ಕನ್ಸೆಪ್ಟಾ ಫೆರ್ನಾಂಡೀಸ್
ಕನ್ಸೆಪ್ಟಾ ಫೆರ್ನಾಂಡೀಸ್
ಕನ್ಸೆಪ್ಟಾ ಫೆರ್ನಾಂಡೀಸ್ ಆಕಾಶವಾಣಿಯಲ್ಲಿ ಅಧಿಕಾರಿಗಳಾಗಿ ಸೇವೆಯಿಂದ ನಿವೃತ್ತರಾಗಿದ್ದು, ಜನಾನುರಾಗಿಯಾಗಿ ಎಲ್ಲರೊಡನೆ ಆಪ್ತಭಾವ ಹೊಂದಿರುವ ಅನುಪಮ ವ್ಯಕ್ತಿತ್ವದವರು.
ಇಂದು ಆಕಾಶವಾಣಿಯ ಮಂದಹಾಸ - ಸುಮಧುರ ವಾಣಿ - ಕಾರ್ಯಕ್ರಮ ವ್ಯವಸ್ಥಾಪಕಿ - ವಿವಿಧ ಭಾರತಿ ಮುಖ್ಯಸ್ಥರಾಗಿದ್ದ ಕನ್ಸೆಪ್ಟಾ ಫೆರ್ನಾಂಡೀಸ್ ಅವರ ಜನ್ಮದಿನ.
ಆಕಾಶವಾಣಿಯಲ್ಲಿ ಕಾಲಿರಿಸಿದವರನ್ನೆಲ್ಲ ಎಷ್ಟೋ ಯುಗದ ಪರಿಚಯದವರಂತೆ ತಮ್ಮ ಆಪ್ತರನ್ನಾಗಿಸಿಕೊಂಡು, ನಸು ನಗುತ್ತ, ತಾವು ಹಿರಿಯ ಅಧಿಕಾರಿ ಎಂಬ ಯಾವ ಹಮ್ಮು ಬಿಮ್ಮುಗಳೂ ಇಲ್ಲದೆ ಮಾತನಾಡುತ್ತಿದ್ದ ಕನ್ಸೆಪ್ಟಾ ಫೆರ್ನಾಂಡೀಸ್ ನಿಜಕ್ಕೂ ಅಚ್ಚರಿ. ಸದಾ ಏನಾದರೂ ಮಾಡಬೇಕು ಎಂಬ ಉತ್ಸಾಹಿಯಾದ ಅವರು ನಿರ್ವಹಣಾ ಅಧಿಕಾರಿಯ ಸ್ಥಾನದಲ್ಲಿದ್ದರೂ, ತಾವೇ ಹಲವಾರು ಕಾರ್ಯಕ್ರಮಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದವರು. ಹಲವು ವರ್ಷಗಳಿಂದ ನೆನೆಗುದಿಯಲ್ಲಿದ್ದ ಆಕಾಶವಾಣಿಯ ಸಂಗೀತ ಪ್ರತಿಭಾನ್ವೇಷಣೆಗಳಂತಹ ಹಲವಾರು ಯೋಜನೆಗಳಿಗೆ ಜೀವ ತಂದಿದ್ದರು.
ಕನ್ಸೆಪ್ಟಾ ಫೆರ್ನಾಂಡೀಸ್ ಅವರು ಪ್ರಧಾನವಾಗಿ ಮಂಗಳೂರು, ಮಡಿಕೇರಿ ಆಕಾಶವಾಣಿ ಕೇಂದ್ರಗಳಲ್ಲಿ ಅನೇಕ ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಬೆಂಗಳೂರು ವಿವಿಧ ಭಾರತಿಯ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಕನ್ನಡ, ಕೊಂಕಣಿ, ತುಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರಿಗೆ ಅಪಾರ ಪರಿಣತಿ ಇದೆ.
ಕನ್ಸೆಪ್ಟಾ ಅವರು ಆಕಾಶವಾಣಿಯಲ್ಲಿನ ಅನೇಕ ಉತ್ತಮ ಕಾರ್ಯಕ್ರಮಗಳಿಗಾಗಿ ಬಹುಮಾನಿತರಾದವರು. ರಕ್ತದಾನದ ಕುರಿತಾದ 'ಬಿಂದು ಬಿಂದು ಜೀವ ಸಿಂಧು'ಗೆ ರಾಜ್ಯಮಟ್ಟದ ಪ್ರಶಸ್ತಿ, 'ಗುಮೊಟ್' ಎಂಬ ಜಾನಪದೀಯ ಡೋಲು ವಾದ್ಯದ ಕುರಿತಾದ ಕೊಂಕಣಿ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ, ಕೆ. ಟಿ. ಗಟ್ಟಿ ಅವರ ರಚನೆಯಾಧಾರಿತ 'ಭಿನ್ನಮತ' ಎಂಬ ಕನ್ನಡ ನಾಟಕದ ಪ್ರಸ್ತುತಿಗೆ 'ಪ್ರೋಗ್ರಾಮ್ ಎಕ್ಸೆಲೆನ್ಸಿ' ಪ್ರಶಸ್ತಿ, ಕೊಂಕಣಿ ಗಾಯಕರಾದ 'ವಿಲ್ಫಿ ರೆಮಿಂಬಸ್' ಅವರ ಕುರಿತಾದ ಸಾಕ್ಷ್ಯಚಿತ್ರಕ್ಕೆ ಬಹುಮಾನ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ.
ಬಿ.ಕೆ. ಸುಮತಿ, ಕನ್ಸೆಪ್ಟಾ ಫೆರ್ನಾಂಡಿಸ್ ಮತ್ತು ಚಂದೂ ಅವರು ಆಕಾಶವಾಣಿಯಲ್ಲಿ ರೂಪಿಸಿದ್ದ 'ಕನ್ನಡ ಕಜ್ಜಾಯ' ಸರಣಿ, 2025 ನವೆಂಬರ್ ಮಾಸದಲ್ಲಿ ಪುಸ್ತಕ ರೂಪದಲ್ಲಿ ಮೂಡಿಬಂದಿದೆ.
ನಿತ್ಯ ಹಸನ್ಮುಖಿ, ಸರಳ, ಸಹೃದಯಿ, ಉತ್ಸಾಹಿ, ಆತ್ಮೀಯರಾದ ಕನ್ಸೆಪ್ಟಾ ಫೆರ್ನಾಂಡೀಸ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Concepta Fernandes 🌷🙏🌷

ಕಾಮೆಂಟ್‌ಗಳು