ರವಿ ಹಂಜ್
ರವಿ ಹಂಜ್
ರವಿ ಹಂಜ್ ಅವರು ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಗಳಲ್ಲಿ ಮಹತ್ವದ ಸಾಧನೆ ಮಾಡುತ್ತ ಬಂದಿದ್ದಾರೆ. ಅವರ ಕುರಿತು ಆತ್ಮೀಯರಾದ ದೀಪ ದೇವಕತೆ Deepa Devakate ಅವರ ಲೇಖನ ಇಲ್ಲಿದೆ:
ಫೆಬ್ರವರಿ 26, ಖ್ಯಾತ ಲೇಖಕರಾದ ರವಿ ಹಂಜ್ ಅವರ ಜನ್ಮದಿನ. ಕನ್ನಡ ಮತ್ತು ಇಂಗ್ಲಿಶ್ ಸಾಹಿತ್ಯಗಳೆರಡರಲ್ಲೂ ಅಪೂರ್ವವಾದ ಕೃಷಿ ಮಾಡುತ್ತಿರುವ ಲೇಖಕರ ಸಾಧನೆಯು ಅಭೂತಪೂರ್ವವಾದುದು.
ಮೂಲತಃ ದಾವಣಗೆರೆಯವರಾದ ರವಿ ಹಂಜ್ ಅವರು ಪ್ರಸ್ತುತ ಶಿಕಾಗೊ ನಿವಾಸಿಯಾಗಿದ್ದು, ತಮ್ಮ ಅನನ್ಯವಾದ ವೈಚಾರಿಕತೆ, ವಿಡಂಬನೆ ಮತ್ತು ಸ್ಥಿತಪ್ರಜ್ಞತೆಯ ಬರವಣಿಗೆಯ ಮೂಲಕ ಅಪಾರ ಓದುಗರ ಚಿತ್ತ-ಸೂರೆ ಮಾಡಿರುವ ಸ್ನೇಹಮಯಿ ಲೇಖಕರು. ಮಾತೃಭೂಮಿಯ ಬಗೆಗೆ ಅಪಾರ ಒಲವು ತೋರುವ ಲೇಖಕರು ತಮ್ಮ ನೇರ, ನಿಷ್ಠುರ, ನಿರ್ಬಿಢೆಯ ಬರಹದಿಂದಲೇ ಹೆಚ್ಚು ಜನಪ್ರಿಯರು. ಇವರು ಪ್ರಸ್ತುತ ಶಿಕಾಗೊದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಆಡಳಿತ ತಜ್ಞರಾಗಿದ್ದು, ಅನೇಕ ಪತ್ರಿಕೆಗಳಲ್ಲಿ ಅಂಕಣ ಬರಹಗಳನ್ನು ಬರೆಯುವುದರೊಂದಿಗೆ, ಅನೇಕ ಐತಿಹಾಸಿಕ ಸಂಶೋಧನಾ ಗ್ರಂಥಗಳನ್ನು, ಆತ್ಮಕಥನವನ್ನು, ಅನುವಾದಿತ ಕೃತಿಗಳನ್ನು ರಚಿಸಿದ್ದು, ಇದೀಗ ತಾವೇ ಬರೆದ ಇತಿಹಾಸವನ್ನು ಆಧರಿಸಿದ ಕಾದಂಬರಿಯೊಂದನ್ನು ಇಂಗ್ಲಿಶ್ ಭಾಷೆಗೆ ಅನುವಾದಿಸುತ್ತಿದ್ದಾರೆ. ಲೇಖಕರ 'ಹ್ಯೂಯನ್ ತ್ಸಾಂಗನ ಮಹಾಪಯಣ' ಕೃತಿಯು 2018ನೇ ವರ್ಷದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದೆ. ಭಾರತದ ಇತಿಹಾಸವನ್ನು ವಸ್ತುನಿಷ್ಠವಾಗಿ ದಾಖಲಿಸುವುದಕ್ಕಾಗಿ ಹ್ಯೂಯನ್ ತ್ಸಾಂಗನು ಕ್ರಮಿಸಿದ ಮಹಾಪಯಣ ಮತ್ತು ತನ್ಮೂಲಕ ಅವನು ಒದಗಿಸಿದ ಭಾರತದ ಸಮಗ್ರ ಚಿತ್ರಣವನ್ನು ಲೇಖಕರು ಅದ್ಭುತವಾಗಿ ಕಟ್ಟಿಕೊಡುತ್ತಾರೆ. ತ್ಸಾಂಗನಂತೆ ತಾವೂ ಸಹ ಸುದೀರ್ಘವಾದ ಚೀನಾ-ಭಾರತದ ಪ್ರಯಾಣದಲ್ಲಿ ಕಂಡುಕೊಂಡ ಅನುಭವಗಳಿಂದ ರಚಿತಗೊಂಡ 'ಅಗಣಿತ ಅಲೆಮಾರಿ'ಯು ಅವೆರಡೂ ದೇಶಗಳ ರಾಜಕೀಯ, ಸಾಮಾಜಿಕ ವ್ಯವಸ್ಥೆಯನ್ನು ವಿಶ್ಲೇಷಿಸಿ, ವಿಮರ್ಶಿಸಿ, ತರ್ಕಿಸಿ ಬರೆಯುವ ಬರವಣಿಗೆ ಓದುಗರ ಆಲೋಚನೆಯನ್ನು ವಿಸ್ತಾರಗೊಳಿಸುವಂಥದ್ದು. ಅಂತೆಯೇ ಲೇಖಕರಲ್ಲಿ ವಚನಗಳ ಬಗೆಗಿನ ಅಧ್ಯಯನಶೀಲತೆಯು 'ಬಸವರಾಜಕಾರಣ' ಹೊತ್ತಗೆಯಲ್ಲಿ ವಿಶ್ಲೇಷಣಾತ್ಮಕವಾಗಿ ಪ್ರಸ್ತುತಗೊಂಡಿರುತ್ತದೆ. ಹೀಗೆ ವಚನಗಳ ಮುಖೇನ ಬಸವಣ್ಣನ ಜೀವನ-ಅನುಭಾವ-ರಾಜಕಾರಣದ ಸಾರವನ್ನು ಅನೇಕ ವಚನಕಾರರ ವಚನಗಳನ್ನು ಉಲ್ಲೇಖದೊಂದಿಗೆ ಮರು-ಸಂಕಥನಗೊಳಿಸುವ ಪರಿಯು ತಮ್ಮ ಶೋಧನೆಯ ದಾಹವನ್ನು ತಣಿಸುವ ಪ್ರವೃತ್ತಿಯನ್ನು ತೋರುತ್ತದೆ. ಇದರಂತೆ 'ಭಾರತ- ಒಂದು ಮರುಶೋಧನೆ' ಕೃತಿಯೂ ಸಹ ಇತಿಹಾಸದ ಆಕರಗಳನ್ನು ಪುನಃಶೋಧಿಸಿ ಸತ್ಯಾಂಶಗಳನ್ನು ನಿರೂಪಿಸುವ ಪುಸ್ತಕವಾಗಿದೆ.
ಲೇಖಕರ ಆತ್ಮಕಥನವಾದ 'ರ ಠ ಈ ಕ' ಕೃತಿಯಲ್ಲಿ ಅವರು ತಮ್ಮ ಬಾಲ್ಯದಿಂದ ತಾರುಣ್ಯಾವಸ್ಥೆಯ ವರೆಗಿನ ಸ್ವಾರಸ್ಯಕರವಾದ ಘಟನೆಗಳನ್ನು ಪರಾಂಬರಿಸಿ ಒಳನೋಟದೊಂದಿಗೆ ಬರೆಯುತ್ತಾರೆ. ಸಾಮಾನ್ಯವಾಗಿ ವ್ಯಕ್ತಿಯೋರ್ವನು ತನ್ನ ಆತ್ಮಕಥನವನ್ನು ನೇರವಾಗಿ ಅಭಿವ್ಯಕ್ತಿಸುವುದನ್ನು/ ಅಭಿವ್ಯಕ್ತಿಸಿದ್ದನ್ನು ಕಾಣುತ್ತೇವೆ. ಆದರೆ ಇಲ್ಲಿ ಲೇಖಕರು ಮನೋವೈಜ್ಞಾನಿಕವಾಗಿ ಮಗುವಿನ ಮನಸ್ಸನ್ನು ಹೊಕ್ಕು, ಪ್ರತಿಯೊಂದು ಘಟನೆಗಳನ್ನು ಮನೋವಿಜ್ಞಾನಿಯಂತೆ ವಿಶ್ಲೇಷಿಸಿ ಆತ್ಮಕಥನಕ್ಕಿಳಿಸಿರುವ ಬಗೆಯು ಅಪ್ಯಾಯಮಾನವೆನಿಸುತ್ತದೆ. ಇವುಗಳೊಂದಿಗೆ ಭಾರತದ ಆಗುಹೋಗುಗಳನ್ನು ಬಹುದೂರದ ಅಮೇರಿಕೆಯಿಂದಲೇ ಅವಲೋಕಿಸಿ ಬರೆದ ಲೇಖನಗಳ ಸಂಗ್ರಹವಾದ 'ಅಮೇರಿಕೆಯಿಂದ ಅವಲೋಕಿಸುತ್ತ..' ಶೀರ್ಷಿಕೆಯ ಪುಸ್ತಕವು ಕೃತಿರೂಪದಲ್ಲಿ ಸಂಗ್ರಹಿತಗೊಂಡಿವೆ.
ಅಷ್ಟೇ ಅಲ್ಲದೆ, ಇವರ ಕನ್ನಡದ ಸಂಪದವು ಸೊಬಗಿನಿಂದ ಕೂಡಿದ್ದು, ಶೈಕ್ಷಣಿಕೇತರ ವೃತ್ತಿಯಲ್ಲಿದ್ದೂ ತಮ್ಮ ಬರಹ-ಪ್ರವೃತ್ತಿಯಿಂದ ಓದುವವರನ್ನು ನಿಬ್ಬೆರಗಿನಿಂದ ಹುಬ್ಬೇರಿಸುವಂತೆ ಮಾಡಿತ್ತದೆ. ಈ ನಿಟ್ಟಿನಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 'ಜುಗಾರಿ ಕ್ರಾಸ್' ಕೃತಿಯ ಇಂಗ್ಲಿಶ್ ಅನುವಾದವು ನಾವೀನ್ಯಯುತ ತರ್ಜುಮೆಯಾಗಿದೆ. ಅನುವಾದಿತ ಕೃತಿ ಎನಿಸದಷ್ಟು ಸ್ವಂತಿಕೆಯ ಸೃಜನಶೀಲ ಇಂಗ್ಲಿಶ್ ಸಾಹಿತ್ಯದ ಹೊತ್ತಗೆಯೇ ಆಗಿದೆಯೇನೋ ಎಂಬಷ್ಟು ತೃಪ್ತಿ ಕೊಡುವ ವಿಶಿಷ್ಟ ಅನುವಾದವಿದು. ಇದರೊಂದಿಗೆ 'ಸ್ಪ್ಯಾನಿಷ್ ಗಾದೆಗಳು' ಎಂಬ ಅನುವಾದವೂ ಸಹ ಅವರ ಸೃಜನಾತ್ಮಕ ಸಾಹಿತ್ಯ ಕೃಷಿಯ ಕೊಡುಗೆಯಾಗಿದೆ. ಇತ್ತೀಚೆಗೆ ಲೇಖಕರು 'ಹ್ಯೂಯನ್ ತ್ಸಾಂಗನ ಮಹಾಪಯಣ' ಕೃತಿಯನ್ನು ತೆಲಗು ಭಾಷೆಗೆ ಅನುವಾದ ಮಾಡಿದ್ದಾರೆ. ಬಹುಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ ಲೇಖಕರ ಪ್ರಾವೀಣ್ಯತೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ! ಮುಂಬರುವ ದಿನಗಳಲ್ಲಿ 'ಅರಿದೆಡೆ ಆರದು ಮರದಡೆ ಮೂರದು' ಕೃತಿಯ ಇಂಗ್ಲಿಶ್ ಅನುವಾದವನ್ನು ಓದುವ ಬೆರಗು, ಕುತೂಹಲ ಓದುಗರದ್ದಾಗಲಿದೆ.
ಇಂತಹ ಅನೇಕ ಕೃತಿಗಳನ್ನು ಓದಲು, ಗ್ರಹಿಸಲು ನೆರವಾದ, ಜ್ಞಾನದ ಹರವನ್ನು ಹಿಗ್ಗಿಸುವ, ಕಿರಿಯರನ್ನು ನಿರಂತರವಾಗಿ ಪ್ರೋತ್ಸಾಹಿಸುವ, ಬೆಳೆಸುವ ಲೇಖಕರಿಗೆ ಧನ್ಯವಾದಗಳು. ಇದೇ ತೆರನಾಗಿ ಕೃತಿಕಾರ ಹಂಜ್ ಅವರ ಸಾಹಿತ್ಯಯಾನವು ಅವಿರತವಾಗಿ ಮುಂದುವರಿಯುತ್ತಿರಲಿ.
ಕೃತಜ್ಞತೆ: ಲೇಖಕಿ ದೀಪಾ ದೇವಕತೆ ಅವರಿಗೆ
On the birthday of great writer in Kannada English writer Ravi Hanj
ಕಾಮೆಂಟ್‌ಗಳು