ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ವಿ. ನಾರಾಯಣ


 ಕೆ.ವಿ. ನಾರಾಯಣ 


ಡಾ. ಕೆ. ವಿ. ನಾರಾಯಣ ಅವರು ಭಾಷಾಶಾಸ್ತ್ರಜ್ಞರಾಗಿ, ವಿಮರ್ಶಕರಾಗಿ, ಸಂಸ್ಕೃತಿ ಚಿಂತಕರಾಗಿ ಮಹತ್ವದ ಕೆಲಸ ಮಾಡುತ್ತ ಬಂದಿದ್ದಾರೆ. 

ಕೆ. ವಿ. ನಾರಾಯಣ ಅವರು  ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ 1948ರ ಅಕ್ಟೋಬರ್ 20ರಂದು ಜನಿಸಿದರು. ತಾಯಿ ಕೆಂಚಮ್ಮ. ತಂದೆ ವೀರಣ್ಣ. ಪಿರಿಯಾಪಟ್ಟಣದಲ್ಲಿ ಶಾಲಾ ವಿದ್ಯಾಭ್ಯಾಸ ನಡೆಸಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಮೈಸೂರಿನ ಯುವರಾಜಾಸ್ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿ ಪಡೆದರು. 

ಬಿ.ಎಡ್.  ಮುಗಿಸಿದ ನಂತರ ನಾರಾಯಣ ಅವರು ಹೈಸ್ಕೂಲಿನಲ್ಲಿ ಅಧ್ಯಾಪನ ಆರಂಭಿಸಿದರು. ಮುಂದೆ ಸ್ನಾತಕೋತ್ತರ ಸಾಹಿತ್ಯದ  ಓದಿಗಾಗಿ ಬೆಂಗಳೂರಿಗೆ  ಬಂದರು. ಓದಿನ ಜೊತೆಯಲ್ಲೇ ಅವರ ಬರೆವಣಿಗೆಯ ಪಯಣವೂ ಸಾಗಿತ್ತು. 

ಕೆ. ವಿ. ನಾರಾಯಣ ಅವರು ಮೊದಲು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪನ ಆರಂಭಿಸಿದರು. ಮುಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಜಿ.ಎಸ್.ಎಸ್ ನೇತೃತ್ತ್ವದಲ್ಲಿದ್ದ ಕನ್ನಡ ಅಧ್ಯಯನ ಕೇಂದ್ರಕ್ಕೆ ಸೇರ್ಪಡೆಗೊಂಡರು. ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ ಆನಂದವರ್ಧನನ ‘ಧ್ವನ್ಯಾಲೋಕ - ಒಂದು ಅಧ್ಯಯನ’ ಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿ ಪಡೆದರು. 

ಕೆ. ವಿ. ನಾರಾಯಣ ಅವರು ಬೋಧಿಸಿದ್ದು ಸಾಹಿತ್ಯ, ಸಾಹಿತ್ಯ ಮೀಮಾಂಸೆ ಮತ್ತು ಭಾಷಾಶಾಸ್ತ್ರವನ್ನು. ವಿಜ್ಞಾನದ ತಾತ್ವಿಕತೆಯನ್ನಿರಿಸಿಕೊಂಡೇ ವಿಮರ್ಶಕರಾಗಿ, ಭಾಷಾಶಾಸ್ತ್ರಜ್ಞರಾಗಿ, ಕನ್ನಡ ಸಂಸ್ಕೃತಿ ಚಿಂತಕರಾಗಿ ಬೆಳೆದರು. 

ಕೆ.ವಿ. ನಾರಾಯಣ ಅವರು  1993ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದ ಆರಂಭದಲ್ಲೇ ರಿಜಿಸ್ಟ್ರಾರ್ ಆಗಿ ಅಲ್ಲಿನ ಆಡಳಿತ ನಿರ್ವಹಣೆಯೊಳಗೂ ಪ್ರವೇಶ ಪಡೆದರು. ಅಲ್ಲಿಂದ ನಿವೃತ್ತಿಯಾಗಿ ಹೊರಗೆ ಬರುವವರೆಗೆ ಹಲವು ಜನ ಕುಲಪತಿಗಳ ಆವಧಿಯಲ್ಲಿ ಆಡಳಿತ ಮತ್ತು ಅಧ್ಯಯನಗಳ ಮೂಲಕ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ತಮ್ಮ ಅಧ್ಯಾಪನ ಸಂದರ್ಭದಲ್ಲೇ ಆರಂಭಿಸಿದ್ದ ಕನ್ನಡಭಾಷೆ ಮತ್ತು ಕನ್ನಡ ಸಂಸ್ಕೃತಿಯ ಚಿಂತನೆಗಳನ್ನು ಕನ್ನಡ ಸಮಾಜದ ಬೇರುಗಳ ಮೂಲಕ ಅರಸುವ ಕೆಲಸವನ್ನು ಮತ್ತಷ್ಟು ಸ್ಪಷ್ಟವಾಗಿ ಮೂಡಿಸುತ್ತಾ ಬಂದರು. ಈಗಲೂ ಅದು ನಿರಂತರವಾಗಿ ಸಾಗಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಅವರ ಸೇವೆ ಸಂದಿದೆ.

ಡಾ. ಕೆ. ವಿ. ನಾರಾಯಣ ಅವರ ಕನ್ನಡ ಭಾಷಾ ಶಾಸ್ತ್ರದ ಕುರಿತಾದ ಕೃತಿಗಳಲ್ಲಿ ಕನ್ನಡ ಜಗತ್ತು:ಅರ್ಧ ಶತಮಾನ, ನಮ್ಮೊಡನೆ ನಮ್ಮ ನುಡಿ, ಕನ್ನಡ ಶೈಲಿ ಕೈಪಿಡಿ, ಶೈಲಿಶಾಸ್ತ್ರ, ಭಾಷೆಯ ಸುತ್ತಮುತ್ತ, ಬೇರು ಕಾಂಡ ಚಿಗುರು, ಮತ್ತೆ ಭಾಷೆಯ ಸುತ್ತಮುತ್ತ, ಕನ್ನಡ ನುಡಿಯ ಆಕರ ಕೋಶ, ನುಡಿಗಳ ಅಳಿವು, ದ್ವಿಭಾಷಿಕತೆ, ಸ್ಥಳ ನಾಮಗಳು : ಪರಿವರ್ತನೆ ಮತ್ತು ಪ್ರಭಾವ, ವ್ಯಕ್ತಿನಾಮಗಳು: ಸ್ವರೂಪ ಮತ್ತು ವಿಶ್ಲೇಷಣೆ, ಭಾಷಾ ವಿಶ್ವಕೋಶ, ನುಡಿಗಳ ಅಳಿವು ಮುಂತಾದವು ಸೇರಿವೆ.  ಸಾಹಿತ್ಯ ತತ್ವ: ಬೇಂದ್ರೆ ದೃಷ್ಟಿ, ತೊಂಡುಮೇವು ಮುಂತಾದವು, ಚಾಮ್ಸ್ಕಾಯೊಡನೆ ಎರಡು ಹೆಜ್ಜೆ ವಿಮರ್ಶಾ ಕೃತಿಗಳು.  ಹುತ್ತವ ಬಡಿದರೆ ನಾಟಕ. ಅಂಕೆ ತಪ್ಪಿದ ಆರ್ಥುರೋ ಊಯಿ (ಬಟೋಲ್ಟ್ ಬ್ರೆಕ್ಟ್ ), ಜೆನ್ ಕಥೆಗಳು, ಪ್ರೀತಿಸುವುದೆಂದರೆ (ಆರ್ಟ್ ಆಫ್ ಲವಿಂಗ್ ಎರಿಕ್ ಫ್ರಾಂ) , ಜೀನ್ ಪಾಲ್ ಸಾರ್ತೃ ಅವರ ಬುದ್ಧಿ ಜೀವಿ ಬಿಕ್ಕಟ್ಟುಗಳು ಮುಂತಾದವು ಅವರ ಅನುವಾದ ಕೃತಿಗಳು. 

ಡಾ. ಕೆ. ವಿ. ನಾರಾಯಣ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಾ. ಎಲ್. ಬಸವರಾಜು ಪ್ರಶಸ್ತಿ, ಡಾ. ಜಿ. ಎಸ್. ಎಸ್. ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.  ಅವರ 'ನುಡಿಗಳ ಅಳಿವು' ಕೃತಿಗೆ 2024 ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. 

ಡಾ. ಕೆ.ವಿ. ನಾರಾಯಣ ಅವರ ಶ್ರೀಮತಿ ಡಾ.ಎಚ್.ಎಸ್. ಶ್ರೀಮತಿ ಅವರು ಸಹ ಕನ್ನಡ ಸಾಹುತ್ಯಲೋಕದ ಮಹಾನ್ ಸಾಧಕಿ ಎನಿಸಿದ್ದಾರೆ. 

ಪೂಜ್ಯ ಡಾ. ಕೆ. ವಿ. ನಾರಾಯಣ ಅವರಿಗೆ ಗೌರವಪೂರ್ವಕ ನಮನಗಳು.

On the birth day of our  Great scholar Dr. K. V. Narayan Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ