ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರಭಾ ಅತ್ರೆ


ಪ್ರಭಾ ಅತ್ರೆ 

ಪ್ರಭಾ ಅತ್ರೆ ಮಹಾನ್ ಸಂಗೀತಗಾರ್ತಿಯಾಗಿ ವಿಶ್ವಪ್ರಸಿದ್ಧರು. 

ಪ್ರಭಾ ಅತ್ರೆ ಅವರು 1932ರ ಸೆಪ್ಟೆಂಬರ್ 13ರಂದು ಪುಣೆಯಲ್ಲಿ ಜನಿಸಿದರು. ತಂದೆ ಅಬಾ ಸಾಹೇಬ್.  ತಾಯಿ ಇಂದಿರಾಬಾಯಿ.  ಇಂದಿರಾಬಾಯಿ ಅವರಿಗೆ ಅನಾರೋಗ್ಯವಾಗಿದ್ದ ಸಂದರ್ಭದಲ್ಲಿ ಅವರ ಹಿತೈಷಿಯೊಬ್ಬರು ಸಂಗೀತದ ಅಭ್ಯಾಸ ಮಾಡಿ ಒಳ್ಳೆಯದಾಗುತ್ತೆ ಎಂದು ಹಿತನುಡಿದರು.  ಹೀಗೆ ತಾಯಿ ಸ್ವಲ್ಪ ಕಾಲ ಸಂಗೀತ ಕಲಿಯುತ್ತಿದ್ದಾಗ ಎಂಟು ವರ್ಷದ ಬಾಲಕಿ ಪ್ರಭಾ ಅತ್ರೆ ಅವರಿಗೆ ಸಂಗೀತದಲ್ಲಿ ಅಪಾರ ಆಸಕ್ತಿ ಹುಟ್ಟಿತು.

ಪ್ರಭಾ ಅತ್ರೆ ಗುರುಶಿಷ್ಯ ಪರಂಪರೆಯಲ್ಲಿ ಸಂಗೀತ ಕಲಿಕೆಯನ್ನರಾಂಭಿಸಿದರು. ಸುರೇಶ್ ಬಾಬು ಮಾನೆ ಅವರಲ್ಲಿ ಮತ್ತು ಕಿರಾಣಾ ಘರಾನಾದ ಹೀರಾಬಾಯಿ ಬಡೋದೆಕರ್ ಅವರಲ್ಲಿ ಸಂಗೀತ ಸಾಧನೆಯನ್ನು ಮಾಡಿದರು. ಅಮಿರ್‍ ಖಾನ್ ಸಾಹೇಬರ  ಖಯಾಲ್ ಸಂಗೀತ ಮತ್ತು ಬಡೇ ಗುಲಾಮ್ ಅಲಿ ಖಾನರ ಠುಮ್ರಿ ಸಂಗೀತ, ತಮ್ಮ ಮೇಲೆ ಅಪಾರ ಪ್ರಭಾವ ಬೀರಿದ್ದನ್ನು ಪ್ರಭಾ ಅತ್ರೆ ಸ್ಮರಿಸುತ್ತಿದ್ದರು.

ಪ್ರಭಾ ಅತ್ರೆ  ಸಂಗೀತವನ್ನು ಕಲಿಯುತ್ತಲೇ, ಜೊತೆ ಜೊತೆಗೆ, ವಿಜ್ಞಾನ ಮತ್ತು ಕಾನೂನು ಪದವಿಗಳನ್ನು ಗಳಿಸಿದರು. ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತ ಸ್ನಾತಕೋತ್ತರ ಪದವಿ ಪಡೆದರು.  ಸಂಗೀತದಲ್ಲಿ  'ಸರ್ಗಮ್' ಎಂಬ ಹೆಸರಿನಲ್ಲಿ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ  ಗಳಿಸಿದರು. ಲಂಡನ್ನಿನ ಟ್ರಿನಿಟಿ ಕಾಲೇಜಿನಿಂದ ವೆಸ್ಟರ್ನ್ ಮ್ಯೂಸಿಕ್ ಥಿಯರಿ ಗ್ರೇಡ್ -4 ಪದವಿ ಪಡೆದರು. ಕಥಕ್ ನೃತ್ಯದಲ್ಲಿ ಶಾಸ್ತ್ರೀಯ ತರಬೇತಿ ಪಡೆದರು.

ಪ್ರಭಾ ಅತ್ರೆ ಅವರು ತಮ್ಮ ವೃತ್ತಿ ಜೀವನದ ಪ್ರಾರಂಭದಲ್ಲಿ ಕೆಲಕಾಲ ಮರಾಠಿ ವೃತ್ತಿ ರಂಗಭೂಮಿಯಲ್ಲಿನ ಗಾಯಕಿ ಮತ್ತು ಅಭಿನೇತ್ರಿಯಾಗಿದ್ದರು.  ಕೆಲಕಾಲ ಆಕಾಶವಾಣಿಯಲ್ಲಿಯೂ ಕಾರ್ಯನಿರ್ವಹಿಸಿದ್ದರು. ಮುಂದೆ ಕಿರಾಣಾ ಘರಾನಾ ಸಂಗೀತದ ಮಹಾನ್ ಕಲಾವಿದೆಯಾಗಿ ಸಂಗೀತಲೋಕದ ತಾರೆಯಾಗಿ ಬೆಳಗುತ್ತಾ ಸಾಗಿದರು.

ಪ್ರಭಾ ಅತ್ರೆ ಅವರ ಮರು ಬಿಹಾಗ್ ಮತ್ತು ಕಲಾವತಿಗಳ ಸಂಯೋಗದ ಮೊದಲ ಧ್ವನಿವಾಹಿನಿಯಲ್ಲಿ ಅಮೀರ್ ಖಾನ್ ಸಾಹೇಬರ ಸಂಗೀತ ಪ್ರಭಾವ ನಿಚ್ಚಳವಾಗಿ ಗೋಚರಿಸುತ್ತದೆ. ಪ್ರಭಾ ಅತ್ರೆ ಅವರು ವಿಶ್ವದಾದ್ಯಂತ ಭಾರತೀಯ ಸಂಗೀತವನ್ನು ಪ್ರಸಿದ್ಧಿಗೊಳಿಸಿದವರಲ್ಲಿ ಪ್ರಮುಖರಾಗಿದ್ದಾರೆ.  ಅನೇಕ ವಿಶ್ವಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಅವರು ಆಹ್ವಾನಿತ ಉಪನ್ಯಾಸಕರೂ ಆಗಿದ್ದಾರೆ. ಖಯಾಲ್, ಠುಮ್ರಿ, ದದ್ರಾ, ಘಜಲ್, ಗೀತ್, ನಾಟ್ಯ ಸಂಗೀತ್ ಮತ್ತು ಭಜನ್ ಸಂಗೀತ್ ಮುಂತಾದ ವಿವಿಧ ರೀತಿಯ ಸಂಗೀತಗಳಲ್ಲಿ ಅವರಿಗೆ ಪ್ರಭುತ್ವವಿತ್ತು.  1969ರಿಂದ ಮೊದಲುಗೊಂಡಂತೆ ಅವರು ಅನೇಕ ಶಿಷ್ಯರನ್ನು ತಯಾರು ಮಾಡಿದ್ದರು.

ಪ್ರಭಾ ಅತ್ರೆ ಅವರು ಒಂದೇ ವೇದಿಕೆಯ ಮೇಲೆ ಹಿಂದೀ ಮತ್ತು ಇಂಗ್ಲಿಷಿನ ಹನ್ನೊಂದು ಕೃತಿಗಳನ್ನು ಬಿಡುಗಡೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದರು. ಸ್ವರಂಗಿಣಿ ಮತ್ತು ಸ್ವರಂಜನೀ ಇವರ ಪ್ರಮುಖ ಕೃತಿಗಳಾಗಿವೆ.

ಪ್ರಭಾ ಅತ್ರೆ ಅವರು ಅಪೂರ್ವ ಕಲ್ಯಾಣ್, ದರ್ಬಾರಿ ಕೌಂಸ್, ಪಥದೀಪ್ ಮಲ್ಹಾರ್, ಶಿವ ಕಾಳಿ, ತಿಲಂಗ್-ಭೈರವ್, ರವಿ ಭೈರವ್, ಮಧುರ್ ಕೌಂಸ್ ಮುಂತಾದ ನವೀನ ರಾಗಗಳನ್ನೂ ಅನ್ವೇಷಿಸಿದ್ದರು. ಇವರ ಸಂಗೀತ ಸಂಯೋಜನೆಯನ್ನು 'ನೃತ್ಯಪ್ರಭ' ಎಂಬ ಪೂರ್ಣಪ್ರಮಾಣದ ನೃತ್ಯರೂಪಕಕ್ಕೆ ಸುಚೇತಾ ಭಿಡೆ ಛಪೇಕರ್ ಅವರು ಅಳವಡಿಸಿದ್ದಾರೆ. ಪ್ರಭಾ ಅತ್ರೆ ಅವರ ಸಂಗೀತ ಸಂಯೋಜನೆಯನ್ನು ನೆದರ್ಲ್ಯಾಂಡ್ಸ್ ದೇಶದ ಸುಸಾನೆ ಅಬ್ಬುಯೆಹ್ಲ್ ಅವರು ಜಾಸ್ಗೆ ಅಳವಡಿಸಿದ್ದಾರೆ. ಪ್ರಭಾ ಅತ್ರೆ ಅವರ ಸಂಗೀತವು ಅನೇಕ ಸಂಗೀತ ನಾಟಕಗಳಿಗೆ ಮತ್ತು ಸಂಗೀತಿಕಾಗಳಿಗೆ ಅಳವಡಿತಗೊಂಡಿವೆ.

ಪ್ರಭಾ ಅತ್ರೆ ಅವರಿಗೆ ಜಗದ್ಗುರು  ಶಂಕರಾಚಾರ್ಯ 'ಗಾನ ಪ್ರಭಾ' ಬಿರುದು, ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನೃತ್ಯ ಅಕಾಡಮಿ ಗೌರವ, ಕಾಳಿದಾಸ ಸಮ್ಮಾನ್ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.

ಮಹಾನ್ ಸಾಧಕಿ ಪ್ರಭಾ ಅತ್ರೆ 2024ರ ಜನವರಿ 13ರಂದು ಈ ಲೋಕವನ್ನಗಲಿದರು.  🌷🙏🌷ಈ ಮಹಾನ್ ತಾಯಿಗೆ ನಮನಪೂರ್ವಕ ಗೌರವ.


Respects to departed soul Great Musician and Music Scholar Dr. Prabha Athre 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ