ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದೊರೈ ಭಗವಾನ್


 ದೊರೈ ಭಗವಾನ್ 


ಕನ್ನಡ ಚಿತ್ರರಂಗದಲ್ಲಿ ದೊರೈ ಭಗವಾನ್ ಜೋಡಿ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿದೆ.   ಚಿತ್ರ ಸಂಗೀತದಲ್ಲಿ ಜೋಡಿಗಳು ಕಾರ್ಯ ನಿರ್ವಹಿಸಿರುವ  ನಿದರ್ಶನಗಳು ಸಾಮಾನ್ಯವಾದರೂ, ನಿರ್ದೇಶನದಲ್ಲಿ ಜೋಡಿಗಳು ಕಾರ್ಯ ನಿರ್ವಹಿಸುವುದು ಬಹಳಷ್ಟು ಮಟ್ಟಿಗೆ ಅಪರೂಪವೇ ಸರಿ.  ಗೆಳೆಯರಾಗಿ ಒಂದಾದ ಬಿ ದೊರೈ ರಾಜ್ ಮತ್ತು ಎಸ್ ಕೆ ಭಗವಾನ್ ಅವರು,  ದೊರೈ ಭಗವಾನ್ ಜೋಡಿಯಾಗಿ ಕಾರ್ಯ ನಿರ್ವಹಿಸಿದ ರೀತಿ ಚಿತ್ರರಂಗದ ಇತಿಹಾಸದಲ್ಲೇ ಅಪೂರ್ವವಾಗಿ  ನಿಲ್ಲುವಂತದ್ದು.    ಇಂದು ಭಗವಾನ್ ಅವರ ಸಂಸ್ಮರಣೆ ದಿನ.

ದೊರೈ ಭಗವಾನ್ ಪ್ರಸಿದ್ಧ ಜೋಡಿಯ ಎಸ್. ಕೆ. ಭಗವಾನ್ ಅವರು ಹುಟ್ಟಿದ ದಿನ 1933ರ ಜುಲೈ 3.  ದೊರೈ ಮತ್ತು ಭಗವಾನ್ ಇಬ್ಬರೂ ಮೈಸೂರಿನವರೇ.  ಮದರಾಸಿಗೆ ಹೋಗಿ ಆಗಿನ್ನೂ ಚಿತ್ರರಂಗದಲ್ಲಿ ಅವಕಾಶ ಅರಸುತ್ತಿದ್ದ ಈ ಹುಡುಗರು ಒಮ್ಮೆ ರಸ್ತೆಯಲ್ಲಿ ಎದುರು ಬದುರು ಭೇಟಿಯಾದಾರಂತೆ.  ಇಬ್ಬರೂ ಸಂಪಾದನೆಯಿಲ್ಲದೆ ಕಷ್ಟದಲ್ಲಿದ್ದವರೇ.  ಅಂದು ಭಗವಾನ್ ಅವರಿಗೆ ಊಟಕ್ಕೆ ಕೂಡಾ ಏನೂ ಸಿಕ್ಕಿರಲಿಲ್ಲ.  ಒಂದು ರೂಪಾಯಿ ಸಾಲ ಕೊಡು ಎಂದು ದೊರೈ ಅವರನ್ನು ಕೇಳಿದರಂತೆ.  ಇದನ್ನು ಕೇಳಿದ ದೊರೈ ತಾನು ಯಾರಿಂದಲೋ ಸಾಲ ಪಡೆದುಕೊಂಡಿದ್ದ 50 ಪೈಸೆಯನ್ನು ಭಗವಾನ್ ಕೈಯಲ್ಲಿಟ್ಟು ನನ್ನ ಬಳಿ ಇರುವುದು ಇಷ್ಟೇ ತೊಗೋ ಎಂದು ಹೇಳಿ  ತಾವು ಇತ್ತ ಕಡೆ ಬರಿ ಜೇಬಿನಲ್ಲಿ ಹೊರಟರಂತೆ.     ಈ ಕಥೆಯನ್ನು ಬಹಳ ಹಿಂದೆ ಓದಿದ್ದೆ.  ಈ ಸ್ನೇಹ 50 ವರ್ಷಗಳನ್ನೂ ಮೀರಿ ಮುಂದುವರೆದಿತ್ತು.   ಅದಕ್ಕೆ ತಡೆ ಬಂದದ್ದು ವಿಧಿರಾಯ ದೊರೈ ಅವರನ್ನು ಈ ಲೋಕದಿಂದ ಹೊರಗೆ ಕರೆದುಕೊಂಡು ಹೋದಾಗಲೇ. ಆದರೆ ಆ ಸುಂದರ ಸ್ನೇಹದ ಮಿಂಚು ಹಿರಿಯರಾದ ಭಗವಾನರ ಜೊತೆಯಲ್ಲಿ ಅವರ ಕಡೆ ಗಳಿಗೆಯವರೆಗೆ ಮಧುರ ಭಾವದಲ್ಲಿ ಸಮ್ಮಿಳಿತಗೊಂಡು ಮುನ್ನಡೆದಿತ್ತು. 

ಸಂಗೀತ, ಚಿತ್ರ ಕಲೆ, ಕ್ರೀಡೆಗಳಲ್ಲಿ ಆಸಕ್ತರಾಗಿದ್ದ ದೊರೈರಾಜ್ ಅವರು  ಚಲನಚಿತ್ರಗಳ ಬಗ್ಗೆ ಬಹು ಬೇಗನೆ ಆಸಕ್ತಿ ತಾಳಿದರು, ಮೈಸೂರಿನಲ್ಲಿ ನವಜ್ಯೋತಿ ಸ್ಟುಡಿಯೋ ಆರಂಭವಾದಾಗ ಅಲ್ಲಿ ಸಹಾಯಕರಾಗಿ ಸೇರಿ, ಮುಂದೆ ಮುಂಬೈನಲ್ಲಿ ಎನ್.ಜಿ.ರಾವ್ ಬಳಿ ಕ್ಯಾಮರಾ ಸಹಾಯಕರಾದರು. ಅನೇಕ ಮಲಯಾಳಿ ಚಿತ್ರಗಳಿಗೆ ಸ್ವತಂತ್ರವಾಗಿ ಛಾಯಾಗ್ರಹಣ ನೀಡಿದ ದೊರೈರಾಜ್ ಅವರು ರಾಜ್ ಅಭಿನಯದ "ಸೋದರಿ" ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಛಾಯಾಗ್ರಾಹಕರಾಗಿ ಬಂದರು. ಅನಂತರ ಅನೇಕ ಚಿತ್ರಗಳಲ್ಲಿ ಛಾಯಾಗ್ರಾಹಕರಾಗಿ ದುಡಿದ ಅವರಿಗೆ ‘ಜಗಜ್ಯೋತಿ ಬಸವೇಶ್ವರ' ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಎಸ್.ಕೆ.ಭಗವಾನ್ ಅವರನ್ನು ಭೇಟಿಯಾದಾಗ ಕನ್ನಡಕ್ಕೊಂದು ಅಪೂರ್ವ ಜೋಡಿ ದೊರಕಿತು.

ಎಸ್.ಕೆ. ಭಗವಾನ್ ಅವರಿಗೆ ಶಾಲಾ ದಿನಗಳಲ್ಲೇ ರಂಗಭೂಮಿಯತ್ತ ಆಸಕ್ತಿ ಮೂಡಿತು.  ಅಂದಿನ ನಾಟಕಗಳಲ್ಲಿ ಅವರು ಹೆಣ್ಣು ಪಾತ್ರ ನಿರ್ವಹಿಸುತ್ತಿದ್ದರು.  ಹೀಗೆ ರಂಗಭೂಮಿಯಲ್ಲಿದ್ದ ಅವರ  ಆಸಕ್ತಿ ಕ್ರಮೇಣ ಚಿತ್ರರಂಗದತ್ತ ಹೊರಳಿತು. ಅವರ ಓದಿನ ದಿನಗಳಲ್ಲಿ ಪ್ರೊಫೆಸರ್ ಜಿ ವೆಂಕಟಸುಬ್ಬಯ್ಯನವರು ಅವರ ಮೆಚ್ಚಿನ ಗುರುಗಳಾಗಿದ್ದರು.  ಹೀಗಾಗಿ ಅವರು ಸಾಹಿತ್ಯದ ಅಧ್ಯಯನದ ಕಡೆ ಹೆಚ್ಚು ಹೆಚ್ಚು ಗಮನ ಹರಿಸಿದರು.  ಸಿನಿಮಾ ರೆಪ್ರೆಸೆಂಟೆಟಿವ್ ಆಗಿ ರಾಜ್ಯವನ್ನು ಸುತ್ತಿದ ಎಸ್.ಕೆ. ಭಗವಾನ್ ಅವರು  ಭಾಗ್ಯೋದಯ ಚಿತ್ರದಲ್ಲಿ (1956) ಕಣಗಾಲ್ ಪ್ರಭಾಕರ್ ಶಾಸ್ತ್ರಿಗಳಿಗೆ ಸಹಾಯಕರಾಗಿದ್ದರು.  ಮುಂದೆ ಅವರು  ಸಂಧ್ಯಾರಾಗ ಹಾಗೂ ರಾಜದುರ್ಗದ ರಹಸ್ಯ ಚಿತ್ರಗಳನ್ನು ಎ.ಸಿ.ನರಸಿಂಹಮೂರ್ತಿ ಅವರೊಂದಿಗೆ ನಿರ್ದೇಶಿಸಿದರು. ಟಿ.ವಿ.ಸಿಂಗ್ ಠಾಕೂರ್ ಅವರಲ್ಲಿ ಪಳಗಿದ ಭಗವಾನ್ ಮುಂದೆ  ದೊರೈ ಅವರೊಂದಿಗೆ ನಿರ್ದೇಶಿಸಿದ ಮೊದಲ ಚಿತ್ರ ‘ಜೇಡರ ಬಲೆ’.  

ಮೊದಲ ಚಿತ್ರವೇ ಈ ಜೋಡಿಗೆ ಹೆಸರು ತಂದುಕೊಟ್ಟಿತು.   ಸಿ ಐ ಡಿ 999 ಇನ್ ಗೋವಾ, ಸಿ ಐ ಡಿ 999 ಇನ್ ಜಾಕ್ ಪಾಟ್ ಮುಂತಾದ ಚಿತ್ರಗಳೂ ಯಶಸ್ಸು ಕಂಡವು.   ಆದರೆ ಈ ಜೋಡಿ ಮುಂದೆ ಮೋಡಿ ಮಾಡಿದ್ದು ಕಾದಂಬರಿ ಆಧಾರಿತ ಚಿತ್ರಗಳಲ್ಲಿ.  ಕಸ್ತೂರಿ ನಿವಾಸ, ಪ್ರತಿಧ್ವನಿ, ಎರಡು ಕನಸು, ಬಯಲುದಾರಿ, ಮುಗಿಯದ ಕಥೆ,  ಆಪರೇಷನ್ ಡೈಮಂಡ್ ರಾಕೆಟ್, ಗಿರಿಕನ್ಯೆ, ಚಂದನದ ಗೊಂಬೆ, ವಸಂತ ಗೀತ, ಗಾಳಿ ಮಾತು, ಸಮಯದ ಗೊಂಬೆ, ಮುನಿಯನ ಮಾದರಿ, ಹೊಸ ಬೆಳಕು, ಬೆಂಕಿಯ ಬಲೆ, ನಾನೊಬ್ಬ ಕಳ್ಳ, ಯಾರಿವನು,  ಬಿಡುಗಡೆಯ ಬೇಡಿ, ಸೇಡಿನ ಹಕ್ಕಿ, ಹೆಣ್ಣಿನ ಕೂಗು, ಭಾಗ್ಯವಂತ,  ಗಗನ, ಮಾಂಗಲ್ಯ ಬಂಧನ, ನೀನು ನಕ್ಕರೆ ಹಾಲು ಸಕ್ಕರೆ, ಜೀವನ ಚೈತ್ರ, ಒಡಹುಟ್ಟಿದವರು  ಮುಂತಾದ 25ಕ್ಕೂ ಹೆಚ್ಚು  ಚಿತ್ರಗಳನ್ನು ಈ ಜೋಡಿ ಜೊತೆಯಾಗಿ ನಿರ್ದೇಶಿಸಿತು.  ಇವುಗಳಲ್ಲಿ ಅಲ್ಲಲ್ಲಿ ಕೆಲವೊಂದು ಚಿತ್ರಗಳನ್ನು ಬಿಟ್ಟು ಉಳಿದಂತೆ ಎಲ್ಲವೂ ಕಾದಂಬರಿ ಆಧಾರಿತ ಚಿತ್ರಗಳು ಎಂಬುದು ಮಹತ್ವಪೂರ್ಣ ವಿಷಯ.  

ದೊರೈ ಭಗವಾನ್ ಜೋಡಿಯ ಚಿತ್ರಗಳ ಮತ್ತೊಂದು ವೈಶಿಷ್ಟ್ಯತೆ ಎಂದರೆ ಅವರ ಚಿತ್ರಗಳಲ್ಲಿ ಇರುತ್ತಿದ್ದ ಸುಶ್ರಾವ್ಯ ಗೀತೆಗಳು.  ಭಗವಾನ್ ಅವರಿಗೆ ಉತ್ತಮ ಸಂಗೀತ ಅಭಿರುಚಿ ಇದ್ದರೆ ದೊರೈ ಅವರಿಗೆ ಸ್ವಯಂ ಸಂಗೀತದಲ್ಲಿ ಉತ್ತಮ ಜ್ಞಾನ ಪರಿಣತಿಗಳೂ ಇತ್ತು. ಅವರು ಸಿತಾರ್ ವಾದ್ಯವನ್ನೂ ಸುಶ್ರಾವ್ಯವಾಗಿ ನುಡಿಸುತ್ತಿದ್ದರಂತೆ.  ಹೀಗೆ ಉತ್ತಮ ಚಿತ್ರಸಾಹಿತ್ಯ, ತಾಂತ್ರಿಕ ಗುಣಮಟ್ಟ, ಸುಮಧುರ ಸಂಗೀತ ಜೊತೆಗೆ ಇವೆಲ್ಲವನ್ನೂ ಹದವಾಗಿ ಬೆರೆಸಬಲ್ಲ ಸಮಾನ ಮನಸ್ಕತೆಗಳು ಈ ಜೋಡಿಯ ಚಿತ್ರಗಳನ್ನು ನೆನಪಿನಲ್ಲುಳಿಯುವಂತೆ ಮಾಡಿದವು.  “ಸಮಾನ ಆಸಕ್ತಿ ಹಾಗೂ ಅಭಿರುಚಿಗಳಿಂದ ನನ್ನ ಹಾಗೂ ದೊರೈ ನಡುವಿನ ಸಂಬಂಧ ಗಾಢವಾಯಿತು. ಎಂದೆಂದಿಗೂ ನನ್ನನ್ನು ಇತರರು ದೊರೈ-ಭಗವಾನ್ ಎಂದೇ ಕರೆಯಲಿ”
ಎಂದೇ ನನ್ನ ಆಸೆ  ಎಂದು ತಮ್ಮ ಗಾಢವಾದ ಗೆಳೆತನವನ್ನು ಹಿರಿಯರಾದ ಭಗವಾನ್ ಸ್ಮರಿಸುತ್ತಿದ್ದರು. 

ದೊರೈ ಭಗವಾನ್ ಜೋಡಿಗೆ  ಎಸ್, ಆರ್. ಪುಟ್ಟಣ್ಣ ಕಣಗಾಲರ ಹೆಸರಿನಲ್ಲಿರುವ ಶ್ರೇಷ್ಠ ನಿರ್ದೇಶಕರಿಗೆ ಸಲ್ಲುವ ಪ್ರಶಸ್ತಿ, ರಾಜ್ ಕುಮಾರ್ ಹೆಸರಿನಲ್ಲಿರುವ ಸದ್ಭಾವನಾ ಪ್ರಶಸ್ತಿ ಮುಂತಾದ ಗೌರವಗಳಲ್ಲದೆ ಹಲವಾರು ಚಿತ್ರಗಳಿಗೆ ಸಲ್ಲುವ ಪ್ರಶಸ್ತಿಗಳು, ಸಂಘ ಸಂಸ್ಥೆಗಳ ಗೌರವಗಳು ಸಂದಿದ್ದವು.

ತಮ್ಮ ಗೆಳೆಯ ದೊರೈ ಅವರು ಈ ಲೋಕದಿಂದ ದೂರವಾದ ಮೇಲೆ ಭಗವಾನ್ ಅವರು ಚಿತ್ರರಂಗದಿಂದ ಹೊರಗುಳಿದಿದ್ದರೂ ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಸಂಸ್ಥೆಯ ಪ್ರಿನ್ಸಿಪಾಲರಾಗಿ ಹೊಸ ಪ್ರತಿಭೆಗಳಿಗೆ ಮಾರ್ಗದರ್ಶಿಯಾಗಿ ತಮ್ಮ ಕೊಡುಗೆ ಮುಂದುವರೆಸಿದ್ದರು. 

ನನ್ನ ಆತ್ಮೀಯ ಗೆಳೆಯ ಶ್ರೀವತ್ಸ Srivatsa Satyanarayan ಭಗವಾನ್ ಅವರ ಅಣ್ಣನ ಮಗ. ಅವನೊಂದಿಗೆ ಭಗವಾನ್ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದೆ. ಅಂದಿನ ದಿನದಲ್ಲಿ ಕೆಲವು ಕಾಲ ಭಗವಾನ್ ಅವರು ಕಮರ್ಷಿಯಲ್ ಸ್ಟ್ರೀಟ್ ಅಲ್ಲಿ ಒಂದು ಸುಂದರ ದರ್ಶಿನಿ ಮಾದರಿಯ ಹೋಟಲ್ ನಡೆಸುತ್ತಿದ್ದರು. ಅವರೇ ಕೌಂಟರಲ್ಲಿ ಕೂತು ಕೆಲಸ ನಿರ್ವಹಿಸುತ್ತಿದ್ದರು. ಅವರಿಗೆ ಬದುಕು ಸ್ನೇಹಗಳೆಂಬುದು ಸಹಜ ಒಲವಿನ ಅಕ್ಕರೆ.  ರಾಜ್‍ಕುಮಾರ್ ಅವರಿಗೆ ಅವರು ಸದಾ ನೆರಳಾಗಿದ್ದರು. 

ಭಗವಾನ್ ಅವರು 2023ರ ಫೆಬ್ರುವರಿ 20ರಂದು ನಿಧನರಾಗುವ ಮೂಲಕ ದೊರೈ ಭಗವಾನ್ ಜೋಡಿ ಇತಿಹಾಸದ ಪುಟಗಳಿಗೆ ಸೇರಿಹೋಯಿತು.

our great director Bhagavan Sir of (Dorai Bhagavan fame)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ