ರಘು ಹಾಲ್ಕೆರೆ
ರಘು ಹಾಲ್ಕೆರೆ
ರಘು ಹಾಲ್ಕೆರೆ ಸದ್ದಿಲ್ಲದೆ ಸಾಂಸ್ಕೃತಿಕ ವಾತಾವರಣ ಕಟ್ಟಿದ ಹೃದಯವಂತ ಸಾಹಸಿ. ಇಂದು ರಘು ಹಾಲ್ಕೆರೆ ಅವರ ಹುಟ್ಟು ಹಬ್ಬ.
ರಘು ಹಾಲ್ಕೆರೆ ಮತ್ತು ಅವರ ಪತ್ನಿ ವೀಣಾ ಜೋಡಿ ಪುತ್ತೂರು ನಗರದ ತಮ್ಮ ಸ್ವಂತ ನೆಲದಲ್ಲಿ ‘ಕಾಡು' ಎಂಬ ಸುಂದರ ಸಾಂಸ್ಕೃತಿಕ ಕೇಂದ್ರ ಕಟ್ಟಿ ಬೆಳೆಸಿದವರು. ಇಲ್ಲಿನ ರಘು ಹಾಲ್ಕೆರೆ ಅವರ ತಂದೆಯವರ ಹೆಸರಿನಲ್ಲಿ ಇರುವ 'ಹಾ.ಮ. ಭಟ್ ರಂಗಮಂದಿರ'ದಲ್ಲಿ ನಾಟಕ, ಸಿನಿಮಾ, ಸಂಗೀತ, ಕಲೆ, ಸಾಹಿತ್ಯದ ಹಲವು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ.
ರಘು ಅವರ ತಂದೆ ಹಾ.ಮ. ಭಟ್ ಅವರು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತುಮರಿಯವರು. ಅವರು ಶಾಂತವೇರಿ ಗೋಪಾಲಗೌಡರ ಅನುಯಾಯಿ ಹಾಗೂ ಸಹವರ್ತಿಯಾಗಿದ್ದು, ಗೋಪಾಲಗೌಡರ ಜೊತೆಯಲ್ಲಿ ಸಮಾಜವಾದಿ ದೀಕ್ಷೆ ಪಡೆದವರು. ಹಾ.ಮ. ಭಟ್ ಬಳಗದವರು ತುಮರಿಯಲ್ಲಿ ಶಾಂತವೇರಿ ಗೋಪಾಲಗೌಡ ರಂಗ ಮಂದಿರ ಕಟ್ಟಿದರು. ಹಾ.ಮ. ಭಟ್ ಅವರ ಸುಪುತ್ರರಾದ ರಘು ಹಾಲ್ಕೆರೆ ಅವರು ಈಗ ಪುತ್ತೂರಿನಲ್ಲಿ ನೆಲೆಸಿದ್ದರೂ ಹುಟ್ಟೂರಿನ ನಂಟನ್ನೂ ಬಿಟ್ಟಿಲ್ಲ. ಅಲ್ಲಿಯೂ ಪ್ರತಿವರ್ಷ ತುಮರಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಾಂಸ್ಕೃತಿಕ ಉತ್ಸವ ನಡೆಸುತ್ತಾರೆ.
ರಘು ಅವರ ಪತ್ನಿ ವೀಣಾ ಸಂಗೀತ ವಿಧುಷಿ. ಪುತ್ತೂರಿನಲ್ಲಿ ಕರ್ನಾಟಕ ಸಂಗೀತದ ತರಗತಿಗಳನ್ನೂ ನಡೆಸುತ್ತಾರೆ. ಅವರು ಅಭಿನೇತ್ರಿಯೂ ಹೌದು. ಪ್ರಶಸ್ತಿ ವಿಜೇತ ಚಿತ್ರ “ಧಾಳಿ” ಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದರು.
ರಘು ಅವರ ಸಂಪರ್ಕ ವಿವರದಲ್ಲಿ ಈ ಮಾತು ನೋಡಿದೆ : "ಮನಸಿನ ಮನೆಯೊಳಗೆ ನಾನು ಬಂಧಿ. ಮನಸ ಬಯಲಾಗಿಸೋ ಪ್ರಭುವೇ!"
ಸಾಂಸ್ಕೃತಿಕ ಹೃದಯಿಗಳಾದ ರಘು ಹಾಲ್ಕೆರೆ ಅವರ ನಿರಂತರ ಬೆಂಬಲ ನನ್ನ ಬರಹಗಳಿಗೂ ಸಲ್ಲುತ್ತಿದೆ. ರಘು ಹಾಲ್ಕೆರೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
Happy birthday Raghu Haalkere 🌷🙏🌷
ಕಾಮೆಂಟ್‌ಗಳು