ಚಕ್ರವರ್ತಿ ಮಧುಸೂದನ
ಚಕ್ರವರ್ತಿ ಮಧುಸೂದನ
ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಕನ್ನಡಿಗರಾದ ಡಾ. ಚಕ್ರವರ್ತಿ ಮಧುಸೂದನ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಗಣನೀಯ ಕೊಡುಗೆಗಳಿಗೆ ಹೆಸರಾಗಿರುವುದಲ್ಲದೆ, ಭಾರತೀಯ ಸಂಸ್ಕೃತಿಯ ಕುರಿತಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿಯೂ ಅಪಾರ ಕೆಲಸ ಮಾಡುತ್ತಾ ಬಂದಿದ್ದಾರೆ
ಚಕ್ರವರ್ತಿ ವರದಾಚಾರ್ ಮಧುಸೂದನ ಅವರು 1942ರ ವರ್ಷದಲ್ಲಿ ಕೋಲಾರದಲ್ಲಿ ಜನಿಸಿದರು. ಅವರ ಶಾಲಾ ಶಿಕ್ಷಣವೂ ಕೋಲಾರದಲ್ಲಿ ನಡೆಯಿತು. ವಕೀಲರಾಗಿದ್ದ ಅವರ ತಂದೆ 1958 ರಲ್ಲಿ ನಿಧನರಾದರು. ಅವರ ತಾಯಿ ಕಳೆದ ಶತಮಾನದ ಮೊದಲಾರ್ಧದಲ್ಲಿ ಮಹಾನ್ ವಕೀಲರೂ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಸಿದ್ಧರೂ ಆಗಿದ್ದ ಶ್ರೀ ತಿರುಮಲೈ ಶ್ರೀನಿವಾಸಾಚಾರ್ ಅವರ ಹಿರಿಯ ಮಗಳು. ಚಕ್ರವರ್ತಿ ಮಧುಸೂಧನ ಅವರು ಏಳು ಮಕ್ಕಳ ಕುಟುಂಬದಲ್ಲಿ ನಾಲ್ಕನೆಯವರು. ಅವರ ಹಿರಿಯ ಸಹೋದರ, ದಿವಂಗತ ಡಾ. ದೊರೆಸ್ವಾಮಿ, ಅಮೆರಿಕದ ಅಲಬಾಮಾದ ಟಸ್ಕೆಗೀ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿದ್ದರು.
ಅವರ ಎರಡನೇ ಹಿರಿಯ ಸಹೋದರ ಸಿ.ವಿ. ರಾಮನ್ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿನ ಗಣಿತಶಾಸ್ತ್ರದ ನಿವೃತ್ತ ಪ್ರಾಧ್ಯಾಪಕರು. ಅವರ ಮೂರನೇ ಹಿರಿಯ ಸಹೋದರ ಡಾ ಸಿ.ವಿ. ವೇಣುಗೋಪಾಲ್, ಕರ್ನಾಟಕ ವಿಶ್ವವಿದ್ಯಾನಿಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮಾನವಿಕ ವಿಭಾಗದ ಡೀನ್ ಆಗಿದ್ದರು. ಈ ಮೂವರು ಹಿರಿಯ ಅಣ್ಣಂದಿರಿಂದ ಚಕ್ರವರ್ತಿ ಮಧುಸೂದನ ಅವರು ಕಲಿತದ್ದು ಅಪಾರ. ಅಮೆರಿಕದಲ್ಲಿ ವೈದ್ಯ ವೃತ್ತಿಯಲ್ಲಿರುವ ಕಿರಿಯ ಸಹೋದರ ಸಹ ವೃತ್ತಿಜೀವನದಲ್ಲಿ ಸಾಧಕರು. ಈಗ ದಿವಂಗತರಾಗಿರುವ ಇಬ್ಬರು ಕಿರಿಯ ಸಹೋದರಿಯರು ಮತ್ತು ಪತ್ನಿ ಇವರು ಮೂವರ ಒಲವು ಮತ್ತು ಬೆಂಬಲವನ್ನೂ ಸಹಾ ಮಧುಸೂದನ ಅವರು ಸದಾ ಸ್ಮರಿಸುತ್ತಾರೆ.
ಚಕ್ರವರ್ತಿ ಮಧುಸೂದನ ಅವರು ಬೆಂಗಳೂರು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (UCE) ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದರು (1958-1963). ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಿನ ಇಂಟರ್ನಲ್ ಕಂಬಷ್ಚನ್ ಇಂಜಿನಿಯರಿಂಗ್ ವಿಭಾಗದಲ್ಲಿ ಮಾಸ್ಟರ್ ಆಫ್ ಇಂಜಿನಿಯರಿಂಗ್ (1963-1965) ಪದವಿ ಗಳಿಸಿದರಲ್ಲದೆ ಎರಡು ವರ್ಷ (1965-1967) ಅಲ್ಲಿ ಸಿಬ್ಬಂದಿಯಾಗಿಯೂ ಕೆಲಸ ಮಾಡಿದರು.
ಚಕ್ರವರ್ತಿ ಮಧುಸೂದನ ಅವರು 1967 ರಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿದರು. 1972ರಲ್ಲಿ ಮೊನಾಶ್ ವಿಶ್ವವಿದ್ಯಾನಿಲಯದಿಂದ ಮೆಕಾನಿಕಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಡಾಕ್ಟರೇಟ್ ಗಳಿಸಿದರು. 1973 ರಿಂದ 2007 ರವರೆಗೆ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ‘ಹೀಟ್ ಟ್ರಾನ್ಸ್ಫರ್' ಅವರ ಸಂಶೋಧನಾ ಕ್ಷೇತ್ರ. ಅವರು ಅಮೇರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಇಂಜಿನಿಯರ್ಸ್ ಹಾಗೂ ಇಂಡಿಯನ್ ಸೊಸೈಟಿ ಫಾರ್ ಹೀಟ್ ಅಂಡ್ ಮಾಸ್ ಟ್ರಾನ್ಸ್ಫರ್ ಸಂಸ್ಥೆಗಳ ಅಜೀವ ಸದಸ್ಯತ್ವದ ಗೌರವ ಹೊಂದಿದ್ದಾರೆ.
ಚಕ್ರವರ್ತಿ ಮಧುಸೂದನ ಅವರು ಯುನೈಟೆಡ್ ಕಿಂಗ್ಡಂನ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಆಸ್ಟನ್ ವಿಶ್ವವಿದ್ಯಾಲಯ; ಅಮೆರಿಕದ ಟೆಕ್ಸಾಸ್ A&M ವಿಶ್ವವಿದ್ಯಾಲಯ, ಭಾರತೀಯ ವಿಜ್ಞಾನ ಸಂಸ್ಥೆ; ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯ ಮುಂತಾದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಮತ್ತು ವಿಜ್ಞಾನಿಗಳಾಗಿ ಸೇವೆ ನೀಡಿದ್ದಾರೆ. ಅವರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಹುದ್ದೆಗಳಲ್ಲಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ತಮ್ಮ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 108 ಸಂಶೋಧನಾ ಪ್ರಬಂಧಗಳನ್ನು ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಿಸಿದ್ದಾರೆ. ಅವರು ಥರ್ಮಲ್ ಕಾಂಟ್ಯಾಕ್ಟ್ ಕಂಡಕ್ಟನ್ಸ್ ಎಂಬ ವಿಷಯವನ್ನು ಕುರಿತು ಸಂಶೋಧಕ ಮತ್ತು ವೃತ್ತಿಪರ ಇಂಜಿನಿಯರುಗಳಿಗೆ ಉಪಯುಕ್ತವಾಗುವ ಪುಸ್ತಕವನ್ನು ಬರೆದಿದ್ದಾರೆ ಮತ್ತು ಹೀಟ್ ಅಂಡ್ ಮಾಸ್ ಟ್ರಾನ್ಸ್ಫರ್ ಗ್ರಂಥದ ಸಹ- ಸಂಪಾದನೆ ಮಾಡಿದ್ದಾರೆ.
ಚಕ್ರವರ್ತಿ ಮಧುಸೂದನ ಅವರು ತಾಂತ್ರಿಕ ಪ್ರಕಟಣೆಗಳು ಮಾತ್ರವಲ್ಲದೆ ಭಾರತೀಯ ಪುರಾಣ, ಸಂಸ್ಕೃತಿ ಮತ್ತು ಧರ್ಮಶಾಸ್ತ್ರ ಮತ್ತು ಭಾರತೀಯ ಸಂತರ ಜೀವನಚರಿತ್ರೆಗಳ ಕುರಿತು ಅನೇಕ ಲೇಖನಗಳನ್ನು ಬರೆದಿದ್ದಾರೆ. ಈ ವಿಷಯಗಳನ್ನು ಕುರಿತು ಆಸ್ಟ್ರೇಲಿಯಾದಲ್ಲಿ ಹಲವಾರು ರೇಡಿಯೋ ಮತ್ತು ಸಾರ್ವಜನಿಕ ಭಾಷಣಗಳನ್ನು ಸಹ ಪ್ರಸ್ತುತಪಡಿಸಿದ್ದಾರೆ. ಇವುಗಳಲ್ಲಿ ವಿಚಾರ ಸಂಧ್ಯಾ (ತ್ರೈಮಾಸಿಕ ನಿಯತಕಾಲಿಕ) ಇಂಗ್ಲಿಷ್ ಮತ್ತು ಕನ್ನಡದಲ್ಲಿ ತಲಾ 44 ಲೇಖನಗಳನ್ಹು ಹೊಂದಿವೆ. ಭಾರತದ ಹಬ್ಬಗಳು ಮತ್ತು ಅವುಗಳ ಪ್ರಾಮುಖ್ಯತೆ, ಭಾರತೀಯ ಸಾಹಿತ್ಯ ಮತ್ತು ಧಾರ್ಮಿಕ ಕೃತಿಗಳು, ಶ್ರೇಷ್ಠ ಭಾರತೀಯ ಸಂತರನ್ನು ಕುರಿತಾದ ವಿಚಾರಗಳು ಇವುಗಳಲ್ಲಿ ಸೇರಿವೆ. ಲೀಲಾಶುಕದ ಶ್ರೀ ಕೃಷ್ಣಕರ್ಣಾಮೃತಮ್, ನಂದನಾರ್, ಗೋವಿಂದ ದಾಮೋದರ ಸ್ತೋತ್ರ, ಭರ್ತೃಹರಿ ಮತ್ತು ಶತಕತ್ರಯ, ತುಳಸೀದಾಸರ ರಾಮಚರಿತಮಾನಸ, ನರಸಿಂಹ ಅವತಾರ
ಶ್ರೀ ಕಾಳಹಸ್ತಿ, ಭಕ್ತಿಯ ಮಾರ್ಗ, ಅಕ್ಕ ಮಹಾದೇವಿ, ಮೀರಾಬಾಯಿ, ಶ್ರೀ ರಾಮಾನುಜಾಚಾರ್ಯರು (ಮೂರು ಭಾಗಗಳಲ್ಲಿ) ಮುಂತಾದವು ಇವರ ವಿಶಿಷ್ಟ ಲೇಖನ ಮಾಲೆಯಲ್ಲಿ ಸೇರಿವೆ.
ಹೊರನಾಡ ಚಿಲುಮೆ ಎಂಬ ಆನ್ ಲೈನ್ ಮಾಸಿಕದಲ್ಲಿ ಕನ್ನಡದಲ್ಲಿ ಹಲವಾರು ಪ್ರಕಟಣೆಗಳನ್ನು ಮಾಡಿದ್ದಾರೆ. ಭಕ್ತಿ, ಭಕ್ತರು ಮತ್ತು ಸಂಸ್ಕೃತಿ; ನಮ್ರತೆ; ನಾನು ಇನ್ನೂ ಕಲಿಯುತ್ತಿದ್ದೇನೆ; ಫಾ ಹಿಯೆನ್; ಆರ್ಯಭಟ ಮತ್ತು ಆರ್ಯಭಟೀಯ; ಭಾಸಕವಿ ಮತ್ತು ಊರುಭಂಗ ಮಂತಾದ ಬರಹ ಮೂಡಿಸಿದ್ದಾರೆ. ಕಸ್ತೂರಿ ಮಾಸಪತ್ರಿಕೆಯಲ್ಲಿ ದಾರ್ಶನಿಕ ಸಾಮ್ರಾಟ ಮಾರ್ಕಸ್, ಮಹಾವೀರಾಚಾರ್ಯ ಮತ್ತು ಗಣಿತ ಸಾರ ಸಂಗ್ರಹ; ಭವನ್ಸ್ ಜರ್ನಲ್ ಪತ್ರಿಕೆಯಲ್ಲಿ ಧಮ್ಮಪದ; ಸುಧಾ ವಾರಪತ್ರಿಕೆಯಲ್ಲಿ ಬಿಡಾಲ ಪುರಾಣ; ಇಂಡಿಯನ್ ಲಿಂಕ್ ಪತ್ರಿಕೆಯಲ್ಲಿ ಭಾಸ್ಕರಾಚಾರ್ಯ ಮುಂತಾದ ಅನೇಕ ಬರಹಗಳನ್ನು ಮಾಡಿದ್ದಾರೆ.
ಚಕ್ರವರ್ತಿ ಮಧುಸೂದನ 2012ರಲ್ಲಿ ಹನ್ನೆರಡು ಆಳ್ವಾರರ ಜೀವನ (English) ಮತ್ತು 2016ರಲ್ಲಿ ಆಳ್ವಾರುಗಳು (ಕನ್ನಡ) ಎಂಬ ಕೃತಿಗಳನ್ನು ಹೊರತಂದಿದ್ದಾರೆ.
ಪೂರ್ವ ಮತ್ತು ಪಶ್ಚಿಮ, ಸಂಸ್ಕೃತಿಗಳ ಘರ್ಷಣೆ?, ಚಂದ್ರಶಿಲೆ, ಆನಂದ ರಾಯರ ಉಯಿಲು, ಭಾಸ್ಕರಾಚಾರ್ಯ ಅಂಡ್ ಎ ಪ್ರಾಬ್ಲಮ್ ಫ್ರಮ್ ಲೀಲಾವತಿ , ಅನಿವಾಸಿಗಳಲ್ಲಿ ಕನ್ನಡ ಪ್ರಜ್ಞೆ,
ಬ್ರಹ್ಮೋತ್ಸವಂ, ಗ್ರೇಟ್ ಮೈಂಡ್ಸ್ ಥಿಂಕ್ ಅಲೈಕ್, ವೈಕುಂಠ ದಾಸರು ಮತ್ತು ಕನಕದಾಸರು, ಕನ್ನಡ ಸಾಹಿತ್ಯದಲ್ಲಿ ಭಕ್ತಿ, ಕನಕ ನಮನ, ಬಿ. ಲೂಯಿಸ್ ರೈಸ್, ಕನ್ನಡಕ್ಕಾಗಿ ದುಡಿದ ವಿದೇಶಿ ಮಹನೀಯರು, ಕನ್ನಡವನ್ನು ಕಲಿಯುವುದು ಏಕೆ? ಮುಂತಾದ ಅನೇಕ ಲೇಖನ ಪ್ರಾತ್ಯಕ್ಷಿಕೆಗಳನ್ನು ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿನ ಕನ್ನಡ ವೇದಿಕೆಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಅನೇಕ ವಿಚಾರಗಳನ್ನು “ಸಿಡ್ನಿ ಕನ್ನಡ ವಾಣಿ” ರೇಡಿಯೋ ಮಾತುಕತೆಗಳಲ್ಲಿ ಮಂಡಿಸಿದ್ದಾರೆ. ಆಸ್ಟ್ರೇಲಿಯಾದ SBS Multicultural ರೇಡಿಯೋದಲ್ಲಿ ಜಾಣರ ತಾಣ ಮತ್ತು ವಾರದ ಸಮಸ್ಯೆ ಎಂಬ ಎರಡು ಕನ್ನಡ ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಲವಾರು ವಾರಗಳ ಕಾಲ ಪ್ರಸ್ತುತಪಡಿಸಿದ್ದಾರೆ.
ವಿಜ್ಞಾನ, ಭಾರತೀಯ ಸಂಸ್ಕೃತಿ, ಕನ್ನಡದೊಲುಮೆ ಇವುಗಳ ಸಂಯೋಗದ ಹೃದಯವುಳ್ಳ ಡಾ. ಚಕ್ರವರ್ತಿ ಮಧುಸೂದನ ಅವರಿಗೆ ಕೃತಜ್ಞತೆಗಳು.
Chakravarti Madhusudana

ಕಾಮೆಂಟ್‌ಗಳು