ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅರುಣಾ ಸಾಯಿರಾಮ್


 ಅರುಣಾ ಸಾಯಿರಾಮ್


ವಿದುಷಿ ಅರುಣಾ ಸಾಯಿರಾಮ್ ಕರ್ನಾಟಕ ಸಂಗೀತದ ಮಹಾನ್ ಗಾಯನ ಕಲಾವಿದೆ.  ಅವರ ಲವಲವಿಕೆಯ ಸುಶ್ರಾವ್ಯ ಸಂಗೀತವನ್ನು ಕೇಳುವುದೇ ಒಂದು ಭವ್ಯ ಅನುಭವ.

ಅರುಣಾ ಸಾಯಿರಾಮ್ ಅವರು ಮುಂಬೈನಲ್ಲಿ 1952ರ  ಅಕ್ಟೋಬರ್ 30ರಂದು ಜನಿಸಿದರು. ಅವರು ಆಲತ್ತೂರ್ ಬ್ರದರ್ಸ್ ಮತ್ತು ತಂಜಾವೂರು ಶಂಕರ ಅಯ್ಯರ್ ಅವರ ವಿದ್ಯಾರ್ಥಿಯಾಗಿದ್ದ ತಾಯಿ ರಾಜಲಕ್ಷ್ಮಿ ಸೇತುರಾಮನ್ ಅವರಿಂದ ಗಾಯನ ತರಬೇತಿಯನ್ನು ಪಡೆದರು. ಆಕೆಯ ತಂದೆ ಸೇತುರಾಮನ್ ಅವರು ಸಂಗೀತ ರಸಿಕರಾಗಿದ್ದು, ಕುಟುಂಬದ ಮನೆಯಲ್ಲಿ ಸಂಗೀತಗಾರರು ಮತ್ತು ನೃತ್ಯಗಾರರಿಗೆ ಆತಿಥ್ಯ ವಹಿಸುತ್ತಿದ್ದರು. ಅಂತಹ ಒಂದು ಕೂಟದಲ್ಲಿ ಅರುಣಾ ಅವರು ಸಂಗೀತಾ ಕಲಾನಿಧಿ ಶ್ರೀಮತಿ ಟಿ. ಬೃಂದಾ ಅವರನ್ನು ಭೇಟಿಯಾದರು. ಬೃಂದಾ ಅವರು ಅರುಣಾ ಅವರಿಗೆ ಪ್ರಸಿದ್ಧ ವೀಣಾ ಧನಮ್ಮಾಳ್ ಶೈಲಿಯಲ್ಲಿ ತರಬೇತಿ ನೀಡಿದರು.

ಬಾಲ್ಯದಲ್ಲೇ, ಅರುಣಾ ತಮ್ಮ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸಿದರು. ಮುಂಬೈನಲ್ಲಿ ನಡೆದ ಸ್ಪರ್ಧೆಯಲ್ಲಿ ಎಂಟನೇ ವಯಸ್ಸಿನಲ್ಲಿಯೇ ಪ್ರಥಮ ಸ್ಥಾನದಲ್ಲಿ ಚಿನ್ನದ ಪದಕವನ್ನು ಗೆದ್ದರು. 14ನೇ ವಯಸ್ಸಿನಲ್ಲಿ ಮೊದಲ ಸಂಗೀತ ಕಚೇರಿಯನ್ನು ನೀಡಿದರು. 21 ನೇ ವಯಸ್ಸಿನಲ್ಲಿ, ಚೆನ್ನೈ ಸಂಗೀತ ಅಕಾಡೆಮಿಯಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ ಅತ್ಯುತ್ತಮ ಯುವ ಸಂಗೀತಗಾರ್ತಿ ಪ್ರಶಸ್ತಿ ಗೆದ್ದರು. 

ಮುಂದಿನ ವರ್ಷಗಳಲ್ಲಿ, ಅರುಣಾ ಅವರು ಕರ್ನಾಟಕ ಸಂಗೀತವನ್ನು ಶ್ರೇಷ್ಠ ರೀತಿಯಲ್ಲಿ ಅಭಿವ್ಯಕ್ತಿಸುತ್ತ ಬಂದಿದ್ದಾರೆ. ಅವರು ಚಲನಚಿತ್ರ, ಪಾಶ್ಚಿಮಾತ್ಯ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಳಿಂದಲೂ ಪ್ರಭಾವಿತರಾಗಿದ್ದಾರೆ. ಶಾಸ್ತ್ರೀಯ ಸಂಪ್ರದಾಯವನ್ನು ಉಳಿಸಿಕೊಂಡು ಕರ್ನಾಟಿಕ್ ರೆಪರ್ಟರಿಯ ಗಡಿಗಳನ್ನು ವಿಸ್ತರಿಸುವ ಮೂಲಕ ಸಂಗೀತ ಪ್ರಸ್ತುತಿಗೆ ಹೊಸ ವಿಧಾನವನ್ನು ತಂದಿದ್ದಾರೆ.

ಅರುಣಾ ಸಾಯಿರಾಮ್ ಅವರು ಟಿ. ಬೃಂದಾ ಅವರಲ್ಲದೆ ಮಹಾನ್ ವಿದ್ವಾಂಸರುಗಳಾದ ಎಸ್ ರಾಮಚಂದ್ರನ್, ಚಿತ್ತೂರ್  ಸುಬ್ರಹ್ಮಣ್ಯ ಪಿಳ್ಳೈ,  ಟೈಗರ್ ವರದಾಚಾರ್ ಅವರ ಶಿಷ್ಯರಾದ ಎ ಎಸ್ ಮಣಿ, ಕೆ ಎಸ್ ನಾರಾಯಣಸ್ವಾಮಿ ಅಂತಹ ಮಹಾನ್ ಸಂಗೀತಗಾರರ ಮಾರ್ಗದರ್ಶನದಲ್ಲಿ ತಮ್ಮ ಸಂಗೀತಕ್ಕೆ ವೈವಿಧ್ಯತೆ, ಪರಿಣತಿ ಮತ್ತು ಸೂಕ್ಷ್ಮತೆಗಳನ್ನು ತಂದುಕೊಂಡರು. ತಮ್ಮ ಧ್ವನಿಯ ಮೂಲಕ ಸೃಜನಶೀಲತೆ ಮತ್ತು ಜ್ಞಾನವನ್ನು ಸಂಪೂರ್ಣವಾಗಿ ಹೊರಹೊಮ್ಮಿಸುವಂತಾಗಲು ಜರ್ಮನ್ ಧ್ವನಿ ಮಾಂತ್ರಿಕ ಯುಜೀನ್ ರಾಬಿನ್ ಅವರನ್ನು ಭೇಟಿಯಾಗಿ ಹೊಸ ನೈಪುಣ್ಯತೆಗಳನ್ನು ಗಳಿಸಿಕೊಂಡರು.  ಮಹಾನ್  ಗಾಯಕ ಎಂ. ಬಾಲಮುರಳಿಕೃಷ್ಣ ಅವರಿಂದ ಸಲಹೆ ಮತ್ತು ಮಾರ್ಗದರ್ಶನ ಪಡೆದರು. ಇಂದಿಗೂ, ಅವರು ನ್ಯೂಯಾರ್ಕ್ ಮೂಲದ ಧ್ವನಿ ಶಿಕ್ಷಕ ಡೇವಿಡ್ ಜೋನ್ಸ್ ಅವರೊಂದಿಗೆ ನಿರಂತರ  ಸಂಪರ್ಕದಲ್ಲಿದ್ದಾರೆ.

ಅರುಣಾ ಸಾಯಿರಾಮ್ ಅವರು ಭಾರತೀಯ ರಾಷ್ಟ್ರಪತಿಗಳ ಅಧಿಕೃತ ನಿವಾಸದಲ್ಲಿ ಮತ್ತು ದೇಶಾದ್ಯಂತ ವಿವಿಧ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅರುಣಾ ಅವರು ದಕ್ಷಿಣ ಭಾರತೀಯ ಗಾಯನ ಸಂಗೀತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಿದ್ದಾರೆ. ಜರ್ಮನ್ ಸಂಗೀತ ಸಂರಕ್ಷಣಾಲಯದಲ್ಲಿ ಮತ್ತು ಅನೇಕ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲಿ ಸಂಗೀತದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಲಂಡನ್‌ನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಬಿಬಿಸಿ ಪ್ರಾಮ್ಸ್‌ನಲ್ಲಿ ಸಂಗೀತ ಪ್ರದರ್ಶನ ನೀಡಿದರು. ಇದಲ್ಲದೆ ನ್ಯೂಯಾರ್ಕ್‌ನ ಕಾರ್ನೆಗೀ ಹಾಲ್, ಪ್ಯಾರಿಸ್‌ನ ಥಿಯೇಟ್ರೆ ಡೆ ಲಾ ವಿಲ್ಲೆ ಮತ್ತು ಮೊರಾಕೊದ ಫೆಸ್ ಫೆಸ್ಟಿವಲ್ ಆಫ್ ವರ್ಲ್ಡ್ ಸೇಕ್ರೆಡ್ ಮ್ಯೂಸಿಕ್‌ನಲ್ಲಿ ಸೇರಿದಂತೆ ವಿಶ್ವದಾದ್ಯಂತ ಪ್ರತಿಷ್ಟಿತ ವೇದಿಕೆಗಳಲ್ಲಿ ಕಚೇರಿ ನೀಡಿದ್ದಾರೆ. ಅನೇಕ ಸಂಕಿರಣಗಳು, ಪ್ರಾತ್ಯಕ್ಷಿಗಳು ಮತ್ತು ಶಿಬಿರಗಳನ್ನು ನಿರ್ವಹಿಸಿದ್ದಾರೆ.  ಅರುಣಾ ಸಾಯಿರಾಮ್ ಅವರು ಜಗತ್ತಿನಾದ್ಯಂತ ಅನೇಕ ಕಲಾವಿದರೊಂದಿಗೆ ಸಹಕಾರ್ಯಕ್ರಮ ನೀಡಿದ್ದಾರೆ. ಗುರುವಾಗಿ ಅನೇಕ ಪ್ರಮುಖ ಯುವ ಪ್ರತಿಭೆಗಳಿಗೆ ತರಬೇತಿ ನೀಡಿದ್ದಾರೆ.

ಅರುಣಾ ಸಾಯಿರಾಮ್ ಮತ್ತು ಅವರ ಪತಿ ನಾದಯೋಗಂ ಟ್ರಸ್ಟ್ ಅನ್ನು ಸ್ಥಾಪಿಸಿದ್ದು, ಯುವ ಸಂಗೀತಗಾರರಿಗೆ ಪ್ರದರ್ಶನ ಅವಕಾಶಗಳನ್ನು ನೀಡುತ್ತಿದ್ದಾರೆ. ನಾದಯೋಗಂ ಟ್ರಸ್ಟ್ ಅಡಿಯಲ್ಲಿ, ವಿದ್ಯಾರ್ಥಿವೇತನ ಯೋಜನೆಯನ್ನು ಸ್ಥಾಪಿಸಿದ್ದಾರೆ.  ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಕಲಿಯಲು ನೆರವು ನೀಡಿದ್ದಾರೆ. 

ಅರುಣಾ ಸಾಯಿರಾಮ್ ಅವರಿಗೆ ಪದ್ಮಶ್ರೀ ಪ್ರಶಸ್ತಿ, ಅಮೆರಿಕದ ಕಾಂಗ್ರೆಸ್ ಪ್ರೊಕ್ಲಾಮೇಶನ್ ಆಫ್ ಎಕ್ಸಲೆನ್ಸ್  ಗೌರವ, ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಿಂದ ಸಂಗೀತ ಕಲಾನಿಧಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ದಕ್ಷಿಣಾಮ್ನಾಯ ಶೃಂಗೇರಿ ಶಾರದ ಪೀಠದಿಂದ ಭಾರತಿ ತ್ಯಾಗರಾಜ ಸಮ್ಮಾನ್, ತಮಿಳು ನಾಡು ಸರ್ಕಾರದ ಕಲೈಮಾಮಣಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

ಅರುಣಾ ಸಾಯಿರಾಂ ಅವರು ಪ್ರತಿಷ್ಠಿತ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಉಪಾಧ್ಯಕ್ಷರಾಗಿ ನೇಮಿತಗೊಂಡು ಸಹಾ ಸೇವೆ ಸಲ್ಲಿಸಿದ್ದಾರೆ.

Thank you Janaki Murali for information support 

On the birth day of great musician Aruna Sairam

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ