ನೀಲಾ ರಾಮಗೋಪಾಲ್
ವಿದುಷಿ ನೀಲಾ ರಾಮಗೋಪಾಲ್
ಸಂಗೀತ ಲೋಕದ ಹಿರಿಯ ಕಲಾವಿದೆ ವಿದುಷಿ ನೀಲಾ ರಾಮಗೋಪಾಲ್ ಹಲವು ದಶಕಗಳಿಂದ ಬೆಂಗಳೂರಿನವರಾಗಿ ನೀಲಾ ಮಾಮಿ ಎಂದೇ ಎಲ್ಲರಿಗೂ ಆಪ್ತರಾಗಿದ್ದರು.
ನೀಲಾ ರಾಮಗೋಪಾಲ್ ಅವರು ಕುಂಭಕೋಣಂನಲ್ಲಿ 1935ರ ಮೇ 25ರಂದು ಜನಿಸಿದರು. ನಂತರ, ಅವರ ಕುಟುಂಬವು ತ್ಯಾಗರಾಜಪುರಂ ಎಂಬ ತಮ್ಮ ಹಳ್ಳಿಗೆ ವಲಸೆ ಬಂದಿತು. ಕುಂಭಕೋಣಂನಲ್ಲಿ ಸದಾಗೋಪಾಲಾಚಾರಿಯವರಿಂದ ಕರ್ನಾಟಕ ಸಂಗೀತವನ್ನು ಕಲಿಯಲು ಪ್ರಾರಂಭಿಸಿದ ಅವರು ನಂತರ ಎನ್. ಎಮ್. ನಾರಾಯಣನ್, ಟಿ. ಕೆ.ರಂಗಾಚಾರಿ ಅವರಿಂದ ಉನ್ನತ ತರಬೇತಿಯನ್ನು ಪಡೆದರು. ಮದುವೆಯ ನಂತರ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು. ನೀಲಾ ಮಾಮಿ ಅವರು ತಮ್ಮ 23ನೇ ವಯಸ್ಸಿನಲ್ಲಷ್ಟೇ ಕರ್ನಾಟಕ ಸಂಗೀತವನ್ನು ಗಂಭೀರವಾಗಿ ಅಧ್ಯಯನ ಮಾಡಲು ಪ್ರಾರಂಭಿಸಿದರು.
ನೀಲಾ ಮಾಮಿ ಅವರು 1965ರಿಂದ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ಅವರ ಮೊದಲ ಸ್ವತಂತ್ರ ಸಾರ್ವಜನಿಕ ಸಂಗೀತ ಕಚೇರಿ ಕೂಡಾ ಆ ವರ್ಷದಲ್ಲೇ ನಡೆಯಿತು. ಅವರು ಕನ್ನಡ ಲಿಪಿಯಲ್ಲಿ 50 ತಮಿಳು ಸಂಯೋಜನೆಗಳ ಪುಸ್ತಕವನ್ನು ಪ್ರಕಟಿಸಿದ್ದಾರೆ. ಜೊತೆಗೆ, ಎಲ್ಲಾ 72 ಮೇಳಕರ್ತ ರಾಗಗಳಲ್ಲಿ ಕೃತಿಗಳ ಆಡಿಯೊ ಸಿಡಿಗಳನ್ನು ರೆಕಾರ್ಡ್ ಮಾಡಿದ್ದಾರೆ. ಅವರು ತಮಿಳ್ ಇನ್ಬಮ್, ರಾಮ ಉಪಾಸನ ಮತ್ತು ನಾರಾಯಣ ಎನ್ನಿರೋ ಮುಂತಾದ ಪ್ರಖ್ಯಾತ ಆಲ್ಬಂಗಳನ್ನು ಸಹ ಮಾಡಿದ್ದಾರೆ.
ಎಲ್ಲೆಡೆಯಲ್ಲಿ ತಮ್ಮ ಸುಶ್ರಾವ್ಯ ಸಂಗೀತ ಕಚೇರಿಗಳಿಂದ ಜನಮನ ಸೆಳೆದಿದ್ದ ನೀಲಾ ರಾಮಗೋಪಾಲ್ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಗುರುಕೃಪಾ ಪ್ರಶಸ್ತಿ, ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಪ್ರಶಸ್ತಿ, ಸಂಗೀತ ಕಲಾ ಆಚಾರ್ಯ ಪ್ರಶಸ್ತಿ, ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ಕಾಂಚನ ಶ್ರೀ ಬಿರುದು, ಚೆನ್ನೈನ ಶ್ರೀ ಕೃಷ್ಣ ಗಾನ ಸಭಾದಿಂದ ಉತ್ತಮ ಸಂಗೀತ ಕಚೇರಿಗೆ ಸಲ್ಲುವ ಪ್ರಶಸ್ತಿ, ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಿಂದ ಅತ್ಯುತ್ತಮ ಗಾಯಕಿ ಪ್ರಶಸ್ತಿ, ನಾಗರಕೋಯಿಲ್ ಟ್ರಸ್ಟ್ ನಿಂದ ಗಾನಪ್ರಕೀರ್ತಿ ಪ್ರಶಸ್ತಿ, ರಾಮಕೃಷ್ಣ ಗಾನಸಭಾದಿಂದ ಸಂಗೀತ ಕಲಾ ಸಾಮ್ರಾಜ್ಞಿ ಪ್ರಶಸ್ತಿ, ರಾಮ ಸೇವಾ ಮಂಡಳಿಯಿಂದ ಸಂಗೀತ ಚೂಡಾಮಣಿ ಪ್ರಶಸ್ತಿ, ಕರ್ನಾಟಕ ರಾಜ್ಯ ಸರ್ಕಾರದ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಎಲ್ಲೆಡೆ ತಮ್ಮ ಗಾನಾಮೃತದಿಂದ ಮಾತ್ರವಲ್ಲದೆ, ಅಕ್ಕರೆಯ ಪ್ರೋತ್ಸಾಹದಿಂದ ಕಿರಿಯರನ್ನು ಪ್ರೋತ್ಸಾಹಿಸುತ್ತಾ, ಹಿರಿಯ ಸಾಧನೆಗಳನ್ನು ಗೌರವಿಸುತ್ತಾ ಕಲಾಲೋಕದಲ್ಲಿ ಪ್ರಕಾಶಿಸುತ್ತಿದ್ದ ನೀಲ ರಾಮಗೋಪಾಲ್ ಅವರು 2023ರ ಮಾರ್ಚ್ 1ರಂದು ಈ ಲೋಕವನ್ನಗಲಿರುವುದು ತುಂಬಲಾರದ ನಷ್ಟ.
Respects to departed soul great musician Vidushi Neela Ramgopal
ಕಾಮೆಂಟ್‌ಗಳು