ಜನಕ
ರಾಜರುಗಳು - ಜನಕ
King Janaka
ದಸರಾ ಅಂದರೆ ಮೊದಲು ಕಣ್ಮುಂದೆ ಮೂಡುವುದು ರಾಜರುಗಳು. ಬಹುತೇಕವಾಗಿ ಚರಿತ್ರೆಯಲ್ಲಿ ರಾಜರುಗಳ ದೊಡ್ಡಸ್ತಿಕೆಯನ್ನು ಅವರು ಯುದ್ಧ ಮಾಡಿ ವಿಸ್ತರಿಸಿದ ಗಡಿಗಳ ಲೆಕ್ಕದಿಂದ ಅಳೆಯುವುದುಂಟು. ಪೌರಾಣಿಕವಾಗಿ ಅವರಿಗಿದ್ದ ಶಕ್ತಿಗಳು, ಬಹು ಪತ್ನಿಯರು, ನೂರಾರು ಮಕ್ಕಳು, ಅವರು ಮಾಡಿದ ಯಜ್ಞಗಳು, ದಾನಗಳು ಇತ್ಯಾದಿಗಳಲ್ಲಿ ಅಳೆಯುವುದೂ ಉಂಟು. ಅವರ ರಾಜ್ಯ ಸುಭೀಕ್ಷವಾಗಿತ್ತು, ಅವರಿಗೆ ಕಪ್ಪ ಕಾಣಿಕೆಗಳು ಸಲ್ಲುತ್ತಿದ್ದವು ಇತ್ಯಾದಿ ಅನೇಕ ವರ್ಣನೆಗಳು ಕಾಣುವುದುಂಟು. ಅವರುಗಳ ರಾಜ್ಯವಿಸ್ತಾರದ, ಮಕ್ಕಳಿಲ್ಲದ, ಎಷ್ಟು ಪತ್ನಿಯರಿದ್ದರೂ ಸಾಲದ ಅತೃಪ್ತಿಗಳು, ಇವೆಲ್ಲ ಎಲ್ಲೋ ಅಪೂರ್ಣತೆ ಮತ್ತು ಹಲವು ನೋವುಗಳನ್ನಡಗಿಸಿ, ಮೇಲೆ ಕಟ್ಟಿದ ಸಿಂಹಾಸನವೆಂಬ ಭ್ರಮೆಗಳಾಚೆಗೆ ನನಗೆ ಹೆಚ್ಚು ಕಾಣುವುದಿಲ್ಲ. ಆದರೂ ಕೆಲವೊಂದು ರಾಜರುಗಳ ಬದುಕು ಅಥವಾ ಕಥೆ ನನ್ನ ಅಪಾರವಾಗಿ ಸೆಳೆದಿವೆ. ನನಗೆ ಹಾಗೆ ಸೆಳೆದ ಹೆಸರುಗಳಲ್ಲಿ ಜನಕ ಮಹಾರಾಜನ ಕಲ್ಪನೆ ಮುಖ್ಯವಾದದ್ದು.
ಜನಕ
ಜನಕ ಒಬ್ಬ ಪ್ರಸಿದ್ಧ ರಾಜಋಷಿ. ರಾಮಾಯಣ, ಮಹಾಭಾರತ ಮತ್ತು ಉಪನಿಷತ್ತುಗಳಲ್ಲಿ ಈತನ ವಿಷಯ ಬರುತ್ತದೆ. ಬೃಹದಾರಣ್ಯಕ ಉಪನಿಷತ್ತಿನ ಪ್ರಕಾರ ಜನಕನ ಸಭೆಗೆ ಅನೇಕ ತಾತ್ತ್ವಿಕರು ಬಂದು ತತ್ತ್ವ ವಿಚಾರದಲ್ಲಿ ಭಾಗವಹಿಸುತ್ತಿದ್ದರು. ಅವರಲ್ಲಿ ಯಾಜ್ಞವಲ್ಕ್ಯ ಒಬ್ಬ. ಜನಕ ಈತನಿಂದ ಆಧ್ಯಾತ್ಮ ತತ್ತ್ವದ ಉಪದೇಶ ಪಡೆದ.
ಜನಕನ ವಿಚಾರ ರಾಮಾಯಣದಲ್ಲಿ ವಿಸ್ತಾರವಾಗಿ ಬಂದಿದೆ. ಇಕ್ಷ್ವಾಕು ರಾಜನ ಮಗ ನಿಮಿ ವಸಿಷ್ಠನ ಶಾಪದಿಂದ ಅಸುನೀಗಿದಾಗ ದೇಶ ಅರಾಜಕವಾಯಿತು. ಆಗ ಪ್ರಜೆಗಳು ನಿಮಿಯ ಬಲತೋಳನ್ನು ಮಥನ ಮಾಡಲು ಅದರಿಂದ ಒಬ್ಬ ಪುರುಷ ಜನಿಸಿದ. ಪ್ರಜೆಗಳು ಈತನಿಗೆ ವಿದೇಹ, ಮಿಥಿ, ಜನಕ ಎಂಬ ಹೆಸರು ಕೊಟ್ಟು ತಮ್ಮ ರಾಜನನ್ನಾಗಿ ಮಾಡಿಕೊಂಡರು. ಅಂದಿನಿಂದ ಆ ವಂಶದಲ್ಲಿ ಹುಟ್ಟಿದವರನ್ನು ಮೈಥಿಲ, ವೈದೇಹ, ಜನಕ ಎಂದು ಕರೆಯುವ ಪರಿಪಾಠ ಬೆಳೆಯಿತು. ಈ ವಂಶದಲ್ಲಿ ಹುಟ್ಟಿದ ಸೀರಧ್ವಜನೇ ರಾಮಾಯಣದಲ್ಲಿ ವಿಶೇಷ ಪಾತ್ರವಹಿಸಿದ ಜನಕ ಮಹಾರಾಜ.
ಜನಕನಿಗೆ ಬಹುಕಾಲದವರೆಗೆ ಮಕ್ಕಳಾಗಲಿಲ್ಲ. ಆದ್ದರಿಂದ ಅವನು ಪುತ್ರಕಾಮೇಷ್ಠಿಯಾಗಕ್ಕಾಗಿ ಗೊತ್ತಾದ ಸ್ಥಳವನ್ನು ಶೋಧಿಸಲು ನೇಗಿಲಿನಿಂದ ಉತ್ತಾಗ ಅದರ ತುದಿಗೆ ಒಂದು ಚಿನ್ನದ ಪೆಟ್ಟಿಗೆ ಸಿಕ್ಕಿತು. ಅದರಲ್ಲಿ ದೊರೆತ ಮಗುವೇ ಸೀತೆ. ಆ ಮೇಲೆ ಜನಕನಿಗೆ ಹುಟ್ಟಿದ ಮಗುವೇ ಊರ್ಮಿಳೆ. ಅನಂತರ ಏರ್ಪಟ್ಟ ಸ್ವಯಂವರದಲ್ಲಿ ಶಿವಧನುರ್ಭಂಗ ಮಾಡಿದ ಶ್ರೀರಾಮನಿಗೆ ಸೀತೆಯನ್ನೂ ಲಕ್ಷ್ಮಣನಿಗೆ ಊರ್ಮಿಳೆಯನ್ನೂ ತನ್ನ ತಮ್ಮ ಕುಶಧ್ವಜನ ಪುತ್ರಿಯರಾದ ಮಾಡವೀ ಮತ್ತು ಶೃತಕೀರ್ತಿಯರನ್ನು ಭರತ ಶತೃಘ್ನರಿಗೂ ಕೊಟ್ಟು ಜನಕ ಮದುವೆ ಮಾಡಿದ.
ಜನಕ ಮಹಾಜ್ಞಾನಿ. ಮೇಧಾವಿ. ತತ್ತ್ವಜಿಜ್ಞಾಸು. ಮಹಾಭಾರತದ ಶಾಂತಿಪರ್ವದಲ್ಲೂ ಬೃಹದಾರಣ್ಯಕ ಉಪನಿಷತ್ತಿನಲ್ಲೂ ಜನಕನ ತಾತ್ತ್ವಿಕ ಶ್ರದ್ಧೆಯನ್ನೂ ಆತ ನಡೆಸಿದ ಸಂವಾದಗಳನ್ನೂ ವರ್ಣಿಸಿದೆ. ಮಾಂಡವ್ಯ ಮಹರ್ಷಿಯೊಂದಿಗೂ ಪರಾಶರ ಮಹರ್ಷಿಯೊಂದಿಗೂ ಜನಕ ನಡೆಸಿದ ಸಂವಾದಗಳು ಮುಖ್ಯವಾದುವು. ಪರಾಶರರೊಂದಿಗೆ ಮಾಡಿದ ಸಂವಾದ ಪರಾಶರ ನೀತಿಯೆಂದೇ ಪ್ರಸಿದ್ಧವಾಗಿದೆ. ಮಿಥಿಲೆ ಸುಡುತ್ತಿದ್ದರೂ ಜನಕ ಖಿನ್ನನಾಗದೆ ಮನಸ್ಥೈರ್ಯವನ್ನು ಹೊಂದಿದ್ದನೆಂದು ಶಾಂತಿಪರ್ವದಲ್ಲಿ ಹೇಳಿದೆ. ವನಪರ್ವದಲ್ಲಿ ಜನಕ ಕಪೋತ ಮುನಿಯೊಡನೆ ನಡೆಸಿದ ವಾದ ವರ್ಣಿತವಾಗಿದೆ. ಅಶ್ವಮೇಧ ಪರ್ವದಲ್ಲಿ ಜನಕ, ಮೋಕ್ಷಕ್ಕೆ ಮಮಕಾರ ತ್ಯಾಗವೇ ಸಾಧನವೆಂದು ಒಬ್ಬ ಬ್ರಾಹ್ಮಣನಿಗೆ ಬೋಧಿಸಿದನೆಂದು ಹೇಳಿದೆ.
ಹೀಗೊಂದು ನಮ್ಮ ಗುರುಗಳು ಹೇಳಿದ ಕಥೆ ನೆನಪಾಗುತ್ತದೆ. ಗುರು ತನ್ನ ಶಿಷ್ಯನಿಗೆ ಎಲ್ಲ ವಿದ್ಯೆಗಳನ್ನು ಹೇಳಿಕೊಟ್ಟು ಮುಂದಿನ ಹಂತದ ಜ್ಞಾನಾರ್ಜನೆಗಾಗಿ ಕೆಲವು ದಿನ ಜನಕನ ಬಳಿಗೆ ಹೋಗಲು ಹೇಳಿದ.
ಈ ಗುರುಶಿಷ್ಯನಿಗೊ ಒಬ್ಬ ಕ್ಷತ್ರಿಯ ತನಗೇನು ಬೋಧಿಸಬಲ್ಲ ಎಂಬ ಅಹಮಿಕೆ. ಗುರುವಿನ ಮಾತು ಮೀರದೆ ಜನಕನ ಬಳಿಗೆ ಬಂದ. ಜನಕರಾಜ ಬಂದ ವ್ಯಕ್ತಿಗೆ ಸತ್ಕರಿಸಿ ಅತಿಥಿ ಗೃಹದಲ್ಲಿ ಆತನಿಗೆ ತಂಗಲು ಹೇಳಿದ. ಶಿಷ್ಯ ಮಲಗಿದ ಹಾಸಿಗೆಯೇನೊ ಭವ್ಯವಾಗಿದೆ ಮೇಲೆ ನೋಡುತ್ತಾನೆ ಒಂದು ತೆಳುದಾರದಲ್ಲಿ ಕತ್ತಿಯೊಂದು ತಲೆಯ ಮೇಲೆ ತೂಗುತ್ತಿದೆ.
ಮಾರನೆಯ ದಿನ ಜನಕ ಅತಿಥಿಯನ್ನು ಕಾಣಲು ಬಂದು ನಿದ್ರೆ ಹಿತವಾಗಿತ್ತೇ ಎಂದ. ಗುರುಶಿಷ್ಯ ಕುಪಿತನಾಗಿ "ನನ್ನ ತಲೆಯ ಮೇಲೆ ಹಾಗೆ ಕತ್ತಿ ತೂಗುತ್ತಿರುವಾಗ, ನನಗೆ ನಿದ್ರೆ ಹೇಗೆ ತಾನೇ ಬರಲು ಸಾಧ್ಯ" ಎಂದ. ಜನಕ ಗುರುಶಿಷ್ಯನನ್ನು ತನ್ನ ರಾಜಾಸ್ಥಾನಕ್ಕೆ ಕರೆದೊಯ್ದು ತನ್ನ ಸಿಂಹಾಸನದ ಮೇಲೆ ಸಣ್ಣದಾರದ ಮೇಲೆ ತೂಗುತ್ತಿರುವ ಬೃಹದಾಕಾರದ ಕತ್ತಿಯನ್ನು ತೋರಿ ನುಡಿದ "ನಮ್ಮ ತಲೆಯ ಮೇಲೆ ವಿಧಿಯ ಕತ್ತಿ ಸದಾ ತೂಗುತ್ತಿದೆ. ಈ ಅರಿವಿನಲ್ಲಿ ಸದಾ ಜಾಗೃತನಾಗಿರುವುದೇ ನಿಜವಾದ ಬದುಕು" ಎಂದ. ಯಾಕೋ ಈ ಮಾತು ಸದಾ ನನ್ನ ನೆನಪಿನಲ್ಲಿದೆ.
ನಾಳೆ ಮತ್ತೊಬ್ಬ ರಾಜ....
Photo courtesy : www.kidsgen.com
ಕಾಮೆಂಟ್‌ಗಳು