವ್ಯಾಕುಲತೆಯಿಂದ ಆತುರಾತುರವಾಗಿ ಶಿಬಿರಕ್ಕೆಬಂದನುಎಲ್ಲೆಡೆಯೂ ಮೌನಶೋಕ ಆವರಿಸಿತ್ತುಎದುರು ಬಂದವರನ್ನು ಮಾತನಾಡಿಸದೆರಾಯನ ಓಲಗಕ್ಕೆ ಬಂದನು.


ಇವನ ಶೋಕಕ್ರೋಧ ಕಂಡ ಎಲ್ಲರೂ ಬೆದರಿದರುಸುಭದ್ರೆ ಓಡಿ ಬಂದು ಅಳತೊಡಗಿದಳುನನ್ನಮಗನೆಲ್ಲಿಅವನನ್ನು ನೀವೇ ಕೊಂದಿರಿ ಎನ್ನುತ್ತ ನೆಲದಲ್ಲಿ ಬಿದ್ದು ಹೊರಳಾಡಿಶೋಕಿಸತೊಡಗಿದನು ಅರ್ಜುನಧರ್ಮಜನು ಅಭಿಮನ್ಯುವು ನೂರಾರು ರಾಜಪುತ್ರರನ್ಬುರಾಜರುಗಳನ್ನು ಕೊಂದು ವೀರಮರಣವನ್ನು ಹೊಂದಿದನೆಂದನುಇವರೆಲ್ಲರಿದ್ದೂ ನನ್ನ ಮಗನನ್ನುಕಾಳಗಕ್ಕೆ ನೂಕಿದಿರಿ ಎಂದು ಹರಿಹಾಯ್ದನುಆಗ ಶಿವನ ವರದ ಪ್ರಬಾವದಿಂದ ಜಯದ್ರಥನುಎಲ್ಲರನ್ನೂ ತಡೆದು ಒಳಹೋಗಲು ಆಗದ ಹಾಗೆ ಮಾಡಿದ ವಿಷಯ ಹೇಳಿದನು.


ಆಗ ಅರ್ಜುನನ ಕೋಪ ಪರಾಕಾಷ್ಠೆ ತಲುಪಿತುಸೈಂಧವನನ್ನು ಮರುದಿನದ ಸೂರ್ಯಾಸ್ತದ ಒಳಗೆಕೊಲ್ಲುವೆನೆಂದು ಪ್ರತಿಜ್ಞೆ ಕೈಗೊಂಡನು ಅಕಸ್ಮಾತ್  ಅವನು ಧರ್ಮಜನಕೃಷ್ಣನ ಮೊರೆ ಹೊಕ್ಕರೆಕೊಲ್ಲುವುದಿಲ್ಲವೆಂದನುಅದು ನೆರವೇರದೆ ಇದ್ದರೆ ಎಲ್ಲ ಬಗೆಯ ಪಾಪಗಳೂ ತನಗೆ ಬರಲಿನಾನುಅಗ್ನಿಪ್ರವೇಶ ಮಾಡುವೆನೆಂದು ಜೋರಾಗಿ ಕೂಗಿ ಹೇಳಿದನು.


ಆಗ ಕೃಷ್ಣನು ಪಾಂಚಜನ್ಯವನ್ನು ಊದಿದನುಅರ್ಜುನನು ದೇವದತ್ತವೆಂಬ ತನ್ನ ಶಂಖವನ್ನುಊದಿದನುಅರ್ಜುನನ ಪ್ರತಿಜ್ಞೆ ಶತ್ರು ಪಕ್ಷದವರಿಗೆ ತಿಳಿಯದಿರಲಿ ಎಂದು ಕೃಷ್ಣನ ಉಪಾಯಆದರೆ ಅಷ್ಟರಲ್ಲಾಗಲೇ ಬೇಹುಗಾರರಿಗೆ ತಿಳಿಯಿತು.


ಇತ್ತ ಕೌರವರ ಪಾಳಯದಲ್ಲಿ ಎಲ್ಲರೂ ಗೆಲುವಿನ ಉತ್ಸಾಹದಲ್ಲಿ ಮೈಮರೆತಿದ್ದರುನಿದ್ರಿಸುತ್ತಿದ್ದವರಿಗೆ  ಕೋಲಾಹಲ ಕೇಳಿಸಿ ರಾತ್ರಿಯೇ ಯುದ್ಧಕ್ಕೆ ಬಂದರು ಪಾಂಡವರು ಎಂದುತೋರಿ ಅವಸರದಲ್ಲಿ ಸಿದ್ಧತೆ ನಡೆಸಿದರುಗಾಬರಿನಿದ್ರೆಗಣ್ಣುಭಯ ಎಲ್ಲ ಸೇರಿ  ಎಡವಟ್ಟಾಯಿತುಕಡಿವಾಣಗಳನ್ನು ಆನೆಯ ಮೋರೆಗೆ ತೊಡಿಸಿದರುಚಪ್ಪಲಿಯು ತಲೆಗೆ ಹೋಯಿತುಕುದುರೆಸವಾರರು ಆನೆಗಳನ್ನು ಏರಿದರು.ಪದಾತಿಗಳು ಕುದುರೆಗಳನ್ನು ಏರಿ ಒದ್ದಾಡಿದರುಒಟ್ಟಿನಲ್ಲಿಎಲ್ಲವೂ ಅಸ್ತವ್ಯಸ್ತತೆ. ದೃಶ್ಯ ನಗು ತರಿಸುತ್ತದೆ  ವೇಳೆಗೆ ಬಂದ ಬೇಹಿನವರು ಇವರನ್ನುಸಮಾಧಾನಿಸಿ ಅರ್ಜುನನ ಪ್ರತಿಜ್ಞೆ ತಿಳಿಸಿದರು.


ಕೌರವರ ಸಭೆ ಸೇರಿತುದುಶ್ಶಾಸನನ ಮಗ ಅಭಿಮನ್ಯುವನ್ನು ಕೊಂದವನುಜಯದ್ರಥನ ಮೇಲೆಆಪಾದನೆ ಬಂದಿದೆಈಗ ಇವನನ್ನು ರಕ್ಷಿಸಿಕೊಂಡು ಅರ್ಜುನನ ಪ್ರತಿಜ್ಞೆ ನೆರವೇರದ ಹಾಗೆಮಾಡಿದರೆ ಅರ್ಜುನ ಸಾಯುವನುಅಲ್ಲಿಗೆ ಗೆಲುವು ನಮ್ಮದೇ ಎಂದೆಲ್ಲ ಆಲೋಚಿಸಿದರುಜಯದ್ರಥನು ಹೆದರಿದನು.


ದ್ರೋಣನು ಇದೆಲ್ಲ ಕೃಷ್ಣನ ಲೀಲೆಯೆನ್ನಲು ದುರ್ಯೋಧನನು ಹೀಯಾಳಿಸಿದನುಅದಕ್ಕೆ ಅವರುಅಭಿಮನ್ಯುವಿನ ಪರಾಕ್ರಮವನ್ನು ಯಾರೂ ಮೆಚ್ಚತಕ್ಕದ್ದೇ ಎಂದರುನಾಳಿನ ಯುದ್ಧದಲ್ಲಿ ವಿಶೇಷವ್ಯೂಹ ರಚಿಸಿ ಜಯದ್ರಥನನ್ನು ರಕ್ಷಿಸಿಕೊಳ್ಳುವುದಾಗಿ ಹೇಳಿದರುಕರ್ಣಾದಿಗಳೂ ಬೆಂಬಲಿಸಿದರುಎಲ್ಲರೂ ಜಯದ್ರಥನಿಗೆ ಧೈರ್ಯ ತುಂಬಿದರೂ ಅವನಿಗೆ ಒಳಗೊಳಗೇ ಮರಣಭಯ ಕಾಡುತ್ತಿತ್ತುಇದನ್ನೆಲ್ಲ ಅರಿತ ಕೃಷ್ಣನು ಅರ್ಜುನನಿಗೆ ವಿವರಿಸಿದ.



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ