ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುನಿಧಿ ಚೌಹಾಣ್


 ಸುನಿಧಿ ಚೌಹಾಣ್


ಸುನಿಧಿ ಚೌಹಾಣ್ ಜನಪ್ರಿಯ ಹಿನ್ನೆಲೆ ಗಾಯಕಿ. 

ಸುನಿಧಿ ಚೌಹಾಣ್ 1983ರ ಆಗಸ್ಟ್ 14 ರಂದು ನವದೆಹಲಿಯಲ್ಲಿ ರಜಪೂತ ಕುಟುಂಬದಲ್ಲಿ ಜನಿಸಿದರು. ಈಕೆಯ ಮೂಲ ಹೆಸರು ನಿಧಿ ಚೌಹಾಣ್.  ತಂದೆ ದುಶ್ಯಂತ್ ಕುಮಾರ್ ಚೌಹಾಣ್ ಅವರು ಉತ್ತರ ಪ್ರದೇಶದವರು.  ಅವರು ಶ್ರೀರಾಮ್ ಭಾರತೀಯ ಕಲಾ ಕೇಂದ್ರದಲ್ಲಿ ರಂಗಕರ್ಮಿಯಾಗಿ ಹೆಸರಾಗಿದ್ದರು. ತಾಯಿ,  
ಸಂಗೀತವನ್ನು ವೃತ್ತಿಯಾಗಿಸಿಕೊಳ್ಳಲು  ಮಗಳು ಸುನಿಧಿ ಮೇಲೆ ಪ್ರಭಾವ ಬೀರಿದರು. ಸುನಿಧಿಗೆ ಒಬ್ಬಳು ತಂಗಿ ಇದ್ದಾರೆ. 

ಸುನಿಧಿ ನಾಲ್ಕನೇ ವಯಸ್ಸಿನಿಂದಲೇ ಸ್ಪರ್ಧೆಗಳು ಮತ್ತು ಸ್ಥಳೀಯ ಕೂಟಗಳಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದರು, ಆ ಸಮಯದಲ್ಲಿ, ಆಕೆ ಲೈವ್ ಶೋಗಳಲ್ಲಿ ಭಾಗವಹಿಸುತ್ತ,  ಜನಪ್ರಿಯ ಹಾಡುಗಳನ್ನು ಕೇಳುವ ಮೂಲಕ ನಿಯಮಿತ ರಿಯಾಜ್ನೊಂದಿಗೆ ತರಬೇತಿ ಗಳಿಸಿದರು.  ದೆಹಲಿಯ ಗ್ರೀನ್‌ವೇ ಮಾಡರ್ನ್ ಸ್ಕೂಲ್‌ನಲ್ಲಿ ಅಧ್ಯಯನವನ್ನು ಮಾಡುತ್ತಿದ್ದ ಈಕೆ, ಸಂಗೀತ ಉದ್ಯಮದಲ್ಲಿ ವೃತ್ತಿಜೀವನವನ್ನು ಮುಂದುವರಿಸುವ ಇಚ್ಛೆಯಿಂದ ಓದು ನಿಲ್ಲಿಸಿದರು. 

ನಟಿ ತಬಸ್ಸುಮ್ ಅವರ ಗಮನಕ್ಕೆ ಬಂದ ಸುನಿಧಿ, ತಬಸ್ಸುಮ್ ಹಿಟ್ ಪರೇಡ್‌ನಲ್ಲಿ ಹಾಡಿದರು.  ನಟಿ ತಬಸ್ಸುಮ್ ಅವರು ಸುನಿಧಿ ಅವರ ಕುಟುಂಬವನ್ನು ಮುಂಬೈಗೆ ಸ್ಥಳಾಂತರಿಸುವಂತೆ ಪ್ರೇರಿಸಿ,  ಈಕೆಯನ್ನು ಕಲ್ಯಾಣ್‌ಜಿ ಮತ್ತು ಆನಂದ್‌ಜಿ ಅವರಿಗೆ ಪರಿಚಯಿಸಿದರು. ಕಲ್ಯಾಣಜಿ ಅವರು ನಿಧಿ ಚೌಹಾಣ್ ಹೆಸರನ್ನು ಸುನಿಧಿ ಚೌಹಾಣ್ ಎಂದು ಬದಲಾಯಿಸಿದರು. ಕಲ್ಯಾಣಜಿ ಅವರ ಅಕಾಡೆಮಿಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ ಸುನಿಧಿ,  ಅವರ "ಲಿಟಲ್ ವಂಡರ್ಸ್" ತಂಡದಲ್ಲಿ ಪ್ರಮುಖ ಗಾಯಕಿಯಾದರು. ಶೀಘ್ರದಲ್ಲೇ ಅವರು ಚಲನಚಿತ್ರಗಳಿಗೆ ಬಂದರು. 

ಶಾಸ್ತ್ರ (1996) ಚಿತ್ರದೊಂದಿಗೆ 13ನೇ ವಯಸ್ಸಿನಲ್ಲಿ ಸುನಿಧಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದೇ ವರ್ಷ, ಅವರು ರಿಯಾಲಿಟಿ ಶೋ 'ಮೇರಿ ಅವಾಜ್ ಸುನೋ'ದಲ್ಲಿ ಗೆದ್ದರು.  'ಮಸ್ತ್' (1999) ಚಿತ್ರದ "ರುಕಿ ರುಕಿ ಸಿ ಜಿಂದಗಿ" ಹಾಡಿನಿಂದ ಸುನಿಧಿ ಪ್ರಾಮುಖ್ಯತೆಯನ್ನು ಪಡೆದರು. ಇದು ಅವರಿಗೆ ಹೊಸ ಸಂಗೀತ ಪ್ರತಿಭೆಗಾಗಿನ ಆರ್‌ಡಿ ಬರ್ಮನ್ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತಲ್ಲದೆ,  ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿತ್ತು. ಮೆಹಬೂಬ್ ಮೇರೆ, ಧೂಮ್ ಮಚಾಲೆ, ಕೈಸಿ ಪಹೇಲಿ, ದೀದಾರ್ ದೇ, ಬೀಡಿ, ಸೋನಿಯೇ, ಆಶಿಕಿ ಮೈನ್, ಆಜಾ ನಾಚ್ಲೆ, ಸಜ್ನಾಜಿ ವಾರಿ, ಚೋರ್ ಬಜಾರಿ, ಡ್ಯಾನ್ಸ್ ಪೆ ಚಾನ್ಸ್, ಶೀಲಾ ಕಿ ಜವಾನಿ, ಉಡಿ ಮುಂತಾದ ಅನೇಕ ಜನಪ್ರಿಯ ಗೀತೆಗಳಿಗೆ  ಧ್ವನಿಯಾದರು. ಬಾಲಿವುಡ್ ಅಲ್ಲದೆ ಇತರ ಭಾಷೆಗಳಿಗೂ ಹಾಡಿರುವ ಇವರು ಕನ್ನಡ, ತೆಲುಗು, ತಮಿಳು ಚಿತ್ರಗಳ ಹಾಡುಗಳಿಗೂ ಧ್ವನಿಯಾಗಿದ್ದಾರೆ. ಕನ್ನಡದಲ್ಲಿ ಆರ್ಯ, ಪೃಥ್ವಿ, ಹುಡುಗ ಹುಡುಗಿ, ಈ ಬಂಧನ ಮುಂತಾದ ಚಿತ್ರಗಳಲ್ಲಿ ಹಾಡಿದ್ದಾರೆ.

ಸುನಿಧಿ ಅವರಿಗೆ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ. ಭಾರತದ ಫೋರ್ಬ್ಸ್ ಸೆಲೆಬ್ರಿಟಿ 100ರ ಪಟ್ಟಿಯಲ್ಲೂ ನಾಲ್ಕು ಬಾರಿ ಕಂಗೊಳಿಸಿದ್ದಾರೆ. 

On the birthday of popular playback singer Sunidhi Chathan 🌷🌷🌷

 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ