ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋವಿಂದ ಹೆಗಡೆ


 ಗೋವಿಂದ ಹೆಗಡೆ 


ವೃತ್ತಿಯಲ್ಲಿ ವೈದ್ಯರಾದ ಡಾ. ಗೋವಿಂದ ಹೆಗಡೆ ಅವರು ಪ್ರವೃತ್ತಿಯಲ್ಲಿ ಬರಹಗಾರರಾಗಿದ್ದಾರೆ.

ಅಕ್ಟೋಬರ್ 30 ಗೋವಿಂದ ಹೆಗಡೆ ಅವರ ಜನ್ಮದಿನ. ಮೂಲತಃ ಯಲ್ಲಾಪುರದವರಾದ ಇವರು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಪದವಿ ಮತ್ತು ಕರ್ನಾಟಕ ಹುಬ್ಬಳ್ಳಿಯ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಇಂದ ಉನ್ನತ ವೈದ್ಯ ಪದವಿ ಗಳಿಸಿದರು.  ಹುಬ್ಬಳ್ಳಿಯಲ್ಲಿ ತಮ್ಮ ವೃತ್ತಿ ಮತ್ತು ಕೌಟುಂಬಿಕ ಬದುಕನ್ನು ನಡೆಸುತ್ತಿರುವ ಇವರು ತಮ್ಮ ಸಾಹಿತ್ಯಾಸಕ್ತಿಯನ್ನು ತಮ್ಮ ಬರಹಗಳ ಮೂಲಕ ನಿರಂತರವಾಗಿ ಅಭಿವ್ಯಕ್ತಿಸುತ್ತ ಬಂದಿದ್ದಾರೆ.

ಗೋವಿಂದ ಹೆಗಡೆ ಅವರು ಪ್ರಧಾನವಾಗಿ ಕವನ, ಹನಿಗವನಗಳು, ಶಿಶುಗೀತೆಗಳು, ಭಾವಗೀತೆಗಳು, ಗಜಲ್, ಹಾಯ್ಕು, ಫರ್ದ್, ರುಬಾಯಿ ಮೊದಲಾದ ಕಾವ್ಯಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.  ಕಥೆ, ಪ್ರಬಂಧ, ವಿಮರ್ಶೆ ಇತ್ಯಾದಿಗಳಲ್ಲೂ ಅವರ ಬರಹಗಳಿವೆ.  ಕನ್ನಡದ ಎಲ್ಲ ಪ್ರತಿಷ್ಠಿತ ನಿಯತಕಾಲಿಕಗಳು,  ಅಂತರಜಾಲ ತಾಣಗಳು ಮತ್ತು ಸಮೂಹ ತಾಣಗಳಲ್ಲಿ ಅವರ ವೈವಿಧ್ಯಮಯ ಬರಹಗಳು ನಿರಂತರವಾಗಿ ಪ್ರಕಾಶಿಸುತ್ತಿವೆ.

ಗೋವಿಂದ ಹೆಗಡೆ ಅವರು ಮೈಸೂರು ದಸರಾ ಕವಿಗೋಷ್ಠಿ, ಧಾರವಾಡ ಉತ್ಸವ, ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ರಾಜ್ಯ ಸಮ್ಮೇಳನ ಕವಿಗೋಷ್ಠಿಗಳೂ ಸೇರಿದಂತೆ ಎಲ್ಲ ಪ್ರತಿಷ್ಠಿತ ವೇದಿಕೆಗಳಲ್ಲೂ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದ್ದಾರೆ. ಆಕಾಶವಾಣಿಯಲ್ಲೂ ಇವರ ಕಾವ್ಯಧ್ವನಿ ಝೇಂಕರಿಸಿದೆ. ಇವರು ಪ್ರಾಚಾರ್ಯ ಎಚ್ಚೆಸ್ಕೆ ಅವರ ಜನ್ಮಶತಮಾನೋತ್ಸವದಲ್ಲಿ ಏರ್ಪಡಿಸಲಾಗಿದ್ದ ‘ಎಚ್ಚೆಸ್ಕೆ ಬೆಳಕು’ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. 

ಡಾ. ಗೋವಿಂದ ಹೆಗಡೆ ಅವರ 'ಕನಸು ಕೋಳಿಯ ಕತ್ತು' ಕವನ ಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರದ ‘ಯುವ ಬರಹಗಾರರಿಗೆ ಪ್ರೋತ್ಸಾಹ' ಯೋಜನೆಯಡಿಯಲ್ಲಿ ಪುರಸ್ಕೃತಗೊಂಡಿದೆ. ‘ಸುವರ್ಣ ಕಾವ್ಯ', ‘ಮತ್ತೆ ಬಂತು ಶ್ರಾವಣಾ', ‘ಪಾರಿಜಾತ ಪರಿ', ‘ಕವಿತೆಗೆ ಕಾಲುಗಳಿಲ್ಲ' ಮೊದಲಾದ ಕವನ ಸಂಕಲನಗಳಲ್ಲಿ ಇವರ ಕವನಗಳು ಸೇರ್ಪಡೆಯಾಗಿವೆ. 'ಪೇಟೆ ಬೀದಿಯ ತೇರು' ಎಂಬ ಕವನ ಸಂಕಲನ ವ್ಯಾಪಕವಾಗಿ ಮೆಚ್ಚುಗೆ ಗಳಿಸಿಕೊಂಡಿದೆ.

ವೈದ್ಯರೂ, ಕವಿಗಳೂ, ಸಾಹಿತ್ಯ ಪರಿಚಾರಕರೂ  ಆದ ಆತ್ಮೀಯರಾದ ಡಾ. ಗೋವಿಂದ ಹೆಗಡೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ