ವಿಕ್ಟರ್ ಹ್ಯೂಗೋ
ವಿಕ್ಟರ್ ಹ್ಯೂಗೋ
ಮಹಾನ್ ಕಾದಂಬರಿಕಾರ ವಿಕ್ಟರ್ ಹ್ಯೂಗೋ ವಿಶ್ವದೆಲ್ಲೆಡೆ ಪರಿಚಿತರು. ಅವರ ಒಂದು ಉದ್ಘೋಷ ಹೀಗಿದೆ”: “The reduction of the univserse to single being, the expansion of single being even to God, this is love.” ಇಡಿಯ ಬ್ರಹ್ಮಾಂಡವನ್ನೇ ಒಂದು ಜೀವಿಯಲ್ಲಿ ಹ್ರಸ್ವ ಮಾಡಬಲ್ಲಂತದ್ದೂ, ಜೀವಿಯೊಂದನ್ನು ದೈವತ್ವಕ್ಕೂ ವಿಸ್ತರಿಸಿಬಲ್ಲಂಥದೂ ಒಂದಿದೆ. ಅದೇ ಪ್ರೀತಿ.’
ಪ್ರಖ್ಯಾತ ಫ್ರೆಂಚ್ ಕವಿ, ನಾಟಕಕಾರ, ಕಾದಂಬರಿಕಾರ, ಪ್ರಬಂಧಕಾರ, ಮಹಾನ್ ಚಿತ್ರಕಾರ, ರಾಜನೀತಿಜ್ಞ, ಮಾನವ ಹಕ್ಕುಗಳ ಪ್ರತಿಪಾದಕ, ಫ್ರಾನ್ಸ್ ದೇಶದ ರೋಮ್ಯಾಂಟಿಕ್ ಸಾಹಿತ್ಯ ಯುಗದ ಪ್ರಧಾನ ಪ್ರವರ್ತಕರಾದ ವಿಕ್ಟರ್ ಮೇರಿ ಹ್ಯೋಗೋ ಅವರು 1802ರ ಫೆಬ್ರುವರಿ 26ರಂದು ಜನಿಸಿದರು.
ವಿಕ್ಟರ್ ಹ್ಯೂಗೋ ಅವರ ಸಾಹಿತ್ಯ ಜೀವನ 1819ರಲ್ಲಿ ಪ್ರಾರಂಭಗೊಂಡಿತು. ಜೀವನವನ್ನು ಪ್ರತಿಬಿಂಬಿಸುವ ವಸ್ತುಗಳು ಮತ್ತು ಬಡಜನತೆಯನ್ನು ಪ್ರತಿಬಿಂಬಿಸುವ ಪಾತ್ರಗಳನ್ನು ಸೃಷ್ಟಿಸಿದ ಇವರು ಸಾಮಾಜಿಕ ಬದ್ಧತೆಯ ಬಗ್ಗೆ ಅಪಾರ ನಂಬಿಕೆ ಹೊಂದಿದ್ದರು. Les Contemplations, La Légende des siècles ಮುಂತಾದ ಕಾವ್ಯ ಸಂಕಲನಗಳಿಂದ ಮಹಾನ್ ಫ್ರೆಂಚ್ ಕವಿ ಎಂದು ವಿಮರ್ಶಕರಿಂದ ಪ್ರಖ್ಯಾತರಾಗಿರುವಂತೆಯೇ, ವಿಕ್ಟರ್ ಹ್ಯೂಗೋ ಫ್ರಾನ್ಸಿನ ಹೊರಗೆ Les Misérables, Notre-Dame de Paris ಅಥವಾ ಇಂಗ್ಲಿಷಿನಲ್ಲಿ The Hunchback of Notre-Dame (ನಾತ್ರದಾಮಿನ ಗೂನು ಬೆನ್ನಿನವನು) ಮುಂತಾದ ಕಾದಂಬರಿಗಳಿಂದ ಪ್ರಖ್ಯಾತಿ ಪಡೆದರು.
ವಿಕ್ಟರ್ ಹ್ಯೂಗೋ ಅವರ ತಂದೆ ನೆಪೋಲಿಯನ್ನನ ಸೇನೆಯಲ್ಲಿ ದಂಡನಾಯಕರಾಗಿದ್ದರು. ಪ್ರಾರಂಭದಲ್ಲಿ ರಾಜಮನೆತನಕ್ಕೆ ನಿಷ್ಟರಾಗಿದ್ದ ವಿಕ್ಟರ್ ಹ್ಯೂಗೋ 1848ರ ಕ್ರಾಂತಿಯಲ್ಲಿ ಕ್ರಾಂತಿಕಾರರಿಗೆ ಮುಕ್ತ ಬೆಂಬಲ ಸೂಚಿಸಿದರು. ತಮ್ಮ ಬದುಕಿನಲ್ಲಿ ಸುಮಾರು 50 ವರ್ಷಗಳನ್ನು ಫ್ರಾನ್ಸಿನಲ್ಲಿ ಕಳೆದ ವಿಕ್ಟರ್ ಹ್ಯೂಗೋ ಮೂರನೆಯ ನೆಪೋಲಿಯನ್ ನಿರಂಕುಶತ್ವವನ್ನು ವಿರೋಧಿಸಿದ ರಾಜಕೀಯ ನಿಲುವುಗಳಿಂದಾಗಿ ಹೊರ ಪ್ರದೇಶಗಳಾದ ಬ್ರಸೆಲ್ಸ್, ಜೆರ್ಸೆಯ್, ಗುರೆನ್ಸೆ ಮುಂತಾದ ಪ್ರದೇಶಗಳಲ್ಲಿ ತಮ್ಮ ಜೀವನವನ್ನು ಕಳೆಯಬೇಕಾಗಿ ಬಂದು 1872ರ ಸಮಯದಲ್ಲಿ ಪುನಃ ಫ್ರಾನ್ಸಿಗೆ ಹಿಂದಿರುಗಿದರು.
ಕನ್ನಡ ವಿಶ್ವಕಥಾಕೋಶದಲ್ಲಿ ‘ಜೆನ್ನಿ’ ಎಂಬ ವಿಕ್ಟರ್ ಹ್ಯೂಗೋ ಅವರ ಕಥೆಯಿದೆ. ಕೆಲವು ಮಾತುಗಳಲ್ಲಿ ಈ ಕಥೆಯನ್ನು ಇಲ್ಲಿ ಮೂಡಿಸಲೆತ್ನಿಸುತ್ತೇನೆ.
ಭೀಕರ ಸಮುದ್ರದ ಭೋರ್ಗರೆತದ ದಿನಗಳಲ್ಲಿ ಬಿರುಗಾಳಿ ಭೀಕರ ಮಳೆಗಳನ್ನು ಲೆಕ್ಕಿಸದೆ ಅಥವಾ ಅವೆಲ್ಲವನ್ನೂ ಮೀರಿದಂತಹ ಬಡತನದ ಭೀಕರ ಪ್ರವಾಹದಲ್ಲಿ ಸಿಲುಕಿದ ಆತ, ತನ್ನ ಪ್ರೀತಿಯ ಪತ್ನಿ ಮತ್ತು ಮಕ್ಕಳ ಹೊಟ್ಟೆ ತುಂಬಿಸಲೋಸುಗವಾಗಿ ಕಡಲಿಗೆ ಇಳಿದಿದ್ದಾನೆ. ಆ ಕಡಲಲ್ಲಾದರೂ ಮೀನು ಸಿಗುವ ಜಾಗ ಒಂದು ಪುಟ್ಟ ಬಿಂದು ಎನ್ನುವಷ್ಟಿರಬಹುದೆನೋ. ಕಡಲಾಳದಲ್ಲಿ ಇಳಿದವನಿಗೆ ತನ್ನ ಪ್ರೀತಿಯ ಪತ್ನಿ ಮತ್ತು ಮಕ್ಕಳದೇ ಚಿಂತೆ. ತನ್ನ ಕಾಯಕದ ನಡುವೆ ತನ್ನ ಕುಟುಂಬ ಕ್ಷೇಮವಿರಲಿ ಎಂದು ನಡು ನಡುವೆ ಪ್ರಾರ್ಥಿಸುತ್ತಾನೆ.
ಮನೆಯಲ್ಲಿ ಜೆನ್ನಿ ತನ್ನ ಮಕ್ಕಳನ್ನು ನೋಡಿಕೊಳ್ಳುತ್ತಾ, ಇರುವ ಮೀನಿನ ಕಂದೀಲು ಬಲೆಗಳಿಗೆ ಸಾಧ್ಯವಾದಷ್ಟರಮಟ್ಟಿಗೆ ಹೊಲಿಗೆ ಹಾಕುತ್ತಾ ತನ್ನ ಗಂಡನಿಗೆ ಈ ಕಡಲಿನ ಭೀಕರತೆಯಲ್ಲಿ ರಕ್ಷೆ ಸಿಗಲಿ ಎಂದು ಬೇಡುತ್ತಿದ್ದಾಳೆ. ಕ್ಷಣಕ್ಷಣಕ್ಕೂ ಆಕೆಗೆ ಭಯ ಕಾಡುತ್ತಿದೆ. ಏನಾದರಾಗಲೀ ಒಮ್ಮೆ ಕಡಲಿನ ಸಮೀಪ ಹೋಗಿ ನೋಡಿಕೊಂಡು ಬಂದು ಬಿಡೋಣ ಎಂದು ದೀಪ ತೆಗೆದುಕೊಂಡು ಹೊರಡುತ್ತಾಳೆ. ಸ್ವಲ್ಪ ದೂರದಾಟಿದಾಗ ಆ ಮನೆಯ ಆನಾಥ ಹೆಂಗಸು ಅಸ್ವಸ್ಥಳಾಗಿದ್ದ ಸುದ್ಧಿ ಗಂಡ ಹೇಳಿದ್ದ ನೆನಪಾಗುತ್ತದೆ. ಮನೆಯಲ್ಲಿ ಯಾರಿದ್ದೀರಿ ಎಂದು ಕೂಗಿದಾಗಲೂ ಬಾಗಿಲು ತೆರೆಯದಿದ್ದಾಗ ಬಾಗಿಲು ನೂಕಿ ಹೊರಹೋದಾಗ ಅಲ್ಲಿ ಆ ಮಹಿಳೆ ಶವವಾಗಿ ಬಿದ್ದಿದ್ದಾಳೆ. ಆ ಹಳೆಯ ತೊಟ್ಟಿಲಲ್ಲಿ ಆ ಮಕ್ಕಳು ಎಷ್ಟೊಂದು ಶಾಂತವಾಗಿ ಮಲಗಿದ್ದವು ಎಂಬುದನ್ನು ನೋಡಿದರೆ ಅಚ್ಚರಿಯಾಗುತ್ತಿತ್ತು. ಈ ಅನಾಥ ಮಕ್ಕಳನ್ನು ಯಾವ ಸದ್ದೂ ಎಚ್ಚರಗೊಳಿಸಲಿಕ್ಕಿಲ್ಲವೆನಿಸುತ್ತಿತ್ತು. ಹೊರಗಡೆಯಾದರೋ ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಸಾಗರವಂತೂ ಅಪಾಯಸೂಚಕ ಗಂಟೆಯಂತೆ ಭೋರ್ಗರೆಯುತ್ತಿತ್ತು. ಹೊರಗೆ ಗಾಳಿ ಬೀಸಿದಾಗ ಛಾವಣಿಯಿಂದ ಉದುರಿದ ಹನಿಯೊಂದು ಆ ನಿರ್ಜೀವ ಮುಖದ ಮೇಲೆ ಬಿದ್ದು ಅವಳ ಕಣ್ಣೀರಿನಂತೆ ಕೆಳಗೆ ಹರಿಯಿತು.
ಆ ಸತ್ತ ಹೆಣ್ಣು ಮಗಳ ಮನೆಯಲ್ಲಿ ಜೆನ್ನಿ ಏನು ಮಾಡುತ್ತಿದ್ದಳು? ಅವಳು ತನ್ನ ದುಪ್ಪಟ್ಟಿಯ ಒಳಗೆ ಏನು ತೆಗೆದುಕೊಂಡು ಹೊರಟಿದ್ದಳು? ಅವಳ ಹೃದಯ ಯಾಕೆ ಅಷ್ಟೊಂದು ಬಡಿದುಕೊಳ್ಳುತ್ತಿತ್ತು. ಅವಳು ತನ್ನ ಕುಟೀರಕ್ಕೆ ಮರಳಿ ಹೋಗುವಾಗ ಅವಳ ಕಾಲುಗಳು ಯಾಕೆ ಅಷ್ಟು ನಡುಗುತ್ತಿದ್ದವು? ಅವಳಿಗೆ ಹಿಂದೆ ಹೊರಳಿ ನೋಡಲು ಯಾಕೆ ಆಗಲಿಲ್ಲ? ಅವಳು ತನ್ನ ಹಾಸಿಗೆಯಲ್ಲಿ ಏನನ್ನು ಬಚ್ಚಿಟ್ಟಳು? ಅವಳು ಕದ್ದು ತಂದದ್ದೇನು? ಒಂದು ತರಹದ ಪಶ್ಚಾತ್ತಾಪ ಭಾವನೆ ಅವಳನ್ನಾವರಿಸಿತ್ತು. ಗಂಡನಿಗೆ ಏನು ತಾನೇ ಹೇಳುವುದು. ಆತ ಅದನ್ನು ಸಹಿಸಿಯಾನೆ. ಆಕೆ ದಿಂಬಿನ ಮೇಲೆ ತಲೆಯಿಟ್ಟು ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಿದ್ದಳು. ಹೊರಗೇ ಸಮುದ್ರ ಒಂದೇ ಸಮನೆ ನರಳುತ್ತಿತ್ತು.
ಗಂಡ ಮನೆಗೆ ಬಂದ. ಪ್ರೀತಿಯಿಂದ ಸ್ವಾಗತಿಸಿದಳು. ಸುಧಾರಿಸಿಕೊಂಡ ಗಂಡನಿಗೆ ಹೇಳಿದಳು. ಆ ನೆರೆಮನೆಯ ಹೆಣ್ಣು ಸತ್ತಿದ್ದಾಳೆ.
ಅವಳ ಗಂಡನ ಮುಖ ಗಂಭೀರವಾಯಿತು. ಗಾಳಿ, ಮಳೆಗೆ ಒದ್ದೆಯಾಗಿದ್ದ ತನ್ನ ತುಪ್ಪಳದ ಟೊಪ್ಪಿಗೆಯನ್ನು ಒಂದು ಮೂಲೆಯಲ್ಲಿ ಒಗೆದು ಕೆರೆಯುತ್ತಾ ಅವನೆಂದ:
‘ಛೇ, ಛೇ, ಎಂಥಾ ಅನ್ಯಾಯ! ನಮಗೀಗಾಗಲೇ ಐದು ಮಕ್ಕಳಿವೆ. ಇವೆರಡೂ ಕೂಡಿದರೆ ಏಳು ಆಗ್ತವೆ. ಇಂಥ ಕೆಟ್ಟ ಗಳಿಗೆಯಲ್ಲಿ ನಾವೇ ಊಟವಿಲ್ಲದೆ ಇರೋ ಪರಿಸ್ಥಿತಿ ಬಂದಿದೆ. ಈಗೇನು ಮಾಡೋಣ? ಇದೆಲ್ಲ ದೇವರಾಟ. ನನ್ನ ಬುದ್ಧಿಗೆ ತಿಳಿಯೋದೂ ಇಲ್ಲ. ದೇವರು ಇಂಥ ಚಿಕ್ಕ ಮಕ್ಕಳ ತಾಯಿಯನ್ನು ಕಸಿದುಕೊಂಡು ಇವರನ್ಯಾಕೆ ಅನಾಥರನ್ನಾಗಿ ಮಾಡಬೇಕು? ಇವನ್ನೆಲ್ಲ ತಿಳಿದುಕೊಳ್ಳಬೇಕಾದರೆ ನಾವು ದೊಡ್ಡ ಪಂಡಿತರಾಗಬೇಕಾಗುತ್ತದೆ. ಪಾಪ, ಎಷ್ಟು ಚಿಕ್ಕ ಮಕ್ಕಳು! ಪ್ರಿಯೆ, ನೀನು ಹೋಗಿ ಆ ಕೂಸುಗಳನ್ನಿಲ್ಲಿ ತೆಗೆದುಕೊಂಡು ಬಾ. ಅವು ಎಚ್ಚರಗೊಂಡಿದ್ದರೆ ಸತ್ತ ತಾಯಿಯನ್ನು ನೋಡಿ ಹೆದರಿ ಅಳಬಹುದು. ನಾವು ಅವುಗಳನ್ನು ಜೋಪಾನ ಮಾಡೋಣ. ಅವು ನಮ್ಮ ಐವರಿಗೆ ತಂಗಿ ತಮ್ಮನಾಗಿರಲಿ. ಈ ಎರಡು ಕೂಸುಗಳಿಗೆ ನಾವು ಊಟ ಹಾಕಬೇಕು ಅಂತ ದೇವರಿಗೆ ಗೊತ್ತಾದಾಗ ಅವನು ನಮಗೆ ಸಾಕಷ್ಟು ಮೀನುಗಳನ್ನು ಸಿಗೋ ಹಾಗೆ ಮಾಡಿದರೂ ಮಾಡಬಹುದು. ನಾನಾದರೋ ಕೇವಲ ನೀರು ಕುಡಿದು ಜೀವಿಸ್ತೇನೆ. ಈಗ ದುಡಿಯೋದರ ಎರಡು ಪಟ್ಟು ದುಡೀತೇನೆ. ಅಷ್ಟೆ. ಬೇಗ ಹೋಗಿ ಅವುಗಳನ್ನು ಎತ್ತಿಕೊಂಡು ಬಾ! ಆದರೆ ನಿನಗೇನಾಗಿದೆ? ಇದರಿಂದ ನಿನಗೆ ಕಿರಿಕಿರಿಯಾಗ್ತದೆಯೇ? ಸಾಮಾನ್ಯವಾಗಿ ನೀನು ತ್ವರಿತವಾಗಿ ಕೆಲಸ ಮಾಡೋ ಹೆಂಗಸು”
ಜೆನ್ನಿ ಪಲ್ಲಂಗದ ಮೇಲಿನ ಪರದೆಯನ್ನು ಸರಿಸಿ ಹೇಳಿದಳು:
“ಇಲ್ಲಿ ನೋಡಿ.”
On the birth anniversary of Victor Marie Hugo, a French poet, novelist, and dramatist of the Romantic movement
ಜೀವನ ಪ್ರೀತಿಯ ದ್ಯೋತಕವಾಗಿ,ಮುರಿದು ತಿನ್ನುವ ಬಡತನವಿದ್ದರೂ,ಕಾಳಜಿಯ ಕುರುಹಾಗಿ, ಆತನ ಕಳಕಳಿ ಮನುಷ್ಯತ್ವಕ್ಕೆ ಹಿಡಿದ ಕೈಗನ್ನಡಿ.
ಪ್ರತ್ಯುತ್ತರಅಳಿಸಿ