ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜೋಸೆಫ್ ಪ್ರೀಸ್ಟ್ಲೆ


 

ಜೋಸೆಫ್ ಪ್ರೀಸ್ಟ್ಲೆ 


ಜೋಸೆಫ್ ಪ್ರೀಸ್ಟ್ಲೆ ಮಹಾನ್ ರಸಾಯನ ಶಾಸ್ತ್ರ ವಿಜ್ಞಾನಿ. ಇವನು ಯೂರೋಪ್ ಮತ್ತು ಅಮೆರಿಕಗಳಲ್ಲಿಯ ವೈಜ್ಞಾನಿಕ ಸಂಶೋಧನೆಗಳಿಗೆ ಸೇತುವೆ ಎನಿಸಿದ್ದಾನೆ. 

ಜೋಸೆಫ್ ಪ್ರೀಸ್ಟ್ಲೆ ಯಾರ್ಕ್‍ಷೈರಿನ ಫೀಲ್ಡ್‍ಹೆಡ್ ಎಂಬ ಕುಗ್ರಾಮದಲ್ಲಿ 1733 ಮಾರ್ಚ್ 13ರಂದು ಜನಿಸಿದ. ಅಸ್ವಾಸ್ಥ್ಯದಿಂದ ಕ್ರಮಬದ್ಧ ಶಿಕ್ಷಣ ಪಡೆಯಲಾಗದೆ ಇದ್ದರೂ 12 ವರ್ಷ ಪ್ರಾಯದವನಾದಾಗ ಈತ ನೆರೆಯ ಹಳ್ಳಿಯ ಪಾದ್ರಿಯ ಸಹಾಯದಿಂದ ತರ್ಕಶಾಸ್ತ್ರ, ಧರ್ಮಮೀಮಾಂಸೆ, ಅಧ್ಯಾತ್ಮ ಮತ್ತು ವಿಜ್ಞಾನಗಳನ್ನು ಚೆನ್ನಾಗಿ ಅಭ್ಯಸಿಸಿದ. ಪ್ರಾಟೆಸ್ಟಂಟ್ ಮತದ ಪಾದ್ರಿಯಾಗ ಬಯಸಿ ಡೊವೆಂಟ್ರಿಯಲ್ಲಿ ಧಾರ್ಮಿಕ ಶಿಕ್ಷಣ ಪಡೆದ. 1756ರಲ್ಲಿ ನೀಡ್ ಹ್ಯಾಮಿನಲ್ಲಿ ಅನಂತರ 1758ರಲ್ಲಿ ನಾಂತ್‍ವಿಟ್ಟಿನಲ್ಲಿದ್ದಾಗಲೇ ಪ್ರಾಥಮಿಕ ಶಿಕ್ಷಣದ ಜೊತೆಗೆ ವ್ಶೆಜ್ಞಾನಿಕ ಶಿಕ್ಷಣ ಮತ್ತು ಪ್ರಯೋಗಗಳನ್ನು ಕಲಿಸುವ ಶಾಲೆಯೊಂದನ್ನು ಪ್ರಾರಂಭಿಸಿದ. 1761ರಲ್ಲಿ ವಾಷಿಂಗ್‍ಟನ್ನಿನ ಹೊಸ ವಿದ್ಯಾಪೀಠದಲ್ಲಿ ಪ್ರಾಚೀನ ಭಾಷೆಗಳ ಮತ್ತು ಸಾಹಿತ್ಯದ ಶಿಕ್ಷಕನಾಗಿ ನೇಮಕಗೊಂಡ ಬಳಿಕ ವಿದ್ಯುತ್ತು ಮತ್ತು ರಸಾಯನಗಳಲ್ಲಿ ಸಂಶೋಧನೆ ಆರಂಭಿಸಿದ. ರಾಯಲ್ ಸೊಸೈಟಿಯ ಫೆಲೋಶಿಪ್ 1766ರಲ್ಲಿಯೂ ಫ್ರಾನ್ಸಿನ ವಿಜ್ಞಾನ ಅಕಾಡೆಮಿಯ ವಿದೇಶೀ ಸದಸ್ಯತ್ವ 1712ರಲ್ಲಿಯೂ ಲಭಿಸಿದುವು. 1772ರಿಂದ 1780ರ ತನಕ ಲಾರ್ಡ್‍ಶೆಲ್‍ಬರ್ನ್ (ಲ್ಯಾನ್ಸ್‍ಡೌನಿನ ಪ್ರಥಮ ಮಾಕ್ರ್ವಿಸ್) ಎಂಬಾತನ ಗ್ರಂಥ ಭಂಡಾರಿ ಮತ್ತು ಸಾಹಿತ್ಯ ಸಂಗಾತಿ ಎಂದು ನೇಮಕಗೊಂಡು ಅವನೊಡನೆ ಯೂರೋಪಿನ ಎಲ್ಲ ದೇಶಗಳನ್ನೂ ಸಂದರ್ಶಿಸಿದ. ಆಗಲೇ 1774ರ ಅಕ್ಟೋಬರಿನಲ್ಲಿ ಪ್ಯಾರಿಸ್ಸಿನಲ್ಲಿ ಲವಾಸ್ಯೆಯನ್ನು ಭೆಟ್ಟಿಯಾದಾಗ ತಾನು ಜ್ವಲನಧಾತುರಹಿತ ವಾಯುವನ್ನು ತಯಾರಿಸಿದ ವಿವರ ತಿಳಿಸಿದ್ದ.

ಅಮೆರಿಕದ ವಸಾಹತುಗಳ ಬಗ್ಗೆ ಆಗಿನ ಬ್ರಿಟಿಷ್ ಸರ್ಕಾರದ ನಿಲುಮೆ ಖಂಡಿಸಿ ಎಷ್ಟೋ ಲೇಖನ ಬರೆದು ಪ್ರಸಿದ್ಧಿಸಿದ. ಈತ ಫ್ರಾನ್ಸಿನ ಕ್ರಾಂತಿಕಾರರ ಪರವಾದ ಅಭಿಪ್ರಾಯಗಳನ್ನು ಹೊಂದಿದ್ದರಿಂದ ಬಹಳ ಅಪಖ್ಯಾತಿಗೆ ಗುರಿಯಾಗಬೇಕಾಯಿತು. ಫ್ರಾನ್ಸಿನ ಬ್ಯಾಸ್ಟಿಲ್ ದುರ್ಗದ ಪರಾಭವದ ವಾರ್ಷಿಕೋತ್ಸವದ ಸಂದರ್ಭದಲ್ಲಿ, 1791 ಜುಲೈ 14ರಂದು ಬರ್ಮಿಂಗ್‍ಹ್ಯಾಮಿನ ಕಾನ್‍ಸ್ಟಿಟ್ಯೂಶನಲ್ ಸೊಸೈಟಿಯವರು ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದಾಗ, ಉದ್ರೇಕಿತ ಜನಜಂಗುಳಿ ಇವನ ಮನೆ ಮತ್ತು ಪ್ರಯೋಗಾಲಯವನ್ನು ಧ್ವಂಸಗೊಳಿಸಿತು. ಎಷ್ಟೊ ವರ್ಷಗಳಿಂದ ಈತ ನಡೆಸಿದ್ದ ಸಂಶೋಧನೆಗಳಿಗೆ ಸಂಬಂಧಿಸಿದ್ದ ಕಾಗದಪತ್ರಗಳೆಲ್ಲ ಸುಟ್ಟುಹೋದುವು.  ಪ್ರೀಸ್ಟ್ಲೆ ಹೆಂಡತಿ ಮಕ್ಕಳೊಂದಿಗೆ ಪಾರಾಗಿ ಲಂಡನ್ನಿಗೆ ಬಂದ. 1792ರಲ್ಲಿ ಫ್ರಾನ್ಸಿನ ಪ್ರಜಾಪ್ರತಿನಿಧಿ ಸಭೆ ಇವನನ್ನು ತಮ್ಮ ದೇಶದ ಗೌರವ ನಾಗರಿಕನೆಂದು ಸನ್ಮಾನಿಸಿತು. 1974ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿ ಪೆನ್ಸಿಲ್ವೇನಿಯದ ನಾರ್ದಬರ್ಲೆಂಡಿನಲ್ಲಿ ನೆಲಸಿದ. ಫೆಲಡೆಲ್ಛಿಯದಲ್ಲಿ ರಸಾಯನ ವಿಜ್ಞಾನದ ಪ್ರಾಧ್ಯಾಪಕ ಹುದ್ದೆ ಕೊಡಮಾಡಿದ್ದನ್ನು ನಿರಾಕರಿಸಿ, ಸ್ವತಂತ್ರವಾಗಿದ್ದುಕೊಂಡು ರಸಾಯನ ವಿಜ್ಞಾನದಲ್ಲಿ ಮುಖ್ಯವಾಗಿ ವಿವಿಧ ಪ್ರಕಾರದ ಅನಿಲಗಳ ಬಗ್ಗೆ ಸಂಶೋಧನೆ ನಡೆಸಿದ. 1804 ಫೆಬ್ರುವರಿ 6ರಂದು ಅಲ್ಲಿಯೇ ಮಡಿದ.

ಜೋಸೆಫ್ ಪ್ರೀಸ್ಟ್ಲೆ ಮುಖ್ಯವಾಗಿ ಅನಿಲಗಳ ಗುಣಧರ್ಮಗಳ ಅಧ್ಯಯನದಲ್ಲಿ ಮಹತ್ತ್ವದ ಕೊಡುಗೆ ನೀಡಿದ್ದಾನೆ. ಆಕ್ಸಿಜನ್ನನ್ನು ಆಗಸ್ಟ್ 1774ರಲ್ಲಿ ಮೊತ್ತ ಮೊದಲಿಗೆ ಆವಿಷ್ಕರಿಸಿದ. ಅನಿಲಗಳನ್ನು ಜಾಡಿಗಳಲ್ಲಿ ಸಂಗ್ರಹಿಸಲು ಸಹಾಯವಾಗುವ ತೊಟ್ಟಿ ಸಹ ಇವನ ಸಂಶೋಧನೆಯೇ ಆಗಿದೆ. ನೀರಿನಲ್ಲಿ ಲೀನವಾಗುವ ಹೈಡ್ರೊಕ್ಲೋರಿಕ್ ಆಮ್ಲ, ಗಂಧಕ ಡೈ ಆಕ್ಸೈಡ್ ಮತ್ತು ಅಮೊನಿಯಾ ಮೊದಲಾದ ಅನಿಲಗಳನ್ನು ಈತ ಪಾದರಸ ತುಂಬಿದ ತೊಟ್ಟಿಯ ಸಹಾಯದಿಂದ ಸಂಗ್ರಹಿಸಬಹುದೆಂದು ತೋರಿಸಿದ್ದಲ್ಲದೆ ಅವುಗಳ ಗುಣಧರ್ಮಗಳನ್ನು ಕೂಡ ಅಭ್ಯಸಿಸಿದ್ದ. ಇಂಗಾಲದ ಮಾನಾಕ್ಸೈಡ್ ಅನಿಲವನ್ನು ಸಹ ಈತನೇ ಆವಿಷ್ಕರಿಸದ್ದ. 

ಆಕ್ಸಿಜನ್ನಿನ ಆವಿಷ್ಕರ್ತೃ ಪ್ರೀಸ್ಟ್ಲೆಯೇ ಆದರೂ ಅದರ ಮಹತ್ತ್ವವನ್ನು ಅರಿಯದೆ ಅದನ್ನು ಜ್ವಲನಧಾತುರಹಿತ ವಾಯು ಎಂದು ಕರೆದ. ದಹನ ಮತ್ತು ಶ್ವಾಸೋಚ್ಛಾಸ್ವ ಪ್ರಕ್ರಿಯೆಗಳು ಒಂದೇ ತರಹದ ರಾಸಾಯನಿಕ ಕ್ರಿಯೆಗಳೆಂದೂ ಅಶುದ್ಧ ವಾಯುವನ್ನು ಹಸಿರು ಸಸ್ಯಗಳು ಶುದ್ಧಗೊಳಿಸುವುದೆಂದೂ ಹೈಡ್ರೋಜನ್ ಮತ್ತು ಆಕ್ಸಿಜನ್ನುಗಳ ಮಿಶ್ರಣವನ್ನು ವಿದ್ಯುತ್ತಿನ ಸಹಾಯದಿಂದ ಸ್ಛೋಟಿಸಿದಾಗ ನೀರು ದೊರೆಯುವುದೆಂದೂ ತೋರಿಸಿಕೊಟ್ಟ.

ಪ್ರೀಸ್ಟ್ಲೆ ಪತ್ತೆಹಚ್ಚಿದ ಆಕ್ಸಿಜನ್ನಿನ ಮೂಲಕ ಲೆವೋಸ್ಯೇ ಜ್ವಲನಧಾತುತತ್ತ್ವವನ್ನು ಅಸಾಧುವೆಂದು ತೋರಿಸಿಕೊಟ್ಟು ರಸಾಯವಿಜ್ಞಾನದಲ್ಲಿ ಕ್ರಾಂತಿ ಉಂಟುಮಾಡಿದ. ಆದರೆ ಪ್ರೀಸ್ಟ್ಲೆ ಮಾತ್ರ ಕೊನೆಯತನಕವೂ ಜ್ವಲನಧಾತುತತ್ತ್ವವನ್ನೇ ಬಲವಾಗಿ ನಂಬಿದ್ದ. 1874ರಲ್ಲಿ ಪ್ರೀಸ್ಟ್ಲೆಯ ಹಳೆಯ ಮನೆಯಲ್ಲಿ ಆಕ್ಸಿಜನ್ ಶೋಧನೆಯ ಶತಮಾನೋತ್ಸವ ಆಚರಿಸಲೆಂದು ಅಮೆರಿಕದ ಕೆಲವು ರಸಾಯನ ವಿಜ್ಞಾನಿಗಳು ಕೂಡಿದಾಗ ಅಮೆರಿಕದ ರಸಾಯನ ವಿಜ್ಞಾನಸಂಘ ಜನ್ಮವೆತ್ತಿತು. ಆ ವಿಜ್ಞಾನಕ್ಕೆ ಅತ್ಯುತ್ತಮ ಕೊಡುಗೆ ಸಲ್ಲಿಸಿದವರನ್ನು ಗೌರವಿಸಿ ಜೋಸೆಫ್ ಪ್ರೀಸ್ಟ್ಲೆಯ ಹೆಸರಿನಲ್ಲಿ ಸ್ಮಾರಕ ಪದಕವನ್ನು ಈ ಸಂಘ ಸ್ಥಾಪಿಸಿದೆ. 

ಮಾಹಿತಿ ಆಧಾರ: ಮೈಸೂರು ವಿಶ್ವಕೋಶ

On that birth anniversary of great scientist Joseph Priestley

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ