ಎಂ.ಎಸ್. ಆಶಾದೇವಿ
ಎಂ. ಎಸ್. ಆಶಾದೇವಿ
ಡಾ. ಎಂ. ಎಸ್. ಆಶಾದೇವಿ ಅವರು ಬರಹಗಾರ್ತಿಯಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ.
ಫೆಬ್ರುವರಿ 26, ಆಶಾದೇವಿ ಅವರ ಜನ್ಮದಿನ. ಅವರು ಜನಿಸಿದ್ದು ದಾವಣಗೆರೆಯ ನೇರಳಿಗೆ ಎಂಬಲ್ಲಿ. ತಂದೆ ಸೋಮಶೇಖರ್. ತಾಯಿ ಅನಸೂಯಾ. ಇವರ ಕುಟುಂಬದವರು ಚನ್ನಗಿರಿ ಸಮೀಪದ ಹಿರೇಕೋಗಲೂರಿನವರು. ಆಶಾದೇವಿ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಪದವಿ ಪಡೆದರು. ಹಾಗೂ ಪ್ರಖ್ಯಾತ ವಿಮರ್ಶಕರಾದ ಪ್ರೊ. ಡಿ.ಆರ್. ನಾಗರಾಜ್ ಅವರ ಮಾರ್ಗದರ್ಶನದಲ್ಲಿ 'ನವೋದಯ ವಿಮರ್ಶೆ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ' ಎಂಬ ಮಹಾಪ್ರಬಂಧಕ್ಕಾಗಿ ಪಿಎಚ್.ಡಿ ಗಳಿಸಿದರು.
ಆಶಾದೇವಿ ಅವರು ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ.
ಆಶಾದೇವಿ ಅವರ ಕೃತಿಗಳಲ್ಲಿ
'ಸ್ತ್ರೀಮತವನುತ್ತರಿಸಲಾಗದೇ?' ಸಾಹಿತ್ಯ ಸಂಸ್ಕೃತಿ ಕುರಿತ ಲೇಖನಗಳನ್ನೊಳಗೊಂಡಿದೆ. ‘ಉರಿಚಮ್ಮಾಳಿಗೆ' ಎಂಬುದು ಡಿ. ಆರ್.ನಾಗರಾಜ ಅವರ 'ದಿ ಪ್ಲೇಮಿಂಗ್ ಫೀಟ್' ಕೃತಿಯ ಅನುವಾದವಾಗಿದೆ. ‘ಭಾರತದ ಬಂಗಾರ ಪಿ.ಟಿ.ಉಷಾ’ ಇವರ ಮತ್ತೊಂದು ಕೃತಿ. ‘ಹುದುಗಲಾರದ ದುಃಖ' ವಸಂತ ಕಣ್ಣಬಿರನ್ ಅವರ ಮೂಲದ ಅನುವಾದಿತ ಕೃತಿ. 'ನಡುವೆ ಸುಳಿವ ಆತ್ಮ' ಸ್ತ್ರೀ ಸಂಕಥನದ ಚಹರೆಗಳ ಮೇಲೆ ಬೆಳಕು ಚೆಲ್ಲುವ ಕೃತಿ. 'ನಾರೀಕೇಳಾ' ಪ್ರಜಾವಾಣಿಯ ಭಾನುವಾರದ ಪುರವಣಿ 'ಮುಕ್ತಛಂದ'ದಲ್ಲಿ ಮೂಡಿಬಂದ ಅಂಕಣಗಳ ಸಂಕಲನ. ವಚನ ಪ್ರವೇಶ, ಡಿ.ಆರ್. ನಾಗರಾಜ್ ಬೆಲೆಬಾಳುವ ಬರಹಗಳು, ಗೌರಿ ಲಂಕೇಶ್ ಕಂಡ ಹಾಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಸಂಪುಟದಲ್ಲಿ 'ವಿಮರ್ಶೆ', ನಾಡೋಜ ಕೆ. ಜಿ. ಎನ್. ಕುರಿತ 'ನನ್ನಿಯ ನೇಕಾರ' ಮುಂತಾದವು ಇವರ ಸಂಪಾದನೆಗಳಲ್ಲಿ ಸೇರಿವೆ.
ಆಶಾದೇವಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡುವ ಸಾಹಿತ್ಯಶ್ರೀ ಪ್ರಶಸ್ತಿ, ಜಿಎಸ್ಸೆಸ್ ಪ್ರಶಸ್ತಿ, ವಿ.ಎಂ.ಇನಾಂದಾರ್ ವಿಮರ್ಶಾ ಪ್ರಶಸ್ತಿ, ದೇವದುರ್ಗದ ಖೇಣೆದ್ ಮುರಿಗೆಪ್ಪ ಸ್ಮಾರಕ ಪ್ರಶಸ್ತಿ, ಎಂ. ಕೆ. ಇಂದಿರಾ ಪ್ರಶಸ್ತಿ, ಎಚ್. ಎಸ್. ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
On the birthday of writer Dr. M.S. Ashadevi
ಕಾಮೆಂಟ್‌ಗಳು