ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕನ್ನಡ ಬೆರಳಚ್ಚು ಯಂತ್ರ


 ಕನ್ನಡ ಬೆರಳಚ್ಚು ಯಂತ್ರಕ್ಕೆ 63 ವರ್ಷ


ಕನ್ನಡ ಬೆರಳಚ್ಚು ಯಂತ್ರವನ್ನು ರೂಪಿಸುವಲ್ಲಿ, ಇದರ ನಮೂನೆಯನ್ನು ತಯಾರಿಸಲು ಪ್ರಯತ್ನಪಟ್ಟವರಲ್ಲಿ ಬೆಂಗಳೂರಿನ ಮ.ನ.ಮೂರ್ತಿ, ಶಿವಮೊಗ್ಗದ ಕೆ.ಅನಂತಸುಬ್ಬರಾಯ, ಮೈಸೂರಿನ ನಾರಾಯಣಾಚಾರ್ಯ, ಕೇಶವ, ಚಿಕ್ಕಮಗಳೂರಿನ ಟಿ.ಎಲ್.ನಾರಾಯಣ ರಾಯ, ಚಿಟಗುಪ್ಪಿ, ಭದ್ರಾವತಿಯ ಎ.ನಾಗರಾಜರಾಯ, ಎಸ್.ಸುಬ್ಬರಾಯ ಮತ್ತು ಹೈದರಾಬಾದಿನ ತಿವಾರಿ ಎಂಬುವರ ಹೆಸರುಗಳನ್ನು ಉಲ್ಲೇಖಿಸಬಹುದು.

ಸುಮಾರು 1933ನೆಯ ಅಕ್ಟೋಬರ್ನಲ್ಲಿ ಮ.ನ.ಮೂರ್ತಿಯವರು ತಯಾರಿಸಿದ ಕನ್ನಡ ಬೆರಳಚ್ಚು ಯಂತ್ರ ಸರ್. ಎಂ.ವಿಶ್ವೇಶ್ವರಯ್ಯ ಮೊದಲಾದವರಿಂದ ಪ್ರಶಂಸೆಯನ್ನೂ ಬಹುಮಾನಗಳನ್ನೂ ಗಳಿಸಿತಾದರೂ ಅದರಲ್ಲಿ ಕೆಲವೊಂದು ದೋಷಗಳಿದ್ದುದರಿಂದ ಸುಧಾರಣೆ ಅವಶ್ಯವಿತ್ತು. ಆಗಲೇ ಎಸ್.ಸುಬ್ಬರಾಯರು, ಕೆ. ಅನಂತಸುಬ್ಬರಾಯರು, ಚಿಟಗುಪ್ಪಿಯವರು ಮತ್ತು ಎ. ನಾಗರಾಜರಾಯರು ಬೇರೆ ಬೇರೆಯಾಗಿ ಬೆರಳಚ್ಚು ಯಂತ್ರಗಳನ್ನು ತಯಾರಿಸಿದ್ದರು. ಈ ಮಧ್ಯೆ ದೋಷರಹಿತ ಪರಿಪುರ್ಣ ಬೆರಳಚ್ಚು ಯಂತ್ರವನ್ನು ತಯಾರಿಸಲು ಲಿಪಿ ಸುಧಾರಣೆಯಾಗಬೇಕೆಂದು ತಜ್ಞರು ಅಭಿಪ್ರಾಯಪಟ್ಟರು. 1936ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬಿ. ಎಂ. ಶ್ರೀಕಂಠಯ್ಯನವರ ಅಧ್ಯಕ್ಷತೆಯಲ್ಲಿ ಲಿಪಿ ಸುಧಾರಣೆಯ ಬಗ್ಗೆ ಸಲಹೆ ನೀಡಲು ಒಂದು ಸಮಿತಿಯನ್ನು ರಚಿಸಿತ್ತು. ಆದರೆ ಕಾರಣಾಂತರದಿಂದ ಈ ದಿಕ್ಕಿನ ಕಾರ್ಯ ಮುಂದುವರಿಯಲಿಲ್ಲ.

ಸ್ವಾತಂತ್ರ್ಯ ಬಂದ ಅನಂತರ ರಾಜ್ಯ ಸರ್ಕಾರ ಬೆರಳಚ್ಚು ಯಂತ್ರ ನಿರ್ಮಾಣದಲ್ಲಿ ಆಸಕ್ತಿ ವಹಿಸಿತು. ಕೆ. ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ತಿ. ತಾ. ಶರ್ಮರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಿ ಸಲಹೆಗಳನ್ನು ಕೇಳಿತು. ಬೆರಳಚ್ಚು ಯಂತ್ರದ ತಯಾರಿಕೆಯ ವಿಷಯವನ್ನು ದೀರ್ಘವಾಗಿ ಚರ್ಚಿಸಿ, ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಮಿತಿ ಸಂಗ್ರಹಿಸಿತು. ಅನಂತರ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಲಿಪಿಸುಧಾರಣೆ ಇಲ್ಲದೆ ದೋಷರಹಿತವಾದ ಬೆರಳಚ್ಚು ಯಂತ್ರವನ್ನು ನಿರ್ಮಿಸುವುದು ಅಸಾಧ್ಯ ಎಂದು ಸಮಿತಿ ಅಭಿಪ್ರಾಯಪಟ್ಟಿತು. ಆದರೆ ಲಿಪಿ ಸುಧಾರಣೆ ಬಗ್ಗೆ ಸಾರ್ವಜನಿಕರಿಂದ ಪ್ರತಿಭಟನೆ ವ್ಯಕ್ತವಾದ್ದರಿಂದ ಸರ್ಕಾರ ಆ ಪ್ರಯತ್ನವನ್ನು ಕೈಬಿಟ್ಟಿತು. ಮುಂದೆ ಸರ್ಕಾರ ಕೆಲವೊಂದು ಕನ್ನಡ ಬೆರಳಚ್ಚುಗಳನ್ನು ಪರಿಶೀಲಿಸಿ 1958ರಲ್ಲಿ ಅನಂತಸುಬ್ಬರಾಯರು ನಿರ್ಮಿಸಿದ ಕನ್ನಡ 

ಬೆರಳಚ್ಚು ಮಾದರಿಯನ್ನು ಅಂಗೀಕರಿಸಿತು. ಸರ್ಕಾರದ ಕೋರಿಕೆಯ ಮೇರೆ ಸ್ವೀಡನ್ನಿನ ಹಾಲ್ಡಾ ಕಂಪನಿ ತಯಾರಿಸಿದ ಮೊದಲ ಕನ್ನಡ ಬೆರಳಚ್ಚು ಯಂತ್ರ 16 ಜೂನ್ 1961ರಂದು ಚಾಲನೆಗೆ ಬಂತು. ಇದರಲ್ಲಿ ಉಪಯೋಗಿಸಿದ ಕನ್ನಡ ಬೆರಳಚ್ಚಿನ ಫಲಕಕ್ಕೆ ಅನಂತ ಕೀ ಬೋರ್ಡ್ ಎಂದು ಹೆಸರಿಸಲಾಯಿತು. ಅನಂತ ಕೀ ಬೋರ್ಡ್ ಆಂಗ್ಲ ಬೆರಳಚ್ಚಿನ ಫಲಕದ ಆಧಾರದ ಮೇಲೆ ನಿರ್ಮಿಸಿರುವುದರಿಂದ ಮತ್ತು ಇದರಲ್ಲಿ 3 ಅಚಲಿತ ಕೀಗಳು ಮಾತ್ರ ಅಳವಡಿಸಿರುವುದರಿಂದ ಬಹಳ ಸುಲಭವಾಗಿ ಶೀಘ್ರವಾಗಿ ಕಲಿಯಲು ಅನುಕೂಲವೆನಿಸಿತು.

ಸರ್ಕಾರ 1967ರಿಂದ ಕನ್ನಡ ಬೆರಳಚ್ಚಿನ ಪರೀಕ್ಷೆಗಳನ್ನು ನಡೆಸಲಾರಂಭಿಸಿತು. ಇದಕ್ಕೆ ಪೂರಕವಾಗಿ ಕರ್ನಾಟಕದ ಅನೇಕ ವಾಣಿಜ್ಯ ಶಾಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಇಂದು ಕನ್ನಡ ಬೆರಳಚ್ಚಿನ ತರಬೇತು ಲಭ್ಯವಾಯಿತು. ಹಾಲ್ಡಾ, ರೆಮಿಂಗ್ಟನ್, ಕಂಪನಿಯವರು ಅನೇಕ ಕನ್ನಡ ಬೆರಳಚ್ಚು ಯಂತ್ರಗಳನ್ನು ತಯಾರಿಸಿದ್ದು ಅವು ಉಪಯೋಗಕ್ಕೆ ಬಂದವು. ಗೋದ್ರೆಜ್ ಕಂಪನಿಯವರೂ ತಯಾರಿಕೆಯನ್ನು ಕೈಗೊಂಡಿದ್ದರು. ಆಡಳಿತದ ಎಲ್ಲ ಹಂತಗಳಲ್ಲೂ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ತರುವ ಉದ್ದೇಶದಿಂದ ಅದಕ್ಕೆ ಪೂರಕವಾಗಿ ರಾಜ್ಯದಲ್ಲೇ ಕನ್ನಡ ಬೆರಳಚ್ಚು ಯಂತ್ರವನ್ನು ತಯಾರಿಸುವತ್ತ ಕರ್ನಾಟಕ ಸರ್ಕಾರ ಕಾರ್ಯೋನ್ಮುಖವಾಗಿತ್ತು. 

ಮುಂದೆ ಡಿ.ಟಿ.ಪಿ. ಮುದ್ರಣ ವ್ಯವಸ್ಥೆ ಆವಿಷ್ಕಾರಗೊಂಡ ಮೇಲೆ, ಕಂಪ್ಯೂಟರ್ ಬಳಕೆಗೆ ಬಂದ ಮೇಲೆ ಬೆರಳಚ್ಚು ಯಂತ್ರಗಳ ಬಳಕೆ ಕ್ಷೀಣಿಸಿದೆ.

Typewriters in Kannada

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ