ಇಂದಿರಾ ಹೆಗ್ಗಡೆ
ಇಂದಿರಾ ಹೆಗ್ಗಡೆ
ಡಾ. ಇಂದಿರಾ ಹೆಗ್ಗಡೆ ಸಂಶೋಧಕರಾಗಿ ಮತ್ತು ಬರಹಗಾರ್ತಿಯಾಗಿ ಪ್ರಸಿದ್ಧರು.
ಇಂದಿರಾ ಅವರು ಮಂಗಳೂರಿನ ಬಳಿಯ ಕಿನ್ನಿಗೋಳಿಯ ಎಳತ್ತೂರು ಗುತ್ತಿನ ಮನೆಯಲ್ಲಿ 1949ರ ಮಾರ್ಚ್ 14ರಂದು ಜನಿಸಿದರು. ತಂದೆ ರಾಜು ಸೆಟ್ಟಿ. ತಾಯಿ ಸಿಂಧು. ಇಂದಿರಾ ಅವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ಥಳೀಯ ಶಾಲೆಯಲ್ಲಿ ನಡೆಸಿದರು. ಮುಂದೆ ಸ್ನಾತಕೋತ್ತರ ಪದವಿ ಹಾಗೂ ಸ್ನಾತಕೋತ್ತರ ಡಿಪ್ಲೊಮಾ ಪದವಿಗಳನ್ನು ಗಳಿಸಿದರು. ಪ್ರಸಿದ್ಧ ತುಳು ಕನ್ನಡ ಸಾಹಿತಿ, ಅಮ್ಮುಂಜೆ ಗುತ್ತು ಶೀನಪ್ಪ ಹೆಗ್ಗಡೆಯವರ ಪುತ್ರ ಯಸ್. ಆರ್ ಹೆಗ್ಡೆ ಎಂದೇ ಪ್ರಸಿದ್ಧರಾದ ಚೇಳಾರು ಗುತ್ತು ಸೀತಾರಾಮ ಹೆಗ್ಡೆ ಅವರು ಇವರ ಪತಿ.
ಇಂದಿರಾ ಹೆಗ್ಗಡೆ ಅವ ಸಂಶೋಧನಾ ಕೃತಿ 'ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ' ಕೃತಿಗೆ ಡಿ.ಲಿಟ್ ಗೌರವ ಸಂದಿದೆ.
ಇಂದಿರಾ ಹೆಗ್ಗಡೆಯವರು ಸಣ್ಣ ಕಥೆಗಳನ್ನು ಸುಧಾ ತರಂಗ ಮುಂತಾದ ಪತ್ರಿಕೆಗಳಿಗೆ ಬರೆಯುವ ಮೂಲಕ ತಮ್ಮ 33ನೆಯ ವಯಸ್ಸಿನಲ್ಲಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಮುಂದೆ ಸಂಶೋಧನೆ ಕ್ಷೇತ್ರಕ್ಕೆ ಬಂದರು. ಇವರ ಅನೇಕ ಸೃಜನ ಶೀಲ ಬರಹಗಳು, ಸಂಶೋಧನಾ ಬರಹಗಳು, ಪ್ರವಾಸ ಬರಹಗಳು ಮುಂತಾದವು ಕನ್ನಡದ ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಮೂಡಿಬರುತ್ತಿವೆ.
ಇಂದಿರಾ ಹೆಗ್ಗಡೆ ಅವರ ಕಥಾಸಂಕಲನ ಮತ್ತು ಕಾದಂಬರಿಗಳಲ್ಲಿ ಮೋಹಿನಿಯ ಸೇಡು, ಪುರುಷರೇ ನಿಮಗೆ ನೂರು ನಮನಗಳು, ಬದಿ, ಬದುಕು ಮುಂತಾದವು ಸೇರಿವೆ. ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ, ಬಂಟರು – ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ, ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು, ತುಳುವೆರೆ ಅಟಿಲ ಅರಗಣೆ, ಚೇಳಾರು ಗುತ್ತು ಅಗೊಳಿ ಮಂಜಣ್ಣ ಮುಂತಾದವು ಇಂದಿರಾ ಹೆಗ್ಗಡೆ ಅವರ ಸಂಶೋಧನಾ ಕೃತಿಗಳಲ್ಲಿ ಸೇರಿವೆ. ಮೂಲತಾನದ ನಾಗಬ್ರಹ್ಮ ಮತ್ತು ಪರಿವಾರ ಮತ್ತು ದೈವಗಳ ಸಂಧಿ ಪಾಡ್ದನ ಇವರ ಜಾನಪದ ತಳಹದಿಯ ಕೃತಿಗಳು. ಅಮಾಯಕಿ ಕರಾವಳಿ, ಒಡಲುರಿ, ಮಂಥನ, ಗುತ್ತಿನಿಂದ ಸೈನಿಕ ಜಗತ್ತಿಗೆ (ಸೈನಿಕ ಜೀವನದ ಅನುನುಭವ ಕಥನ ಪತಿ ಎಸ್ ಆರ್ ಹೆಗ್ಗಡೆಯವರ ಜತೆ ಸೇರಿ ರಚಿಸಿದ ಕೃತಿ), ಸರ್.ಎಂ. ವಿಶ್ವೇಶ್ವರಯ್ಯ, ಇಂದ್ರಪ್ರಸ್ಥದಿಂದ ಐತಿಹಾಸಿಕ ನಡೆ, ಸರಳ ಸಜ್ಜನಿಕೆಗೆ ಮಾದರಿ ಯಸ್. ಆರ್. ಹೆಗ್ಡೆ, ಹಿಮಾಲಯ ಶಿಖರಗಳ ಸಾನ್ನಿಧ್ಯದಲ್ಲಿ ನಡೆದಾಟ , ಸಪ್ತ ಕನ್ಯೆಯರ ಕನ್ಯೆಭೂಮಿಯಲ್ಲಿ ನಮ್ಮ ನಡೆ ಮುಂತಾದವು ಇವರ ಕೃತಿಗಳಲ್ಲಿ ಸೇರಿವೆ. ತುಳುವೆರೆ ಅಟಿಲ ಅರಗಣೆ ಇವರ ತುಳು ಕೃತಿ. ಇವರ ಕೃತಿಗಳು ಇಂಗ್ಲಿಷ್ ಮತ್ತಿತರ ಭಾಷೆಗಳಿಗೂ ಅನುವಾದಗೊಂಡಿವೆ.
ಇಂದಿರಾ ಹೆಗ್ಗಡೆ ಅವರಿಗೆ ತುಳು ಸಾಹಿತ್ಯ ಆಕಾಡೆಮಿ ಪ್ರಶಸ್ತಿ, 'ಸಪ್ತ ಕನ್ಯೆಯರ ಕನ್ಯೆಭೂಮಿಯಲ್ಲಿ ನಮ್ಮ ನಡೆ' ಪ್ರವಾಸ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಮೋಹಿನಿಯ ಸೇಡು ಕಥಾ ಸಂಕಲನಕ್ಕೆ ಕನ್ನಡಸಾಹಿತ್ಯ ಪರಿಷತ್ತಿನ 'ವಸುದೇವ ಭೂಪಾಲಂ' ಪ್ರಶಸ್ತಿ, ಪುರುಷರೇ ನಿಮಗೆ ನೂರು ನಮನಗಳು ಕಥಾ ಸಂಕಲನಕ್ಕೆ ಮೈಸೂರಿನ ಅಂಬರೀಷ ಪ್ರಶಸ್ತಿ, ಒಡಲುರಿ ಕಾದಂಬರಿಗೆ ಬೆಳಗಾವಿಯ ಸಾಹಿತ್ಯ ಪುರಸ್ಕಾರ, ಬದಿ ಕಾದಂಬರಿಗೆ ಅತ್ತಿಮಬ್ಬೆ ಬಹುಮಾನ, ಬಿ. ಸರೋಜಾದೇವಿ ಸಾಹಿತ್ಯ ದತ್ತಿ ಪ್ರಶಸ್ತಿ, ಬಂಟರು ಒಂದು ಸಮಾಜೋ ಸಾಂಸ್ಕತಿಕ ಕೃತಿಗೆ ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನದಿಂದ 'ಅನಂತ ರಂಗ' ಸಂಶೋಧನಾ ಪ್ರಸಸ್ತಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕನ್ನಡ ಕ್ರಿಯಾ ಸಮಿತಿ ಅವರ ಸಾಹಿತ್ಯ ಕೌಸ್ತುಭ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ, ಮಂಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಯು.ಎ.ಇ. ಬಂಟ್ಸ್ ಸಂಘಟನೆಯ 'ಬಂಟ ವಿಭೂಷಣ ಪ್ರಶಸ್ತಿ', ಎಚ್. ಎಸ್. ಪಾರ್ವತಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಇಂದಿರಾ ಹೆಗ್ಗಡೆ ಅವರ ಸಣ್ಣ ಕಥೆಗಳು ದೂರದರ್ಶನದಲ್ಲಿ ಧಾರವಾಹಿಯಾಗಿ ಮೂಡಿವೆ. ತುಳುವರ ಆಚಾರ ವಿಚಾರದ ಬಗ್ಗೆ ಇವರ ವ್ಯಾಖ್ಯಾನ ದೂರವಾಣಿಯಲ್ಲಿ ಹಲವು ದಿನಗಳವರೆಗೆ ಮೂಡಿಬಂದಿವೆ. ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ'ಯಲ್ಲಿ ಇಂದಿರಾ ಹೆಗ್ಗಡೆ ಅವರ ಕುರಿತಾದ ಕೃತಿ ಮೂಡಿಬಂದಿದೆ.
ಇಂದಿರಾ ಹೆಗ್ಗಡೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Dr. Indira Hegde Amma 🌷🙏🌷
ಕಾಮೆಂಟ್‌ಗಳು