ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಾ ರಮಾನಂದ


 ಗೀತಾ ರಮಾನಂದ


ವಿದುಷಿ ಗೀತಾ ರಮಾನಂದ ವೀಣಾ ವಾದನಕ್ಕೆ ಹೆಸರಾದ ಮಹಾನ್ ಕಲಾವಿದೆ. 

ಗೀತಾ ರಮಾನಂದ 1951ರ ಆಗಸ್ಟ್ 14ರಂದು ಜನಿಸಿದರು. ತುಮಕೂರು, ತುರುವೇಕೆರೆ ಮುಂತಾದ ಕಡೆಗಳಲ್ಲಿ ವಿದ್ಯಾಭ್ಯಾಸ ನಡೆಸಿದ ಇವರು ಮುಂದೆ ಮೈಸೂರು ಲಲಿತ ಕಲಾ ಕಾಲೇಜಿನಲ್ಲಿ ಸಂಗೀತ ಪದವಿ ಗಳಿಸಿದರು. ವಿದುಷಿ ರಂಗನಾಯಕಿ ಸುಂದರರಾಜನ್ ಮತ್ತು ವಿದ್ವಾನ್ ಸಿ ಕೃಷ್ಣಮೂರ್ತಿ ಅಂತಹ ಗುರುಗಳಲ್ಲಿ ಅಪಾರ ಸಂಗೀತ ಸಾಧನೆ ಮಾಡಿದರು.

ಗೀತಾ ರಮಾನಂದ ಅವರು ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದೆ. ಇವರು 1976-2011ರ ಅವಧಿಯಲ್ಲಿ ಬಾನುಲಿಯ ಸಿಬ್ಬಂದಿಯಾಗಿ ಸಂಗೀತ ವಿಭಾಗವನ್ನು‌ ಮುನ್ನಡೆಸಿದವರು.  ‌ ಗೀತಾ ರಮಾನಂದ ಅವರು ಅನೇಕ ಸಂಗೀತ ಸಮ್ಮೇಳನಗಳು, ರಾಷ್ಟ್ರೀಯ‌ ಪ್ರಸಾರ‌ ಕಾರ್ಯಕ್ರಮಗಳು, ಖ್ಯಾತನಾಮರ ಸಂದರ್ಶನ ಕಾರ್ಯಕ್ರಮಗಳು ಇವುಗಳ‌ ಆಯೋಜನೆ  ಅಷ್ಟೇ  ಅಲ್ಲದೆ ಸಂಗೀತ ವಿಷಯಕ್ಕೆ ಸಂಬಂಧಪಟ್ಟಂತಹ ಸರಣಿ ಕಾರ್ಯಕ್ರಮಗಳ ನಿರ್ಮಾಣ ರಚನೆ ಮತ್ತು ಪ್ರಸ್ತುತಿಗಳ ಸಮರ್ಥ ನಿರ್ವಹಣೆಗೆ ಹೆಸರಾಗಿದ್ದವರು. ಅವರ ಸಾಹಿತ್ಯಪ್ರೀತಿ, ಓದು ಕೂಡ ವ್ಯಾಪಕವಾದದ್ದು. 

ಆಕಾಶವಾಣಿಯ ಹಿರಿಯ ವಿದ್ವಾಂಸರಾದ ಡಾ.ವಿ.ದೊರೆಸ್ವಾಮಿ ಅಯ್ಯಂಗಾರ್, ಅರ್. ಕೆ. ಶ್ರೀಕಂಠನ್, ಎಚ್.ಕೆ.ನಾರಾಯಣ, ಎಸ್.ಪಿ.ನಟರಾಜನ್, ಸಿ.ಕೃಷ್ಣಮೂರ್ತಿ ಇಂತಹ ಅಗ್ರಮಾನ್ಯ ಸಂಗೀತಗಾರರಿಂದ ಮಾರ್ಗದರ್ಶನ, ಸಲಹೆ, ತರಬೇತಿಯಲ್ಲಿ ರೂಪಗೊಂಡಿರುವ ಗೀತಾ ರಮಾನಂದ ಅವರು ಸರ್ಕಾರ ರಚಿಸಿರುವ ಉನ್ನತಮಟ್ಟದ  ಕೆಲವು ಸಂಗೀತ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿ‌ ಕೊಡಮಾಡುವ ರಾಷ್ಟ್ರೀಯ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

ಗೀತಾ ರಮಾನಂದ ಹಾಗು ರೇವತಿಮೂರ್ತಿ ಯುಗಳ‌ವೀಣಾ ವಾದಕಿಯರಾಗಿ ಸಂಗೀತ ಪ್ರಿಯರಿಗೆಲ್ಲ ಪರಿಚಿತರು. ಗೀತಾ ಅವರು ಸ್ವರ ವೀಣಾಲಯ ಸೆಂಟರ್  ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯ ಸ್ಥಾಪಕಿ. ಗುರುವಾಗಿ ಗೀತಾ ರಮಾನಂದ ಅವರು ಅನೇಕ ಪ್ರತಿಭೆಗಳಿಗೆ ಪೋಷಣೆ ನೀಡಿ ಬೆಳೆಸಿದ್ದಾರೆ.  ಗೀತಾ ಅವರ ವೀಣಾ ನಾದದ ಗೀತ ಎಲ್ಲೆಡೆ ನಿರಂತರ‍ ಝೇಂಕರಿಸುತ್ತ ಸಾಗಿದೆ.

On the birthday of our great Veena artiste Vidushi. Geetha Ramanand

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ