ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಧಾ ಶರ್ಮ


 ಸುಧಾ ಶರ್ಮ

ಸುಧಾ ಶರ್ಮ ಚವತ್ತಿ ಅವರು ಮುದ್ರಣ ಮತ್ತು ವಿದ್ಯುನ್ಮಾನ ಪತ್ರಕೋದ್ಯಮದಲ್ಲಿನ ಸಂಪಾದಕಿಯಾಗಿ, ಕವಯಿತ್ರಿಯಾಗಿ, ನಿರೂಪಕಿಯಾಗಿ, ಸುದ್ಧಿ ಮಾಧ್ಯಮ ಸಂಸ್ಥೆಗಳ ನಿರ್ವಾಹಕಿಯಾಗಿ, ಪ್ರೇರಕ ಉಪನ್ಯಾಸಕಿಯಾಗಿ, ಕಾರ್ಯಕ್ರಮ ಸಂಘಟನಗಾರ್ತಿಯಾಗಿ, ಅಂಕಣಗಾರ್ತಿಯಾಗಿ ಹೀಗೆ ಬಹುಮುಖಿಯಾಗಿ ಹೆಸರಾಗಿದ್ದಾರೆ. 

ನವೆಂಬರ್ 23, ಸುಧಾ ಅವರ ಜನ್ಮದಿನ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚವತ್ತಿ ಇವರ ಊರು. ಸುಧಾ ಅವರು ಓದಿನ ದಿನಗಳಿಂದಲೇ ಕವಿತೆ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದರು. ಅವರ ಕವಿತೆಗಳು ಎಲ್ಲ ಪತ್ರಿಕೆಗಳು, ನಿಯತಕಾಲಿಕಗಳು ಮತ್ತು ಅಂತರಜಾಲ ಮಾಧ್ಯಮಗಳಲ್ಲಿ ಪ್ರಸಿದ್ಧವಾಗಿವೆ. 

ಸುಧಾ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ಪತ್ರಿಕಾಲೋಕಕ್ಕೆ ಬಂದರು. ಅಲ್ಲಿ "ವ್ಯಾಪಾರ" ಎನ್ನುವ ವಾಣಿಜ್ಯ ಪುರವಣಿಯ ನಿರ್ವಹಣೆ ಮಾಡಿದರು. ವಿಜಯವಾಣಿಯಲ್ಲೂ ಅವರು ಕೆಲವು ಕಾಲ ಮುಖ್ಯ ಉಪಸಂಪಾದಕಿಯಾಗಿ ಕೆಲಸ ಮಾಡಿದ್ದರು. ಅಲ್ಲಿಯೂ ವಾಣಿಜ್ಯ ಪುರವಣಿ ನೋಡಿಕೊಳ್ಳುತ್ತಿದ್ದರು.

ಸುಧಾ ಶರ್ಮ ಅವರು ಉದಯ ಟಿ.ವಿಯಲ್ಲಿ ವರದಿಗಾರ್ತಿಯಾಗಿ ದೃಶ್ಯ ಮಾಧ್ಯಮಕ್ಕೆ ಬಂದರು. ಮುಂದೆ ಕಾವೇರಿ, ಈ ಟಿ.ವಿ., ಝೀ ಕನ್ನಡ, ಚಂದನ, ಸುವರ್ಣ ಹೀಗೆ ಕನ್ನಡದ ಬಹುತೇಕ ಎಲ್ಲ ವಾಹಿನಿಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಕಾಶವಾಣಿಗಾಗಿಯೂ ಸರಣಿ ಕಾರ್ಯಕ್ರಮ ರೂಪಿಸಿದ್ದಾರೆ.  

ದೃಶ್ಯ ಮತ್ತು ಮುದ್ರಣ ಮಾಧ್ಯಮಗಳೆಡರಲ್ಲೂ ಸಮೃದ್ಧ ಅನುಭವ ಉಳ್ಳವರು ವಿರಳ. ಇಂತಹ ವಿರಳರಲ್ಲಿ ಸುಧಾ ಒಬ್ಬರು. ದೃಶ್ಯಮಾಧ್ಯಮದಲ್ಲಿ ಸುದ್ಧಿ ನಿರ್ವಹಣೆ, ಕಾರ್ಯಕ್ರಮ ನಿರ್ದೇಶನ, ನಿರೂಪಣೆ, ಸಾಹಿತ್ಯ ರಚನೆ ಹೀಗೆ ಎಲ್ಲ ವಿಧದಲ್ಲೂ ಅವರಿಗೆ ಶ್ರೀಮಂತ ಅನುಭವವಿದೆ. 

ಸುಧಾ ಅವರು ಮಹತಿ ಮೀಡಿಯಾ ಎನ್ನುವ ನಿರ್ಮಾಣ ಸಂಸ್ಥೆಯನ್ನು ಆಪ್ತ ಸಹಯೋಗದಲ್ಲಿ ಆರಂಭಿಸಿ ಹಲವಾರು ವಾಹಿನಿಗಳಿಗೆ ಕಾರ್ಯಕ್ರಮ ನಿರ್ಮಾಣ, ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿದ್ದಾರೆ.   ಮುಂದೆ ಸುಧಾ ಅವರು ಕನ್ನಡದ ಮೊಟ್ಟ ಮೊದಲ  ಸಕಾರಾತ್ಮಕ ಚಿಂತನೆಗಳನ್ನು ಪ್ರೇರಿಸಿ, ಪೋಷಿಸುವ, 'ಭರವಸೆಯ ಬದುಕಿಗಾಗಿ' ಎಂಬ ನುಡಿಮುತ್ತಿನ ಧ್ಯೇಯಹೊತ್ತ "ಪ್ರಾಫಿಟ್ ಪ್ಲಸ್” ಎನ್ನುವ ವಿನೂತನವಾದ, ಮಾಸ ಪತ್ರಿಕೆಯನ್ನು ಆರಂಭಿಸಿ ಅದರ ಸಂಪಾದಕಿಯಾಗಿದ್ದಾರೆ. e-ಬುಕ್ ಮತ್ತು Appನಲ್ಲೂ ಈ ಮಾಸಪತ್ರಿಕೆ ಲಭ್ಯವಿದೆ. ಕನ್ನಡದ ಮೊದಲ ಶ್ರವ್ಯ ನಿಯತಕಾಲಿಕವಾಗಿಯಯೂ 'ಪ್ರಾಫಿಟ್ ಪ್ಲಸ್' ವಿಶೇಷತೆ ಗಳಿಸಿದೆ.  ಯೂಟ್ಯೂಬ್ ಮಾಧ್ಯಮದಲ್ಲಿ ನಿರಂತರವಾಗಿ ಹೊಸ ಹೊಸ ಚಿಂತನೆಗಳಲ್ಲಿ 'ಭರವಸೆ'ಯ ಶೀರ್ಷಿಕೆಯಲ್ಲಿ ಮೂಡಿಬರುತ್ತಿರುವ ಇವರ ಪ್ರೇರಣಾತ್ಮಕ ಪ್ರಸ್ತುತಿಗಳು ಅಪಾರ ಜನಪ್ರಿಯತೆಯಿಂದ ಬಹುಜನರ ಬದುಕಿಗೆ ಬೆಳಕಾಗುತ್ತಿವೆ. 

"ಒದ್ದೆ ಕಣ್ಣುಗಳ ಪ್ರೀತಿ" ಸುಧಾ ಶರ್ಮ ಅವರ  ಕವನ ಸಂಕಲನ. ಈ ಸಂಕಲನಕ್ಕೆ ಬೇಂದ್ರೆ ಅಡಿಗ ಕಾವ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೌರೀಶ ಕಾಯ್ಕಿಣಿ ಪ್ರಶಸ್ತಿ, ಹವ್ಯಕಶ್ರೀ ಪ್ರಶಸ್ತಿ ಲಭಿಸಿದೆ. "ಅತ್ತುಬಿಡೇ ಗೆಳತಿ" ಇದು ಇವರ ಸಂಯುಕ್ತ ಸಂಕಲನ. ಇವರು ಸಂಪಾದಿಸಿದ ಅತ್ತೆ ಸೊಸೆ ಸಂಬಂಧದ "ಎರಡು ಕಣ್ಣು ಒಂದೇ ದೃಷ್ಟಿ-ಅತ್ತೆ ಸೊಸೆ"  ಪ್ರಸಿದ್ಧವಾಗಿದೆ. ಪ್ರಾಫಿಟ್ ಪ್ಲಸ್ ಮತ್ತು ಹಲವು ಪತ್ರಿಕೆಗಳಲ್ಲಿ ಮೂಡಿ ಬಂದಿರುವ ಸುಧಾ ಅವರ ಅಂಕಣ ಬರಹಗಳು 'ನಮ್ಮೊಳಗೆ ನಾವು' ಸಂಕಲನ ರೂಪದಲ್ಲಿ ಮೂಡಿಬಂದಿದೆ. ಅವರಿಗೆ 2024 ವರ್ಷದಲ್ಲಿ ಪ್ರತಿಷ್ಟಿತ 'ಅವ್ವ' ಪ್ರಶಸ್ತಿ ಸಂದಿದೆ. 

ಸುಧಾ ಶರ್ಮ ಅವರು ವ್ಯಕ್ತಿತ್ವ ವಿಕಸನ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಸಕ್ರಿಯರಾಗಿದ್ದಾರೆ. 

ಸುಧಾ ಅವರೊಡನೆ ಕೆಲವೇ ಕ್ಷಣ ವ್ಯಕ್ತಿಗತವಾಗಿ ಮಾತಾಡುವಾಗ ಆಗಲಿ, ಅವರ ಬರಹ ಓದುವಾಗ ಆಗಲಿ, ಅವರ ಉಪನ್ಯಾಸ, ನಿರೂಪಣೆ ಹೀಗೆ ಯಾವುದಕ್ಕೇ ಕಿವಿಗೊಟ್ಟಾಗ ಆಗಲಿ,  ಇಂಪಾದ ಗಾನದಂತಹ ಹಿತ ಮತ್ತು ಆಪ್ತವಾದ  ಹೃದಯ ಸಂವೇದನೆ ಪಡೆದ ಅನುಭವ ದೊರಕುತ್ತದೆ.

ಮಹತ್ವದ ಪ್ರತಿಭಾವಂತ ಸಾಹಸಿ, ಸಾಧಕರೂ, ಆತ್ಮೀಯರೂ ಆದ ಸುಧಾ ಶರ್ಮ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಿಮ್ಮ ಜ್ಞಾನವಾಹಿನಿಯ ಹೆಸರು ‘ಭರವಸೆ’.  ನೀವು ನಮಗೆ ಆಪ್ತರಾಗಿದ್ದೀರಿ ಎಂಬುದೂ ನಮಗೆ 'ಭರವಸೆ'ಯ ಶಕ್ತಿಯಾಗಿದೆ 😇.  ನಮಸ್ಕಾರ. 🌷🙏🌷

Happy birthday to journalist, organizer, presenter, positive psychologist, motivational speaker and writer Sudha Sharma 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ