ಗಂಗಾಧರ ಐತಾಳ್
ಗಂಗಾಧರ ಐತಾಳ್
ಗಂಗಾಧರ ಐತಾಳ್ ಅವರು ವಿಜ್ಞಾನ ಶಿಕ್ಷಕರಾಗಿ ಮತ್ತು ಲೇಖಕರಾಗಿ ಹೆಸರಾಗಿದ್ದವರು. ಇವರ ಪತ್ನಿ ಪಾರ್ವತಿ ಜಿ. ಐತಾಳ್ Parvathi Aithal ಅವರು ನಾಡಿನ ಪ್ರಸಿದ್ಧ ಲೇಖಕಿ.
ಗಂಗಾಧರ ಐತಾಳ್ ಅವರು 1947ರ ಏಪ್ರಿಲ್ 15ರಂದು ಕೋಡಿ ಕನ್ಯಾನದಲ್ಲಿ ಜನಿಸಿದರು.
ಗಂಗಾಧರ್ ಐತಾಳ್ ಅವರು ಕುಂದಾಪುರದ ಸೈಂಟ್ ಮೇರೀಸ್ ಹೈಸ್ಕೂಲಿನಲ್ಲಿ ಗಣಿತ ಮತ್ತು ವಿಜ್ಞಾನ ಬೋಧನೆಯ ಮೂಲಕ ವಿದ್ಯಾರ್ಥಿಗಳ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದು, 2005ರಲ್ಲಿ ಸೇವೆಯಿಂದ ನಿವೃತ್ತರಾದರು.
ಖಗೋಳ ವೀಕ್ಷಣೆ ಜೊತೆಗೆ ವಿಜ್ಞಾನ ಮಾದರಿಗಳ ತಯಾರಿಯೂ ಗಂಗಾಧರ್ ಐತಾಳ್ ಅವರ ಪ್ರಿಯ ಹವ್ಯಾಸವಾಗಿತ್ತು. ತಮ್ಮ ವಿದ್ಯಾರ್ಥಿ ಜೀವನದ ದೆಸೆಯಲ್ಲಿಯೇ ವಿಜ್ಞಾನ ಮಾದರಿಗಳಿಗೆ ಬಹುಮಾನ ಪಡೆಯುತ್ತಿದ್ದ ಇವರು, ಅಧ್ಯಾಪಕರಾದ ನಂತರ, ತಮ್ಮ ವಿದ್ಯಾರ್ಥಿಗಳಲ್ಲೂ ಆ ಕುರಿತು ಆಸಕ್ತಿ ಹುಟ್ಟಿಸಿದರು. ವಿಜ್ಞಾನ ಮಾದರಿಗಳ ತಯಾರಿ ಮೂಲಕ ಪರಿಣಾಮಕಾರಿಯಾಗಿ ವಿಜ್ಞಾನ ಬೋಧನೆ ಮಾಡುತ್ತಿದ್ದ ಗಂಗಾಧರ್ ಐತಾಳ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಗಳು ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟಗಳಲ್ಲಿಯೂ ಬಹುಮಾನ ಪಡೆದಿವೆ.
ಗಂಗಾಧರ್ ಐತಾಳ್ ಅವರು 'ಮಕ್ಕಳಿಗಾಗಿ ಖಗೋಳವಿಜ್ಞಾನ' ಎಂಬ ಕೃತಿಯನ್ನು ಬರೆದಿದ್ದರು. ಜನಪ್ರತಿನಿಧಿ ಪ್ರಕಾಶನವು 2018ರಲ್ಲಿ ಪ್ರಕಟಿಸಿದ್ದ ಈ ಕೃತಿಯು, ಮಕ್ಕಳಿಗೆ ಪರಿಣಾಮಕಾರಿಯಾಗಿ ಖಗೋಳವಿಜ್ಞಾನದ ಅರಿವು ಮೂಡಿಸುವ ಮೂಲಕ ಅಪಾರ ಜನಪ್ರಿಯತೆ ಪಡೆಯಿತು. ಈ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ 2018ನೇ ಸಾಲಿನ ಜಿ. ಪಿ. ರಾಜರತ್ನಂ ದತ್ತಿ ಪ್ರಶಸ್ತಿ ಸಂದಿತ್ತು.
ಗಂಗಾಧರ್ ಐತಾಳ್ ಅವರಿಂದ ರಚಿತಗೊಂಡು ಅವರ ಪತ್ನಿ ಪಾರ್ವತಿ ಐತಾಳ್ ಅವರು ಸಂಪಾದಿಸಿರುವ ‘ವಿಜ್ಞಾನ, ಗಣಿತ ಮತ್ತು ಖಗೋಳ ಮಾದರಿಗಳು' ಎಂಬ ಕೃತಿ ಜನಪ್ರತಿನಿಧಿ ಪ್ರಕಾಶನದಿಂದ ಪ್ರಕಟಗೊಂಡಿದೆ.
ಗಂಗಾಧರ್ ಐತಾಳ್ ಅವರಿಗೆ, ಶಿಕ್ಷಣ
ಕ್ಷೇತ್ರದ ಸಾಧನೆಗೆ ಜಿಲ್ಲಾ ಮಟ್ಟದಲ್ಲಿ ಸಂದ ಗೌರವಗಳಲ್ಲದೆ, ಕರ್ನಾಟಕ ಸರಕಾರವು
ರಾಜೀವ ಗಾಂಧಿ ವಿಜ್ಞಾನ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿತ್ತು.
ಗಂಗಾಧರ್ ಐತಾಳ್ ಅವರು 2023ರ ಫೆಬ್ರವರಿ 3ರಂದು ಈ ಲೋಕವನ್ನಗಲಿದರು.
On the birth anniversary of great Science and Maths teacher Gangadhar Aithal Sir 🌷🙏🌷
ಕಾಮೆಂಟ್‌ಗಳು