ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಯಂತಿ ಕುಮರೇಶ್


 ಜಯಂತಿ ಕುಮರೇಶ್

On the birthday of great musician Jayanthi Kumaresh. 🌷🙏🌷

ವಿದುಷಿ ಡಾ.ಜಯಂತಿ ಕುಮರೇಶ್ ಜನಪ್ರಿಯ ವೀಣಾ ಕಲಾವಿದೆ.

ಜಯಂತಿ ಕುಮರೇಶ್ ಅವರ ಶ್ರೀಮಂತ ಸಂಗೀತ ಪರಂಪರೆ, ಕಡೇ ಪಕ್ಷ ಆರು ತಲೆಮಾರುಗಳಷ್ಟು ಹಿಂದಿನದು.  ಅವರ ಸಂಗೀತ ಪ್ರಯಾಣವು 3 ನೇ ವಯಸ್ಸಿನಲ್ಲಿಯೇ,  ಅವರ ತಾಯಿ ವಿದುಷಿ ಲಾಲ್ಗುಡಿ ಆರ್.ರಾಜಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ಪ್ರಾರಂಭವಾಯಿತು. ಮುಂದೆ 22 ವರ್ಷಗಳ ಕಾಲ ಗುರು ವಿದುಷಿ ಪದ್ಮಾವತಿ ಅನಂತಗೋಪಾಲನ್ ಅವರಲ್ಲಿ ಸಂಗೀತ ಕಲೆಯ ಸೂಕ್ಷ್ಮಜ್ಞತೆಗಳನ್ನು ಕಲಿತರು. ವೀಣಾವಾದನದ ಮಹಾನ್ ಕಲಾವಿದರಾದ ಡಾ.ಎಸ್.ಬಾಲಚಂದರ್ ಅವರ ಮಾರ್ಗದರ್ಶನದಲ್ಲಿ ಇವರ ವೀಣಾ ವಾದನ ತಂತ್ರವು ಔನ್ನತ್ಯವನ್ನು ಗಳಿಸಿಕೊಂಡಿತು.

ಭಾರತದಲ್ಲಿ ಹಲವಾರು ಪ್ರತಿಷ್ಠಿತ ಸ್ಥಳಗಳು ಮತ್ತು ಉತ್ಸವಗಳಲ್ಲದೆ, ಸ್ಯಾನ್ ಫ್ರಾನ್ಸಿಸ್ಕೊ ​​​​ಜಾಝ್ ಫೆಸ್ಟಿವಲ್, ಲಂಡನ್ ದರ್ಬಾರ್ ಫೆಸ್ಟಿವಲ್, ಸ್ಕಾಟ್ಲೆಂಡ್‌ನ ಸೆಲ್ಟಿಕ್ ಕನೆಕ್ಷನ್ಸ್, ಕ್ವೀನ್ಸ್‌ಲ್ಯಾಂಡ್ ಮ್ಯೂಸಿಕ್ ಫೆಸ್ಟಿವಲ್, ಡಾರ್ವಿನ್ ಮ್ಯೂಸಿಕ್ ಫೆಸ್ಟಿವಲ್ ಮತ್ತು ಅಡಿಲೇಡ್ ಮ್ಯೂಸಿಕ್ ಫೆಸ್ಟಿವಲ್, ಬಿಬಿಸಿ ಪ್ರಾಮ್ಸ್ ಲಂಡನ್ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಉತ್ಸವಗಳಲ್ಲಿ ಜಯಂತಿ ಕುಮರೇಶ್ ಕಾರ್ಯಕ್ರಮಗಳನ್ನು ನೀಡಿದ್ದಾರೆ. ನ್ಯೂಯಾರ್ಕ್‌ನಲ್ಲಿರುವ ಯುನೈಟೆಡ್ ನೇಷನ್ಸ್, ಪಲ್ಲಾಡಿಯಮ್, ಇಂಡಿಯಾನಾ, ಥಿಯೇಟ್ರೆ ಡೆ ಲಾ ವಿಲ್ಲೆ, ಪ್ಯಾರಿಸ್ ಮತ್ತು ನಾರ್ತ್‌ವೆಸ್ಟ್ ಫೋಕ್‌ಲೈಫ್ ಫೆಸ್ಟಿವಲ್, ಸಿಯಾಟಲ್‌ನಂತಹ ಪ್ರತಿಷ್ಠಿತ ಸ್ಥಳಗಳಲ್ಲಿ ಸಹ ಇವರ ಕಚೇರಿಗಳು ನಡೆದಿವೆ.

ಜಯಂತಿ ಕುಮರೇಶ್ ಅವರಿಗೆ ತಮಿಳುನಾಡು ಸರ್ಕಾರದಿಂದ "ಸಂಗೀತ ಚೂಡಾಮಣಿ", "ಕಲೈಮಾಮಣಿ", "ವೀಣಾ ನಾದ ಮಣಿ", "ಕಲಾ ರತ್ನ", "ಸತ್ಯಶ್ರೀ", "ಗಾನ ವಾರಿಧಿ", ಸಂಗೀತ ಅಕಾಡೆಮಿ ಪ್ರಶಸ್ತಿ, ಚೆನ್ನೈನ “ವೀಣಾ ಪ್ರಶಸ್ತಿ”, “ಸಂಗೀತ ಶಿಕಾರ್ ಸಮ್ಮಾನ್”, “ಇಂದಿರಾ ಶಿವಶೈಲಂ ದತ್ತಿ ಪದಕ” ಸೇರಿದಂತೆ ಅನೇಕ ಗೌರವಗಳು ಸಂದಿವೆ. 

ಜಯಂತಿ ಅವರು ತಮ್ಮ ವೀಣಾವಾದನ ಕ್ಷೇತ್ರದ ಪ್ರವರ್ತಕರಾಗಿ, ಪ್ರಪಂಚದ ಮೂಲೆ ಮೂಲೆಯಲ್ಲಿರುವ ಪ್ರೇಕ್ಷಕರಿಗೆ ವಿವಿಧ ಸ್ವರೂಪಗಳಲ್ಲಿ ವೀಣಾವಾದನವನ್ನು ಪ್ರಸ್ತುತಪಡಿಸಿದ್ದಾರೆ. ತಮ್ಮ ಸ್ವಂತ ಸಂಗೀತ ಕಚೇರಿಗಳಲ್ಲದೆ, ಉಸ್ತಾದ್ ಜಾಕಿರ್ ಹುಸೇನ್ ಅವರಂತಹ ದಂತಕಥೆಗಳೊಂದಿಗೆ ಸಹ ಪ್ರದರ್ಶನ ನೀಡಿದ್ದಾರೆ.  ಯುಗಳ ಕಾರ್ಯಕ್ರಮಗಳು ಮತ್ತು ಉತ್ತರ-ದಕ್ಷಿಣ ಜುಗಲ್ಬಂಧಿಗಳನ್ನು ಹಲವಾರು ಪ್ರಸಿದ್ಧ ಸಂಗೀತಕಾರರೊಂದಿಗೆ ಪ್ರಸ್ತುತಪಡಿಸಿದ್ದಾರೆ. ಅವರ 45 ರಾಗಗಳು 124 ನಿಮಿಷಗಳ ಕಾಲ  ಮೂಡಿದ ನೇರ ಸಂಗೀತ ಕಛೇರಿಗಳಲ್ಲಿ ಒಂದಾಗಿದೆ. ಅವರ ಸ್ಟೋರಿ ಇನ್ ಕನ್ಸರ್ಟ್ ನಿರ್ಮಾಣವು ವಿಭಿನ್ನ ಕಲಾ ಪ್ರಕಾರಗಳ ಏಕೀಕರಣವಾಗಿದ್ದು, ಕಥೆ ಹೇಳುವುದು, ಸಂಗೀತ ಮತ್ತು ಚಿತ್ರಕಲೆ ಎಲ್ಲವೂ ಒಂದೇ ಛತ್ರದ ಅಡಿಯಲ್ಲಿ ಒಂದುಗೂಡಿದೆ. ಅವರು ಭಾರತೀಯ ರಾಷ್ಟ್ರೀಯ ಆರ್ಕೆಸ್ಟ್ರಾದ ಸ್ಥಾಪಕರಾಗಿದ್ದು, ಭಾರತದಾದ್ಯಂತದ ವಿವಿಧ ಪ್ರದೇಶಗಳಿಗೆ ಸೇರಿದ 21 ಸ್ಟಾರ್ ಸಂಗೀತಗಾರರನ್ನು ಒಳಗೊಂಡಿದೆ. ಅವರ ಆಲ್ಬಮ್ 'ಮಿಸ್ಟೀರಿಯಸ್ ಡ್ಯುಯಾಲಿಟಿ' ವಿಶಿಷ್ಟ ಪ್ರಯೋಗವೆನಿಸಿ ಜನಪ್ರಿಯಗೊಂಡಿದೆ. ಅವರ ವೆಬ್ ಸೀರೀಸ್ 'ಕಪ್ ಓ ಕರ್ನಾಟಿಕ್' ಅತ್ಯಂತ ಜನಪ್ರಿಯವಾಗಿದೆ.

ಸಂಶೋಧಕಿಯಾಗಿರುವ ಜಯಂತಿ  ಅವರು "ಸರಸ್ವತಿ ವೀಣೆಯ ಶೈಲಿಗಳು ಮತ್ತು ನುಡಿಸುವ ತಂತ್ರಗಳ" ಕುರಿತಾದ ತಮ್ಮ ಸಂಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ವಿವಿಧ ವಿಶ್ವವಿದ್ಯಾನಿಲಯಗಳು ಮತ್ತು ಶಾಲೆಗಳಲ್ಲಿ ಅವರ ಮಾತುಕತೆಗಳು ಮತ್ತು ಉಪನ್ಯಾಸ-ಪ್ರದರ್ಶನಗಳು ಮತ್ತು ಹಲವಾರು TEDx ಮಾತುಕತೆಗಳು ನಡೆಯುತ್ತಿವೆ. 

ಸಂಯೋಜಕಿಯಾಗಿ ಜಯಂತಿ ಅವರು ಅನೇಕ ಸಂಗೀತ, ನೃತ್ಯ ನಿರ್ಮಾಣಗಳು ಮತ್ತು ಸಾಕ್ಷ್ಯಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ