ಮೀರಾ ಸತ್ಯಮೂರ್ತಿ
ಮೀರಾ ಸತ್ಯಮೂರ್ತಿ
ಮೀರಾ ಸತ್ಯಮೂರ್ತಿ ಯಶಸ್ವೀ ಸಾಫ್ಟ್‌ವೇರ್ ತಂತ್ರಜ್ಞರು, ಮಾನಸಿಕ ಸಲಹೆಗಾರ್ತಿ ಮತ್ತು ಬರಹಗಾರ್ತಿ. ಅವರಿಗಿರುವ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಆಸಕ್ತಿಗಳ ಆಳವೂ ಅಪಾರವಾದದ್ದು.
ಫೆಬ್ರುವರಿ 25, ಮೀರಾ ಸತ್ಯಮೂರ್ತಿ ಅವರ ಜನ್ಮದಿನ. ಬೆಂಗಳೂರಿನ ಎಂ.ಎಲ್.ಎ. ಶಾಲೆಯಲ್ಲಿ ಓದಿದ ಅವರು ಮುಂದೆ ಬಿಎಮ್ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಪದವಿ ಪಡೆದರು. ಅವರಿಗೆ ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲೂ ಪರಿಣತಿ ಇದ್ದು, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಗಳ ಕುರಿತೂ ಅಪಾರ ಒಲವು ಹೊಂದಿದ್ದಾರೆ.
ಮೀರಾ ಅವರು ಐಟಿ ಜಗತ್ತಿನಲ್ಲಿ ಪ್ರಸಿದ್ಧ ಸಂಸ್ಥೆಗಳಾದ ಪಿಎಸ್ಐ ಡಾಟಾ ಸಿಸ್ಟಮ್ಸ್, ವೆರಿಫೋನ್, ನಾವೆಲ್ ನೆಟ್ ವರ್ಕಿಂಗ್, ಎಚ್‍ಪಿ ಅಂತಹ ಸಂಸ್ಥೆಗಳಲ್ಲಿ ಯಶಸ್ವೀ ತಂತ್ರಜ್ಞರಾಗಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ ಪರಿಸರದಲ್ಲಿ ಪೋಷಕರು ಮತ್ತು ಹದಿಹರೆಯದವರ ಅಗತ್ಯಗಳನ್ನು ಮನಗಂಡ ಮೀರಾ ಅವರು ಮನಃಶಾಸ್ತ್ರದ ಕುರಿತಾಗಿ ಆಸಕ್ತಿ ವಹಿಸಿ ಆ ವಿಚಾರದಲ್ಲಿ ಯಶಸ್ವೀ ಸ್ನಾತಕೊತ್ತರ ಅಧ್ಯಯನ ಕೈಗೊಂಡರು. ಜೊತೆಗೆ ಸಲಹೆಗಾರರಾಗಿ ತರಬೇತಿಯನ್ನೂ ಪಡೆದರು. ಈ ಜ್ಞಾನವನ್ನು ಅವರು ನೊಂದ ಹದಿಹರೆಯದವರು ಮತ್ತು ಪೋಷಕರಿಗೆ ಸಾಂತ್ವನ ಒದಗಿಸುವ ನಿಟ್ಟಿನಲ್ಲಿ , ತಮ್ಮದೇ ಆದ ವಿಶಿಷ್ಟ ಮಾನಸಿಕ ಆರೋಗ್ಯ ಮಾರ್ಗಸೂಚಿಯ ಮೂಲಕ ಕಾರ್ಯಪ್ರವೃತ್ತರಾಗಿದ್ದಾರೆ.
'ಮೈಂಡ್ಸ್ ಮ್ಯಾಟರ್' ಎಂಬುದು ಮೀರಾ ಸತ್ಯಮೂರ್ತಿ ಅವರ ಪ್ರಸಿದ್ಧ ಕೃತಿ. ಈ ಕೃತಿಯು ಹದಿಹರೆಯದವರ ಮಾನಸಿಕ ಆರೋಗ್ಯವನ್ನು ರಿವೈರ್ ಮಾಡುವ ವಿಧಾನಗಳ ಕುರಿತು ಹೇಳುತ್ತದೆ. ಈ ಕಾಲದ ಹದಿಹರೆಯದ ಸಮಸ್ಯೆಗಳು ಮತ್ತು ಅದರಿಂದ ಹದಿಹರೆಯದವರಲ್ಲಿ ಮತ್ತು ಅವರ ಸಮಸ್ತ ಕುಟುಂಬದಲ್ಲಿ ಉಂಟಾಗುವ ಏರಪೇರುಗಳತ್ತ ಆಳವಾದ ನೋಟ ಬೀರಿ, ಪುನಃ ಸಂತೋಷ ಮತ್ತು ಶಾಂತಿಯತ್ತ ಮರಳಲು ಅಗತ್ಯವಾದ ಜ್ಞಾನ ಮತ್ತು ಪ್ರಾಯೋಗಿಕ ತಂತ್ರಗಳತ್ತ ಈ ಕೃತಿ ನೋಟ ಬೀರುತ್ತದೆ.
ಮೀರಾ ಅವರಿಗಿರುವ ವಿಶಾಲ ವ್ಯಾಪ್ತಿಯ ವಿಜ್ಞಾನ, ತಂತ್ರಜ್ಞಾನ, ಮನಃಶಾಸ್ತ್ರ ಮತ್ತು ಸಂಸ್ಕೃತಿಗಳ ಸಂಯೋಗದ ಆಳ ವಿಸ್ಮಯ ತರುವಂತದ್ದು. ಅವರು ನನ್ನ ಬರಹಗಳಿಗೆ ನಿರಂತರ ಬೆಂಬಲ ನೀಡಿದವರು. ಹಲವೊಮ್ಮೆ ಸಮಾನ ಆಸಕ್ತ ವಿಷಗಳಲ್ಲಿ ಅವರೊಂದಿಗೆ ಸಂವಹನ ನಡೆಸಿದ ಭಾಗ್ಯ ಸಹಾ ನನ್ನದಾಗಿದೆ.
ಆತ್ಮೀಯರಾದ ಮೀರಾ ಸತ್ಯಮೂರ್ತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Meera Sathyamurthy
ಕಾಮೆಂಟ್‌ಗಳು