ಕೆ.ಶಿವರಾಂ
ಕೆ. ಶಿವರಾಂ
ಕನ್ನಡದಲ್ಲಿ ಪ್ರಥಮಗಳನ್ನು ನೆನೆಯುವಾಗ ಪ್ರಥಮ ಬಾರಿಗೆ ಕನ್ನಡದಲ್ಲೇ ಬರೆದು ಐಎಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣತೆ ಸಾಧಿಸಿದ್ದ ಕೆ. ಶಿವರಾಂ ಅವರನ್ನು ನೆನೆಯಲೇ ಬೇಕು. ಈ ಮಹತ್ವದ ಸಾಧಕರು ಕರ್ನಾಟಕದಲ್ಲಿ ಅಧಿಕಾರಿಗಳಾಗಿ, ಚಲನಚಿತ್ರ ಕಲಾವಿದರಾಗಿ ಮತ್ತು ಸಮಾಜಸೇವೆಯಲ್ಲೂ ಹೆಸರಾಗಿದ್ದರು. ಕಳೆದ ದಶಕದಲ್ಲಿ ರಾಜಕೀಯದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದರು. ಎಲ್ಲರಿಂದಲೂ ಪ್ರೀತಿಯಿಂದ ಶಿವರಾಮು ಎಂದು ಕರೆಸಿಕೊಂಡಿದ್ದ ಕೆ. ಶಿವರಾಂ ಅವರ ಸಂಸ್ಮರಣೆ ದಿನವಿದು.
ಕೆ. ಶಿವರಾಂ ರಾಮನಗರ ಜಿಲ್ಲೆಯ ಬಿಡದಿ ಬಳಿಯ ಹಳ್ಳಿಯಲ್ಲಿ 1953ರಲ್ಲಿ ಜನಿಸಿದರು. 1985ರಲ್ಲಿ ಕೆಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಬಳಿಕ, ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು, ಐಎಎಸ್ ಅಧಿಕಾರಿಯೂ ಆಗಿದ್ದರು. ಆ ಮೂಲಕ, ಕನ್ನಡದಲ್ಲಿ ಐಎಎಸ್ ಬರೆದು, ಅಧಿಕಾರಿಯಾದ ಮೊದಲ ಕನ್ನಡಿಗರೆಂಬ ಹೆಗ್ಗಳಿಕೆಗೂ ಭಾಜನರಾಗಿದ್ದರು. ಕೆ. ಶಿವರಾಮ್ ಅವರು ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು.
ಶಿವರಾಂ ಅವರು 1993 ವರ್ಷದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಚಲನಚಿತ್ರದಲ್ಲಿ ನಾಯಕ ನಟರಾಗಿ ನಟಿಸಿದ್ದರು. ಮುಂದೆ ವಸಂತ ಕಾವ್ಯ, ಖಳನಾಯಕ, ಸಾಂಗ್ಲಿಯಾನ-3, ಪ್ರತಿಭಟನೆ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್, ಟೈಗರ್ ಮುಂತಾದ ಚಲನಚಿತ್ರಗಳಲ್ಲೂ ನಟಿಸಿದ್ದರು.
2013ರಲ್ಲಿ ಸೇವೆಯಿಂದ ನಿವೃತ್ತರಾದ ಶಿವರಾಂ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಳಿಕ, ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದ್ದರು. ಅಲ್ಲದೆ, ಛಲವಾದಿ ಮಹಾಸಭಾ ಅಧ್ಯಕ್ಷರೂ ಆಗಿದ್ದರು.
ಕೆ. ಶಿವರಾಂ 2024ರ ಫೆಬ್ರವರಿ 29ರಂದು ನಿಧನರಾದರು.ಕನ್ನಡದ ಪ್ರಥಮಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದ ಶಿವರಾಂ ಅವರ ಚೇತನಕ್ಕೆ ನಮನ.
Respects to departed soul K. Shivaram 🌷🙏🌷

ಕಾಮೆಂಟ್‌ಗಳು