ಗಂಗಾಧರ್
ಗಂಗಾಧರ್
ಗಂಗಾಧರ್ ಕನ್ನಡ ಚಿತ್ರರಂಗದ ಹೆಸರಾಂತ ನಟರಾಗಿದ್ದವರು. ಇಂದು ಅವರ ಸಂಸ್ಮರಣೆ ದಿನ.
ಗಂಗಾಧರ್ ಅವರು 1936ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿದ್ದ ಅವರು ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರು ಸಂಸಾರೆ ನೌಕೆ, ಎಚ್ಚಮ್ಮನಾಯಕ ಮತ್ತು ವಿಜಯೋತ್ಸವದಂತಹ ನಾಟಕಗಳಲ್ಲಿ ಅಭಿನಯಿಸಿದ್ದರು. ಪ್ರಭಾತ್ ಕಲಾವಿದರು ನಾಟಕ ತಂಡದಲ್ಲಿ ಗಣನೀಯ ಯಶಸ್ಸನ್ನು ಗಳಿಸಿದ್ದರು.
ಮೇಕಪ್ ಕಲಾವಿದರಾದ ಮಹಾದೇವಯ್ಯ ಅವರು ಗಂಗಾಧರ್ ಅವರನ್ನು ಚಲನಚಿತ್ರ ನಿರ್ಮಾಪಕ ಜಿ.ವಿ. ಅಯ್ಯರ್ ಅವರಿಗೆ ಪರಿಚಯಿಸಿದರು. ಹೀಗೆ ಅವರು ಅಯ್ಯರ್ ಅವದ 'ಚೌಕದದೀಪ' (1969) ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದರು. ಆ ಚಿತ್ರಕ್ಕಾಗಿ ಅವರನ್ನು ರಾಜೇಂದ್ರ ಕುಮಾರ್ ಎಂದು ಹೆಸರಿಸಲಾಗಿತ್ತು. ಆದರೆ, ಗಂಗಾಧರ್ ಅವರ ಮೊದಲು ಬಿಡುಗಡೆಯಾದ ಚಿತ್ರ ರಾಜ್‌ಕುಮಾರ್ ಅಭಿನಯದ 'ಲಗ್ನಪತ್ರಿಕೆ’ (1967). ಅದರ ನಂತರ, ಅವರು ಪುಟ್ಟಣ್ಣ ಕಣಗಾಲ್ ಅವರ ಯಶಸ್ವಿ ಚಿತ್ರ, 'ಗೆಜ್ಜೆಪೂಜೆ' (1969)ಯಲ್ಲಿ ಕಲ್ಪನಾ ಅವರೊಂದಿಗೆ ನಟಿಸಿದರು. ತರುವಾಯ 'ನನ್ನ ತಮ್ಮ' (1970) ಚಿತ್ರದಲ್ಲಿ ರಾಜ್‌ಕುಮಾರ್ ಅವರ ಸಹೋದರನಾಗಿ ಕಾಣಿಸಿಕೊಂಡರು. ಮತ್ತೆ 'ಸೀತಾ' (1970) ಚಿತ್ರದಲ್ಲಿ ಕಲ್ಪನಾ ಎದುರು ಜೋಡಿಯಾದರು. ಆ ಸಮಯದಲ್ಲಿ ಮೂಡಿದ ಜನಪ್ರಿಯ ಸಹಯೋಗದಿಂದ, ಮುಂದೆ ಈ ಜೋಡಿ ‘ಸೋತು ಗೆದ್ದವಳು’ (1971), ಯಾವ ಜನ್ಮದ ಮೈತ್ರಿ (1972) ಮತ್ತು ‘ಭಲೇ ಅದೃಷ್ಟವೋ ಅದೃಷ್ಟ’ (1972) ಚಿತ್ರಗಳಲ್ಲಿ ನಟಿಸಿದರು. 'ಬಾಂಧವ್ಯ'ದಲ್ಲಿ (1972) ಕೆ.ಎಸ್. ಅಶ್ವಥ್ ಅವರ ಸಹೋದರನ ಪಾತ್ರವನ್ನು ನಿರ್ವಹಿಸಿದರು. 1971 ರಲ್ಲಿ ಗಂಗಾಧರ್ ನಟಿಸಿದ ಏಳು ಬಿಡುಗಡೆಗಳನ್ನು ಕಂಡಿತು. ಅದರಲ್ಲಿ ಭಾರೀ ಯಶಸ್ವಿಯಾದ 'ಶರಪಂಜರ' ಮತ್ತು ಬಿ.ಆರ್.ಪಂತುಲು ಅವರ 'ಅಳಿಯ ಗೆಳೆಯ' ಸೇರಿತ್ತು. 1972 ರಲ್ಲಿ, ಗಂಗಾಧರ್ ಅವರ ನಾಲ್ಕು ಚಿತ್ರಗಳು ಬಿಡುಗಡೆಯಾದವು. ಪುಟ್ಟಣ್ಣ ಕಣಗಾಲ್ ಅವರ 'ಕಥಾಸಂಗಮ'ದಲ್ಲಿ (1975) 'ಮುನಿತಾಯಿ' ಕಥಾನಕದಲ್ಲಿ ಆರತಿ ಅವರ ಜೊತೆ ನಟಿಸಿದರು. 1970ರ ಮತ್ತು 1980ರ ದಶಕದ ಉಳಿದ ಭಾಗಗಳಲ್ಲಿ ಗಂಗಾಧರ್ ಅವರಿಗೆ ಅವಕಾಶಗಳು ಕಡಿಮೆಯಾದವು. ದೇವರು ಕೊಟ್ಟ ವರ (1976), ಮುತ್ತು ಒಂದು ಮುತ್ತು (1979), ಜೀವಕ್ಕೆ ಜೀವ (1981), ಭಕ್ತ ಪ್ರಹ್ಲಾದ (1983), ಕರ್ಣ (1986) ಅಂತಹ ಕೆಲವೊಂದು ಚಿತ್ರಗಳಲ್ಲಿನ ಕಿರುಪಾತ್ರಗಳಲ್ಲಿ ಅಭಿನಯಿಸಿದರು.
ಗಂಗಾಧರ್ 1980 ರ ದಶಕದಲ್ಲಿ ಚಲನಚಿತ್ರ ಅವಕಾಶಗಳು ಕಡಿಮೆಯಾದಾಗ ರಂಗಭೂಮಿಗೆ ಮರಳಿದರು. ಆದರೆ ಆರೋಗ್ಯದ ತೊಂದರೆಯಿಂದ 1995ರ ವೇಳೆಗೆ 59 ನೇ ವಯಸ್ಸಿನಲ್ಲಿ ನಟನೆಯಿಂದ ನಿವೃತ್ತರಾಗಬೇಕಾಯಿತು. ಗಂಗಾಧರ್ ಅವರು ಸುಮಾರು 80 ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದರು.
ಕನ್ನಡ ಚಿತ್ರರಂಗಕ್ಕೆ ಗಂಗಾಧರ್ ಅವರ ಕೊಡುಗೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಯಿತು.
ಗಂಗಾಧರ್ ಅವರು 2003ರ ಡಿಸೆಂಬರ್ 27ರಂದು ತಮ್ಮ 67 ನೇ ವಯಸ್ಸಿನಲ್ಲಿ ನಿಧನರಾದರು.
On Remembrance Day of popular actor Gangadhar 🌷🙏🌷
ಕಾಮೆಂಟ್‌ಗಳು