ಶ್ರೀಧರ ಬನವಾಸಿ
ಶ್ರೀಧರ ಬನವಾಸಿ
ಶ್ರೀಧರ ಬನವಾಸಿ ಅವರು 'ಫಕೀರ'ಎಂಬ ಹೆಸರಿನಿಂದ ಬರೆಯುತ್ತಿರುವ ಪ್ರತಿಭಾನ್ವಿತ - ಜನಪ್ರಿಯ - ಯುವಸಾಧಕ.
ಶ್ರೀಧರ ಬನವಾಸಿ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ 1985 ಫೆಬ್ರುವರಿ 6 ರಂದು ಜನಿಸಿದರು. ಇವರು ಬನವಾಸಿ, ಉಜಿರೆ ಹಾಗೂ ದಾವಣಗೆರೆಯಲ್ಲಿ ಶಿಕ್ಷಣಾಭ್ಯಾಸ ಪೂರ್ಣಗೊಳಿಸಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಲ್ಲದೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿಯೂ ಅಧ್ಯಯನ ಸಾಧನೆ ಮಾಡಿದ್ದಾರೆ.
ಶ್ರೀಧರ ಬನವಾಸಿ ಅವರು ಕಾಲೇಜು ದಿನಗಳಿಂದಲೇ ಕತೆ, ಕಾವ್ಯ, ಅಂಕಣ ಬರೆಹಗಳಲ್ಲಿ ಮಿಂಚಿದವರು. ಅವರು ಹಲವು ವರ್ಷಗಳ ಕಾಲ ಮಾಧ್ಯಮ ಮತ್ತು ಮನೊರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡಿದವರು. ಅನೇಕ ಕಿರುತೆರೆಯ ಕಾರ್ಯಕ್ರಮಗಳು, ಜಾಹಿರಾತು ಹಾಗೂ ಸಾಕ್ಷ್ಯಚಿತ್ರಗಳನ್ನು ನಿರ್ದೇಶನ ಮಾಡಿದವರು. ಕೆಲವೊಂದು ಪ್ರಸಿದ್ಧ ಸಂಸ್ಥೆಗಳಲ್ಲಿ ಮುಖ್ಯ ಜವಾಬ್ಧಾರಿಗಳನ್ನು ನಿರ್ವಹಿಸಿರುವ ಇವರು ತಮ್ಮದೇ ಆದ ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ ಸಂಸ್ಥೆ ನಡೆಸುತ್ತಿದ್ದಾರೆ.
ಶ್ರೀಧರ ಬನವಾಸಿ ಅವರ ಬರೆಹಗಳಲ್ಲಿ ಬೇರು ಕಾದಂಬರಿ; ಅಮ್ಮನ ಆಟ್ರೋಗ್ರಾಫ್, ದೇವರ ಜೋಳಿಗೆ, ಬ್ರಿಟಿಷ್ ಬಂಗ್ಲೆ ಮುಂತಾದ ಕಥಾ ಸಂಕಲನಗಳು; ತಿಗರಿಯ ಹೂಗಳು, ಬಿತ್ತಿದ ಬೆಂಕಿ, ಪೂರ್ಣಚಂದ್ರನಿಗೆ ಮುಖವಾಡವಿಲ್ಲ ಮುಂತಾದ ಕವನ ಸಂಕಲನಗಳು; ಲಾಜಿಕ್ ಬಾಕ್ಸ್ ಅಂಕಣ ಬರಹಗಳ ಸಂಕಲನ; ಮನೋವತಿ ಎಂಬ ನಾಟಕ ಅಲ್ಲದೆ ವೃಕ್ಷಮಾತೆ ತಿಮ್ಮಕ್ಕ, ವೈಷ್ಣವ ಸಂತರು ಅಂತಹ ಜೀವನಕಥನ, ಗ್ರಂಥ ಸಂಪಾದನೆ ಹೀಗೆ ಬಹುರೂಪಗಳ ಸಾಹಿತ್ಯ ಕೃಷಿ ಕಂಗೊಳಿಸಿದೆ. ಇವರ ಕತೆಗಳ ಮೇಲೆ ಎಂಫಿಲ್ ಅಧ್ಯಯನ ಕೂಡ ನಡೆದಿದೆ.
ಶ್ರೀಧರ ಬನವಾಸಿ ಅವರ 2017ರಲ್ಲಿ ಪ್ರಕಟಗೊಂಡ 'ಬೇರು' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚದುರಂಗ ದತ್ತಿನಿಧಿ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಚಡಗ ಕಾದಂಬರಿ ಪ್ರಶಸ್ತಿ, ಶಾ ಬಾಲುರಾವ್ ಹಾಗೂ ಬಸವರಾಜ ಕಟ್ಟಿಮನಿ ಯುವ ಬರಹಗಾರ ಪ್ರಶಸ್ತಿ ಸೇರಿದಂತೆ ಸುಮಾರು 9 ಪ್ರತಿಷ್ಠಿತ ಪ್ರಶಸ್ತಿಗಳು ಸಂದಿದ್ದು ಒಂದು ವಿಶೇಷ ದಾಖಲೆ ಎಂದರೂ ತಪ್ಪಿಲ್ಲ. ಅಮ್ಮನ ಆಟೋಗ್ರಾಫ್ ಕೃತಿಗೆ ಅರಳು ಪ್ರಶಸ್ತಿ ಮತ್ತು ಕೆ. ವಾಸುದೇವಾಚಾರ್ ಪ್ರಶಸ್ತಿ ಸಂದಿತು. ಬ್ರಿಟಿಷ್ ಬಂಗ್ಲೆ ಕೃತಿಗೆ ವಸುದೇವ ಭೂಪಾಲಂ ಪ್ರಶಸ್ತಿ ಸಂದಿತು. ತಮಿಳಿನ ‘ಇನಿಯ ನಂದನವನಂ’ ಪತ್ರಿಕೆಯು ಇವರಿಗೆ ಕರುನಾಡ ಸಾಹಿತ್ಯ ಚಿಂತಾಮಣಿ ಪ್ರಶಸ್ತಿ ನೀಡಿ ಗೌರವಿಸಿತು. ಹೀಗೆ ಇವರಿಗೆ ಸಂದ ಪ್ರಶಸ್ತಿಗಳು ಅನೇಕ.
ಶ್ರೀಧರ ಬನವಾಸಿ ಅವರು ಆಕಾಶವಾಣಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಥಾಸಂಧಿ ಕಾರ್ಯಕ್ರಮಗಳಲ್ಲಿ ಕಥಾವಾಚನ ಮತ್ತು ಸಂವಾದಗಳಲ್ಲಿಯೂ ಭಾಗಿಯಾಗಿದ್ದಾರೆ. ಅನೇಕ ವೈವಿಧ್ಯಪೂರ್ಣ ಬರೆಹಗಳೂ ವಿವಿಧ ಮಾಧ್ಯಮಗಳಲ್ಲಿ ಇವರಿಂದ ಮೂಡಿಬರುತ್ತಿವೆ
"ಬಂದಂತೆ ಬದುಕು; ಉಸಿರಿದ್ದಷ್ಟು ಸಾಧನೆ" ಎನ್ನುವ ಈ ಯುವ ಫಕೀರನಿಗೆ ಸಾಧ್ಯವಾಗದ್ದಾದರೂ ಏನು. ನಮ್ಮ ಹೆಮ್ಮೆಯ ಈ ಯುವ ಪ್ರತಿಭಾವಂತನಿಗೆ ಮೆಚ್ಚುಗೆಯುಕ್ತ ಶುಭಹಾರೈಕೆ ಹೇಳೋಣ.
Happy birthday Sridhara Shridhara Banavasi G C
ಕಾಮೆಂಟ್‌ಗಳು