ಭುಜೇಂದ್ರ ಮಹಿಷವಾಡಿ
ಭುಜೇಂದ್ರ ಮಹಿಷವಾಡಿ
ಲತಾ ಮಂಗೇಶ್ಕರ್ ಅವರ ಧ್ವನಿಯಲ್ಲಿ ಸಂಗೊಳ್ಳಿ ರಾಯಣ್ಣ ಚಿತ್ರದ 'ಬೆಳ್ಳನ ಬೆಳಗಾಯಿತು' ನಾದದ ಇಂಪನ್ನು ನಮ್ಮ ಕಾಲದಲ್ಲಿ ಸವಿಯದಿದದ್ದವರಿಲ್ಲ. ಆ ಗೀತೆಯ ರಚನಕಾರರು ಕನ್ನಡದ ಮಹತ್ವದ ಸಾಹಿತ್ಯ ಪ್ರತಿಭೆ ಡಾ. ಭುಜೇಂದ್ರ ಮಹಿಷವಾಡಿ ಅವರು.
ಕಾವ್ಯಕ್ಷೇತ್ರಕ್ಕೆ ಸತ್ವಯುತ ಕೃತಿಗಳನ್ನು ನೀಡಿದ ಕೃಷ್ಣಾತೀರದ ಅಪ್ಪಟ ಪ್ರತಿಭೆಯ ಭುಜೇಂದ್ರ ಮಹಿಷವಾಡಿಯವರು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮಹಿಷಿವಾಡಿಯಲ್ಲಿ 1915ರ ಮೇ 3 ರಂದು ಜನಿಸಿದರು. ಅವರ ಪ್ರಾರಂಭಿಕ ಶಿಕ್ಷಣ ಮಹಿಷವಾಡಿಯಲ್ಲಿ ನಡೆಯಿತು. ಪ್ರೌಢಶಾಲಾ ವಿದ್ಯಾಭ್ಯಾಸ ಅಥಣಿ ಮತ್ತು ಬನಹಟ್ಟಿಯಲ್ಲಿ ನೆರವೇರಿತು. ಮುಂದೆ ಬೆಳಗಾವಿಯಲ್ಲಿ ಬಿ.ಎ. ಆನರ್ಸ್ ಮತ್ತು ಬಿ.ಎಡ್ ಪದವಿ ಹಾಗೂ ಸಾಂಗ್ಲಿಯಲ್ಲಿ ಎಂ.ಎ. ಪದವಿ ಪಡೆದರು.
ಭುಜೇಂದ್ರ ಮಹಿಷವಾಡಿ ಅವರು "ಕವಿಚಕ್ರವರ್ತಿ ಜನ್ನನ ಜೀವನ ಹಾಗೂ ಕೃತಿಗಳು: ವಿವೇಚನೆ” ಎಂಬ ಪ್ರೌಢ ಪ್ರಬಂಧ ಸಲ್ಲಿಸಿ ಪಿಹೆಚ್.ಡಿ. ಪದವಿ ಗಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿಯಿಂದ ಹಿಡಿದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಸ್ಥಾನದವರೆಗೂ ವಿವಿಧ ಮಟ್ಟದ ಬೋಧನೆ ನಡೆಸಿದರು. ಅವರು ಕಾವ್ಯಕ್ಷೇತ್ರವನ್ನು ಪ್ರವೇಶಿಸಿಸಲು ವಿದ್ವಾಂಸರಾದ ರಂ.ಶ್ರೀ. ಮುಗಳಿ ಹಾಗೂ ಖ್ಯಾತ ಕಾದಂಬರಿಕಾರರಾದ ಮಿರ್ಜಿ ಅಣ್ಣಾರಾಯರು ಪ್ರೇರಕರಾದರು.
ಭುಜಂಗ ಮಹಿಷಿವಾಡಿಯವರಿಗೆ ಕೃಷ್ಣೆಯ ತಟವು ಕಾವ್ಯ ಸ್ಫೂರ್ತಿಯ ತಾಣವಾಗಿ, ಅವರ ಎಲ್ಲ ಕವನಗಳಲ್ಲಿಯೂ ಒಂದಿಲ್ಲೊಂದು ರೀತಿ ಕೃಷ್ಣೆ ಹರಿದಾಡಿದ್ದಾಳೆ. ಇವರಿಗೆ ಕೃಷ್ಣೆ ಒಂದು ನದಿಯಾಗಿರದೆ ಕಾವ್ಯದ ಸೆಲೆಯಾಗಿ ಹರಡಿದ್ದಾಳೆ.
ಭುವಿಯ ತಲೆ ಹೆಳಲಿನೆಳೆ
ಇದುವೆ ಹೊಳೆ ನೋಡು ಕೃಷ್ಣೆ
ಎಂದು ಭೂತಾಯಿಯ ತಲೆಗೂದಲೇ ಎಳೆಎಳೆಯಾಗಿ ಕೃಷ್ಣೆಯಾಗಿ ಹರಿದು ಬಂದಿದ್ದಾಳೆಂದು ವರ್ಣಿಸುವ ಇವರಿಗಿದ್ದ ಕೃಷ್ಣೆಯ ಜೊತೆಗಿನ ಅವಿನಾಭಾವ ಸಂಬಂಧ ಅತ್ಯಂತ ಆಪ್ತವಾದದ್ದು. 1950ಕ್ಕಿಂತ ಹಿಂದೆಯೇ ಕಾವ್ಯ ಕೃಷಿಯನ್ನು ಪ್ರಾರಂಭಿಸಿದ ಮಹಿಷಿವಾಡಿಯವರು ಮಾಯಾಮಂದಿರ (1950), ಹಾಲು ಹಣ್ಣು (1954), ಕಟ್ಟುವ ಕೈ (1958), ಹಂಸಮಿಥುನ (1967), ಬೆರಕೀಮಂದಿ (1978) ಮುಂತಾದ ಕವನ ಸಂಕಲನಗಳನ್ನು ಮಿತ್ರರಾದ ಬಿ.ಎ. ಸನದಿ, ಬ.ಗಿ. ಯಲ್ಲಟ್ಟಿ, ಬಾಳು ಉಪಾಧ್ಯೆ, ಶ್ರೀಕಾಂತ ಖೋತ ಮುಂತಾದವರೊಡನೆ ಸೇರಿ ‘ಸ್ನೇಹ ಪ್ರಕಾಶನ’ದಡಿ ಹೊರತಂದರು.
ಭುಜಂಗ ಮಹಿಷಿವಾಡಿ ಅವರು 1972ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದಲ್ಲಿ ಅಧ್ಯಾಪಕರಾಗಿ ಸೇರ್ಪಡೆಯಾದ ನಂತರ ಸಂಶೋಧನೆ, ವಿಮರ್ಶೆ, ಸಂಪಾದನೆಯತ್ತ ತೊಡಗಿ ಹನ್ನೊಂದು ಕೃತಿಗಳನ್ನೂ ಸಂಪಾದಿಸಿದ್ದಲ್ಲದೆ ವಿಮರ್ಶೆ, ಪ್ರಬಂಧ, ಸಂಶೋಧನೆಯ ಎಂಟು ಕೃತಿಗಳನ್ನು ಪ್ರಕಟಿಸಿದರು. ಇದಲ್ಲದೆ ಚರಿತ್ರೆ ಗ್ರಂಥಗಳು-3, ಸಂಸ್ಮರಣ ಕೃತಿಗಳು-2,ನಾಟಕಗಳು-1 (ಅಪ್ರಕಟಿತ), ಜಾನಪದ ವೀರಲಾವಣಿ-1 (ಅಪ್ರಕಟಿತ) ಮತ್ತು ಸುಮಾರು 140 ಬಿಡಿಲೇಖನಗಳನ್ನು ಸಾಂದರ್ಭಿಕವಾಗಿ ಬರೆದಿದ್ದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂಬ ಚಲನಚಿತ್ರವನ್ನು (1967) ಮೊದಲಸಲ ಕೊಲ್ಲಾಪುರದ ಚಿತ್ರಪ್ರೇಮಿಗಳು ತಯಾರಿಸಿದಾಗ, ಅವರ ಆಹ್ವಾನವನ್ನು ಮನ್ನಿಸಿ ಆ ಚಿತ್ರಕ್ಕೆ ಸಂಭಾಷಣೆ ಹಾಗೂ ಗೀತೆಗಳನ್ನೂ ಬರೆದರು. ಆ ಗೀತೆಗಳಲ್ಲಿ ‘ಬೆಳ್ಳನ್ನ ಬೆಳಗಾಯಿತು…..” ಚಿತ್ರಗೀತೆಯನ್ನು ಲತಾಮಂಗೇಶ್ಕ್‌ರವರು ಹಾಡಿದ್ದು ಅದು ಕನ್ನಡಿಗರ ಮನಸೂರೆಗೊಂಡ ಹಾಡಾಗಿದೆ. ಈ ಗೀತೆಯಲ್ಲಿನ ಭುಜಂಗ ಮಹಿಷಿವಾಡಿ ಸಾಹಿತ್ಯ ಸೊಬಗು ಕನ್ನಡ ಬಾರದ ಲತಾ ಮಂಗೇಶ್ಕರ್ ಅವರ ಉಚ್ಚಾರದಲ್ಲಿ ಸಾಹಿತ್ಯಕವಾಗಿ ವಿಜೃಂಭಿಸದಿದ್ದರೂ ಧ್ವನಿ ಮಾಧುರ್ಯ ಮತ್ತು ಸಂಗೀತ ಗುಣಗಳಿಂದ ಪ್ರಸಿದ್ಧಿ ಪಡೆದಿದೆ.
ಒಮ್ಮೆ ಆಪ್ತರಾದ ದಿವಂಗತ ಗೋಪಾಲ ವಾಜಪೇಯಿ ಅವರ ಬಳಿ ಈ ಗೀತೆಯ ಸಾಹಿತ್ಯವನ್ನು ಕೇಳಿದಾಗ ಪ್ರೀತಿಯಿಂದ ಕಳಿಸಿಕೊಟ್ಟರು
ಬೆಳ್ಳನ ಬೆಳಗಾಯಿತು
ಬೆಳ್ಳನ ಬೆಳಗಾಯಿತು
ಏಳೆನ್ನ ಚೇತನ ಚೆಲುವಾ
ಬೆಳ್ಳನ ಬೆಳಗಾಯಿತು
ಬೆಳ್ಳನ ಬೆಳಗಾಯಿತು
ಆಕಳಿಸುವದುಂಟೆ? ಆಕಳ ಕರು ಬಿಟ್ಟೆ
ಓ ಕಳೆ ಕಂಡೇವಾ ಆಕಳ ಹಿಂಡುವಾ
ಬೆಳ್ಳನ ಬೆಳಗಾಯಿತು...
ಬೆಳ್ಳನ ಬೆಳಗಾಯಿತು...
ಎದ್ದಾವ ಎಳೆದುಂಬ ಸೀ ಮುತ್ತೆ ತಾ ತುಂಬ
ಗೆಲವಿನ ಧ್ವಜ ಕಂಬ ತುತ್ತುರಿಸಿ ಹಿಡಿ ಕೊಂಬ
ಬೆಳ್ಳನ ಬೆಳಗಾಯಿತು...
ಬೆಳ್ಳನ ಬೆಳಗಾಯಿತು...
ಕಿತ್ತೂರ ಹೊಸ ಬಾಳೆ ಸಕ್ಕರೆ ರಸ ಬಾಳೆ
ಹಿಂಡಿದ ನೊರೆ ಹಾಲು ದಂಡಿನ ದೊರೆ ಪಾಲು
ಬೆಳ್ಳನ ಬೆಳಗಾಯಿತು...
ಬೆಳ್ಳನ ಬೆಳಗಾಯಿತು...
ಚಿತ್ರ : ಸಂಗೊಳ್ಳಿ ರಾಯಣ್ಣ
ಗೀತ ರಚನೆ : ಭುಜೇಂದ್ರ ಮಹೀಶವಾಡಿ
ಸಂಗೀತ : ಲಕ್ಷ್ಮಣ ಬರ್ಲೇಕರ್
ಗಾಯಕಿ : ಲತಾ ಮಂಗೇಶ್ಕರ್
ವರ್ಷ : 1967
ಭುಜೇಂದ್ರ ಮಹಿಷವಾಡಿಯವರ ಕಾವ್ಯದ ಬಗ್ಗೆ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿರುವ ಪಿ.ಜಿ. ಕೆಂಪಣ್ಣವರ ಅವರು ಸಂಪಾದಕರಾಗಿ, ಮಹಿಷವಾಡಿಯವರು ತಮ್ಮ ಜೀವಿತಾವಧಿಯಲ್ಲಿಯೇ ಬರೆದಿಟ್ಟಿದ್ದ ‘ಸೀತೆನೆ ಸುಲಿಗಾಯಿ’, ‘ಬೋರಂಗಿ’ (ಶಿಶುಗೀತೆಗಳ ಸಂಕಲನ), ‘ಛಾಯ ಚಂದ್ರನಾಥನ ವಚನ ಚಂದ್ರಿಕೆ’ ಹಾಗೂ ‘ಸಡಿಲಪ್ಪನ ಹಾವಳಿ’ ಎಂಬ ನವ್ಯ ಧಾಟಿಯ ದೀರ್ಘ ಕವನಗಳ ಅಪ್ರಕಟಿತ ಮತ್ತು ಪ್ರಕಟಿತ ಕವನಗಳನ್ನೆಲ್ಲಾ ಸೇರಿಸಿ ‘ಕೃಷ್ಣಾ ತೊರೆ’ ಎಂಬ ಹೆಸರಿನಿಂದ ಸಮಗ್ರ ಕಾವ್ಯವನ್ನು 2006 ರಲ್ಲಿ ಹೊರತಂದಿದ್ದಾರೆ.
ಭುಜೇಂದ್ರ ಮಹಿಷವಾಡಿ ಅವರು 1982ರ ಮಾರ್ಚ್ 15ರಂದು ನಿಧನರಾದರು.
On the birth anniversary of great scholar Bhujendra Mahishawadi
ಕಾಮೆಂಟ್‌ಗಳು