ರಾಗಿಣಿ ಸನತ್
ರಾಗಿಣಿ ಸನತ್
ವಿದುಷಿ ಡಾ. ರಾಗಿಣಿ ಸನತ್ ಸಂಗೀತಗಾರ್ತಿ, ಸಂಶೋಧನಾ ತಜ್ಞೆ, ಉಪನ್ಯಾಸಕಿ ಮತ್ತು ಕಲಾವಿದೆ.
ಮೇ 26, ರಾಗಿಣಿ ಅವರ ಜನ್ಮದಿನ. ರಾಗಿಣಿ ಅವರು ಸಂಗೀತ ಸಂಸ್ಕಾರದ ಕುಟುಂಬದಿಂದ ಬಂದವರು. ಇವರ ಅಜ್ಜಿ (ತಾಯಿಯ ತಾಯಿ) ವಿದುಷಿ ಎಂ. ಜಿ. ಸುಲೋಚನಾ ಮತ್ತು ಅಜ್ಜಿಯ ಸಹೋದರಿ ವಿದುಷಿ ಸುಶೀಲಾ ದೇಶಿಕನ್ ಅವರು 'ಬೆಂಗಳೂರು ಸಿಸ್ಟರ್ಸ್' ಎಂದು ಪ್ರಖ್ಯಾತರಾಗಿದ್ದ ಸಂಗೀತ ವಿದುಷಿಯರು.
ರಾಗಿಣಿ ಅವರು ಬೆಂಗಳೂರಿನ ಎಂಇಎಸ್ ಹೈಸ್ಕೂಲು, ನ್ಯಾಶನಲ್ ಕಾಲೇಜು, ದಯಾನಂದ್ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ವಿದ್ಯಾ ಸಂಸ್ಥೆಗಳಲ್ಲಿನ ವಿದ್ಯಾರ್ಹತೆಗಳ ಜೊತೆಗೆ, ಬೆಂಗಳೂರು ವಿಶ್ವವಿದ್ಯಾಲಯದಿಂದ ಕರ್ನಾಟಕ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ರಾಗಿಣಿ ಅವರು ಹಲವು ವರ್ಷಗಳ ಕಾಲ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ, ಕಳೆದ ದಶಕದಲ್ಲಿ ಸಂಗೀತಾಭಿರುಚಿಯಲ್ಲಿನ ಉನ್ನತ ಸಾಧನೆಗಳತ್ತ ತಮ್ಮ ಗಮನವನ್ನು ಕೇಂದ್ರೀಕರಿಸುತ್ತ ಸಾಗಿದ್ದಾರೆ.
ರಾಗಿಣಿ ಅವರು 17ನೇ ಶತಮಾನದ ಮೈಸೂರಿನ ‘ಗೇಯ ವಾಗ್ಗೇಯಕಾರರ’ ಕುರಿತಾದ ತಮ್ಮ ಸಂಶೋಧನಾ ಪ್ರಬಂಧಕ್ಕೆ ಸ್ವರ್ಣ ಪದಕ ಪಡೆದಿದ್ದಾರೆ. ಪ್ರಖ್ಯಾತ ಸಂಗೀತಶಾಸ್ತ್ರಜ್ಞರಾದ ಡಾ ಮೀರಾ ರಾಜಾರಾಮ್ ಪ್ರಾಣೇಶ್ ಅವರ ಮಾರ್ಗದರ್ಶನದಲ್ಲಿ ದಾಸಸಾಹಿತ್ಯದಲ್ಲಿ ಪಿಎಚ್.ಡಿ ಗಳಿಸಿದ್ದಾರೆ.
ರಾಗಿಣಿ ಸನತ್ 'ಸಿ ಸಿ ಆರ್ ಟಿ ಫೆಲೊಷಿಪ್' ಗಳಿಸಿದವರು. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಂಗೀತ ಪ್ರಾಧ್ಯಾಪನವನ್ನೂ ನೀಡುತ್ತಿದ್ದಾರೆ. ಅವರು ಆಕಾಶವಾಣಿಯ ಶ್ರೇಣೀಕೃತ ಸಂಗೀತ ಕಲಾವಿದೆ. ಅವರು ವನಮಾಲಾ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರ್ ಸಂಶೋಧನಾ ತಂಡದ ಸದಸ್ಯೆ. ಈ ಸಂಸ್ಥೆಯ ಮೂಲಕ 'ದಶ ಮಹಾವಿದ್ಯಾ' (The 10 Cosmic Powers’) ಅಂತಹ ಅನೇಕ ವಿದ್ವತ್ಪೂರ್ಣ ಪ್ರಾತ್ಯಕ್ಷಿಕೆಗಳು ಹೊರಹೊಮ್ಮುತ್ತಿದ್ದು, ಯೂಟ್ಯೂಬ್ ಚಾನೆಲ್ನಲ್ಲಿ ಸಹಾ ಲಭ್ಯವಿದೆ. ದೇಶ, ವಿದೇಶದ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಇವರ ಸಂಗೀತ ಕಚೇರಿಗಳು ನಡೆಯುತ್ತಿವೆ. ಇವರು ತಿರುಮಲ ತಿರುಪತಿ ಪ್ರತಿಷ್ಠಾನದ ದಾಸಸಾಹಿತ್ಯ ಯೋಜನೆಯ ಕಲಾವಿದೆಯೂ ಆಗಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಯುವ ಜನರಿಗೆ ಕಲೆ ಸಂಸ್ಕೃತಿಗಳ ಕುರಿತು ಸದಾಶಯ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಸಾಧಕಿ ವಿದುಷಿ ರಾಗಿಣಿ ಸನತ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Vidushi. Ragini Sanath
ಕಾಮೆಂಟ್‌ಗಳು