ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಕ್ರವರ್ತಿ ವೇಣುಗೋಪಾಲ್


 

ಚಕ್ರವರ್ತಿ ವೇಣುಗೋಪಾಲ್ 


ಚಕ್ರವರ್ತಿ ವೇಣುಗೋಪಾಲ್ ಅವರು ನಾಡಿನ ಪ್ರಸಿದ್ಧ ಪ್ರಾಧ್ಯಾಪಕರಾಗಿ,  ಬರೆಹಗಾರರಾಗಿ ಮತ್ತು ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದವರು. 


ಚಕ್ರವರ್ತಿ ವೇಣುಗೋಪಾಲ್  ಅವರು 1939ರ ಜೂನ್ 8ರಂದು ಕೋಲಾರದಲ್ಲಿ ಜನಿಸಿದರು.  ತಂದೆ ಚಕ್ರವರ್ತಿ ವರದಾಚಾರ್ಯ.  ತಾಯಿ ಚೂಡಾಮಣಿಯಮ್ಮ. ಇವರಿಗೆ ನಾಲ್ಕು ಜನ ಅಣ್ಣ ತಮ್ಮಂದಿರು ಮತ್ತು ಇಬ್ಬರು ತಂಗಿಯರು.  ವರದಾ, ವಂದನಾ ಮತ್ತು ವಿನೋದ್ ಮೂರು ಮಕ್ಕಳು. ಈ ಎಲ್ಲರೂ ಅವರವರ ಕ್ಷೇತ್ರದಲ್ಲಿ ವಿಶಿಷ್ಟ ಸಾಧಕರು. 


ಚಕ್ರವರ್ತಿ ವೇಣುಗೋಪಾಲ್ ಪ್ರಾಥಮಿಕ  ಶಾಲೆಯಿಂದ ಇಂಟರ್ ಮೀಡಿಯಟ್ ವರೆಗೆ ಕೋಲಾರದಲ್ಲಿ ಓದಿದರು. ಅನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷಿನಲ್ಲಿ ಬಿ.ಎ (B A Honours)  ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ  ಇಂಗ್ಲಿಷ್ ಎಂ. ಎ. ಪದವಿ ಗಳಿಸಿದರು.  1974ರಲ್ಲಿ  "Indian Short Story in English - A Critical Survey" ಮಹಾಪ್ರಬಂಧಕ್ಕಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್. ಡಿ  ಗಳಿಸಿದರು.


ಚಕ್ರವರ್ತಿ ವೇಣುಗೋಪಾಲ್ ಅವರು ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಮಹಾ ವಿದ್ಯಾಲಯಗಳೆಂದರೆ:  ಮದನಪಲ್ಲಿಯ  ಬೆಸಂಟ್ ಥಿಯೊಸಾಫಿಕಲ್ ಕಾಲೇಜ್ (1960-61);  ಚಿತ್ರದುರ್ಗದ   ಸರ್ಕಾರಿ ಪ್ರಥಮ ದರ್ಜೆ ಕಾಲೇಜು (1961-62); ಹುಬ್ಬಳ್ಳಿಯ  ಶ್ರೀ ಕಾಡಸಿದ್ಧೇಶ್ವರ ಕಾಲೇಜು, (1962-72); ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿಭಾಗದ ಉಪನ್ಯಾಸಕರಾಗಿ  (1972-1982), ರೀಡರ್ ಆಗಿ (1982-1992), ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ  (1992-1994) ಹಾಗೂ ಪ್ರೊಫೆಸರ್ ಆಗಿ  (1992 - 1999 ಜೂನ್) ಸಲ್ಲಿಸಿದ ಸೇವೆಗಳು. 


ಚಕ್ರವರ್ತಿ ವೇಣುಗೋಪಾಲ್ ಅವರು

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 

ಕಲಾ ನಿಕಾಯದ ಡೀನ್  (Dean of Humanities Faculty, 1992-94) ಆಗಿದ್ದರು. ಆಧಾರೋಪನ್ಯಾಸಗಳ ಸಮಿತಿಯ ಕಾರ್ಯನಿರ್ವಾಹಕ  ಕಾರ್ಯದರ್ಶಿ (Executive Secretary, Foundation Studies) ಆಗಿದ್ದರು.  ಇಲ್ಲಿನ  ಆಮಂತ್ರಿತ ಉಪನ್ಯಾಸಕರಲ್ಲಿ ವಿಜ್ಞಾನಿ ಜೆ ವಿ ನರಳಿಕರ್, ನ್ಯಾಯವಾದಿ ನಾನಿ  ಪಾಲ್ಖೀವಾಲ, ನೊಬೆಲ್ ಪುರಸ್ಕೃತ ವಿಲಿಯಮ್ ಗೋಲ್ಡಿಂಗ್, ಮಹಾನ್ ಪತ್ರಿಕಾ ಸಂಪಾದಕ ಮತ್ತು ಲೇಖಕ ಖುಶ್ವಂತ್ ಸಿಂಗ್ ಮುಂತಾದ ಮಹನೀಯರು ಸೇರಿದ್ದಾರೆ.


ಚಕ್ರವರ್ತಿ ವೇಣುಗೋಪಾಲ್ ಅವರು ಕರ್ನಾಟಕ ವಿಶ್ವವಿದ್ಯಾಲಯದ ನಿಯತಕಾಲಿಕದ ಸಂಪಾದಕರಾಗಿದ್ದರು. ಇವರ ಮಾರ್ಗದರ್ಶನದಲ್ಲಿ 15 ವಿದ್ಯಾರ್ಥಿಗಳು ಪಿಎಚ್.ಡಿ ಪದವಿಗಳನ್ನು ಗಳಿಸಿದ್ದಾರೆ.


ಚಕ್ರವರ್ತಿ ವೇಣುಗೋಪಾಲ್ ಅವರು 1997-2000 ಅವಧಿಯಲ್ಲಿ ಧಾರವಾಡದ ಗಾಂಧೀ ಶಾಂತಿ ಪ್ರತಿಷ್ಠಾನದ  ಅಧ್ಯಕ್ಷರಾಗಿದ್ದರು. 6 ಮತ್ತು 7ನೇ  ತರಗತಿಗಳ ಪುಸ್ತಕ ಪ್ರಕಟಣಾ  ಮಂಡಳಿಯ ಅಧ್ಯಕ್ಷರಾಗಿದ್ದರು. UPSC ಪರೀಕ್ಷೆಗಳೊಂದಿಗಿನ ಅವರ ಸಹಯೋಗ 30 ವರ್ಷಗಳಷ್ಟು ಸುದೀರ್ಘವಾಗಿತ್ತು. ಧಾರವಾಡ ಆಕಾಶವಾಣಿಯಲ್ಲಿ ಅವರು 90ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದರು. ಅವುಗಳಲ್ಲಿ ಮಹತ್ವದ ಚಿಂತನೆಗಳಾದ "ಮಹಾತ್ಮ ಗಾಂಧಿ: ಎಂದೆಂದಿಗೂ ಮಾರ್ಗದರ್ಶಿ" (Mahatma Gandhi: The guiding path forever); ತಪ್ಪು ಮಾಡುವುದು ಮಾನವೀಯ, ಕ್ಷಮೆ ಎಂಬುದು ದೈವಿಕ (To err is human, to forgive divine) ಮುಂತಾದ ಅನೇಕವು ಇದ್ದವು. 


ಚಕ್ರವರ್ತಿ ವೇಣುಗೋಪಾಲ್ ಅವರ ಮಾಸಿಕ ಅಂಕಣವಾದ 'ಭಾವ, ಅನುಭಾವ' ಕಸ್ತೂರಿ ಮಾಸಪತ್ರಿಕೆಯಲ್ಲಿ ಮೂಡಿಬರುತಿತ್ತು. ಕನ್ನಡದಲ್ಲೂ, ಇಂಗ್ಲೀಷಿನಲ್ಲೂ ಉತ್ತಮ ಭಾಷಣಕಾರರೆಂದು ಹೆಸರಾಗಿದ್ದ ವೇಣುಗೋಪಾಲರು ಶಾಲಾ ಕಾಲೇಜುಗಳಲ್ಲೂ, ಸಾರ್ವಜನಿಕ ಸಮಾರಂಭಗಳಲ್ಲೂ, ಮಕ್ಕಳಿಂದ ಹಿಡಿದು ಪಂಡಿತರವರಗಿನ ಶ್ರೋತೃಗಳೆಲ್ಲರನ್ನೂ ಉದ್ದೇಶಿಸಿ ಇನ್ನೂರಕ್ಕೂ ಹೆಚ್ಚು ಉಪನ್ಯಾಸಗಳನ್ನು ಕೊಟ್ಟಿದ್ದರು.  ಇವರು ಒಳ್ಳೆಯ ಭಾಷಾಂತರಕಾರರೆಂದೂ ಹೆಸರಾಗಿದ್ದರು, ಉದಾಹರಣೆಗೆ ರಾಜಾರಾಯರ Cat and Shakespeare (ಇಂಗ್ಲೀಷಿನಿಂದ ಕನ್ನಡಕ್ಕೆ),  ಜಿ.ಬಿ. ಜೋಷಿಯವರ ಜಡಭರತನ ಕನಸುಗಳು (ಕನ್ನಡದಿಂದ ಇಂಗ್ಲೀಷಿಗೆ), ಮತ್ತು ಹಲವು ಕನ್ನಡ ನಾಟಕಗಳನ್ನು ಇಂಗ್ಲೀಷಿಗೆ ಭಾಷಾಂತರ ಮಾಡಿದ್ದರು. ಗಾಂಧೀಜಿ ಮತ್ತು ಸ್ವಾತಂತ್ರ್ಯದ ಹೋರಾಟದ ವಿಷಯದ ಒಂದು ಪುಸ್ತಕದ ಭಾಷಾಂತರದಲ್ಲಿ ಇವರ ಪಾತ್ರವನ್ನು ಗುರುತಿಸಿ  ಕರ್ನಾಟಕ ಸರ್ಕಾರದ ರಾಜ್ಯಪಾಲರಾಗಿದ್ದ  ಶ್ರೀ ಹಂಸರಾಜ್ ಭಾರದ್ವಾಜ್ ಅವರಿಂದ ಸನ್ಮಾನ ಪಡೆದರು. ಇವರು ಕನ್ನಡ ಲೇಖಕರು ಮತ್ತು ಕವಿಗಳನ್ನು ಕುರಿತು ಅನೇಕ ವಿಮರ್ಶಾತ್ಮಕ ಪ್ರಬಂಧಗಳನ್ನು  ರಚಿಸಿದ್ದರು. ಸಾಹಿತ್ಯ ಗೋಷ್ಠಿಯೊಂದರಲ್ಲಿ "ರಾಮಾಯಣ ದರ್ಶನಂ" ಕುರಿತ ಇವರ ಉಪನ್ಯಾಸವನ್ನು ಸ್ವಯಂ ಕುವೆಂಪು ಅವರೇ ಮೆಚ್ಚಿಕೊಂಡರು. ಇವರಿಗೆ ಶಾಸ್ತ್ರೀಯ ಸಂಗೀತದಲ್ಲೂ ಅಭಿರುಚಿ. ಹಿಂದೂಸ್ತಾನಿ ಸಂಗೀತದ  ದಿಗ್ಗಜರುಗಳಾದ ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಸಂಗಮೇಶ್ವರ ಗೌರವ್ ಮುಂತಾದವರನ್ನು ಇವರು ವೈಯಕ್ತಿಕವಾಗಿ ಬಲ್ಲವರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಗೀತ ವಿಭಾಗದವರು ಇವರನ್ನು ಉಪನ್ಯಾಸಮಾಡಲು ಆಗಾಗ  ಕರೆಯುತ್ತಿದ್ದರು. ಇದು ಮಾತ್ರವಲ್ಲ, ಗಾಂಧಿ ಮತ್ತು ಅಂಬೇಡ್ಕರ್  ಅಧ್ಯಯನ ವಿಭಾಗದವರು  ಇವರನ್ನು ಅತಿಥಿ ಪ್ರಾಧ್ಯಾಪಕರಾಗಿ (guest faculty) ಕರೆಸಿಕೊಳ್ಳುತ್ತಿದ್ದರು.


ಸಹೋದ್ಯೋಗಿಗಳೇ ಆಗಲಿ, ವಿದ್ಯಾರ್ಥಿ ವೃಂದವೇ ಆಗಲಿ ಅಥವಾ ಇತರ ಸಾರ್ವಜನಿಕರೇ ಆಗಲಿ ಇವರೊಡನೆ ಒಡನಾಡಿದ ಕೂಡಲೆ ಇವರ ನಮ್ರತೆ ಮತ್ತು ಸರಳತೆಗೆ ಮಾರುಹೋಗುತ್ತಿದ್ದರು. ಇವರ 75 ನೆಯ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಅಭಿನಂದನಾ ಗ್ರಂಥವೊಂದನ್ನು ಪ್ರಕಟಿಸಲಾಯಿತು. ಅದರಲ್ಲಿ 54 ಮಂದಿ ಹಿರಿಯರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ. ಅವುಗಳಲ್ಲಿ ಎರಡು ಹೀಗಿವೆ:


ಡಾ॥ ಚನ್ನವೀರ ಕಣವಿ: ಸಹಜತೆ, ಸರಳತೆ, ಸ್ನೇಹಪರತೆ ವೇಣುಗೋಪಾಲರ ವ್ಯಕ್ತಿತ್ವಕ್ಕೆ ಹೆಚ್ಚಿನ ಮೆರುಗನ್ನು ತಂದಿದೆ 


ನಿ. ಉಮಾಕಾಂತ (ಭೌತಶಾಸ್ತ್ರದ ಪ್ರೊಫೆಸರ್): ವೇಣುಗೋಪಾಲ ಅವರು ನನ್ನ ಆತ್ಮೀಯ ಸ್ನೇಹಿತರು. ಗಾಂಧೀವಾದ, ಪ್ರಾಮಾಣಿಕತೆ, ಸಾಹಿತ್ಯ ಮತ್ತು ಸಾಮಾಜಿಕ ಪ್ರಜ್ಞೆ ಇವೇ ನಮ್ಮ ಸ್ನೇಹದ ನಾಲ್ಕು ತಂತಿಗಳು.


ಪ್ರಖ್ಯಾತ ಸಾಹಿತಿ ಮತ್ತು ಪತ್ರಕರ್ತ ಖುಷ್ವಂತ್ ಸಿಂಗ್ ಅವರು ಹೀಗೆ ಶ್ಲಾಘಿಸಿದ್ದಾರೆ: ಧಾರವಾಡದಲ್ಲಿ ನೀವು ಭೆಟ್ಟಿಯಾಗಲೇಬೇಕಾದ ಒಬ್ಬ ವ್ಯಕ್ತಿ ಸಿ.ವಿ. ವೇಣುಗೋಪಾಲ್.


ವೇಣುಗೋಪಾಲ ಅವರು ತಮ್ಮ ಚಿಕ್ಕಂದಿನ ನೆನಪುಗಳನ್ನು ಧಾರವಾಡದ ಆಕಾಶವಾಣಿಯ ಮೂಲಕ ಪ್ರಸಾರ ಮಾಡಿದರು. ಅವನ್ನು ಅವರ 75 ನೆಯ ಜನ್ಮದಿನದ ಅಭಿನಂದನಾ ಗ್ರಂಥದಲ್ಲಿ ಪ್ರಕಟಿಸಲಾಗಿದೆ. ತಮ್ಮ ವೃತ್ತಿ ಜೀವನದಲ್ಲಿ ಅವರು ಪ್ರೊ. ಸಿ.ಡಿ. ನರಸಿಂಹಯ್ಯ, ಪ್ರೊ. ಚಿದಾನಂದ ಮೂರ್ತಿ, ಕೀರ್ತಿನಾಥ ಕುರ್ತಕೋಟಿ, ಶಂಕರ ಮೊಕಾಶಿ ಪುಣೇಕರ್, ಎಲ್. ಎಸ್. ಶೇಷಗಿರಿ ರಾವ್, ಸ.ಸ. ಮಾಳವಾಡ, ಎಂ. ಎಂ. ಕಲಬುರ್ಗಿ  ಮುಂತಾದ ಅನೇಕಾನೇಕ ಗಣ್ಯ ಮಹನೀಯರೊಂದಿಗೆ  ನಿಕಟ ಸಂಪರ್ಕವನ್ನಿಟ್ಟು ಕೊಂಡಿದ್ದರು. ಈ ಮಹಾಚೇತನರೊಡನೆ ಒಡನಾಡಿದ ಅನುಭವಗಳು  ಒಂದು ಅಮೂಲ್ಯ, ಸ್ವಾರಸ್ಯಮಯ ಗ್ರಂಥವಾಗುವಷ್ಟು ವ್ಯಾಪಕವಾಗಿದ್ದವು. 


ಹಿರಿಯ ಸಾಧಕರಾದ ಪ್ರೊ. ಚಕ್ರವರ್ತಿ 2023 ರ ಆಗಸ್ಟ್ 7ರಂದು ಈ ಲೋಕವನ್ನಗಲಿದರು. ವೇಣುಗೋಪಾಲ್ ಅವರ ನಿಧನದಿಂದ ನಾಡು ಅಮೂಲ್ಯ ವ್ಯಕ್ತಿಯನ್ನು ಕಳೆದುಕೊಂಡಿತು.


2023ರ ಜೂನ್ 22ರಂದು ಚಕ್ರವರ್ತಿ ವೇಣುಗೋಪಾಲ್ ಅವರ ಸಹೋದರ ಚಕ್ರವರ್ತಿ ಮಧುಸೂದನ ಅವರ 'ಕಲಿಕೆ ನಿರಂತರ' ಕೃತಿ ಬಿಡುಗಡೆ ಸಂದರ್ಭದಲ್ಲಿ ಅವರು ನನ್ನ ಮೇಲೆ ಪ್ರೀತಿಯ ಮಳೆಯನ್ನೇ ಸುರಿಸಿದ್ದರು.  ಇನ್ನೆಲ್ಲಿ ಆ ಹಿರಿಯ ಪ್ರೀತಿಯ ಜೀವ🥲


ಮಾಹಿತಿ ಕೃತಜ್ಞತೆ:. ಪ್ರೊ. ಚಕ್ರವರ್ತಿ ಮಧುಸೂದನ Chakravarti Madhusudana



Prof. Venugopal Chakravarthy




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ