ಭಾರತಕಥಾಮಂಜರಿ131
ಸೂ.
ವೈರಿಗಜ ಪಂಚಾನನನು ರ
ಧೀರನಪ್ರತಿಮಲ್ಲ ಕರ್ಣನು
ದಾರದಲಿ ಹಳಚಿದನು ಹನುಮನ ಹಳವಿಗೆಯ ರಥವ
ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳಸುಮ್ಮಾನವನು ತನುರೋ
ಮಾಳಿ ಪಲ್ಲವಿಸಿದುದು ಪರಿತೋಷಪ್ರವಾಹದಲಿ
ಕಾಳೆಗಕೆ ಕೈವೊಯ್ದು ಹಗೆವನ
ಮೇಳಯದ ಕಳನೇರಿದನು ತ
ನ್ನಾಳು ತನವನು ತೋರಲಾಯ್ತೆನುತುಬ್ಬಿದನು ಕರ್ಣ ೧
ಆಳ ಹೊಯ್ ಹೊಯ್ ನಾಯಕರ ನಿಲ
ಹೇಳು ಕೃಪ ಗುರುನಂದನಾದಿಗ
ಳಾಲಿಗಳಿಗೌತಣವ ರಚಿಸುವೆ ನಿಮಿಷ ಸೈರಿಸಲಿ
ಕಾಳೆಗದಲಿಂದಹಿತರಾಯರ
ಭಾಳಲಿಪಿಗಳನೊರಸುವೆನು ಭೂ
ಪಾಲಕನ ಮೊಗವಡದ ದುಗುಡವನುಗಿವೆ ನಾನೆಂದ ೨
ತರಿಸಿ ಸಾದು ಜವಾಜಿಗಳ ಹೊಂ
ಭರಣಿಯಲಿ ಮೊಗೆಮೊಗೆದು ಶಲ್ಯಗೆ
ಸುರಿದು ಹಡಪಿಗ ಚಮರಚಾಹಿಯ ಬಾಣದಾಯಕರು
ಕರೆದು ಮನ್ನಿಸಿ ತನ್ನನತಿವಿ
ಸ್ತರಿಸಿ ಹೊಸಮಡಿವರ್ಗದಲಿ ಮಿಗೆ
ಮೆರೆದು ರಣಸುಮ್ಮಾನದಲಿ ಹೊಗರೇರಿದನು ಕರ್ಣ ೩
ತೊಳಗಿ ಬೆಳಗುವ ಶಿರದ ಪಚ್ಚೆಯ
ಹಳುಕು ಬೆರಸಿದ ವೀಳೆಯವನಿ
ಕ್ಕೆಲದ ಶಲ್ಯಾದಿಗಳಿಗಿತ್ತನು ವರರಥಾಗ್ರದಲಿ
ಕಳಚಿ ತೆಗೆದನು ಜೋಡ ಮೈವೆ
ಗ್ಗಳಿಸಿ ದಳವೇರಿದುದು ಮನ ಮೊಗ
ಥಳಥಳಿಸೆ ಬಹಳಪ್ರತಾಪದಲಿರ್ದನಾ ಕರ್ಣ ೪
ತಳಿತು ಮುತ್ತುವ ಮುಗಿಲ ಝಾಡಿಸಿ
ಝಳಪಿಸುವ ರವಿಯಂತೆ ಭುವನವ
ಬೆಳಗಲುದ್ರೇಕಿಸುವ ಭಾರ್ಗವ ಭಾಳಶಿಖಿಯಂತೆ
ಹೊಳೆಹೊಳೆವ ಕರ್ಣಪ್ರತಾಪಾ
ನಳನ ನಾಟ್ಯವ ಕಂಡು ಕೌರವ
ಬಲದೊಳೊಸಗೆಯ ಲಗ್ಗೆ ಮಸಗಿತು ಭೂಪ ಕೇಳೆಂದ ೫
ರಾಯನನುಜನ ರುಧಿರ ಜೀವದ
ಬೀಯದಲಿ ಕರ್ಣಾತ್ಮಜನ ಕುಲಿ
ಶಾಯುಧನ ಸಾಲೋಕ್ಯದಲಿ ಕಣ್ದೆರೆದ ವೇದನೆಯ
ಆಯಸವ ನೆರೆ ಮರೆದು ಕೌರವ
ರಾಯ ಭುಲ್ಲವಿಸಿದನು ಲಹರಿಯ
ಘಾಯದಲಿ ಸೂಳೈಸಿದವು ನಿಸ್ಸಾಳಕೋಟಿಗಳು ೬
ಸಾರಿ ಸುಭಟರ ಜಜರೆವ ಕಹಳೆಯ
ಗೌರುಗಳ ತಿತ್ತಿರಿಯ ಚಿನ್ನದ
ಚೀರುಗಳ ನಿಡುಗೊಂಬುಗಳ ಚೆಂಬಕನ ನಿರ್ಘೋಷ
ಡೋರುಗಳೆದುವು ನೆಲನನುದಧಿಯ
ಕಾರಿಸಿದವಡಿಮಳಲನೆನೆ ಹುರಿ
ಯೇರಿತಬ್ಬರವಿವರ ಬಲದಲಿ ಭೂಪ ಕೇಳೆಂದ ೭
ರಥವಿಳಿದು ಬಲವಂದು ನಿಜಸಾ
ರಥಿಗೆ ಕೈಮುಗಿದಶ್ವಚಯಕತಿ
ರಥಭಯಂಕರನೆಱಗಿ ಕಂದವ ತಟ್ಟಿ ಬೋಳೈಸಿ
ರಥವನಡರಿದು ನೋಡಿ ಗಗನದ
ರಥಿಗೆ ತಲೆವಾಗಿದನು ಲೋಕ
ಪ್ರಥಿತ ಸಾಹಸಮಲ್ಲ ಮುದದಲಿ ತುಡುಕಿದನು ಧನುವ ೮
ಸರಳ ಹೊದೆಗಳ ತುಂಬಿ ಬಂಡಿಯ
ನರಸ ಕಳುಹಿದನೆಂಟುನೂಱನು
ಚರರು ಪರಿವೇಷ್ಟಿಸಿತು ಪರಿಚಾರಕರು ವಿಗ್ರಹದ
ಸರಿಸ ಸಿಂಧವನೆತ್ತಿಸುತ ಬೊ
ಬ್ಬಿರಿದು ಜವನಿಕೆವಿಡಿದು ಭೀಮನೊ
ನರನೊ ನಿಲುವವರಾರು ಬರಹೇಳೆಂದನಾ ಕರ್ಣ ೯
ಮಾತು ತಪ್ಪಿತು ರಿಪುಗಳೈವರಿ
ಗೌತಣಿಸಿದೆವು ನೆರವಿನಲಿ ಪುರು
ಹೂತ ಶಿಖಿ ಯಮ ನಿರುತಿ ವರುಣ ಸಮೀರ ಹರಸಖರು
ಆತುಕೊಳಲಿಂದೀ ಸುಯೋಧನ
ಜಾತಪುಣ್ಯನೊ ಧರ್ಮಪುತ್ರನೆ
ಭೂತಭಾಗ್ಯನೊ ಕಾಣಲಹುದೈ ಶಲ್ಯ ಕೇಳೆಂದ ೧೦
ಸರಳೊಳಾಯ್ದು ಮಹಾಸ್ತ್ರವನು ಸಂ
ವರಿಸಿದನು ಬತ್ತಳಿಕೆಯಲಿ ಮಾ
ರ್ತಿರುವ ಬೆರಳಲಿ ತೀಡಿ ಕೊಪ್ಪಿನ ಬಲುಹನಾರೈದು
ತಿರುವನೇರಿಸಿ ಮಿಡಿಮಿಡಿದು ಪೊಂ
ಬರಹದವನಿನ್ನೂಱು ಚಾಪವ
ನಿರಿಸಿದನು ಕೆಲದವರ ತೊಲಗಿಸಿ ವಾಮಭಾಗದಲಿ ೧೧
ತಿರುವ ಬೆರಳಲಿ ಮಿಡಿದು ಕೆನ್ನೆಗೆ
ಬರಸೆಳೆದು ಲುಳಿವಡೆದು ಹೂಡಿದ
ಸರಳ ಕಿವಿವರೆಗುಗಿದು ಬೈಸಿಗೆದೆಗೆದು ಠಾಣದಲಿ
ಪರಿವಿಡಿಯನಾರೈದು ಗರುಡಿಯ
ಗುರುವ ನೆನೆದನು ವೈರಿಸೇನೆಯ
ತರುಬಿ ನಿಂದನು ಕಾದುವಣ್ಣನ ಬೇಗ ಕರೆಯೆನುತ ೧೨
ಭೀತಿಗೊಳುತದೆ ಮಾರುಬಲ ಮಝ
ಪೂತು ದಕ್ಕಡ ದಿಟ್ಟ ರಿಪು ಸಂ
ಘಾತ ವಾರಿಧಿ ಬಾಡಬಾನಲ ಕೀರ್ತಿಜಗಝಂಪ
ಜಾತರಿಪು ನಿರ್ಮಥನ ವೈರಿ
ವ್ರಾತಕಾನನ ಧೂಮಕೇತುವ
ರಾತಿಹರ ಜಯ ಜೀಯ ಎಂದುದು ವಂದಿಸಂದೋಹ ೧೩
ಒಳಗೆ ಸುಳಿಸುಳಿಗೊಂಡು ಪಾಂಡವ
ಬಲಪಯೋಧಿ ಪರಿಭ್ರಮಿಸೆ ಕ
ಕ್ಕುಳಿಸಿದಗ್ಗಳಿಕೆಗಳ ಸುಕ್ಕಿದ ಸಾಹಸೋನ್ನತಿಯ
ಕಳಕಳವ ಕಣ್ದೆಱವೆಗಳ ಮನ
ಗಲಿತನದ ಮುಳುಮೆಟ್ಟುಗಳ ವೆ
ಗ್ಗಳೆಯರಿದ್ದುದು ಭೀಮಸಾತ್ಯಕಿ ಸೃಂಜಯಾದಿಗಳು ೧೪
ಮುಸುಕಿತೋ ಕರ್ಣಪ್ರತಾಪದ
ಬಿಸಿಲು ಪಾಂಡವಕುಮುದಕಾನನ
ವಿಸರವನು ವಿಗ್ರಹದ ಮುಖ ಲೇಸೆನುತ ಕುರುಸೇನೆ
ಮಸಗಿದಂಬುಧಿಯಂತೆ ಮಿಗೆ ಗ
ರ್ಜಿಸಲು ಗರುವರ ಗಾಢ ಶೌರ‍್ಯದ
ಬೆಸುಗೆ ಬಿಡೆ ಗಾಂಡಿವವ ದನಿಮಾಡಿದನು ಕಲಿಪಾರ್ಥ ೧೫
ಅರಸ ಕೇಳೈ ಧೂರ್ಜಟಿಯ ಡಾ
ವರದ ಡಮರಧ್ವನಿಯೊ ವಿಲಯದ
ಬರಸಿಡಿಲ ಬೊಬ್ಬಾಟವೋ ಕಲ್ಪಾಂತಸಾಗರದ
ತೆರೆಗಳಬ್ಬರವೋ ಧನಂಜಯ
ಕರನಿಹಿತಗಾಂಡಿವದ ಮೌರ್ವೀ
ಸ್ಫುರಿತ ಕಳಕಳವೊದೆದುದಬುಜಭವಾಂಡಮಂಡಲವ ೧೬
ಘೀಳಿಡಲು ಕಿವಿಗಳಲಿ ಕುರುಬಲ
ಜಾಲ ಜರಿದುದು ಜಾತಭುವನಾ
ಸ್ಫಾಳ ಪುನರಾಗತ ಮಹಾಧ್ವನಿ ಕದಡಿತಂಬುಧಿಯ
ಮೇಲುಮೊಳಗಿನ ದನಿಯನಾಲಿಸಿ
ಹೀಲಿಗೆದರು
ವ ನವಿಲವೊಲು ನಿ
ನ್ನಾಳು ಬಾಹಪ್ಪಳಿಸಿ ಹಿಗ್ಗಿದನರಸ ಕೇಳೆಂದ ೧೭
ಸಂತವಿಸಿತಾ ಸೇನೆ ಕುರುಬಲ
ಕಂತುಹರನುದ್ಯೋಗವಾಗೆ ನಿ
ರಂತರದ ನಿಸ್ಸಾಳಸೂಳಿನ ಲಗ್ಗೆದಂಬಟದ
ಅಂತರಿಕ್ಷದೊಳುಲಿವ ಸುಮನಸ
ಸಂತತಿಯ ಘನಸಾಧುವಾದ ಶ
ಕುಂತಸೂಚಿತ ಭದ್ರಭಾಷಣವೆಸೆದುದಾಚೆಯಲಿ ೧೮
ಹರಿಗೆ ಕೈಮುಗಿದೆಱಗಿ ತೇರಿನ
ಹರಿಗಳಿಗೆ ವಂದಿಸಿ ಪತಾಕೆಯ
ಹರಿಗೆ ನಮಿಸಿ ನಿಜಾಯುಧಕೆ ಕೈಮುಗಿದು ಜೇವೊಡೆದು
ಹರಿ ಧನಂಜಯ ಧರ್ಮ ನೈರುತಿ
ವರುಣ ಮಾರುತ ವೈಶ್ರವಣ ಶಂ
ಕರ ವಿರಿಂಚಾದಿಗಳಿಗಭಿವಂದಿಸಿದನಾ ಪಾರ್ಥ ೧೯
ಭರತಕುಲಸಂಭಾಳಿ ಜಯ ಹಿಮ
ಕರ ಪುರೂರವ ನಹುಷ ನಳ ನೃಗ
ವರ ಯಯಾತಿಪ್ರಕಟ ವಿಮಳಾನ್ವಯದೊಳವತರಿಸಿ
ಧುರಕೆ ಮನವಳುಕಿದರೆ ಹಜ್ಜೆಯ
ತಿರುಪಿದಡೆ ಕುಲಕೋಟಿಕೋಟಿಗೆ
ನರಕವೆಂದೆಚ್ಚರಿಸಿದರು ಭಟ್ಟರು ನಿಜಾನ್ವಯವ ೨೦
ಹಿಡಿಯೆ ಜವನಿಕೆ ಸಕಲಬಲ ಸಂ
ಗಡಿಸಿತೊಂದೇ ಮುಖದಲೀ ದಳ
ಗಡಣಿಸಿತು ಮುಂದಿಕ್ಕಿ ಕರ್ಣನನೇಕಮುಖವಾಗಿ
ಪಡಿಬಲಕೆ ಭೀಮಾದಿಭಟರಾ
ಕಡೆಯಲನುವಾಯ್ತೀಚೆಯಲಿ ನೆಲ
ನೊಡೆಯ ಕೃಪ ಗುರುಜಾದಿಗಳು ಕೈಗೈದರೊಗ್ಗಿನಲಿ ೨೧
ದಳವೆರಡ ಹಿಂದಿಕ್ಕಿ ರಥರಥ
ಹೊಳೆದು ಸುಳಿದೌಕಿದವು ಕುಲಗಿರಿ
ಕುಲಗಿರಿಗೆ ದಿಕ್ಕರಿಗೆ ದಿಕ್ಕರಿ ಜೋಳಿದೆಗೆದಂತೆ
ಬಲನ ವಜ್ರನ ಕಾಲನೇಮಿಯ
ಜಲರುಹಾಕ್ಷನ ರಾವಣನ ರಘು
ಕುಲನ ದೆಖ್ಖಾದೆಖ್ಖಿ ಜೋಡಿಸಿತಾತನೀತನಲಿ ೨೨
ನೆಲನ ರಾಜ್ಯಶ್ರೀಯ ತುರುಬಿಂ
ಗಳುಕದಂಘೈಸಿದ ವಿರೋಧಿಯ
ಲಲನೆಯರ ಶ್ರುತಿಪತ್ರ ಸೀಳಲಿ ಸಾಲ ಹಿಂಗಿತಲ
ಅಳಿದ ವೃಷಸೇನಕನ ತಾಯ್ಗಳು
ಮೆಲಲಿ ವೀಳೆಯವನು ಕಿರೀಟಿಯ
ತಲೆಯ ತೆರಿಗೆಗೆ ತಾವೆ ಹೊಣೆಯೆಂದುದು ಭಟಸ್ತೋಮ ೨೩
ಇಟ್ಟಣಿಸುತದೆ ಧುರಕೆ ರಾಯಘ
ರಟ್ಟ ಪಾರ್ಥನ ತೇರು ತೇಜವ
ದಿಟ್ಟಿಸುವಡೆವೆ ಸೀಯ್ಯವೇ ಫಡ ಸೂತಸುತನಳವೆ
ಕೆಟ್ಟುದಿನ್ನೇನಹಿತಬಲ ಜಗ
ಜಟ್ಟಿ ಗೆಲಿದನು ಧರ್ಮಪುತ್ರನ
ಪಟ್ಟದಾನೆಯೆನುತ್ತಲಿರ್ದುದು ಪಾಂಡುಸುತಸೇನೆ ೨೪
ಉಲಿದುದೀ ಬಲ ಸೂತಸುತನ
ಗ್ಗಳಿಕೆಯನು ಕೊಂಡಾಡಿ ಪಾರ್ಥನ
ಬಲುಹ ಬಹುವಿಧದಿಂದ ಬಣ್ಣಿಸುತಿದ್ದುದಾ ಸೇನೆ
ಲಳಿಯ ಲಗ್ಗೆಯ ನಿಖಿಳವಾದ್ಯದ
ಕಳಕಳವನಡಿಗಿಕ್ಕಿ ಮಲೆತುದು
ಬಲದೊಳಿಬ್ಬರ ಬಿರುದ ಪಾಡುಪವಾಡಿಗಳ ರಭಸ ೨೫
ಭಾರಿಯಂಕದ ಭಟರಿವರು ಜು
ಜ್ಝಾರರೈ ತಮ್ಮಾಯತವ ತ
ಮ್ಮಾರುಭಟೆಯನು ಲಕ್ಷ್ಯ ಲಕ್ಷಣ ಭೇದ ಭಂಗಿಗಳ
ಸಾರತರ ಕೋದಂಡಪಂಡಿತ
ರಾರಯಿಕೆಯಲಿ ತರುಬಿ ನಿಂದರು
ಭಾರತದೊಳಿಂದೊಂದು ಚಿತ್ರವ ಕಂಡೆ ನಾನೆಂದ ೨೬
ಸಂಕ್ಷಿಪ್ತ ಭಾವ
ಕರ್ಣ ಮತ್ತು ಅರ್ಜುನರ ಭೇಟಿ
ಕರ್ಣ ಈಗ ಇನ್ನಷ್ಟು ರೋಷದಿಂದ ಯುದ್ಧರಂಗಕ್ಕೆ ಹೊರಟನು. ಕೌರವರ ಪ್ರಮುಖರಿಗೆಲ್ಲಸಂತಸದ ಔತಣ ರಚಿಸುವೆನೆಂದ. ತನ್ನ ಎಲ್ಲಾ ಪರಿವಾರದವರಿಗೂ ಸುಗಂಧ ಲೇಪಿತತಾಂಬೂಲವನ್ನು ಧಾರಾಳವಾಗಿ ಕೊಟ್ಟ. ತಾನು ಮಡಿಯುಟ್ಟು ಸಿದ್ಧನಾದ. ಆಗ ತಮ್ಮನ ಮತ್ತುಕರ್ಣನಂದನನ ಮರಣದ ಶೋಕದಲ್ಲಿದ್ದ ದುರ್ಯೋಧನನ ಮನಸ್ಸು ಹಗುರಾಯಿತು. ಕರ್ಣನುಸಾರಥಿ ಶಲ್ಯನಿಗೆ ನಮಿಸಿ, ರಥಕ್ಕೆ ಪ್ರದಕ್ಷಿಣೆ ಬಂದು ಸೂರ್ಯನಿಗೆ ನಮಿಸಿ ಹೊರಟ. ಅರ್ಜುನನನ್ನುಬರಹೇಳೆಂದು ಬೊಬ್ಬಿರಿದ. ಇಂದು ಸುಯೋಧನ ಅಥವಾ ಧರ್ಮಜರಲ್ಲಿ ಯಾರುಪುಣ್ಯವಂತರೆಂದು ನಿರ್ಣಯವಾಗಲಿ ಎಂದ. ಭಟರು ಜಯಕಾರ ಹಾಕಿದರು.
ಕರ್ಣನ ಪ್ರತಾಪದ ಬಿಸಿಲು ಮುಸುಕಿತೋ ಎಂಬಂತೆ ಪಾಂಡವರ ಕಡೆ ಸ್ವಲ್ಪ ಭಯ ಹುಟ್ಟಿತು. ಅಷ್ಟರಲ್ಲಿ ಅರ್ಜುನ ತನ್ನ ಗಾಂಡೀವವನ್ನು ದನಿಗೈಯ್ದನು. ಅದರ ಶಬ್ದವು ರಿಪುಭಟರ ಎದೆಯಲ್ಲಿಬಿರುಕು ಮೂಡಿಸಿತು. ಹರಿಗೆ ಕೈ ಮುಗಿದು, ತೇರಿನ ಹರಿಗಳಿಗೆ ನಮಿಸಿ, ಧ್ವಜದ ಹರಿಗೆ ವಂದಿಸಿಎಂಬ ಒಂದು ಪದ್ಯದಲ್ಲಿ ಹರಿ ಎಂಬ ಒಂದೇ ಶಬ್ದ ಹಲವು ಅರ್ಥ ಹೊಂದಿರುವ ಚಮತ್ಕಾರವಿದೆ. ಹರಿ ಎಂದು ಕುದುರೆಗಳಿಗೂ, ಕೋತಿಗೂ ಹೆಸರಿದೆ. ಇಂತಹ ಪದ್ಯಗಳು ಕುಮಾರವ್ಯಾಸನಲ್ಲಿಅಸಂಖ್ಯ.
ಕರ್ಣಾರ್ಜುನರ ರಥಗಳು ಎಲ್ಲರನ್ನೂ ಹಿಂದಿಕ್ಕಿ ಮುಂದೆ ಬಂದು ಎದುರಾದವು. ಈ ಪಕ್ಷದವರುಕರ್ಣನ ಬಿರುದುಗಳನ್ನು ಹೇಳುತ್ತಿದ್ದರೆ ಆ ಕಡೆಯವರು ಅರ್ಜುನ ಮತ್ತು ಕೃಷ್ಣರನ್ನುಕೊಂಡಾಡುತ್ತಿದ್ದರು. ಆ ಇಡೀ ದೃಶ್ಯ ಮರೆಯಲಾಗದ್ದು ಎಂದು ಸಂಜಯ ವರದಿ ಮುಂದುವರೆಸಿದ.
ಕಾಮೆಂಟ್‌ಗಳು