ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಿಥುನ್ ಚಕ್ರವರ್ತಿ


 

ಮಿಥುನ್ ಚಕ್ರವರ್ತಿ


ಮಿಥುನ್ ಚಕ್ರವರ್ತಿ ನಟ ಮತ್ತು ನಿರ್ಮಾಪಕರಾಗಿ ಪ್ರಸಿದ್ಧರಾಗಿದ್ದಾರೆ. ಅವರು ಪ್ರಧಾನವಾಗಿ ಹಿಂದಿ ಮತ್ತು ಬಂಗಾಳಿ ಚಲನಚಿತ್ರಗಳಲ್ಲಿ ಮತ್ತು ಕಿರುತೆರೆಯ ನೃತ್ಯ ಪ್ರದರ್ಶನಗಳಲ್ಲಿ ಕೆಲಸ ಮಾಡುತ್ತಿದ್ದು ಹಲವಾರು ಇತರ ಭಾಷಾ ಚಿತ್ರಗಳಲ್ಲೂ ನಟಿಸಿದ್ದಾರೆ.
 
ಮಿಥುನ್ ಚಕ್ರವರ್ತಿ 1950 ಜೂನ್ 16 ರಂದು ಗೌರಂಗ ಚಕ್ರವರ್ತಿ ಆಗಿ  ಈಗ ಬಾಂಗ್ಲಾದೇಶದ ಭಾಗವಾಗಿರುವ ಬರಿಷಾಲ್ ಎಂಬಲ್ಲಿ ಜನಿಸಿದರು. ಬಿ.ಎಸ್‍ಸಿ ಪದವಿ ಪಡೆದು ಫಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಪದವಿಯನ್ನೂ ಪಡೆದರು. 
 
ಮಿಥುನ್ ಚಕ್ರವರ್ತಿ ಅವರು ಮೃಗಯಾ (1976) ಎಂಬ ಕಲಾತ್ಮಕ ಚಿತ್ರದೊಂದಿಗೆ ಚಲನಚಿತ್ರ ಜೀವನವನ್ನು ಆರಂಭಿಸಿದರು. ಮೊದಲ ಚಿತ್ರದಲ್ಲಿನ ಅಭಿನಯಕ್ಕೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದರು. 

ಮಿಥುನ್ ಚಕ್ರವರ್ತಿ 1982ರ ಚಲನಚಿತ್ರ 'ಡಿಸ್ಕೋ ಡ್ಯಾನ್ಸರ್‌'ನಲ್ಲಿ ಜಿಮ್ಮಿ ಪಾತ್ರವನ್ನು ನಿರ್ವಹಿಸಿದರು. ಭಾರತದಲ್ಲಿ ರೂ.100 ಕೋಟಿ ಗಳಿಸಿದ ಮೊದಲ ಚಿತ್ರವಿದು. 

ಮಿಥುನ್ ಚಕ್ರವರ್ತಿ 'ಡಿಸ್ಕೋ ಡ್ಯಾನ್ಸರ್' ಅಲ್ಲದೆ ಸುರಕ್ಷಾ, ಸಾಹಸ್, ವಾರ್ದತ್, ವಾಂಟೆಡ್, ಬಾಕ್ಸರ್, ಪ್ಯಾರ್ ಜುಕ್ತಾ ನಹಿನ್, ಪ್ಯಾರಿ ಬೆಹ್ನಾ, ಅವಿನಾಶ್, ಡ್ಯಾನ್ಸ್ ಡ್ಯಾನ್ಸ್, ಪ್ರೇಮ್ ಪ್ರತಿಜ್ಞಾ, ಮುಜ್ರಿಮ್, ಅಗ್ನಿಪಥ್, ಯುಗಂಧರ್, ದಿ ಡಾನ್ ಮುಂತಾದ ಅನೇಕ ಚಿತ್ರಗಳಲ್ಲಿನ ಅಭಿನಯಕ್ಕಾಗಿ ನೆನಪಾಗುತ್ತಾರೆ. 

ಮಿಥುನ್ ಚಕ್ರವರ್ತಿ  'ಮೃಗಯಾ' ಅಲ್ಲದೆ  ತಹದರ್ ಕಥಾ (1992) ಮತ್ತು ಸ್ವಾಮಿ ವಿವೇಕಾನಂದ (1998) ದಲ್ಲಿನ ಅಭಿನಯಕ್ಕಾಗಿ ಮತ್ತೆರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನೂ ಗೆದ್ದರು.  1991ರಲ್ಲಿ, 'ಅಗ್ನಿಪಥ್' ಚಿತ್ರದಲ್ಲಿ ಕೃಷ್ಣನ್ ಅಯ್ಯರ್ ನಾರಿಯಲ್ ಪಾನಿವಾಲಾ ಪೋಷಕ ಪಾತ್ರಕ್ಕಾಗಿ ಮತ್ತು 'ಜಲ್ಲಾದ್' ಚಿತ್ರದಲ್ಲಿನ ಖಳನಾಯಕ ಪಾತ್ರದಲ್ಲಿನ  ಅತ್ಯುತ್ತಮ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದರು.

ಮಿಥುನ್ ಚಕ್ರವರ್ತಿ ಬಂಗಾಳಿ, ಹಿಂದಿ ಮತ್ತು ಇತರ ಭಾಷೆಯ ಚಿತ್ರಗಳು ಸೇರಿದಂತೆ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು 1989ರಲ್ಲಿ ನಾಯಕ ನಟನಾಗಿ 19 ಚಲನಚಿತ್ರ ಬಿಡುಗಡೆಗಳಿಗಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ಹೊಂದಿದ್ದಾರೆ. 

ಮಿಥುನ್ ಚಕ್ರವರ್ತಿ  ಅವರು ಆತಿಥ್ಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ  ಹೆಸರಾಗಿರುವ ಮೊನಾರ್ಕ್ ಗ್ರೂಪ್ ಅನ್ನು ಹೊಂದಿದ್ದಾರೆ. ಅವರು ಪಾಪರಾಜಿ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನೂ ಹೊಂದಿದ್ದಾರೆ. 1992ರಲ್ಲಿ, ಅವರು ದಿಲೀಪ್ ಕುಮಾರ್ ಮತ್ತು ಸುನಿಲ್ ದತ್ ಅವರೊಂದಿಗೆ ಸಿನಿ ಮತ್ತು ಟಿ.ವಿ ಕಲಾವಿದರ ಸಂಘ ಎಂಬ ಅಸಹಾಯಕ ಕಲಾವಿದರಿಗೆ ಸಹಾಯ ಮಾಡುವ ಟ್ರಸ್ಟ್ ಅನ್ನು ಸ್ಥಾಪಿಸಿದರು. ಅವರು ಕಾರ್ಮಿಕರ ಕಲ್ಯಾಣಕ್ಕಾಗಿನ 'ಫಿಲ್ಮ್ ಸ್ಟುಡಿಯೋಸ್ ಸೆಟ್ಟಿಂಗ್ ಮತ್ತು ಅಲೈಡ್ ಮಜ್ದೂರ್ ಯೂನಿಯನ್'‌ನ ಅಧ್ಯಕ್ಷರಾಗಿದ್ದರು.  

ಮಿಥುನ್ ಚಕ್ರವರ್ತಿ  ಗ್ರ್ಯಾಂಡ್ ಮಾಸ್ಟರ್ ಆಗಿರುವ ದೂರದರ್ಶನ ಕಾರ್ಯಕ್ರಮ 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ ಹೊಂದಿದೆ. 

ಮಿಥುನ್ ಚಕ್ರವರ್ತಿ ರಾಜಕೀಯದಲ್ಲೂ  ಸಕ್ರಿಯರಾಗಿದ್ದು ರಾಜ್ಯಸಭಾ ಸದಸ್ಯರೂ ಆಗಿದ್ದರು. 

On the birthday of actor Mithun Chakraborty

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ