ಸುಂದರ ಕಾಂಡ
ಶ್ರೀ ರಾಮಾಯಣ : ಸುಂದರಕಾಂಡ
(ನಮ್ಮ ತಂದೆ ಪಂಡಿತ ತಿರು ಶ್ರೀನಿವಾಸಾಚಾರ್ಯ ಅವರು ಬರೆದ ‘ಸಂಗ್ರಹ ರಾಮಾಯಣ' ಕೃತಿಯಿಂದ)
ಆಂಜನೇಯನು ಸಮಸ್ತ ದೇವತೆಗಳಿಗೂ ವಂದಿಸಿ ತನ್ನ ದೇಹವನ್ನು ಬೃಹದಾಕಾರವಾಗಿ ಬೆಳೆಸಿಕೊಂಡು ಮಹೇಂದ್ರ ಪರ್ವತದಿಂದ ಲಂಕಾಭಿಮುಖವಾಗಿ ಸಮುದ್ರದ ಮೇಲೆ ಹಾರಿದನು. ಹೀಗೆ ಹಾರಿಹೋಗುತ್ತಿದ್ದ ಹನುಮಂತನನ್ನು ಕಂಡು ಸಾಗರದೊಳಗಿನಿಂದ ಉದ್ಭವಿಸಿದ ಮೈನಾಕ ಪರ್ವತವು ಆತನನ್ನು ಆದರಿಸಿತು.
ಮಾರುತಿಯು ಮಾರ್ಗಮಧ್ಯದಲ್ಲಿ ಸಿಕ್ಕಿದ ಸುರಸೆಯ ಇಷ್ಟದಂತೆ ಲಘುರೂಪದಿಂದ ಆಕೆಯ ಬಾಯೊಳಹೊಕ್ಕು ಈಚೆ ಬಂದು ಅವಳ ಮೆಚ್ಚುಗೆಗೆ ಪಾತ್ರನಾದನು. ತನ್ನನು ನುಂಗಲು ಬಂದ ಸಿಂಹಿಕೆಯೆಂಬ ರಾಕ್ಷಸಿಯ ಹೊಟ್ಟೆಯೊಳಹೊಕ್ಕು ಅಲ್ಲಿಂದಲೇ ಅವಳನ್ನು ಸೀಳಿ ಸಾಯಿಸಿದನು. ಕಡೆಗೆ ನೂರು ಯೋಜನ ಹಾರಿದ ಧೀರಹನುಮಂತನು ಲಂಕಾನಗರದ ದೇವತೆಯಾದ ಲಂಕಿಣಿಯನ್ನು ಗುದ್ದಿ ಎಡಗಾಲಿಟ್ಟು ಆ ಶತ್ರುನಗರಿಯ ಪ್ರವೇಶ ಮಾಡಿದನು.
ಹನುಮಂತನು ತನ್ನ ದೊಡ್ಡ ರೂಪವನ್ನು ಬಿಟ್ಟು ಚಿಕ್ಕ ಕೋತಿಯ ರೂಪವನ್ನು ತಾಳಿ ರಾತ್ರಿಯ ಕಾಲದಲ್ಲಿ ರಾವಣನ ಅಂತಃಪುರದೊಳಕ್ಕೆ ಬಂದು ನೂರಾರು ಹೆಂಗಸರ ನಡುವೆ ಮಂಡೋದರಿಯ ಪಕ್ಕದಲ್ಲಿ ಮಲಗಿದ್ದ ರಾವಣನನ್ನು ಕಂಡನು. ಅಲ್ಲೆಲ್ಲಿಯೂ ಸೀತೆಯನ್ನು ಕಾಣದೆ ಆ ದಶಕಂಠನ ಅಶೋಕವನಕ್ಕೆ ಹೋಗಿ ಅಲ್ಲಿಯ ಶಿಂಶುಪಾ ವೃಕ್ಷದ ಮೇಲೆ ಮರೆಯಲ್ಲಿ ಕುಳಿತಿದ್ದನು. ಆಗ ಕತ್ತಲೆಯಾಗಿದ್ದುದರಿಂದ ಆ ಮರದಡಿಯಲ್ಲಿ ರಾಕ್ಷಸಿಯರಿಂದ ಸುತ್ತುವರಿಯಲ್ಪಟ್ಟ ಮಾಸಿದ ಸೀರೆಯನ್ನುಟ್ಟಿರುವ ಹೆಂಗಸೊಬ್ಬಳಿರುವುದು ಮರದ ಮೇಲಿದ್ದ ಮಾರುತಿಗೆ ಗೋಚರಿಸಲು ಆಕೆಯೇ ಜಾನಕಿಯಾಗಿರಬೇಕೆಂದು ಊಹಿಸಿ ಸೂರ್ಯೋದಯವಾಗುವುದನ್ನೇ ಕಾಯುತ್ತಿದ್ದನು.
ಮಾರನೆಯ ದಿನ ಬೆಳಿಗ್ಗೆ ರಾವಣನು ಅಲ್ಲಿಗೆ ಬಂದು ಸೀತೆಯನ್ನು ಕಂಡು ತನ್ನ ಪತ್ನಿಯಾಗುವಂತೆ ಗದರಿಸಲು ಆಕೆಯು ರಾಮನಿಗೆ ತನ್ನನ್ನು ಒಪ್ಪಿಸಿ ಕ್ಷಮೆ ಕೇಳಿಕೊಂಡು ಒಳ್ಳೆಯವನಾಗೆಂದು ಹೇಳುತ್ತಿದ್ದ ಸಂಗತಿಗಳೆಲ್ಲವೂ ಮೇಲಿದ್ದ ಹನುಮಂತನಿಗೆ ಸ್ಪಷ್ಟವಾಯಿತು. ಸ್ವಲ್ಪ ಹೊತ್ತಿನಲ್ಲಿ ದಶಾನನು ಅಲ್ಲಿದ್ದ ರಾಕ್ಷಸಿಯರ ಪರಿವಾರಕ್ಕೆ ಸೀತೆಯನ್ನು ತನ್ನವಳಾಗಿ ಮಾಡಬೇಕೆಂದು ಆಜ್ಞೆಯಿತ್ತು ಹೋಗಲಾಗಿ, ಅವರೋ ಮೊದಲೇ ದುಃಖಿಯಾಗಿದ್ದ ವೈದೇಹಿಯನ್ನು ಮತ್ತಷ್ಟು ಗೋಳಾಡಿಸಿದರು. ಆ ರಾಕ್ಷಸಿಯರ ಪರಿವಾರದಲ್ಲಿ ವಿಭೀಷಣನ ಮಗಳಾದ ತ್ರಿಜಟೆಯೆಂಬುವಳು ಸಾಧುವಾಗಿದ್ದಳು. ಈಕೆಯು ಭೂಮಿಜೆಯನ್ನು ಸಮಾಧಾನಪಡಿಸಿ ಮಿಕ್ಕವರಿಗೆ ತಾನು ಸ್ವಪ್ನದಲ್ಲಿ ರಾಮನಿಂದ ರಾಕ್ಷಸರೆಲ್ಲ ವಧೆಯಾದಂತೆ ಕಂಡ ಸಂಗತಿಗಳನ್ನು ತಿಳಿಸಲು ಆ ರಕ್ಕಸಿಯರೆಲ್ಲರೂ ಹೆದರಿ ಸ್ವಲ್ಪ ಹೊತ್ತಾದ ಮೇಲೆ ಮಲಗಿಬಿಟ್ಟರು.
ಇಂತಹ ದೃಶ್ಯವನ್ನೆಲ್ಲಾ ನೋಡುತ್ತ ಮರದ ಮೇಲೆ ಕುಳಿತಿದ್ದ ಮಾರುತಿಗೆ ಅದೇ ಸೂಕ್ತ ಸಮಯವೆನಿಸಿ ಮೆಲ್ಲಗೆ ಶ್ರೀರಾಮ ಕಥೆಯನ್ನು ಹೇಳುತ್ತಾ ಬಂದನು. ಆಗ ಜಾನಕಿಯು ಕತ್ತೆತ್ತಿ ನೋಡಿದ ಕೂಡಲೆ ಆಂಜನೇಯನು ಆಕೆಯೆದುರು ಧುಮುಕಿ ಬಂದು ಕೈಮುಗಿದು ನಿಂತನು. ಮಾರುತಿಯು ಸೀತೆಗೆ ತಾನು ರಾಮದೂತನಾಗಿ ಅಲ್ಲಿ ಬಂದಿರುವ ವಿಚಾರವನ್ನು, ರಾಮಲಕ್ಷ್ಮಣರ ಕುಶಲವಾರ್ತೆಯನ್ನು ತಿಳಿಸಿ ಶ್ರೀರಾಮಮುದ್ರಿಕೆಯುಂಗುರವನ್ನು ಸೀತಾಮಾತೆಯ ಕೈಗೊಪ್ಪಿಸಿದಾಗ ಆಕೆಯ ಆನಂದಕ್ಕೆ ಪಾರವಿಲ್ಲದಾಯಿತು. ಜಾನಕಿಯು ಹನುಮಂತನ ಸಾಹಸಕ್ಕೆ ಮೆಚ್ಚಿ ಆತನನ್ನು ಆಶೀರ್ವದಿಸಿದಳು.
ಮಾರುತಿಯು, ಸೀತೆಯು ಒಪ್ಪುವುದಾದರೆ ಅವಳನ್ನು ತನ್ನ ಹೆಗಲ ಮೇಲೆ ಕುಳ್ಳಿರಿಸಿಕೊಂಡು ರಾಮನ ಬಳಿಗೆ ಕರೆದುಕೊಂಡು ಹೋಗಿ ಬಿಡುವುದಾಗಿಯೂ ಸೂಚಿಸಿದನು. ಇದಕ್ಕೆ ವೈದೇಹಿಯು ಒಪ್ಪದೆ ಮಹಾಬಲಶಾಲಿಯಾದ ರಘುವೀರನೇ ಅಲ್ಲಿಗೆ ಶೀಘ್ರವಾಗಿ ಬಂದು ರಾವಣ ಸಂಹಾರಮಾಡಿ ತನ್ನನ್ನು ಕರೆದುಕೊಂಡು ಹೋಗುವಂತೆ ತಿಳಿಸಬೇಕೆಂದು ವೀರಾಂಜನೇಯನಿಗೆ ತಿಳಿಸಿದಳಲ್ಲದೆ, ರಾಮನು ಇನ್ನೊಂದು ತಿಂಗಳಲ್ಲಿ ಹಾಗೆ ತನ್ನನ್ನು ಕರೆದುಕೊಂಡು ಹೋಗದಿದ್ದರೆ ಪ್ರಾಣತ್ಯಾಗ ಮಾಡಿಕೊಳ್ಳುವುದಾಗಿಯೂ ಸೂಚಿಸಿ, ತನ್ನ ಪ್ರಾಣಕಾಂತನಿಗೆ ಮುಖ್ಯಪ್ರಾಣನ ಕೈಯಲ್ಲಿ ತನ್ನಲ್ಲಿದ್ದ ಚೂಡಾಮಣಿ ರತ್ನವನ್ನು ಗುರುತಾಗಿ ಕೊಟ್ಟು ಕಳುಹಿಸಿದಳು.
ಆ ಕೂಡಲೇ ವಾಯುಪುತ್ರನು ಸೀತೆಯಿಂದ ಬೀಳ್ಕೊಂಡು ಲಂಕಾಧಿಪತಿಯ ಬಲಪರೀಕ್ಷೆ ನಡೆಸಬೇಕೆಂದು ಆಲೋಚಿಸಿದನು. ಕೂಡಲೇ ಅಶೋಕವನದ ಗಿಡಮರಗಳನ್ನು ಕಿತ್ತು ಅಲ್ಲಿದ್ದ ಕಾವಲುಗಾರರನ್ನು ಹೊಡೆದೋಡಿಸಿ ಕಾಳಗಕ್ಕೆ ಕಾಲ್ಕೆರೆದನು. ಆ ದೂತರು ತಕ್ಷಣವೇ ರಾವಣನಿಗೆ ಈ ಕಪಿವೀರನ ಹಾವಳಿಯನ್ನು ತಿಳಿಸಲು ಆ ರಾಕ್ಷಸರಾಜನು ಎಂಬತ್ತು ಸಾವಿರ ಸೈನ್ಯ ಬಲವುಳ್ಳ ಕಿಂಕರರೆಂಬ ರಾಕ್ಷಸರನ್ನು ಹನುಮಂತನ ಮೇಲೆ ಯುದ್ಧಕ್ಕೆ ಕಳುಹಿಸಿದನು. ಈ ಸೈನ್ಯ ಪಡೆ ಅಲ್ಲಿ ಆಂಜನೇಯನ ಬಳಿಗೆ ಬಂದ ಕೂಡಲೇ ತನ್ನಲ್ಲಿದ್ದ ವೃಕ್ಷ ಸಮೂಹಗಳಿಂದಲೇ ಆ ಕಿಂಕರರನ್ನೆಲ್ಲಾ ಯಮಕಿಂಕರರ ಬಳಿಗೆ ಬೇಗನೆ ಕಳುಹಿಸಿಬಿಟ್ಟನು.
ಮುಂದೆ ಜಂಬುಮಾಲಿಯೆಂಬ ರಾಕ್ಷಸನೂ ಏಳು ಮಂದಿ ಮಂತ್ರಿಕುಮಾರರೂ ಒಬ್ಬರಾದ ಮೇಲೊಬ್ಬರು ವಾಯುಪುತ್ರನ ಮೇಲೆ ಬೀಳಲು ಕ್ಷಣಾರ್ಧದಲ್ಲಿ ಅವರನ್ನೆಲ್ಲಾ ನಿರ್ನಾಮ ಮಾಡಿದನು. ಅನಂತರ ರಾವಣನು ತನ್ನ ಮಗನಾದ ಅಕ್ಷಯ ಕುಮಾರನನ್ನು ಮಾರುತಿಯ ಮೇಲೆ ಯುದ್ಧಕ್ಕೆ ಕಳುಹಿಸಲು ಅವನನ್ನೂ ಯಮಪುರಿಗಟ್ಟಿದನು.
ಕಡೆಗೆ ರಾವಣನ ಮತ್ತೊಬ್ಬ ಮಗನಾದ ಇಂದ್ರಜಿತ್ತು ಆಂಜನೇಯನ ಮೇಲೆ ಯುದ್ಧಕ್ಕೆ ಬಂದು ಬ್ರಹ್ಮಾಸ್ತ್ರದಿಂದ ಅವನನ್ನು ಬಂಧಿಸಿದನು. ಆಗ ರಾಕ್ಷಸ ಸೈನಿಕರು ಹನುಮಂತನನ್ನು ಮತ್ತಷ್ಟು ಹಗ್ಗಗಳಿಂದ ಕಟ್ಟಿ ರಾವಣನ ಆಸ್ಥಾನಕ್ಕೆ ಕರೆತಂದರು. ರಾವಣನ ಮಂತ್ರಿಯಾದ ಪ್ರಹಸ್ತನು ರಾಜಾಜ್ಞೆಯಂತೆ ಅಂಜನೇಯನ ವಿಚಾರಣೆ ನಡೆಸಿದನು. ಆಗ ಮಾರುತಿಯು ಅವರಿಗೆ ತಾನು ರಾಮದೂತನೆಂದೂ ವಾಲಿ ಪ್ರಮುಖರನ್ನು ಸಂಹರಿಸಿದ ಮಹಾಬಲಶಾಲಿಯಾದ ರಾಮನಿಗೆ ಒಳ್ಳೆಯ ಮಾತಿನಲ್ಲಿ ಸೀತೆಯನ್ನು ತಂದೊಪ್ಪಿಸದಿದ್ದರೆ ರಾವಣನ ನಾಶ ಖಂಡಿತವೆಂದೂ ಸಾರಿದನು. ಇದನ್ನು ಕೇಳಿ ಕೋಪಗೊಂಡ ರಾವಣನು ಮಂತ್ರಿಗಳ ಮಾತಿನಂತೆ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿಸಿದನು.
ಈ ಸಂಗತಿಯು ಸೀತೆಗೆ ತಿಳಿದಾಗ ಆಕೆಯು ತಾನು ಪತಿವ್ರತೆಯಾಗಿದ್ದರೆ ಹನುಮಂತನಿಗೆ ಬೆಂಕಿಯಕಾವು ತಟ್ಟದಿರಲೆಂದು ಅಗ್ನಿಯನ್ನು ಪ್ರಾರ್ಥಿಸಿದುದರಿಂದ ಆಂಜನೇಯನ ಬಾಲ ಉರಿಯುತ್ತಿದ್ದರೂ ಅವನಿಗೆ ಅದರ ಶಾಖದ ಪರಿವೆಯೇ ಇರಲಿಲ್ಲ. ಆಗ ವಾಯುಪುತ್ರನು ವಾಯುವೇಗದಿಂದ ಲಂಕೆಯ ಮೇಲೆ ಹಾರಿ ಒಂದು ಕಡೆಯಿಂದ ಎಲ್ಲ ಮನೆಗಳನ್ನೂ ಅಗ್ನಿಗಾಹುತಿಮಾಡಿದನು. ವಿಭೀಷಣನ ಗೃಹವೊಂದು ಬಿಟ್ಟು ಉಳಿದೆಲ್ಲ ಮನೆಗಳೂ ಸುಟ್ಟು ಬೂದಿಯಾದವು. ಆಗ ಮಾರುತಿಯು ಸಮುದ್ರದ ನೀರಿನಲ್ಲಿ ತನ್ನ ಬಾಲವನ್ನಾರಿಸಿಕೊಂಡು ಬಂದು ಅಶೋಕವನಕ್ಕೆ ಹಿಂದಿರುಗಿ ಸೀತಾಕ್ಷೇಮವನ್ನು ನೋಡಿಕೊಂಡ ಕೂಡಲೇ, ಒಂದೇ ಪಟ್ಟಿಗೆ ಸಮುದ್ರಲಂಘನ ಮಾಡಿ ಮಹೇಂದ್ರ ಪರ್ವತದ ಮೇಲೆ ಬಂದಿಳಿದನು. ಆಗ ಕಪಿವೀರರೆಲ್ಲರೂ ಸಂತೋಷದಿಂದ ಕುಣಿದಾಡುತ್ತಾ ಹನುಮಂತನನ್ನು ಕೊಂಡಾಡುತ್ತಾ, ಆತನೊಡನೆ ಸುಗ್ರೀವ ರಾಮಲಕ್ಷ್ಮಣರು ಇದ್ದ ಸ್ಥಳಕ್ಕೆ ಧಾವಿಸಿದರು. ರಾಮನಿಗೆ ಅಂಜನೆಯನು ಸೀತಾದೇವಿಯ ಇಂಗಿತವನ್ನೂ ಕುಶಲವನ್ನೂ ತಿಳಿಸಿ ಆಕೆಯು ಕೊಟ್ಟ ಚೂಡಾಮಣಿಯನ್ನು ಕೊಟ್ಟನು. ಆಗ ರಾಮಭದ್ರನು ತನ್ನ ಭಕ್ತನಾದ ಅಂಜನೇಯನನ್ನು ಆಲಂಗಿಸಿಕೊಂಡು ಆತನ ಸಾಹಸವನ್ನು ಕೊಂಡಾಡಿದನು. ಹಾಗೆಯೇ ಲಕ್ಷ್ಮಣ ಸುಗ್ರೀವ ಜಾಂಬುವಂತರೇ ಮೊದಲಾದವರೆಲ್ಲರ ಹರ್ಷಕ್ಕೂ ಪಾರವಿಲ್ಲದಾಯ್ತು.
ಮುಂದುವರೆಯುವುದು ......
ಕಾಮೆಂಟ್‌ಗಳು