ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿ. ಕೆ. ಕೃಷ್ಣ ಮೆನನ್


 ವಿ ಕೆ ಕೃಷ್ಣ ಮೆನನ್ 


ವಿ. ಕೆ. ಕೃಷ್ಣ ಮೆನನ್ ಚಿಂತಕ, ಹೋರಾಟಗಾರ, ವಾಗ್ಮಿ, ಭಾರತ ಸರ್ಕಾರದ ಮಾಜಿ ಮಂತ್ರಿ ಮತ್ತು ರಾಯಭಾರಿಯಾಗಿದ್ದವರು. 

ವಿ. ಕೆ. ಕೃಷ್ಣ ಮೆನನ್ ಅವರು 1896 ಮೇ 3ರಂದು ಹುಟ್ಟಿದರು. ಇವರ ಆರಂಭದ ವಿದ್ಯಾಭ್ಯಾಸ ಕೇರಳದ ತೆಲ್ಲಿಚೆರಿ ಹಾಗೂ ಕಲ್ಲಿಕೋಟೆಯಲ್ಲಿ ನಡೆಯಿತು. ಮದರಾಸು ಮತ್ತು ಲಂಡನ್ನಿನ ಬಿ. ಎಸ್‍ಸಿ. (ಅರ್ಥಶಾಸ್ತ್ರ), ಎಂ. ಎ., ಎಂ. ಎಸ್‍ಸಿ. (ಅರ್ಥಶಾಸ್ತ್ರ) ಪದವಿಗಳನ್ನೂ ಶಿಕ್ಷಣ ಡಿಪ್ಲೊಮಾವನ್ನೂ ಗಳಿಸಿದ ಮೇಲೆ ಕಿಂಗ್ಸ್ ಇನ್ಸ್, ಮಿಡ್ಲ್‍ಟೆಂಪಲ್‍ನ ಬಾರ್ - ಅಟ್-ಲಾ ಆದರು. ಇವರು ಗಳಿಸಿದ ಗೌರವ ಪದವಿಗಳು ಹಲವಾರು : ಗ್ಲಾಸ್ಗೋ ವಿಶ್ವವಿದ್ಯಾಲಯದ ಮತ್ತು ಕೆನಡದ ನ್ಯೂಬ್ರನ್ಸ್‍ವಿಕ್‍ನ ಎಲ್‍ಎಲ್. ಡಿ. ; ನೌಗರ್, ಉಸ್ಮಾನಿಯ, ಮೈಸೂರು ವಿಶ್ವವಿದ್ಯಾಲಯಗಳ ಡಿ. ಲಿಟ್. ಇವುಗಳಲ್ಲಿ ಸೇರಿವೆ.  1954ರಲ್ಲಿ ಇವರಿಗೆ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.

ಮೆನನ್ ಅವರು ಅಧ್ಯಾಪಕರಾಗಿ ಜೀವನ ಆರಂಭಿಸಿದರು. 1919 - 22ರಲ್ಲಿ ಅಡ್ಯಾರ್‍ನ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದರು. 1918 - 24ರ ತನಕ ಮದರಾಸು ಕೊಚ್ಚಿನ್‍ಗಳಲ್ಲಿ ಬಾಲಚಮೂ ದಳದ ಕಮಿಷನರಾಗಿದ್ದ ಮೆನನ್ನರು ಅನಂತರ ಇಂಗ್ಲೆಂಡಿಗೆ ಹೋದರು. ಲ್ಯಾಚ್‍ವರ್ತನ್ ಸೇಂಟ್ ಕ್ರಿಸ್ಟೋಫರ್ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ಇದೇ ಕಾಲದಲ್ಲಿ ಇವರು ಅಲ್ಲಿ, ಇಂಡಿಯಾ ಲೀಗನ್ನು ಸ್ಥಾಪಿಸಿ ಅದರ ಕಾರ್ಯದರ್ಶಿಯಾಗಿ (1929 - 47) ಅಲ್ಲಿಯ ಜನರಲ್ಲಿ ಭಾರತದ ಬಗ್ಗೆ ಆಸಕ್ತಿಯನ್ನೂ ಅರಿವನ್ನೂ ಸಹಾನುಭೂತಿಯನ್ನೂ ಮೂಡಿಸಲು ಯತ್ನಿಸಿದರು. ಲಂಡನ್ನಿನ ಸೇಂಟ್ ಪ್ರ್ಯಾನ್‍ಕ್ರಾಸ್‍ನ ಕೌನ್ಸಿಲರೂ (1934 - 47), ಅಲ್ಲಿಯ,  ಆಟ್ರ್ಸ್ ಕೌನ್ಸಿಲಿನ ಅಧ್ಯಕ್ಷರೂ ಆಗಿದ್ದರು. ಬ್ರಿಟಿಷ್ ಲೇಬರ್ ಪಕ್ಷದಲ್ಲಿ ಇವರಿಗೆ ವಿಶೇಷವಾದ ಆಸಕ್ತಿಯಿತ್ತು. ಸ್ಕಾಟ್‍ಲೆಂಡಿನ ದಂಡಿಯಿಂದ ಲೇಬರ್ ಪಕ್ಷದ ಸಂಸದೀಯ ಅಭ್ಯರ್ಥಿಯಾಗಿದ್ದರು (1939 - 42).

ವಿ. ಕೆ. ಕೃಷ್ಣ ಮೆನನ್ ಭಾರತಕ್ಕೆ ಸ್ವಾತಂತ್ರ್ಯ ಬರುವುದಕ್ಕೆ ಮುಂಚೆ 1946 - 47 ರಲ್ಲಿ ಭಾರತ ಸರ್ಕಾರದ ವಿಶೇಷ ಪ್ರತಿನಿಧಿಯಾಗಿದ್ದರು; ಲೇಕ್ ಸಕ್ಸೆಸ್‍ನಲ್ಲಿ ಸೇರಿದ್ದ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಭಾರತದ ಪರ್ಯಾಯ ಸದಸ್ಯರಾಗಿ ನೇಮಕರಾಗಿದ್ದರು. 1936ರಿಂದಲೂ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಭಾರತೀಯ ಪ್ರತಿನಿಧಿಯಾಗಿ ಅನೇಕ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ ಮೆನನ್ನರು ಭಾರತಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ಯೂರೋಪಿನ ಹಲವಾರು ದೇಶಗಳ ರಾಜಧಾನಿಗಳಿಗೆ ಭೇಟಿ ಕೊಟ್ಟು ಅವುಗಳೊಂದಿಗೆ ಭಾರತದ ರಾಯಭಾರ ಸಂಬಂಧ ಸ್ಥಾಪಿಸಲು ಪೂರ್ವಭಾವಿ ಕ್ರಮಗಳನ್ನು ಕೈಗೊಂಡರು. 1947-52ರಲ್ಲಿ ಲಂಡನ್ನಿನಲ್ಲಿ ಭಾರತದ ಹೈಕಮಿಷನರಾಗಿಯೂ 1949-52ರಲ್ಲಿ ಐರ್ಲೆಂಡಿನಲ್ಲಿ ಭಾರತದ ರಾಯಭಾರಿಯಾಗಿಯೂ ಕೆಲಸಮಾಡಿದರು. 1952 - 53ರಲ್ಲಿ ಮತ್ತು 1954 - 62 ರಲ್ಲಿ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಭಾರತೀಯ ನಿಯೋಗದ ಅಧ್ಯಕ್ಷರಾಗಿದ್ದು, ಕಾಶ್ಮೀರ ಸಮಸ್ಯೆಯ ಬಗ್ಗೆ ಭಾರತದ ನಿಲುವನ್ನು ಅತ್ಯಂತ ಸಮರ್ಥವಾಗಿ ಮಂಡಿಸಿದರು. 1956 - 57 ರಲ್ಲಿ ಭಾರತ ಸರ್ಕಾರದ ಖಾತಾರಹಿತ ಮಂತ್ರಿಯಾಗಿಯೂ 1957 - 62 ರ ಅವಧಿಯಲ್ಲಿ ರಕ್ಷಣಾ ಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದರು. 1962 ರಲ್ಲಿ ಚೀನದಿಂದ ಭಾರತದ ಗಡಿಯ ಆಕ್ರಮಣವಾದಾಗ ಇವರ ಬಗ್ಗೆ ತೀವ್ರವಾದ ಟೀಕೆಗಳು ಬಂದುದರಿಂದ ಇವರು ಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸಿದರು. ಇವರು ಭಾರತದ ಅಂತರರಾಷ್ಟ್ರೀಯ ಕಾನೂನು ಮತ್ತು ರಾಜತಂತ್ರ ಸಂಘದ ಅಧ್ಯಕ್ಷರೂ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿಯೂ ಆಗಿದ್ದರು.

1920ರ ದಶಕದಲ್ಲಿ ಲಂಡನ್ನಿನಲ್ಲಿ ಸಮಾಜವಾದಿ ಚಳವಳಿಯಲ್ಲಿ ವಿಶೇಷವಾಗಿ ಪಾತ್ರವಹಿಸಿದ ಕೃಷ್ಣ ಮೆನನ್ ಒಳ್ಳೆಯ ವಾಕ್ಚತುರರಾಗಿದ್ದರಲ್ಲದೆ ಚಿಂತಕರೂ ಲೇಖಕರೂ ಆಗಿದ್ದರು. ಸುಪ್ರಸಿದ್ಧ ಪೆಂಗ್ವಿನ್ ಪ್ರಕಾಶನ ಸಂಸ್ಥೆಯ ಪೆಲಿಕನ್ ಪುಸ್ತಕಗಳ ಪ್ರಥಮ ಸಂಪಾದಕರಾಗಿದ್ದವರು ಕೃಷ್ಣ ಮೆನನ್. ಬಾಡ್ಲಿಹೆಡ್‍ನ ಟ್ವೆಂಟಿಯತ್ ಸೆಂಚುರಿ ಲೈಬ್ರರಿಯ ಪ್ರಕಟಣೆಗಳನ್ನು ಇವರು ಸಂಪಾದಿಸುತ್ತಿದ್ದರು. ಅವರು ಹಲವಾರು ಪುಸ್ತಕಗಳನ್ನೂ ಹಸ್ತಪತ್ರಗಳನ್ನೂ ಲೇಖನಗಳನ್ನೂ ಬರೆದಿದ್ದಾರೆ. ಇಂಡಿಯ, ಬ್ರಿಟನ್ ಅಂಡ್ ಫ್ರೀಡಮ್, ವೈಮಸ್ಟ್ ಇಂಡಿಯ ಫೈಟ್, ಬ್ರಿಟನ್ಸ್ ಪ್ರಿಸನರ್ : ನೆಹರೂ, ಯೂನಿಟಿ ವಿತ್ ಇಂಡಿಯ ಎಗೆನ್ಸ್‍ಟ್ ಫ್ಯಾಸಿಸಮ್, ಇಂಡಿಪೆಂಡೆನ್ಸ್ - ಇವು ಇವರ ಕೃತಿಗಳಲ್ಲಿ ಕೆಲವು. 

ವಿ. ಕೆ. ಕೃಷ್ಣಮೆನನ್ 1974 ರ ಅಕ್ಟೋಬರ್ 8 ರಂದು ನಿಧನರಾದರು.

On the birth anniversary of V. K. Krishna Menon 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ