ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೃಂದಾ ಶೇಖರ್


ವೃಂದಾ ಶೇಖರ್


ವೃಂದಾ ಶೇಖರ್ ಅಂದರೆ ತಕ್ಷಣ ನೆನಪಾಗುವುದು ಬಣ್ಣ ಬಣ್ಣದ ಕರ್ನಾಟಕದ ಹಿರಿಮೆಯ ಸೀರೆಗಳನ್ನುಟ್ಟು  ಅವರು ತೋರುವ ಹಸನ್ಮುಖ. ಅವರು ನಮ್ಮಭಾಷೆ, ಸಾಹಿತ್ಯ,  ಸಂಸ್ಕೃತಿ, ಜಾನಪದ, ಪಾರಂಪರಿಕ ಉದ್ಯಮಗಳ ಏಳ್ಗೆ, ಪಾರಂಪರಿಕತೆಯಲ್ಲಿರುವ ಕಲಾ ಸೌಂದರ್ಯ ಇವೆಲ್ಲವುಗಳ ಸಮಗ್ರತೆಯನ್ನು ನಮಗೆ ಕಟ್ಟಿಕೊಡುತ್ತಾರೆ.

ಅಕ್ಟೋಬರ್ 12 ವೃಂದಾ ಅವರ ಜನ್ಮದಿನ. ಅವರು ಜನಿಸಿದ್ದು ಶಿವಮೊಗ್ಗದಲ್ಲಿ.‍ ತಂದೆ ಶೇಷಚಂದ್ರಿಕ ಅವರು ಸುದ್ಧಿಲೋಕದ ಭೀಷ್ಮರು. ತಾಯಿ ಪರಿಮಳ. ಪತಿ ಶೇಖರ್. ಚಿಕ್ಕ ವಯಸ್ಸಿನಲ್ಲಿ ಕೆಲವರ್ಷಗಳ ಕಾಲ ವರಕವಿ ದ.ರಾ.ಬೇಂದ್ರೆಯವರೊಂದಿಗೆ ಕಳೆವ ಸನ್ನಿವೇಶ ಸಿಕ್ಕಿದ್ದು ಅವರ ಬದುಕಿನ ಅತ್ಯಮೂಲ್ಯ ಕ್ಷಣ.

ವೃಂದಾ ಅವರು ಕಾರ್ಪೋರೇಟ್ ಕಂಪೆನಿಯ ಕೆಲಸವನ್ನು ಬಿಟ್ಟು ಕನ್ನಡ ನೆಲದ ಉಡುಪುಗಳು, ಕನ್ನಡದ ಭಾಷೆ, ಸಂಸ್ಕೃತಿ ಇತ್ಯಾದಿ ಕುರಿತು ಆಸಕ್ತಿ ತಳೆದವರು. ಇಲ್ಲಿನ ಸುಂದರ ಉಡುಪಿನ ಉದ್ಯಮಗಳಿಗೆ ಮತ್ತು ಅದರ ಅವಲಂಬಿತರಿಗೆ ಹೇಗೆ ಉತ್ತಮ ವ್ಯಾಪ್ತಿ ದೊರಕಿಸಬಹುದು ಎಂದು ಚಿಂತಿಸಿದರು. ಆ ಉಡುಪುಗಳ ವಿಶೇಷತೆ ಬಗ್ಗೆ ಜನರಿಗೆ ತಿಳುವಳಿಕೆ ತರುವ ಬಗ್ಗೆ ಕಾರ್ಯಪ್ರವೃತ್ತರಾದರು.  ಜೊತೆಗೆ ಕನ್ನಡದ ಕಂಪನ್ನು ನೂರಾರು ಜನರಿಗೆ ಹರಡುವುದಕ್ಕೆ ಸೀರೆ ಅತ್ಯುತ್ತಮ  ಮಾಧ್ಯಮ ಎಂದು ಭಾವಿಸಿದ ವೃಂದಾ ಶೇಖರ್ ಆ ಕುರಿತು ಗಂಭೀರ ಚಿಂತನೆಯಲ್ಲಿ ಹಸನ್ಮುಖದೊಂದಿಗೆ ಕಾರ್ಯಪ್ರವೃತ್ತರಾದರು. 

ಶಿವಮೊಗ್ಗದಲ್ಲಿ ಬಾಲ್ಯ ಕಳೆದ ವೃಂದಾ ಅವರಿಗೆ ಮಲೆನಾಡಿನ ನಿಸರ್ಗ ವೈಭವ ಸದಾ ಉಲ್ಲಾಸ ತರುವ ವಿಚಾರ. ಪಶ್ಚಿಮಘಟ್ಟದಲ್ಲಿರುವ ಲೆಕ್ಕವಿಲ್ಲದಷ್ಟು ಸುಂದರ ಹೂವುಗಳು, ಪಕ್ಷಿಗಳು ಇವೆಲ್ಲವುಗಳ ಬಗ್ಗೆ ಚಿಕ್ಕ ವಯಸ್ಸಿನಿಂದಲೂ ಅವರಿಗೆ ಅಪಾರ ಆಸಕ್ತಿ. ಕಾರ್ಪೋರೇಟ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೃಂದಾ ಅವರಿಗೆ ಸೀರೆಯನ್ನು ಉಟ್ಟೇ ಗೊತ್ತಿರಲಿಲ್ಲವಂತೆ. ಆದರೆ ಮೊದಲ ಬಾರಿಗೆ ಸೀರೆ ಉಟ್ಟಾಗ ಯಾವುದೋ ಆಪ್ಯಾಯಮಾನ ಭಾವ ಅವರ ಮನಸ್ಸನ್ನು ತುಂಬಿಕೊಂಡಿತು. ಹಾಗೆಯೇ ಪಾರಂಪರಿಕ ಉಡುಪಾದ ಸೀರೆಯ ಮೂಲಕ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಮಾಡುವ ಯೋಚನೆ ಅವರ ಮನದಲ್ಲಿ ಚಿಗುರಿತು.

ವೃಂದಾ ಅವರಿಗೆ ಕರ್ನಾಟಕದ ಹೆಮ್ಮೆಯ ಇಳಕಲ್ ಸೀರೆ, ಮೋಳಕಾಲ್ಮೂರು ಸೀರೆ, ಖಾದಿ ಸೀರೆಗಳು ಮತ್ತೊಮ್ಮೆ ತಮ್ಮ ಬೇಡಿಕೆಗಳನ್ನು ಪಡೆದುಕೊಳ್ಳುತ್ತಿರುವ ಕಾಲದಲ್ಲಿ ಇವುಗಳ ಮೇಲೆ ಕನ್ನಡ ಅಕ್ಷರಗಳನ್ನು ಮೂಡಿಸಿ, ಕನ್ನಡ ಪ್ರೇಮವನ್ನೂ, ಅಭಿಮಾನವನ್ನೂ, ಕಾಳಜಿಯನ್ನೂ ಪ್ರಕಟಪಡಿಸಬಾರದೇಕೆ ಎಂಬ ಅನಿಸಿಕೆ ಮೂಡತೊಡಗಿತು. ಸೀರೆಯ ಮೇಲೆ ಕೇವಲ ಕನ್ನಡ ಅಕ್ಷರಗಳನ್ನು, ಕವನಗಳನ್ನಷ್ಟೇ ಅಲ್ಲದೆ, ಕರ್ನಾಟಕದ ಮಣ್ಣಿನ ಸೊಗಡನ್ನು ಪ್ರತಿಬಿಂಬಿಸುವ ಎಲ್ಲವುಗಳ ಅಚ್ಚು ಮೂಡಿಸುವ ಕಾರ್ಯ ಮೊದಲಾಯಿತು. ಹಾಗೆಯೇ ಗಂಡಭೇರುಂಡ, ಪಶ್ಚಿಮಘಟ್ಟದ ಪಕ್ಷಿಗಳು, ಹೂವುಗಳನ್ನು ಸೀರೆಯ ಮೇಲೆ ಅಚ್ಚುಹಾಕಿಸಿ, ಕನ್ನಡಿಗರಿಗೇ ಗೊತ್ತಿರದ ಕರ್ನಾಟಕದ ಹಲವು ಸಂಗತಿಗಳನ್ನು ಪರಿಚಯಿಸುವ ಪ್ರಯತ್ನ ಕೂಡ ನಡೆಯಿತು.

"ಯಾವುದೇ ಕಾರ್ಪೋರೇಟ್ ಕಂಪೆನಿಯಲ್ಲಿ ದುಡಿಯಲಿ, ಎಷ್ಟೇ ಉನ್ನತ ಸ್ಥಾನಕ್ಕೇರಲಿ, ಎಷ್ಟೇ ಭಾಷೆ ಕಲಿಯಲಿ... ಆದರೆ ಮಾತೃಭಾಷೆಯ ಮೇಲಿನ ಅಭಿಮಾನ ನಿರಂತರ" ಎಂದು ನಂಬಿರುವ ವೃಂದಾ ಶೇಖರ್ ಅದಕ್ಕೆಂದೇ ಆ ಕೆಲಸವನ್ನೆಲ್ಲ ಬಿಟ್ಟು ಸರ್ಕಾರದ ಅಡಿಯಲ್ಲಿ ಬರುವ ಕರ್ನಾಟಕ ಜಾನಪದ ಅಕಾಡೆಮಿಯೊಂದಿಗೆ ತಮ್ಮನ್ನು  ಗುರುತಿಸಿಕೊಂಡರು. ಅದರಿಂದಾಗಿ ಅವರಲ್ಲಿ ಕನ್ನಡ ಜಾನಪದ ಕಲೆಯ ಔನ್ನತ್ಯದ ಅರಿವು ಬೆಳೆಯುತ್ತ ಹೋಯಿತು.  ಕರ್ನಾಟಕದಲ್ಲಿರುವ ಸಾವಿರಾರು ಜಾನಪದ ಪ್ರಕಾರಗಳಲ್ಲಿ ಈಗ ಬಳಕೆಯಲ್ಲಿರುವುದು 30-40 ಅಷ್ಟೇ! ಅವನ್ನಾದರೂ ಉಳಿಸುವ ಪ್ರಯತ್ನ ನಡೆಯಲೇಬೇಕು. ಏಕೆಂದರೆ ಒಂದು ಕಲೆಯ ನಶಿಸಿದರೆ, ಆ ಸಂಸ್ಕೃತಿಯೇ ಸತ್ತಂತೆ. ಅದಕ್ಕೆಂದೇ ಸೀರೆಗಳ ಮೇಲೆ ಚನ್ನಪಟ್ಟಣದ ಬೊಂಬೆ, ಕರ್ನಾಟಕ ಜಾನಪದ ಕಲಾಪ್ರಕಾರಗಳ ಚಿತ್ರಗಳ ಅಚ್ಚು ಮೂಡಿಸುವ ಯತ್ನ ನಡೆಯತೊಡಗಿತು. 

ಕನ್ನಡದ ಕೈಂಕರ್ಯಕ್ಕೆ ಸೀರೆಯನ್ನೇ ಆಯ್ದುಕೊಂಡಿರುವುದಕ್ಕೆ ಕಾರಣವಿದೆ. ನಾವು ಕರ್ನಾಟಕದ ಸಾಂಪ್ರದಾಯಿಕ ಸೀರೆಗಳ ಮೇಲೆಯೇ ಈ ಅಚ್ಚುಹಾಕುವುದರಿಂದ ಆ ಸೀರೆಯನ್ನು ಜನರಿಗೆ ಪರಿಚಯಿಸಿದಂತಾಗುತ್ತದೆ. ಆ ಮೂಲಕ ಸಾಂಪ್ರದಾಯಿಕ ಶೈಲಿಯ ಸೀರೆಗಳಗೆ ಬೇಡಿಕೆ ಹುಟ್ಟುತ್ತದೆ. ಅದರ ಮೇಲೆ ಕನ್ನಡ ಅಕ್ಷರ ಮೂಡಿಸುವುದರಿಂದ ಕನ್ನಡ ಭಾಷೆ ಮತ್ತಷ್ಟು ಜನಕ್ಕೆ ಪರಿಚಯವಾಗುತ್ತದೆ. ಒಂದು ಪುಸ್ತಕವಾದರೆ, ಅದನ್ನು ಕೊಳ್ಳುವವರು, ಓದುವವರಿಗಷ್ಟೇ ತಲುಪುತ್ತದೆ. ಆದರೆ ಸೀರೆಯಾದರೆ ನೋಡುವವರನ್ನೆಲ್ಲ ಸೆಳೆಯುತ್ತದೆ. ಐದೂವರೆ ಮೀಟರಿನ ಒಂದು ಸೀರೆಯಲ್ಲಿ ಏನೇನನ್ನೆಲ್ಲ ಹೇಳಬಹುದಲ್ಲವೇ? ಹಾಗೆಯೇ ಸೀರೆಯ ಬ್ಲೌಸ್ ನ ಹಿಂಬದಿಯಲ್ಲೂ ಕನ್ನಡ ಜಾನಪದ ಚಿತ್ರ, ಕವನಗಳ ಅಚ್ಚು ಹಾಕಿಸುವುರಿಂದಲೂ ಹಲವರಿಗೆ ಕನ್ನಡವನ್ನೂ, ಕರ್ನಾಟಕ ಸಂಸ್ಕೃತಿಯನ್ನು ಪರಿಚಯಿಸಬಹುದು ಎಂಬುದು ವೃಂದಾ ಅವರ  ಭಾವನಾತ್ಮಕ ಚಿಂತನೆ. ಅವರು ಈ ಸೀರೆಗಳ ಕುರಿತು ಪ್ರಚಾರ ಮಾಡುವುದಕ್ಕೆ ಫೇಸ್ ಬುಕ್ ನಂಥ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದಾರೆ. ಈ ಮೂಲಕವೇ ಸಾಕಷ್ಟು ಬೆಂಬಲ ದಕ್ಕುತ್ತಿದೆ.  ರಾಜ್ಯೋತ್ಸವ ಸಂದರ್ಭದಲ್ಲಿ ವೃಂದಾ ಅವರು ಕವನಗಳನ್ನೊಳಗೊಂಡ ಸೀರೆಯೊಂದನ್ನು ಉಟ್ಟಾಗ, ಅನೇಕ ಜನ ಅವರ ಬಳಿ ಈ ಸೀರೆಯ ಕುರಿತು ವಿಚಾರಿಸಿ ಕೊಳ್ಳುವ ಆಸ್ಥೆ ತೋರಿದರು.  

ಕನ್ನಡ ಅನ್ನೋದು ಒಂದು ಭಂಡಾರ ಇದ್ದಹಾಗೆ. ಅವುಗಳಲ್ಲಿ ಎಲ್ಲವನ್ನೂ ನಾವು ಕೊಳ್ಳೋವುದಕ್ಕೆ ಆಗೋದಿಲ್ಲ. ಸೀರೆಗಳ ಮೇಲೆ ಅಚ್ಚು ಹಾಕುವಾಗ ನಾವು ಆಯ್ಕೆ ಮಾಡಿಕೊಳ್ಳುವ ಕವನವಾಗಲಿ, ಚಿತ್ರವಾಗಲೀ ಆಯಾ ಕವಿಗಾಗಲೀ, ಸಮುದಾಯಕ್ಕಾಗಲೀ ಮುಜುಗರವನ್ನುಂಟು ಮಾಡಬಾರದು. ಅದಕ್ಕೆಂದೇ ನಾವು ತೀರಾ ಎಚ್ಚರಿಕೆಯಿಂದಿರಬೇಕು. ನಮ್ಮ ಭಾಷೆ ಅನ್ನೋದು ಒಂದು ನಿಧಿ ಅನ್ನೋದನ್ನು ಎಂದಿಗೂ ನಾವು ಮರೆಯಬಾರದು ಎಂಬ ಕಾಳಜಿ ಸಹಾ ವೃಂದಾ ಅವರ ಜೊತೆ ಇದೆ. 

ವೃಂದಾ ಅವರಿಗೆ ಫೋಟೊಗ್ರಫಿ ಎಂದರೂ ಇಷ್ಟ. ಕನ್ನಡದ ಕೆಲಸ ಮಾಡುತ್ತಿರುವ  ಹೆಮ್ಮೆ ಅವರಲ್ಲಿದೆ. ಇದರಿಂದಾಗಿ ಕರ್ನಾಟಕದ ಸಾಂಪ್ರದಾಯಿಕ ಸೀರೆಗಳಿಗೆ ಬೇಡಿಕೆ ಹೆಚ್ಚಿದರೆ, ಸೀರೆ ಉತ್ಪಾದಕರಿಗೂ, ವ್ಯಾಪಾರಿಗಳಿಗೂ ಲಾಭ. ಜೊತೆ ಜೊತೆಯಲ್ಲೇ ಕನ್ನಡ ಭಾಷೆಗೂ ಪ್ರಚಾರ ಸಿಕ್ಕಂತಾಗುತ್ತದೆ. ಹೀಗೆ ತಮ್ಮ ನಾಡು, ಜನರ ಬದುಕು, ಸಂಸ್ಕೃತಿ, ಉದ್ಯಮ, ಜನರ ಸದಭಿರುಚಿ ಇವೆಲ್ಲವುಗಳ ಸಂಯೋಗವನ್ನು ತಮ್ಮ ಬದುಕಿನ ಆಸಕ್ತಿಯಾಗಿಸಿಕೊಂಡು ಮುನ್ನಡೆಯುತ್ತಿರುವ ವೃಂದಾ ಅವರಿಗೆ ನಮ್ಮ ಮೆಚ್ಚುಗೆ, ಬೆಂಬಲ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Vrunda Sekhar 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ