ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎ. ಆರ್. ಸೀತಾರಾಮ್


 ಎ. ಆರ್. ಸೀತಾರಾಮ್



ಮೈಸೂರಿನ ಯೋಗಶ್ರೀ ಡಾ. ಎ. ಆರ್. ಸೀತಾರಾಮ್ ಅವರು ಯೋಗವಿಜ್ಞಾನ ಮತ್ತು ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆಯಲ್ಲಿ ಮಹಾನ್ ಹೆಸರಾಗಿದ್ದಾರೆ. 

ಸೀತಾರಾಮ್ ಅವರು 1948ರ ಫೆಬ್ರುವರಿ 14ರಂದು ಕೊಳ್ಳೆಗಾಲದಲ್ಲಿ ಜನಿಸಿದರು. ತಂದೆ ಯೋಗಾಚಾರ್ಯ ಎ. ರಾಮಸ್ವಾಮಿ ಅಯ್ಯಂಗಾರ್. ತಂದೆಯವರೇ ಯೋಗಗುರುವಾದರು.  ಯೋಗರತ್ನ ಮೈಸೂರು ಕೃಷ್ಣಮಾಚಾರ್ಯರ ಮಾರ್ಗದರ್ಶನವೂ ಇವರಿಗೆ ಲಭಿಸಿತು. 

ಸೀತಾರಾಮ್ ಅವರು ಎಂ.ಎಸ್‍ಸಿ, ಎಂ.ಎಡ್ ಮತ್ತು  'ವ್ಯಾಲ್ಯೂ ಎಡುಕೇಷನ್ ಅಂಡ್ ಯೋಗ' ವಿಚಾರದಲ್ಲಿ ಪಿಎಚ್.ಡಿ ವರೆಗಿನ ಸಾಧನೆ ಮಾಡಿದ್ದಾರೆ.  ಇವರದ್ದು ಬಿ.ಎಡ್ ವ್ಯಾಸಂಗದಲ್ಲಿ ರಾಮಕೃಷ್ಣ ನೈತಿಕ ಮತ್ತು ಅಧ್ಯಾತ್ಮಿಕ ಶಿಕ್ಷಣ ಕೇಂದ್ರದಲ್ಲಿ ಪ್ರಥಮ ರ್‍ಯಾಂಕ್ ಸಾಧನೆ ಹಾಗೂ ಎಂ.ಎಡ್ ವ್ಯಾಸಂಗದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ದ್ವಿತೀಯ ರ್‍ಯಾಂಕ್ ಸಾಧನೆ.

ಗಣಿತ ಶಾಸ್ತ್ರದಲ್ಲಿ ಬೋಧಕರಾಗಿ ಸೇವೆ ಆರಂಭಿಸಿದ ಸೀತಾರಾಮ್ ಅವರು ಅನೇಕ CBSE ಬೋಧನ ಕ್ರಮದ ಪ್ರತಿಷ್ಠಿತ ಶಾಲೆಗಳಲ್ಲಿ ಅಧ್ಯಾಪನ ನಡೆಸಿದರು.  ತಮಿಳುನಾಡಿನ ಉಳುಂದೂರುಪೇಟ್ನಲ್ಲಿನ ಶಾರದಾ ಕಾಲೇಜ್ ಆಫ್ ಎಡುಕೇಷನ್ ಅಲ್ಲಿ ಪ್ರಿನ್ಸಿಪಾಲರಾಗಿದ್ದರು.   ನಂತರದಲ್ಲಿ ಮೈಸೂರಿನ  ಶ್ರೀರಾಮಕೃಷ್ಣ ಮಿಷನ್ ಅವರಿಗೆ ಸೇರಿದ ಶ್ರೀ ರಾಮಕೃಷ್ಣ ನೈತಿಕ ಮತ್ತು ಅಧ್ಯಾತ್ಮಿಕ ಶಿಕ್ಷಣ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಯೋಗ ಮತ್ತು ಮೌಲ್ಯ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಂಡಿರುವ ಮಾನಸ ಸರೋವರ ಪುಷ್ಕರಿಣಿ ವಿದ್ಯಾಶ್ರಮದಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಮಂಗಳೂರು ವಿಶ್ವವಿದ್ಯಾಲಯದ ಡಿಪಾರ್ಟ್ಮೆಂಟ್ ಆಫ್ ಯೋಗಿಕ್ ಸೈನ್ಸಸ್ ಅಂಡ್ ಹ್ಯೂಮನ್ ಕಾನ್ಷಿಯಸ್ನಲ್ಲಿ ಅಡ್ಜಂಕ್ಟ್ ಪ್ರೂಫೆಸರ್ ಆಗಿದ್ದರು. 

ಸೀತಾರಾಮ್ ಅವರು ಪರಮಹಂಸ ಯೋಗ ಚಿಕಿತ್ಸಾ ಕೇಂದ್ರದ ಸಂಸ್ಥಾಪಕ ನಿರ್ದೇಶಕರಾಗಿದ್ದು,  ಮಾನಸಿಕ ಕಾರಣಗಳಿಂದ ಉಂಟಾಗುವ ದೈಹಿಕ ತೊಂದರೆಗಳಾದ ಅಧಿಕ ಒತ್ತಡ, ಡಯಾಬಿಟಿಸ್, ಅರೆ ತಲೆನೋವು, ಆಸ್ತಮ ಮತ್ತು ಶ್ವಾಸಕೋಶದ ತೊಂದರೆಗಳು, ಬೆನ್ನುನೋವು ಮತ್ತು ಸಯಾಟಿಕಾ, ಉದರಕ್ಕೆ ಸಂಬಂಧಿಸಿದ ತೊಂದರೆಗಳು, ಕೀಲು ರೋಗಗಳು, ಸರ್ವೈಕಲ್ ಸ್ಪಾಂಡಿಲೈಟಿಸ್ ಮತ್ತು ಖಿನ್ನತೆಗಳಿಂದ ಬಳಲುತ್ತಿರುವ ಅನೇಕರಿಗೆ ಚಿಕಿತ್ಸೆ ಮತ್ತು ಸಲಹೆಯನ್ನು ನೀಡುತ್ತಿದ್ದಾರೆ.

ಸೀತಾರಾಮ್ ಅವರು ಮೌಲ್ಯ ಶಿಕ್ಷಣ ಮತ್ತು ಯೋಗ ವಿಷಯದ  ಬಗ್ಗೆ ಮಂಡಿಸಿದ ಪ್ರಬಂಧಗಳು ವಿಶ್ವವಿದ್ಯಾಲಯದ ಮಟ್ಟದಲ್ಲಿ ಹೆಗ್ಗಳಿಕೆಯನ್ನು ಮತ್ತು ಪುರಸ್ಕಾರವನ್ನು ಗಳಿಸಿವೆ. ಅಮೆರಿಕನ್ ಬಯೊಗ್ರಾಫಿಕಲ್‍ನ 'who is who’ ಹಾಗೂ 'Reference Asia’ ಮುಂತಾದವುಗಳಲ್ಲಿ ಡಾ. ಸೀತಾರಾಮ್ ಉಲ್ಲೇಖಿತರಾಗಿದ್ದಾರೆ.‍

ಒತ್ತಡ ನಿರ್ವಹಣೆ, ವ್ಯಕ್ತಿತ್ವ ವಿಕಸನ, ಮೌಲ್ಯ ಶಿಕ್ಷಣ, ಯೋಗ, ಧ್ಯಾನ ಮತ್ತು ಅಧ್ಯಾತ್ಮ, ಸಲಹೆ ಮತ್ತು ಮಾರ್ಗದರ್ಶನ, ಜೀವನ ಕೌಶಲ ಇತ್ಯಾದಿ ಸೀತಾರಾಮ್ ಅವರ ಪ್ರಮುಖ ಕ್ಷೇತ್ರಗಳು. ಅನೇಕರ ಮದ್ಯವ್ಯಸನ ಬಿಡಿಸುವುದರಲ್ಲಿ ಇವರ ಯೋಗಮಾರ್ಗ ಬಹಳ ಉಪಯುಕ್ತವಾಗಿದೆ. ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್, ಜರ್ಮನಿ, ಇಟಲಿ, ಸ್ವಿಟ್ಜರ್ಲ್ಯಾಂಡ್, ಹಾಲೆಂಡ್, ಶ್ರೀಲಂಕಾ ಮುಂತಾದ ದೇಶಗಳಲ್ಲಿ ಅನೇಕ ಯೋಗ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ದೇಶ ವಿದೇಶಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲದೆ, ಪೋಲಿಸ್ ಅಧಿಕಾರಿಗಳು, ನ್ಯಾಯಾಧೀಶರು, ಡಾಕ್ಟರುಗಳು, ಖ್ಯಾತ ಸಿನಿಮಾ ಕಲಾವಿದರು, ಜನನಾಯಕರು, ಅಧ್ಯಾತ್ಮ ಮುಖಂಡರು ಇವರಿಂದ ಪ್ರಯೋಜನ ಪಡೆದಿದ್ದಾರೆ.

ಸೀತಾರಾಮ್ ಅವರು ಯೋಗದ ಕುರಿತಾಗಿ ಮೂಡಿಸಿರುವ ಇಂಗ್ಲಿಷ್ ಮತ್ತು ಕನ್ನಡ  ಕೃತಿಗಳಲ್ಲಿ Yoga for Everyday Practice, Yoga for Healthy Living, ಸ್ವಾಸ್ಥ್ಯ ಬದುಕಿಗೆ ಯೋಗ, Yoga Therapy for Holistic Health, ಸಮಗ್ರ ಆರೋಗ್ಯಕ್ಕೆ ಯೋಗ ಚಿಕಿತ್ಸೆ,  Value Education ಮುಂತಾದವು ಸೇರಿವೆ. ಇವರ  DVDಗಳಲ್ಲಿ  Stress Management through Yoga and Meditation, ಯೋಗ ಮತ್ತು ಧ್ಯಾನದ ಮೂಲಕ ಒತ್ತಡ ನಿರ್ವಹಣೆ, ಒತ್ತಡ ರಹಿತ ಜೀವನಕ್ಕೆ ಮಾರ್ಗದರ್ಶನ ಮುಂತಾದವು ಸೇರಿವೆ. 

ಸೀತಾರಾಮ್ ಅವರು ಮೈಸೂರು ವಿಶ್ವವಿದ್ಯಾಲಯ, ತಿರುಪತಿಯ ಶ್ರೀವೆಂಕಟೇಶ್ವರ ವಿದ್ಯಾಲಯ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಕ್ಯಾಲಿಕಟ್ ಇಂದಿರಾಗಾಂಧೀ ವಿಶ್ವವಿದ್ಯಾಲಯ, ಭಾರತಿದಾಸನ್ ವಿಶ್ವವಿದ್ಯಾಲಯ, ಅಣ್ಣಾಮಲೈ ವಿಶ್ವವಿದ್ಯಾಲಯ, ಒಸ್ಮಾನಿಯಾ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ವಿಶ್ವವಿದ್ಯಾಲಯಗಳಿಗೆ ಸಂದರ್ಶಕ ಪ್ರಧ್ಯಾಪಕರಾಗಿದ್ದಾರೆ.

ಡಾ. ಸೀತಾರಾಮ್ ಅವರಿಗೆ ಕರ್ನಾಟಕ ಸರ್ಕಾರದಿಂದ ಯೋಗಶ್ರೀ ಪುರಸ್ಕಾರ, ಬೆಂಗಳೂರು ಯೋಗ ಕೇಂದ್ರ ಗೌರವ, ಕರ್ನಾಟಕದ ಯೋಗ ಸಂಘಟನೆಗಳ 'ಯೋಗರತ್ನ' ಪುರಸ್ಕಾರ, ಆಚಾರ್ಯ ವಿದ್ಯಾರಣ್ಯ ರಾಜ್ಯೋತ್ಸವ ಗೌರವ, ಕೇಂದ್ರ ಆದಾಯ ತೆರಿಗೆ ಇಲಾಖೆಯ ಮೈಸೂರು ವಿಭಾಗದಿಂದ ಯೋಗಾಚಾರ್ಯ ಗೌರವ, ರೋಟರಿ ಅಂತರರಾಷ್ಟ್ರೀಯ ಸಂಘಟನೆಯಿಂದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ, ಯೋಗ ಮತ್ತು ಅಧ್ಯಾತ್ಮ ಕ್ಷೇತ್ರದಲ್ಲಿನ ಕೊಡುಗೆಗಾಗಿ ರೋಟರಿ ವಿಜಯ್ ವೊಕೇಷನಲ್ ಗೌರವ ಸೇರಿದಂತೆ ಅನೇಕ ಗೌರವಗಳು ಸಂದಿವೆ.

ಡಾ.‍ಸೀತಾರಾಮ್ ಅವರ ಪತ್ನಿ ಡಾ. ಗೀತಾ ಸೀತಾರಾಮ್  ಅವರು ಪ್ರಸಿದ್ಧ ಬರೆಹಗಾರ್ತಿ, ಸಂಗೀತಜ್ಞೆ, ಸಂಗೀತ ಕಲಾವಿದೆ, ಸಂಗೀತ ಗುರು, ಮತ್ತು ವಾಗ್ಗೇಯಗಾರ್ತಿ. CFTRIನಲ್ಲಿ ಡೆಪ್ಯೂಟಿ ಡೈರೆಕ್ಟರ್ ವರೆಗಿನ ಜವಾಬ್ದಾರಿಗಳನ್ನು ನಿರ್ವಹಿಸಿ ನಿವೃತ್ತರಾಗಿರುವ ಗೀತಾ ಸೀತಾರಾಮ್ ಅವರು ಗೀತಾಂಜಲಿ ಸೆಂಟರ್ ಆಫ್ ಫೈನ್ ಆರ್ಟ್ ಸಂಸ್ಥೆಯ ನಿರ್ದೇಶಕಿಯಾಗಿದ್ದಾರೆ.  ಹೀಗೆ ಈ ಆದರ್ಶ ದಂಪತಿಗಳ ಕೊಡುಗೆ ಬಹುರೂಪಿಯಾದದ್ದು.

ಹಿರಿಯರಾದ ಯೋಗಶ್ರೀ ಎ. ಆರ್. ಸೀತಾರಾಮ್ ಅವರಿಗೆ ಜನ್ಮದಿನದ ಶುಭಹಾರೈಕೆಗಳು.  ನಮಸ್ಕಾರ.

On the birthday of Yogashri Dr. A. R. Seetharam Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ