ತಿರುಪ್ಪಾವೈ17
ಜಗದೋದ್ಧಾರನನ್ನೇ ಆಡಿಸಿಹೆ ಯಶೋದಮ್ಮಾ
Thiruppavai 17
ಅಂಬರಮೇ ತಣ್ಣೀರೇ ಶೋರೇ ಅರಂಶೆಯ್ಯುಂ
ಎಂಬೆರುಮಾನ್ ನಂದಗೋಪಾಲಾ ಎಳುಂದಿರಾಯ್
ಕೊಂಬನಾರ್ಕೆಲ್ಲಾಂ ಕೊಳುಂದೇ ಕುಲವಿಳಕ್ಕೇ
ಎಂಬೆರುಮಾಟ್ಟಿ ಯಶೋದಾ ಅರಿವುರಾಯ್
ಅಂಬರ ಮಾಡರತ್ತೋಂಗಿ ಉಲಹಗಳಂದ
ಉಂಬರ್ ಕ್ಕೋಮಾನೇ ಉರಂಗಾದೇಳುಂದಿರಾಯ್
ಶೆಂಪೊರ್ಕಳಲಡಿಶೆಲ್ವಾ ಬಲದೇವಾ ಉಂಬಿಯುಂ ನೀಯುಂ ಉರುಂಗೇಲೋರೆಂಬಾವಾಯ್ ॥
ಭಾವಾನುವಾದ
ಕೊಳಲನೂದುವ ಚತುರಗಿರಿಯನೆತ್ತಿದ ಧೀರ ಗರುಡ ಗಮನ
ನಿನ್ನ ಮಗ ಸುರಗಣಾಧ್ಯಕ್ಷಧನ್ಯ ನೀನತಿಶಯದಿ ನಂದಯ್ಯ ಬೇಗೆದ್ದು ಬಾ ಕೃತಲಕ್ಷಣನ ಗೆಳತಿಯರೈದಿಹೆವು ಕೊಳಲ ಗಾನವ ಕೇಳೆ ಒಲವಿಂದ ಧರ್ಮನಂದನನ ಕುಲದೈವ ವಿಶ್ವವಂದಿತ ಚರಣ ದೂರ್ವಾಸ ಮುನಿವರದ ಚರಾಚರಗೊಡೆಯ ಚೇತನಾಚೇತನ ಜಗದೋದ್ಧಾರನನ್ನೇ ಆಡಿಸಿಹೆ
ನೀನತಿ ಭಾಗ್ಯವತಿಯಮ್ಮ ಯಶೋದಮ್ಮ
ಬೇಗೆದ್ದು ಬಾರಮ್ಮ
ಅಣ್ಣ ಬಲಭದ್ರ ನೀನುಡಿದು ವನಮಾಲಿಯ ದರ್ಶನವ ಕೊಡಿಸೆಮಗೆ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ
ಮುಂಬೆಳಕು
ಸಂಕ್ಷಿಪ್ತ ಭಾವಾರ್ಥ 17
ದ್ವಾರಪಾಲಕರಿಂದ ಅನುಮತಿ ಪಡೆದು ಅರಮನೆಯೊಳಕ್ಕೆ ಪ್ರವೇಶಿಸಿದ್ದಾಯ್ತು. ಇನ್ನು ಗೋಕುಲದ ಒಡೆಯನಾದ ನಂದಗೋಪ, ಯಶೋದೆ, ಬಲರಾಮ ಇವರ ಅನುಮತಿಗಾಗಿ ಪ್ರಾರ್ಥನೆ.
ಓ ನಂದಯ್ಯ, ಗೋವರ್ಧನ ಗಿರಿಯನ್ನು ಎತ್ತಿದ ಧೀರ, ಗಜೇಂದ್ರ ವರದ, ಗರುಡ ಗಮನ, ಕೊಳಲನೂದುವ ಚತುರ, ಹೀಗೆ ನಾನಾ ಹೆಸರುಗಳಿಂದ ಸ್ತುತಿಸಿಕೊಳ್ಳುವ, ಪವಾಡಗಳನ್ನೇ ತೋರಿಸಿದ ಆ ಪರಂಧಾಮನನ್ನೇ ನಿನ್ನ ಮಗನೆಂದು ಜನರು ಹೇಳುತ್ತಿದ್ದಾರೆ. ಅಲ್ಲದೆ ನೀನೂ ಸಹ ಕೊಡುಗೈದಾನಿ ಎಂದೂ ಸಹ ಜನರು ಮುಕ್ತ ಕಂಠದಿಂದ ಹೊಗಳುತ್ತಿದ್ದಾರೆ. ಎಷ್ಟು ಅದೃಷ್ಟಶಾಲಿ ನೀನು ಓ ನಂದಯ್ಯ. ನಾವುಗಳು ನಿನ್ನ ಮಗನ ಪ್ರೀತಿಯ ಗೆಳತಿಯರು. ಮಂಗಳದ ಮಾರ್ಗಶಿರ ವ್ರತವನ್ನಾಚರಿಸಿ ದರ್ಶನಕ್ಕಾಗಿ ಬಂದಿದ್ದೇವೆ. ನೀನು ಬೇಗೆದ್ದು ಬಾ. ನಮಗೆ ಶ್ರೀ ಹರಿಯ ದರ್ಶನಭಾಗ್ಯವನ್ನು ಕೊಡಿಸು ಎಂದು ಪ್ರಾರ್ಥಿಸುತ್ತಾಳೆ.
ನಂತರ, ಅಮ್ಮಾ ಯಶೋದಮ್ಮ ನೋಡಿಲ್ಲಿ ಆಳ್ವಾರರುಗಳೆಲ್ಲಾ ದ್ವಾದಶನಾಮಗಳಿಂದ ತನುಮನಗಳನ್ನು ಅಲಂಕರಿಸಿಕೊಂಡು ಬಂದು ಶ್ರೀಕೃಷ್ಣನ ಗುಣಗಾನ ಮಾಡುತ್ತಲಿದ್ದಾರೆ. ದೂರ್ವಾಸಮುನಿಗಳಿಂದ ಪೂಜಿತನಾದವನೇ ಶ್ರೀಕೃಷ್ಣ, ಧರ್ಮನಂದನನ ಕುಲದೈವ ಶ್ರೀ ವಿಷ್ಣುಚಿತ್ತರ ಹೃತ್ಕಮಲವಾಸನಾದ ಅಪ್ರಮೇಯ. ಇಷ್ಟೇಕೆ, ಈತನು ಚೇತನಾಚೇತನಕ್ಕೆ ಚೇತನನು ಎಂದು ಹಾಡುತ್ತಿದ್ದಾರೆ. ಅಬ್ಬ! ಎಂತಹ ಅದೃಷ್ಟವಂತಳಮ್ಮ ನೀನು, ಇಂತಹ ಮಹಾಮಹಿಮ ಜಗದೋದ್ಧಾರನನ್ನೇ ನಿನ್ನ ಮಗನೆಂದು ಆಡಿಸುತ್ತಿದ್ದೀಯ ನಿನ್ನ ಭಾಗ್ಯಕ್ಕೆ ಎಣೆಯೇ ಇಲ್ಲ.
ನೋಡಮ್ಮತಾಯಿ ನಾವು ಭಕ್ತಿಯಿಂದ ಮಾರ್ಗಶಿರ ವ್ರತವನ್ನು ಮಾಡಿ ನಿನ್ನ ಮಗನ ದರ್ಶನಾರ್ಥಿಗಳಾಗಿ ಬಂದಿದ್ದೇವೆ. ನೀನು ಬೇಗೆದ್ದು ಬಂದು ನಮಗೆ ನಿನ್ನ ಮುದ್ದು ಗೋಪಾಲನ ದರ್ಶನ ಮಾಡಿಸಮ್ಮ ಎಂದು ಪ್ರಾರ್ಥಿಸುತ್ತಾಳೆ.
ನಂತರ ಬಲಭದ್ರನ ಪ್ರಾರ್ಥನೆ. ಅಣ್ಣ ಬಲಭದ್ರಣ್ಣ ನೀನು ಬಲಶಾಲಿಗಳಲ್ಲಿ ಬಲಶಾಲಿ, ನೀನೇ ಕೃಷ್ಣನಿಗೆ ರಕ್ಷಾಕವಚವೆಂದು ಕೇಳಿದ್ದೇವೆ. ಅಲ್ಲದೆ ನಿನ್ನನ್ನು ಕಂಡರೇ ಶ್ರೀ ಕೃಷ್ಣನೂ ಭಯಪಡುತ್ತಾನಂತೆ ನಿನಗೇ ಮೊದಲು ನಮಸ್ಕರಿಸುತ್ತಾನಂತೆ. ಶ್ರೀ ಕೃಷ್ಣನ ದರ್ಶನವನ್ನು ಮಾಡಿಸು. ಇದರಿಂದ ನಮ್ಮವ್ರತವೂ ಈಡೇರಲಿ, ಸಕಲ ಲೋಕಕ್ಕೂ ಸನ್ಮಂಗಳವುಂಟಾಗಲಿ.
ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ
Art credits: Keshav (©KrishnaforToday)
ಕಾಮೆಂಟ್‌ಗಳು