ಶಕುಂತಲಾ ಕಿಣಿ
ಶಕುಂತಲಾ ಆರ್. ಕಿಣಿ
ಶಕುಂತಲಾ ಆರ್. ಕಿಣಿ ಅವರು ಆಕಾಶವಾಣಿಯ ಉದ್ಘೋಷಕಿಯಾಗಿ ಪ್ರಸಿದ್ಧ ಧ್ವನಿ. ಬರಹಗಾರ್ತಿಯಾಗಿ, ಕೊಂಕಣಿ ಮತ್ತು ಕನ್ನಡ ಭಾಷೆಗಳ ಸೇತುವೆಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ ಸಹಾ ಅವರದ್ದು ಗಮನಾರ್ಹ ಕಾಯಕ.
ಶಕುಂತಲಾ ಅವರು 1956ರ ಅಕ್ಟೋಬರ್ 28ರಂದು ಕೇರಳರಾಜ್ಯದ ಬಳ್ಳಂಬೆಟ್ಟು ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಪುರುಷೋತ್ತಮ ಪೈ. ತಾಯಿ ರಮಣಿ ಪೈ. ಶಕುಂತಲಾ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ 8 ಚಿನ್ನದ
ಪದಕಗಳೊಡನೆ ಕನ್ನಡ ಎಂ.ಎ ಪದವಿ ಗಳಿಸಿದರು.
ಶಕುಂತಲಾ ಅವರು ಕೆಲವು ವರ್ಷ ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿದ್ದರು. 1981ರಿಂದ 2016ರ ವರೆಗೆ 35 ವರ್ಷಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ ಸಲ್ಲಿಸಿದರು. ಆಕಾಶವಾಣಿಗಾಗಿ, ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಹಲವಾರು ರೂಪಕಗಳು ಮತ್ತು ನಾಟಕಗಳನ್ನು ರಚಿಸಿ ಪ್ರಸ್ತುತ ಪಡಿಸಿದರಲ್ಲದೆ ಅನೇಕ ವೈವಿಧ್ಯಪೂರ್ಣ ಕಾರ್ಯಕ್ರಮಗಳು ಮತ್ತು ಸಂದರ್ಶನಗಳನ್ನು ನಿರ್ವಹಿಸಿದರು.
'ಥೊಡೇ ಏಕಾಂತ' ಎಂಬುದು ಶಕುಂತಲಾ ಕಿಣಿ ಅವರ ಪ್ರಕಟಿತ ಕೊಂಕಣಿ ಕವನ ಸಂಕಲನ. ಖ್ಯಾತ ಕೊಂಕಣಿ ಕವಿ ಬಾಕೀಬಾಬ್ ಬೋರಕರ್ ಅವರ ಕವಿತೆಗಳ ಭಾವಾನುವಾದವನ್ನು 'ನೂಪುರ' ಎಂಬ ಕನ್ನಡ ಕೃತಿಯಾಗಿ ಮೂಡಿಸಿದ್ದಾರೆ. ಬಾಲ್ಯಕಾಲದ ನೆನಪುಗಳನ್ನು ಸಂಕಲಿಸಿದ 'ಬಳ್ಳಂಬೆಟ್ಟಿನ ಬಾಲ್ಯಕಾಲ' ಎಂಬುದು ಇವರ ಮತ್ತೊಂದು ಕೃತಿ. ಇವರ ಕಥೆ, ಕವಿತೆ, ಚಿಂತನ, ನೆನಪಿನ ಪಯಣ, ಅಂಕಣ ಮುಂತಾದ ಬರಹಗಳು ಅನೇಕ ಕಡೆ ಮೂಡಿವೆ. ಯೂ ಟ್ಯೂಬ್ ಚಾನೆಲ್ನಲ್ಲಿ ಮನೋಜ್ಞ ಸಾಧಕರ ಜೀವನ, ಸಾಧನೆ ಮತ್ತು ಸಂದರ್ಶನಗಳನ್ನು ಭಿತ್ತರಿಸುತ್ತಿದ್ದಾರೆ. "ಸ್ವಪ್ನ ಸಾರಸ್ವತ" ನಾಟಕವೂ ಸೇರಿದಂತೆ ಹಲವಾರು ನಾಟಕಗಳ ಕೊಂಕಣಿ ಅನುವಾದ ಮಾಡಿದ್ದಾರೆ. ಕನಕದಾಸರ ಹಲವಾರು ಕೀರ್ತನೆಗಳನ್ನು ಕೊಂಕಣಿಗೆ ಅನುವಾದ ಮಾಡಿದ್ದಾರೆ.
ಶಕುಂತಲಾ ಕಿಣಿ ಅವರು ವಿಶ್ವ ಕೊಂಕಣಿ
ಸಮ್ಮೇಳನವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಸಮ್ಮೇಳನಗಳ ಕಾರ್ಯಕ್ರಮ ನಿರ್ವಹಣೆ ಮಾಡಿದ್ದಾರೆ. ಹಲವಾರು ಕವಿಗೋಷ್ಠಿ ವಿಚಾರಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಸಾಂಸ್ಕೃತಿಕ ಶಿಬಿರಗಳಲ್ಲಿ ಮಕ್ಕಳಿಗೆ ನಾಟಕ ತರಬೇತಿ ನೀಡಿದ್ದಾರೆ.
ಶಕುಂತಲಾ ಆರ್. ಕಿಣಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday to great voice in All India Radio and writer Shakunthala Kini 🌷🙏🌷
ಕಾಮೆಂಟ್‌ಗಳು