ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್.ವಿ.ಕೃಷ್ಣಮೂರ್ತಿ


 ಎಚ್ ವಿ ಕೃಷ್ಣಮೂರ್ತಿ


ಸಂಗೀತ ಕಲಾ ರತ್ನ ಪ್ರೊ. ಎಚ್ ವಿ ಕೃಷ್ಣಮೂರ್ತಿ ಅವರು ಶ್ರೇಷ್ಠ ಸಂಗೀತಗಾರರು, ವಯೋಲಿನ್ ವಾದಕರು, ಸಂಗೀತಶಾಸ್ತ್ರಜ್ಞರು ಮತ್ತು ನಾಟಕಕಾರರಾಗಿದ್ದರು.  ಅವರು ವೃತ್ತಿಯಿಂದ ಪ್ರಸಿದ್ಧ ವಿಜ್ಞಾನ ಪ್ರಾಧ್ಯಾಪಕರೂ ಆಗಿದ್ದರು. 

ಹೋದಿಗೆರೆ ವೆಂಕಟರಾಮಯ್ಯ ಕೃಷ್ಣಮೂರ್ತಿ ಅವರು 1926ರ ಅಕ್ಟೋಬರ್ 13 ರಂದು ಜನಿಸಿದರು. ಕೃಷ್ಣಮೂರ್ತಿ ಅವರು ಏಳನೇ ವಯಸ್ಸಿನಲ್ಲಿ ಪಿಟೀಲು ಹಿಡಿದರು. ತಾಯಿ ಸುಬ್ಬಮ್ಮ ಅವರಿಂದ ಆರಂಭಿಕ ತರಬೇತಿಯನ್ನು ಪಡೆದ ನಂತರ, ತಾಯಿಯ ಚಿಕ್ಕಪ್ಪ ಎಲ್.ಎಸ್. ನಾರಾಯಣಸ್ವಾಮಿ ಭಾಗವತರು ಮತ್ತು ಎಲ್.ಎಸ್. ಶೇಷಗಿರಿ ರಾವ್ ಅವರಿಂದ ಕಲಿತರು. ಸಂಗೀತಗಾರರ ಉತ್ಕೃಷ್ಟ ವಂಶವಾದ ಮನೆಯಲ್ಲಿ ಸಂಗೀತದ ವಾತಾವರಣ ಮತ್ತು ಜನ್ಮಜಾತ ಒಲವು ಉತ್ಸಾಹಗಳು ಇವರನ್ನು ಸಂಗೀತ ಕ್ಷೇತ್ರದಲ್ಲಿ ದಾಪುಗಾಲು ಹಾಕುವಂತೆ ಮಾಡಿದವು.  ಎಚ್.ವಿ.ಕೃಷ್ಣಮೂರ್ತಿ ಅವರು ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.  ನಂತರದಲ್ಲಿ ಕೋಲಾರದ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಇದು ವೃತ್ತಿಜೀವನವನ್ನು ಮತ್ತು ಅಷ್ಟೇ ಸವಾಲಿನ ಸಂಗೀತವನ್ನು ಸಮತೋಲನಗೊಳಿಸಿದ ಅವರ ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತದೆ.

ಕೃಷ್ಣಮೂರ್ತಿ ಅವರು ತಮ್ಮ ಗುರುಗಳು ಮತ್ತು ಇತರ ಪ್ರಸಿದ್ಧ ಕಲಾವಿದರೊಂದಿಗೆ ನಿರಂತರವಾಗಿ ಪ್ರದರ್ಶನ ನೀಡಿದರು. 1942 ರಲ್ಲಿ, ಕೃಷ್ಣಮೂರ್ತಿ ಅವರು ಗಾನಕಲಾ ಭೂಷಣ ಎ.ವೀರಭದ್ರಯ್ಯ ಅವರನ್ನು ಭೇಟಿಯಾದರು. ಇಬ್ಬರೂ ಪರಸ್ಪರ ಭೇಟಿಯಾದ ಎರಡು ವರ್ಷಗಳಲ್ಲಿ ತಮ್ಮ ಮೊದಲ ಪಿಟೀಲು ಯುಗಳ ಕಛೇರಿಯನ್ನು ನೀಡಿದ್ದು ಗಮನಾರ್ಹವಾಗಿದೆ. ಇಬ್ಬರೂ ತಮ್ಮ ಸಂಗೀತ ಕಚೇರಿಗಳಿಗೆ ಹೆಸರುವಾಸಿಯಾದರು ಮತ್ತು ಅವರ ಬಾಂಧವ್ಯವು ಗಾಢವಾಯಿತು. ಈ  ಪಿಟೀಲು ಜೋಡಿಯು ಅನೂರ್ ಎಸ್. ರಾಮಕೃಷ್ಣ ಅವರೊಂದಿಗೆ ಪಿಟೀಲು ತ್ರಿವಳಿಯಾಗಿ ಸಂಗೀತಲೋಕದ ವಿಸ್ಮಯವೆನಿಸಿತು. ಈ ಮೂವರು ತಾಳವಾದ್ಯದ ದಂತಕಥೆಗಳಾದ ಪಾಲ್ಘಾಟ್ ಮಣಿ ಅಯ್ಯರ್, ಪಾಲ್ಘಾಟ್ ರಘು, ಉಮಯಲಾಪುರಂ ಶಿವರಾಮನ್ ಮತ್ತು ಇತರರ ಜೊತೆಗೂಡಿದ್ದರು.

ಎಚ್.ವಿ. ಕೃಷ್ಣಮೂರ್ತಿಯವರು ಏಕವ್ಯಕ್ತಿ ಸಂಗೀತ ಕಛೇರಿಗಳನ್ನೂ ನೀಡುತ್ತ ವಿದೇಶ ಪ್ರವಾಸಗಳನ್ನೂ ಮಾಡಿ, ಪ್ರದರ್ಶನದ ಜೊತೆಗೆ ಅಲ್ಲಿನ ವಿದ್ಯಾರ್ಥಿಗಳಿಗೆ ಕರ್ನಾಟಕ ಸಂಗೀತ ಮತ್ತು ಸುಧಾರಿತ ಪಾಠಗಳ ಕುರಿತು ಉಪನ್ಯಾಸ-ಪ್ರಾತ್ಯಕ್ಷಿಕೆಗಳನ್ನು ನೀಡಿದರು.

ಸ್ವಭಾವತಃ, ಎಚ್.ವಿ.ಕೃಷ್ಣಮೂರ್ತಿಯವರು ನಿರಂತರವಾಗಿ ಪ್ರಯೋಗಶೀಲರಾಗಿ ಹೊಸತನವನ್ನು ಅರಸುತ್ತ ಹೋದರು. 1971 ರಲ್ಲಿ, ಸಂಗೀತ ಪ್ರೇಮಿಗಳಿಗೆ ಶ್ರೀಮದ್ ರಾಮಾಯಣದಲ್ಲಿ ಸಂಗೀತದ ವೈಶಿಷ್ಟ್ಯವನ್ನು ತಂದರು. ಇವರ ಗುರುಗಳಾದ ನಾರಾಯಣಸ್ವಾಮಿ ಭಾಗವತರು ರಾಮಾಯಣ ಮಹಾಕಾವ್ಯದಿಂದ ಪ್ರಮುಖವಾದ ಶ್ಲೋಕಗಳನ್ನು ಆರಿಸಿ ಸೂಕ್ತ ರಾಗಗಳೊಂದಿಗೆ ಪ್ರಸ್ತಾಪ ನೀಡಿದ್ದರು. ಈ ವೈಶಿಷ್ಟ್ಯವನ್ನು ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ಕೃಷ್ಣಮೂರ್ತಿಯವರು ಪ್ರಸ್ತುತಪಡಿಸಿದರು.  ಇದು ಆಲ್ ಇಂಡಿಯಾ ರೇಡಿಯೊದಲ್ಲಿ ಅಪಾರವಾಗಿ ಜನಪ್ರಿಯವಾಗಿತ್ತು. 1990ರಲ್ಲಿ, ಈ ವೈಶಿಷ್ಟ್ಯವು ಆಡಿಯೊ ಕ್ಯಾಸೆಟ್ ರೂಪದಲ್ಲಿ  ಆರ್.ಕೆ. ಶ್ರೀಕಂಠನ್ ಅವರ ಮುಂದಾಳತ್ವದಲ್ಲಿ ಮೂಡಿಬಂತು. 

ಎಚ್.ವಿ. ಕೃಷ್ಣಮೂರ್ತಿಯವರು ಸಂಗೀತ ವಿದ್ವಾಂಸರಾಗಿಯೂ ಹೆಚ್ಚು ಖ್ಯಾತಿ ಪಡೆದಿದ್ದರು. ಹಲವಾರು ಸಂಗೀತದ ವೈಶಿಷ್ಟ್ಯಗಳು ಮತ್ತು ಉಪನ್ಯಾಸ ಪ್ರದರ್ಶನಗಳೊಂದಿಗೆ ಹೊಸತನ ತರಲು ಬಹಳಷ್ಟು ಪರಿಶ್ರಮ ನೀಡಿದರು. ತ್ಯಾಗರಾಜರ "ಪ್ರಹ್ಲಾದ ಭಕ್ತಿ ವಿಜಯಂ" ಕುರಿತಾದ ಪ್ರಸ್ತುತಿ, ಇಂತಹ ವೈಶಿಷ್ಟ್ಯಗಳಲ್ಲಿ ಒಂದಾಗಿತ್ತು.

ಸಂಗೀತವನ್ನು ಆಳವಾಗಿ ಅಧ್ಯಯನ ಮಾಡಿದ್ದ ಪ್ರೊ. ಕೃಷ್ಣಮೂರ್ತಿಗಳು
ಅನೇಕ ಉಪನ್ಯಾಸ-ಪ್ರಾತ್ಯಕ್ಷಿಕೆಗಳಿಗೆ  ಹಸರಾಗಿದ್ದರು. ಇವುಗಳಲ್ಲಿ "ದಿ ಫಿಡಲ್ - ಅದರ ಮೂಲ ಮತ್ತು ಸಂಗೀತ ಕಚೇರಿಗಳಲ್ಲಿ ಅದರ ಸ್ಥಾನ", "ಕರ್ನಾಟಿಕ್ ಮತ್ತು ಹಿಂದೂಸ್ತಾನಿ ಸಂಗೀತದ ಶೈಲಿಗಳಲ್ಲಿ ರಾಗಗಳು", "ಗಾಯನ ಸ್ವರಮೇಳಗಳು ಮತ್ತು ಧ್ವನಿ ಸಂಸ್ಕೃತಿ" ಮುಂತಾದವು ಸೇರಿವೆ. ಅವರು ಸಂಗೀತ ಕಲಾನಿಧಿ ಆರ್.ಕೆ ಶ್ರೀಕಂಠನ್ ಮತ್ತು ಗಾನಕಲಾ ಭೂಷಣ ಆರ್.ಕೆ. ಪದ್ಮನಾಭ ಅವರೊಂದಿಗೆ "ಕಾಂಬೋಧಿ ಮತ್ತು ಯದುಕುಲ ಕಾಂಬೋದಿ" ಕುರಿತು ಉಪನ್ಯಾಸ-ಪ್ರಾತ್ಯಕ್ಷಿಕೆಯನ್ನು ಸಹ ಪ್ರಸ್ತುತಪಡಿಸಿದ್ದರು.

ಕೃಷ್ಣಮೂರ್ತಿಗಳು ಸಂಗೀತಗಾರ ಮತ್ತು ಸಂಗೀತಶಾಸ್ತ್ರಜ್ಞರಲ್ಲದೆ, ಮುತ್ತುಸ್ವಾಮಿ ದೀಕ್ಷಿತರ್ ಅವರ ಪರಿಕಲ್ಪನೆಯನ್ನು ರೂಪಿಸಿ ನಾಟಕವನ್ನು ಪ್ರದರ್ಶಿಸಿದಾಗ ನಾಟಕಕಾರರಾಗಿಯೂ ಮಾರ್ಪಟ್ಟರು. ಹೆಚ್.ವಿ.ಕೃಷ್ಣಮೂರ್ತಿಯವರು ಕರ್ನಾಟಕ ಗಾನಕಲಾ ಪರಿಷತ್ತಿನ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ಇದು ಸಂಗೀತಗಾರರಿಗಾಗಿ ಮತ್ತು ಸಂಗೀತಗಾರರಿಗಾಗಿ ನಡೆಸಲ್ಪಡುವ ವಿಶಿಷ್ಟ ಮತ್ತು ಪ್ರತಿಷ್ಠಿತ ಸಂಗೀತ ಸಂಸ್ಥೆಯಾಗಿದೆ. ಎಲ್.ಎಸ್.ನಾರಾಯಣಸ್ವಾಮಿ ಭಾಗವತರೊಂದಿಗೆ ಸೇರಿ 1953ರಲ್ಲಿ ವಿಜಯ ಸಂಗೀತ ಕಾಲೇಜು ಆರಂಭಿಸಿದ ಎಚ್.ವಿ.ಕೃಷ್ಣಮೂರ್ತಿ ಅವರು 50 ವರ್ಷಗಳ ಕಾಲ ಅಲ್ಲಿನ ಅಧ್ಯಾಪಕರಾಗಿ, ನಂತರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಇದು ದೊಡ್ಡ ಸಂಸ್ಥೆಯಾಗಿ ಬೆಳೆದು ನೂರಾರು ವಿದ್ಯಾರ್ಥಿಗಳಿಗೆ ಗಾಯನ, ಪಿಟೀಲು, ವೀಣೆ ಮತ್ತು ಕೊಳಲು ಶಿಕ್ಷಣವನ್ನು ನೀಡುತ್ತಿದೆ. ಅವರ ಹಲವಾರು ವಿದ್ಯಾರ್ಥಿಗಳು ಇಂದು ಪ್ರಸಿದ್ಧ ಸಂಗೀತಗಾರರಾಗಿದ್ದಾರೆ.

ಎಚ್.ವಿ.ಕೃಷ್ಣಮೂರ್ತಿ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾ ತಿಲಕ, ಬೆಂಗಳೂರು ಗಾಯನ ಸಮಾಜದಿಂದ ಸಂಗೀತ ಕಲಾರತ್ನ, ಬೆಂಗಳೂರಿನ ಶ್ರೀರಾಮ ಸೇವಾ ಮಂಡಳಿಯಿಂದ ನಾದ ಸುಧಾ ಪ್ರವೀಣ ಮುಂತಾದ ಪ್ರಶಸ್ತಿ ಮತ್ತು ಬಿರುದುಗಳಿಗೆ ಭಾಜನರಾಗಿದ್ದರು. 

ಮಹಾನ್ ವಿದ್ವಾಂಸರಾದ ಕೃಷ್ಣಮೂರ್ತಿ ಅವರು 2009ರ ನವೆಂಬರ್ 22ರಂದು ಈ ಲೋಕವನ್ನಗಲಿದರು. ಅವರ ಪರಂಪರೆಯನ್ನು ಪುತ್ರ ಎಚ್. ಕೆ. ವೆಂಕಟರಾಮ್, ಭಾರ್ಗವಿ ವೆಂಕಟರಾಮ್ ಮತ್ತು ವಿಷ್ಣು ವೆಂಕಟರಾಮ್ ಮುನ್ನಡೆಸುತ್ತಿದ್ದಾರೆ.

Great Musician Prof. H. V. Krishnamurthy

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ