ಸುಮಿತ್ರಾ ಕೇಶವ
ಸುಮಿತ್ರಾ ಕೇಶವ
ಸುಮಿತ್ರಾ ಕೇಶವ ಅವರು ಭಾರತ ಮತ್ತು ಸ್ವಿಟ್ಜರ್ಲ್ಯಾಂಡ್ ದೇಶಗಳಲ್ಲಿ ಹೆಸರಾಗಿರುವ ಯುವ ನೃತ್ಯ ಕಲಾವಿದೆ, ನೃತ್ಯ ಬೋಧಕಿ ಮತ್ತು ನೃತ್ಯ ಸಂಯೋಜಕಿ.
ಮಾರ್ಚ್ 11 ಸುಮಿತ್ರಾ ಅವರ ಜನ್ಮದಿನ. ಆಕೆಯ ತಂದೆ ಮಹಾನ್ ನೃತ್ಯ ಕಲಾವಿದ, ನೃತ್ಯ ಗುರು ಮತ್ತು ನೃತ್ಯ ಸಂಯೋಜಕರಾದ ಮೈಸೂರು ಮೂಲದ ದಾಸಪ್ಪ ಕೇಶವ ಅವರು.
2006ರಲ್ಲಿ ಅರಂಗೇಟ್ರಂ ಮೂಲಕ ಭಾರತೀಯ ಶಾಸ್ತ್ರೀಯ ನೃತ್ಯ-ಪ್ರವೇಶವನ್ನು ಮಾಡಿದ ನಂತರ, ಸುಮಿತ್ರಾ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕವ್ಯಕ್ತಿ ನೃತ್ಯಗಾರ್ತಿಯಾಗಿ ಮತ್ತು ಕಲಾಶ್ರೀ ನೃತ್ಯ ಮೇಳದೊಂದಿಗೆ ರಂಗಮಂದಿರಗಳು, ವಸ್ತುಸಂಗ್ರಹಾಲಯಗಳು, ಉತ್ಸವಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿವಿಧ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಇವುಗಳಲ್ಲಿ Kaserne Basel, Museum of ethnology – Cologne, Stadtcasino – Basel, Global Ethics Forum – Genf, KKL – Luzern, Museum Rietberg – Zürich, ಬೆಂಗಳೂರಿನ ಅಲೈಯೆನ್ಸ್ ಫ್ರಾಂಚೈಸ್, ಚೆನ್ನೈನ ಭಾರತೀಯ ವಿದ್ಯಾಭವನದಂತಹ ಪ್ರತಿಷ್ಟಿತ ವೇದಿಕೆಗಳು ಸೇರಿವೆ.
ಸುಮಿತ್ರಾ ಐದನೇ ವಯಸ್ಸಿನಿಂದಲೇ ತಮ್ಮ ತಂದೆ ಡಿ. ಕೇಶವ ಅವರಿಂದ ಶಾಸ್ತ್ರೀಯ ಭಾರತೀಯ ದೇವಾಲಯ ನೃತ್ಯ ಭರತನಾಟ್ಯವನ್ನು ಉತ್ಸಾಹ ಮತ್ತು ಆಪ್ತ ಆಸಕ್ತಿಗಳಿಂದ ಕಲಿಯಲು ಪ್ರಾರಂಭಿಸಿದರು. ಕಲಾವಿದರ ಕುಟುಂಬದಲ್ಲಿ ಬೆಳೆದ ಸುಮಿತ್ರಾ ತಮ್ಮ ಕುಟುಂಬದ ಶಿಸ್ತುಬದ್ಧ ತರಬೇತಿ ಮತ್ತು ಕಲಾ ಶ್ರದ್ಧೆಗಳನ್ನು ಅನುಸರಿಸಿದ್ದಾರೆ.
ಸುಮಿತ್ರಾ ಅವರು 2012ರಲ್ಲಿ ಬಾಸೆಲ್‌ನಲ್ಲಿ ಕಾನೂನು ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಭಾರತಕ್ಕೆ ಬಂದು ಚೆನ್ನೈನಲ್ಲಿ ತಮ್ಮ ನೃತ್ಯ ತರಬೇತಿಯನ್ನು ಮುಂದುವರೆಸಿದರು. ಪ್ರತಿಷ್ಠಿತ ನೃತ್ಯ ಗುರುಗಳಾದ ಷಣ್ಮುಘ ಸುಂದರಂ, ಗಿರೀಶ್ ಮಧು ಮತ್ತು ನಿತ್ಯಕಲ್ಯಾಣಿ ಅವರುಗಳಲ್ಲಿ ನೃತ್ಯ ಮತ್ತು ನಟ್ಟುವಂಗಂ ತರಬೇತಿಯನ್ನು ಮುಂದುವರೆಸಿದರು. ಚೆನ್ನೈ, ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿದರು.
ಸ್ವಿಟ್ಜರ್ಲೆಂಡ್‌ಗೆ ಹಿಂತಿರುಗಿದ ಸುಮಿತ್ರಾ ಅವರು ಸ್ವಿಟ್ಜರ್ಲೆಂಡ್‌ನಲ್ಲಿ ಕಲಾರೂಪದ ನೃತ್ಯ ಮತ್ತು ಸಂಗೀತ ನಿರ್ಮಾಣವಾದ 'ಮೂವಿಂಗ್ ಸ್ಕಲ್ಪ್ಚರ್ಸ್' ಅನ್ನು ಆಯೋಜಿಸಿದರು. 2016 ರಲ್ಲಿ ಸುಮಿತ್ರಾ ಅವರು ಡಿ. ಕೇಶವ ಮತ್ತು ಅಂಜಲಿ ಕೇಶವ ಅವರೊಂದಿಗೆ ತಮ್ಮ ಕುಟುಂಬದ ಕಲಾಶ್ರೀ ಸಂಸ್ಥೆಯ 40ನೇ ವಾರ್ಷಿಕ ಮಹೋತ್ಸವಕ್ಕಾಗಿ, ನೃತ್ಯ ಮತ್ತು ಸಂಗೀತ ನಿರ್ಮಾಣ 'ಹಿಮಾಲಯವನ್ನು' ಸಂಯೋಜಿಸಿದರು. 2017ರಲ್ಲಿ ಅವರು ಸ್ವಿಸ್ ಡ್ಯಾನ್ಸ್ ಪ್ರಶಸ್ತಿ ಪುರಸ್ಕೃತರಾದ ಕಿಲಿಯನ್ ಹ್ಯಾಸೆಲ್ಬೆಕ್ ಅವರೊಂದಿಗೆ 'ಸಿಂಬಿಯೋಸ್' ಎಂಬ ನೃತ್ಯ ರೂಪಕವನ್ನು ಸಂಯೋಜನೆ ಮಾಡಿದರು. ಆ ರೂಪಕವನ್ನು ಥಿಯೇಟರ್ ಸ್ಪೆಕ್ಟಕ್ಟೆಲ್ ಜ್ಯೂರಿಚ್ ಮತ್ತು ಥಿಯೇಟರ್ ರಾಕ್ಸಿ, ಬಾಸೆಲ್‌ನಲ್ಲಿ ಪ್ರದರ್ಶಿಸಿದರು. 2020ರಲ್ಲಿ ಅವರು ತಮ್ಮ ಸಹೋದರಿ ಅಂಜಲಿ ಕೇಶವ ಮತ್ತು ಲೇಖಕರಾದ ರಾಲ್ಫ್ ಮತ್ತು ನಾರ್ವಿನ್ ಥರಾಯಿಲ್ ಅವರೊಂದಿಗೆ "zwei zu Zwei" ನಿರ್ಮಾಣಕ್ಕೆ ನೃತ್ಯ ಸಂಯೋಜನೆ ಮಾಡಿದರು. 2021ರಲ್ಲಿ ಅವರು ಲೇಖಕ ಡೊನಾಟ್ ಬ್ಲಮ್ ಮತ್ತು ತಮ್ಮ ಸಹೋದರಿ ಅಂಜಲಿ ಕೇಶವ ಅವರ ಸಹಯೋಗದೊಂದಿಗೆ ರಚಿಸಿದ ಥಿಯೇಟರ್ ಪ್ರೊಡಕ್ಷನ್ 'ಅಜಾಲಾ'ದೊಂದಿಗೆ ಸ್ವಿಟ್ಜರ್ಲೆಂಡ್‌ನಲ್ಲಿ ಪ್ರವಾಸ ಮಾಡಿದರು.
ಸುಮಿತ್ರಾ ಅವರು ತಮ್ಮ ಕಲಾಭಿವ್ಯಕ್ತಿ ಮತ್ತು ನೃತ್ಯ ಕೌಶಲ್ಯಗಳಿಗಾಗಿ ಭಾರತ ಮತ್ತು ಸ್ವಿಟ್ಜರ್ಲ್ಯಾಂಡ್ ದೇಶಗಳಲ್ಲಿ ಅತ್ಯುತ್ತಮ ವಿಮರ್ಶೆಗಳನ್ನು ಗಳಿಸಿದರು. ಭಾರತೀಯ ಶಾಸ್ತ್ರೀಯ ಕಲೆಗಳ ಮೇಲಿನ ತಮ್ಮ ಉತ್ಸಾಹದ ಜೊತೆಗೆ, ಅವರು ವಿವಿಧ ಭಾರತೀಯ ಪ್ರದೇಶಗಳ ಜಾನಪದ ನೃತ್ಯಗಳು ಮತ್ತು ಅರೆ-ಶಾಸ್ತ್ರೀಯ ಬಾಲಿವುಡ್ ನೃತ್ಯಗಳ ಸಂಗ್ರಹವನ್ನು ಸಹ ಹೊಂದಿದ್ದಾರೆ.
ಸುಮಿತ್ರಾ ಕೇಶವ ಅವರು ನೃತ್ಯ ಶಾಲೆ ಕಲಾಶ್ರೀಯಲ್ಲಿ ಕಲಿಸುತ್ತಿದ್ದಾರೆ ಮತ್ತು ಬಾಸೆಲ್, ಮ್ಯೂಸ್-ಇ ಮತ್ತು ಫಾಸ್ಟೆನೊಫರ್ ವಿಶ್ವವಿದ್ಯಾಲಯದಲ್ಲಿ ತರಗತಿಗಳು ಮತ್ತು ಕಾರ್ಯಾಗಾರಗಳನ್ನು ನಡೆಸುತ್ತಾರೆ. ಅವರು ಭಾರತೀಯ ಶಾಸ್ತ್ರೀಯ ನೃತ್ಯಗಾರರು ಮತ್ತು ಸಂಗೀತಗಾರರ ಜೊತೆಗೆ ಹಾಗೂ ಸಮಕಾಲೀನ ಬ್ಯಾಲೆ ನೃತ್ಯ ಕಲಾವಿದರೊಂದಿಗೆ ಸಹಯೋಗ ನೀಡಿದ್ದಾರೆ. ಈ ಸ್ವಿಸ್-ಭಾರತೀಯ ನೃತ್ಯಕಲಾವಿದೆ ನಿರಂತರವಾಗಿ ಭಾರತ ವೇದಿಕೆಗಳಲ್ಲಿ ಆಹ್ವಾನ ಪಡೆಯುತ್ತಿದ್ದಾರೆ. ಇವರು ಈ ದಿನಗಳಲ್ಲಿ ಅಪರೂಪವೆನಿಸುತ್ತಿರುವ ಅಚ್ಚ ಮೈಸೂರು ಶೈಲಿಯ ಭರತನಾಟ್ಯವನ್ನು ಪ್ರಸ್ತುತಪಡಿಸುತ್ತ ಬಂದಿದ್ದಾರೆ. ಪ್ರಸ್ತುತದಲ್ಲಿ ಸುಮಿತ್ರಾ ಅವರು ಸ್ವಿಟ್ಜರ್ಲೆಂಡ್ ಮತ್ತು ಭಾರತಗಳಲ್ಲಿ ತಮ್ಮ ಸಮಯವನ್ನು ಸರಿದೂಗಿಸುತ್ತಾ ಕೆಲಸ ಮಾಡುತ್ತಿದ್ದಾರೆ. ಸಂಗೀತ, ಯೋಗ ಮತ್ತು ಸಮಕಾಲೀನ ನೃತ್ಯದೊಂದಿಗೆ ಇವರು ತಮ್ಮ ಶಾಸ್ತ್ರೀಯ ನೃತ್ಯವನ್ನು ಬೆಸೆದಿದ್ದಾರೆ.
ಸುಮಿತ್ರಾ ಕೇಶವ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Sumitra Keshava
ಕಾಮೆಂಟ್‌ಗಳು