ವಿಶಿಷ್ಟ
ವಿಶಿಷ್ಟ
ಬಹಳ ದಿನಗಳಿಂದ ಇಚ್ಛಿಸಿದ್ದ 'ವಿಶಿಷ್ಟ' ಕಾದಂಬರಿಯನ್ನು ಕಳೆದ ಎರಡು ಮೂರು ದಿನಗಳಲ್ಲಿ ಸಂತಸದಿಂದ ಓದಿ ಮುಗಿಸಿದೆ. ಆಚಾರ್ಯತ್ರಯರಾದ ಆದಿ ಶಂಕರರು, ರಾಮಾನುಜರು ಮತ್ತು ಮಧ್ವರ ಕುರಿತು ಅಲಲ್ಲಿ ಒಂದಷ್ಟು ಓದುತ್ತ ಬಂದ ನನಗೆ, ಆ ಕುರಿತು ಓದುವುದು ತುಂಬ ಇಷ್ಟದ ಸಂಗತಿ.
ನನ್ನನ್ನು ಯುವ ವಯಸ್ಸಿನಲ್ಲಿ ಅಪಾರವಾಗಿ ಪ್ರಭಾವಿಸಿದ 'ಅಜೇಯ' ಕಾದಂಬರಿಕಾರರಾದ ಬಾಬು ಕೃಷ್ಣಮೂರ್ತಿ ಅವರು ಶ್ರೀರಾಮಾನುಜರ ಕುರಿತಾಗಿ ‘ವಿಶಿಷ್ಟ' ಎಂಬ ಕಾದಂಬರಿ ಬರೆದಿದ್ದಾರೆ ಎಂದು ತಿಳಿದೊಡನೆಯೇ ಅದಕ್ಕಾಗಿ ಹಂಬಲಿಸಿದ ನಾನು, ಕಳೆದ ಸಲ ಭಾರತಕ್ಕೆ ಬಂದೊಡನೆಯೇ ಮಾಡಿದ ಪ್ರಮುಖ ಕೆಲಸಗಳಲ್ಲಿ ಆ ಪುಸ್ತಕವನ್ನು ಕೊಂಡಿದ್ದು ಒಂದು.
ಈ ಕೃತಿಯ ನನ್ನ ಓದನ್ನು ಕುರಿತು ಬರೆಯಬೇಕೆಂದುಕೊಂಡಿದ್ದೆ. ಆದರೆ, ನಾನು ಇದನ್ನು ಓದಿದ ಮೇಲೆ ಖಾಲಿ ಆದೆ ಅನಿಸಿತು. ಹಾಗಾಗಿ ನಾನೇನು ಹೇಳಲಾರದವನಾದೆ. ಆದರೆ ಈ ಕೃತಿಯ ಪರಿಚಯ ಅಂತರಜಾಲದಲ್ಲಿ ಸಿಗುವುದು ಮುಖ್ಯ ಎಂಬ ನಿಟ್ಟಿನಲ್ಲಿ ಈ ಕೃತಿಯಲ್ಲಿರುವ ಭಗವದ್ರಾಮಾನುಜರ ಕುರಿತು ಇರುವ ಸ್ವಾಮಿ ವಿವೇಕಾನಂದರು, ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ, ಪ್ರೊ. ಕೆ. ಎಸ್. ನಾರಾಯಣಾಚಾರ್ಯರ ಮಾತುಗಳನ್ನು ಮೊದಲಿಗೆ ಸ್ಮರಿಸಿ, ನಂತರ ಪುಸ್ತಕದ ಕುರಿತಾಗಿ ಸಮಗ್ರ ಸ್ವರೂಪವನ್ನು ನೀಡಿರುವ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಹಿನ್ನೋಟ ಬರೆಹವನ್ನು ಶ್ರದ್ಧಾ ಭಕ್ತಿ ಗೌರವಗಳೊಂದಿಗೆ ಇಲ್ಲಿ ನಿವೇದಿಸುತ್ತಿದ್ದೇನೆ.
"ಶ್ರೀ ರಾಮಾನುಜರು ದಮನಿತರಿಗಾಗಿ ಮರುಗಿದರು. ಅಂಥವರಿಗೆ ಅನುಕಂಪ ತೋರಿದರು. ವ್ರತಾಚರಣೆ ಪದ್ಧತಿಗಳನ್ನು ಹಾಗೂ ಅವುಗಳನ್ನು ಮುಸುಕಿದ್ದ ಕಂದಾಚಾರಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಶಕ್ಯವಿದ್ದಷ್ಟು ಶುದ್ಧಿಗೊಳಿಸಿದರು. ಅವುಗಳ ಆವಶ್ಯಕತೆ ಇದ್ದವರಿಗೆ ಹೊಸ ವ್ರತಾಚರಣೆ ಹಾಗೂ ಆರಾಧನಾ ವಿಧಾನಗಳನ್ನು ರಚಿಸಿಕೊಟ್ಟರು. ಅದೇ ವೇಳೆ ಅವರು ಬ್ರಾಹ್ಮಣರಿಂದಾರಂಭಿಸಿ ಅಂತ್ಯಜರೆನ್ನಿಸಿಕೊಂಡವರವರೆಗೆ ಎಲ್ಲರಿಗೂ ಉನ್ನತ ಮಟ್ಟದ ಆಧ್ಯಾತ್ಮಿಕ ಆರಾಧನಾ ಪದ್ಧತಿಗಳ ದ್ವಾರಗಳನ್ನು ಮುಕ್ತವಾಗಿ ತೆರೆದುಬಿಟ್ಟರು. ಇದು ರಾಮಾನುಜರು ಮಾಡಿದ ಅಪೂರ್ವ ಕಾರ್ಯ. ಅವರ ಈ ಕಾರ್ಯ ಮುಂದುವರಿದು ಉತ್ತರಕ್ಕೂ ವ್ಯಾಪಿಸಿತು. ಮಹಮದೀಯರ ಆಡಳಿತಾವಧಿಯಲ್ಲಿ ಕೆಲವರು ಆಧ್ಯಾತ್ಮಿಕ ಮಹಾಪುರುಷರು ರಾಮಾನುಜರ ಕಾರ್ಯವನ್ನು ಕೈಗೆತ್ತಿಕೊಂಡರು. ನಮಗೆ ಹೆಚ್ಚು ಸಮೀಪದ ಆಧುನಿಕ ಕಾಲದ ಅಂಥ ಸಂತ ಶ್ರೇಷ್ಠರು ಚೈತನ್ಯ ಪ್ರಭುಗಳು... ರಾಮಾನುಜರು ಅತ್ಯಂತ ವ್ಯಾವಹಾರಿಕವಾದ ಶಾಸ್ತ್ರ ದರ್ಶನದ ಮೂಲಕ ಜನರ ಭಾವನೆಗಳಿಗೆ ಚೆನ್ನಾಗಿ ಸ್ಪಂದಿಸಿದರು. ಅಧ್ಯಾತ್ಮ ಸಾಧನದ ಎದುರು ಜನ್ಮಜಾತ ಹಕ್ಕುಗಳು ಸಂಪೂರ್ಣ ನಿರಾಕರಿಸಲ್ಪಟ್ಟವು. ಜನಸಾಮಾನ್ಯರ ಭಾಷೆಯಲ್ಲಿ ಅವರು ಸಂವಹಿಸಿದ್ದು ಸಮಾಜದ ಎಲ್ಲ ಜನರನ್ನು ವೈದಿಕ ಧರ್ಮಕ್ಕೆ ಕರೆತರುವುದರಲ್ಲಿ ಅತ್ಯಂತ ಯಶಸ್ವಿಯಾಯಿತು. ಶ್ರೀ ರಾಮಾನುಜರು ಬುದ್ಧಿ ಹೃದಯಗಳ ಸುಂದರ ಸಂಗಮ" - ಸ್ಟಾಮಿ ವಿವೇಕಾನಂದರು
ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರು ತಮ್ಮ ಒಂದು ಕವನದಲ್ಲಿ ಹೀಗೆನ್ನುತ್ತಾರೆ:
“ಭಕ್ತಿಯೂ ವಿನಯವೂ ಕರುಣೆಯೂ ಒಡಗೂಡಿ
ಮೂರ್ತಿವೆತ್ತಿದವರೆ ನಿಮಗೆನ್ನ ಶರಣಾರ್ಥಿ
ಎಲ್ಲೆಲ್ಲೂ ದೈವವನ್ನೇ ಕಂಡ ತಮಗೆ ಇದು
ಅತ್ಯಂತ ಸಹಜ ಸಾತ್ತ್ವಿಕ ಮುದ್ರೆ ಎನ್ನುವರು''
"ಶ್ರೀ ರಾಮಾನುಜರು ತತ್ತ ಸಿದ್ಧಾಂತ ನಿರೂಪಣೆಯಲ್ಲೂ ಲೋಕಹಿತಮಾರ್ಗ, ಪ್ರಬೋಧನೆಯಲ್ಲೂ ಅತ್ಯಂತ ಕ್ರಾಂತಿಕಾರಕ ಮಹಾಪುರುಷರು. ಅವರ ಹೃದಯ ವೈಶಾಲ್ಯವೂ ಅನನ್ಯ, ಅನುಪಮ. ಜಾತಿ, ವರ್ಣ ಏನಿದ್ದರೂ ಲೋಕ ನಿರ್ವಹಣೆಗೇ ಹೊರತು ಮೋಕ್ಷಕ್ಕೆ ಅದರ ಪರಿಗಣನೆ ಇಲ್ಲ ಎಂದು ಸಾರಿದ ಮಹಾನುಭಾವರು". - ಡಾ. ಕೆ.ಎಸ್, ನಾರಾಯಣಾಚಾರ್ಯ
ಬಾಬು ಕೃಷ್ಣಮೂರ್ತಿ ಅವರ 'ವಿಶಿಷ್ಟ' ಕಾದಂಬರಿ ಕುರಿತಾಗಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಬರೆದಿರುವ ಸುದೀರ್ಘ ಹಿನ್ನೋಟ ಇದೀಗ ತಮ್ಮ ಮುಂದೆ 🌷🙏🌷
ಬಾಬು ಕೃಷ್ಣಮೂರ್ತಿ ಅವರ ಬರೆಹಗಳನ್ನು ನಾಲ್ವತ್ತು ವರ್ಷಗಳಿಂದ ಓದುತ್ತ ಬಂದಿದ್ದೇನೆ. ಅವರ ಓಜಸ್ವೀ ಬರೆಹಕ್ಕೆ ಎಷ್ಟೋ ಬಾರಿ ತಲೆಬಾಗಿದ್ದೇನೆ. ಕಳೆದ ವರ್ಷಗಳ ಹಿಂದೆ 'ಮಹಾಸಾಧಕ' ಶ್ರೀಲ ಪ್ರಭುಪಾದರನ್ನು ಕುರಿತ ಕಾದಂಬರಿ ಓದಿದ ಮೇಲೆ, ನಮ್ಮ ಕಾಲದ “ಕಾದಂಬರಿ ಸಾರ್ವಭೌಮ” ಇವರೇ ಎಂದು ನನಗೆ ದಿಟವಾಗಿ ಮನವರಿಕೆ ಆಯಿತು. ಇದು 'ಅಜೇಯ' ಕಾದಂಬರಿಯಿಂದ ಪ್ರಾರಂಭವಾಗಿ, 'ವಿಶಿಷ್ಟ'ಕ್ಕೆ ಸಂದಿದೆ. ಬಾಬು ಕೃಷ್ಣಮೂರ್ತಿ ಅವರು ವಿಶಿಷ್ಟವಾದ ಸಂಧ್ಯಾಕಾಲದಲ್ಲಿ ಇದ್ದಾರೆಂಬುದೂ ನಿಜ.
ಕನ್ನಡದಲ್ಲಿ ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾದಂಬರಿಗಳು ಬಂದಿವೆಯಷ್ಟೆ. ಯೋಗಿವರ್ಯರನ್ನೋ ಋಷಿಗಳನ್ನೋ ತಪಸ್ವಿಗಳನ್ನೋ ಕುರಿತು ಹಲವು ಮಹಾಕಾದಂಬರಿಗಳು ಬಂದಿವೆ. ವಿದ್ಯಾರಣ್ಯರನ್ನು ಕುರಿತು ಗಳಗನಾಥರು, ಯಾಜ್ಞವಲ್ಕ್ಯರನ್ನು ಕುರಿತ ದೇವುಡು ಬರೆದ ಕಾದಂಬರಿಗಳು ನನಗೀಗ ಥಟ್ಟನೆ ನೆನಪಿಗೆ ಬರುತ್ತಿವೆ. ಆದರೆ, ಆಚಾರ್ಯ ಶಂಕರ ಭಗವತ್ಪಾದರನ್ನೂ, ಶ್ರೀಮದ್ರಾಮಾನುಜರನ್ನೂ ಆಚಾರ್ಯ ಮಧ್ವರನ್ನೂ ಕುರಿತು ಮಹಾಕಾದಂಬರಿಗಳು ಬರಲಿಲ್ಲವಲ್ಲ ಎಂಬ ವ್ಯಥೆ ಬಹುವರ್ಷಗಳಿಂದ ನನ್ನನ್ನು ಕಾಡಿದ್ದು ನಿಜ. ಕೀರ್ತಿಶೇಷರಾದ ದೇವುಡು ಅವರು ಆಚಾರ್ಯ ಶಂಕರರನ್ನು ಕುರಿತು 'ಮಹಾಸನ್ಯಾಸಿ' ಕಾದಂಬರಿ ಬರೆಯಲು ನಿಯೋಜಿಸಿ, ಮೊದಲೆರಡು ಅಧ್ಯಾಯಗಳನ್ನು ಬರೆದಿದ್ದರು. ಆದರೆ, ಪ್ರಾರಂಭಕ್ಕೆ ಅದು ನಿಂತುಹೋಯಿತು. ಮುಂದೆ ಇಂಥ ಸಾಹಸಕ್ಕೆ ಯಾರೂ ಕೈಹಾಕಲಿಲ್ಲ. ಆದರೆ, ಕನ್ನಡ ಕಾದಂಬರೀ ಕ್ಷೇತ್ರ ಬಂಜೆಯಲ್ಲ ; ಅದು ಪುಣ್ಯಭೂಮಿ. ಬಾಬು ಕೃಷ್ಣಮೂರ್ತಿ ಅವರು ಭಗವದ್ರಾಮಾನುಜರನ್ನು ಕುರಿತು ವಿಶಿಷ್ಟ ಕಾದಂಬರಿ ಬರೆದುಕೊಟ್ಟು ಆ ಬಂಜೆತನವನ್ನು ನೀಗಿಸಿ ನಮ್ಮನ್ನು ಧನ್ಯರಾಗಿಸಿದ್ದಾರೆ.
ಆಚಾರ್ಯತ್ರಯರು ಸನಾತನ ಧರ್ಮವನ್ನು ಕಳೆದ ಒಂದು ಸಾವಿರದ ಇನ್ನೂರು ವರ್ಷಗಳಿಂದ ಪರಿರಕ್ಷಿಸಿದ್ದಾರೆ. ಬಾಬು ಕೃಷ್ಣಮೂರ್ತಿ ಅವರಿಗೆ ಇದು ಚೆನ್ನಾಗಿ ತಿಳಿದಿದೆ. ಆ ಇಕ್ಕಟ್ಟುಗಳು ಆಧ್ಯಾತ್ಮಿಕ, ಆದಿದೈವಿಕ, ಆದಿಭೌತಿಕಕ್ಕೆ ಸೇರಿವೆ. ಸಾಮಾಜಿಕ ಪರಿಭಾಷೆಯಲ್ಲಿ ಹೇಳಬಹುದಾದರೆ ಸಾಂಸ್ಕೃತಿಕ, ಸಾಮಾಜಿಕ, ಆಧ್ಯಾತ್ಮಿಕ, ಸಂವಿಧಾನಗಳಿಗೆ ಸೇರಿದ್ದವೆಂಬುದು ಸುನಿಶ್ಚಿತ. ವಿಶಿಷ್ಟ ಕಾದಂಬರಿಯ ಮೂಲಕ ಭಗವದ್ರಾಮಾನುಜರ ಸಹಸ್ರಮಾನೋತ್ಸವದ ಕೊನೆಯ ಪರಿಧಿಯಲ್ಲಿ ಕಾದಂಬರಿಯ ಮೂಲಕ ರಾಮಾನುಜರ ಭವ್ಯವಿಗ್ರಹವನ್ನು ಕನ್ನಡದ ನೆಲದಲ್ಲಿ ಶಬ್ದಶಿಲ್ಪದ ಮೂಲಕ ಸ್ಥಾಪಿಸಿದ್ದಾರೆ. ಇತ್ತೀಚಿನ ವರ್ಷದಲ್ಲಿ ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಶ್ರೀ ರಾಮಾನುಜರ ಸಹಸ್ರಮಾನೋತ್ಸವ ನಡೆಯಿತು. ಆ ನೆನಪು ಇನ್ನೂ ಹಸುರಿರುವಾಗಲೇ ಈ ಮಹಾಕಾದಂಬರಿಯು ಕನ್ನಡಿಗರ ಮಡಿಲನ್ನು ಸೇರಿದೆ. ಶ್ರೀ ರಾಮಾನುಜರು ಬಾಬು ಕೃಷ್ಣಮೂರ್ತಿ ಅವರಿಗಾಗಿ ಕಾದಿದ್ದರೆಂದು ತೋರುತ್ತದೆ. ದೈವವು ಇಂಥ ಭಗವದ್ಕೈಂಕರ್ಯಕ್ಕೆ ಅವರನ್ನು ನಿಯೋಜನೆಗೊಳಿಸಿದ್ದು ಅರ್ಥಪೂರ್ಣವೇ ಆಗಿದೆ.
ಇದು ಪೂರ್ವ ಕಥನ. ವಿಶಿಷ್ಟ ಮಹಾಕಾದಂಬರಿಯು ಆರಂಭವಾಗುವುದೇ 'ನಗರೇಷು ಕಂಚಿ'ಯಿಂದ. ಇದು ಧ್ವನಿಪೂರ್ಣವಾದ ಪ್ರಾರಂಭ. ಕಾಂಚಿನಗರದ ಪೂರ್ವಾಪರ ವಿವರಗಳು ಕಾದಂಬರಿ ಭಿತ್ತಿಗೆ ಸೊಗಸಾದ ಆಯಾಮವನ್ನು ನೀಡಿವೆ. ಕಾಂಚಿಯು ಐತಿಹಾಸಿಕ ಮತ್ತು ಸಾಂಸ್ಕೃತಿಕ ನಗರ. ಕಾಂಚಿಯ ಐತಿಹಾಸಿಕ ವಿವರಗಳನ್ನು ನೀಡುತ್ತಲೇ ಸಾಮಾಜಿಕ ಆವರಣದತ್ತ ಕಾದಂಬರಿ ಮುಖ ಮಾಡುತ್ತದೆ. ಇದು ಕಾದಂಬರಿಕಾರನ ಸ್ವಯಮಾಚಾರ್ಯ ಗುಣವೆಂದು ನಾನು ಪರಿಭಾವಿಸಿದ್ದೇನೆ. ಕಂಚಿಯ ಕಾಮಾಕ್ಷಿ ಒಂದೆಡೆಯಾದರೆ; ವರದರಾಜಸ್ವಾಮಿ ಇನ್ನೊಂದೆಡೆ. ಆ ಸ್ವಾಮಿಗೆ 'ತಿರುಮಂಜನಮ್' ತರುವ ತೇಜಸ್ವಿ ಕಿಶೋರನ ಮೂಲಕ ಕಾದಂಬರಿಯ ವಿವರಗಳು ಪ್ರಾರಂಭವಾಗುತ್ತದೆ. ಅಲ್ಲಿಯ ವರ್ಣನೆ, ಕಿಶೋರನ ಬಾಹ್ಯತೇಜಸ್ನನ್ನು ವರ್ಣಿಸುತ್ತಲೇ ಆಂತರಿಕ ತೇಜಸ್ಸನ್ನು ಕಾದಂಬರಿ ನಿರೂಪಿಸುತ್ತದೆ. ಇದು ಒಬ್ಬ ನಿಜಕಾದಂಬರಿಕಾರನಿಗೆ ಮಾತ್ರ ಸಾಧ್ಯವಾಗುವ ಕಾರ್ಯ. ಕಾಂಚಿಯ ಯಾದವಪಕಾಶರ ಘಟಿಕಾಸ್ಥಾನದಲ್ಲಿ ರಾಮಾನುಜರ ವಿದ್ಯಾಭ್ಯಾಸ, ಗುರುಗಳ ಭರ್ತ್ಸನೆ, ಶಿಷ್ಯನ ಆಘಾತ, ವಿಚಾರ ಸಂಘರ್ಷಗಳು ಕಿಶೋರನ ಸ್ಮೃತಿಯಲ್ಲಿ ತಾಕಲಾಡುತ್ತವೆ. ಈ ವಸ್ತು ತಂತ್ರಗಳು ಹೆಣಿಗೆಯನ್ನು ಉಸಿರು ಬಿಗಿಹಿಡಿದು ಓದುವಂತೆ ಮಾಡುತ್ತವೆ. ಪ್ರಾರಂಭಕ್ಕೆ "ಸತ್ಯಂ ಜ್ಞಾನಮ್ ಅನಂತಂ ಬ್ರಹ್ಮ" ಎಂಬ ಶ್ರುತಿವಿಚಾರದ ಸೂಕ್ಷ್ಮತಂತು ಕಿಶೋರ ರಾಮಾನುಜರ ಮನೋಕಲ್ಪದಲ್ಲಿ ನಡೆಯುತ್ತದೆ. ಕುತೂಹಲವು ಕಾದಂಬರಿ ತಂತ್ರಗಳಲ್ಲಿ ಒಂದಷ್ಟೆ. ಕಿಶೋರ ಪ್ರಾಯದ ರಾಮಾನುಜರು ಬೆಳೆಯುತ್ತಿರುವಂತೆ ಪೂರ್ವಾಚಾರ್ಯರಾದ ಯಾಮುನಾಮುನಿಗಳ ಗ್ರಂಥಗಳು ಅವರಿಗೆ ದಾರಿ ತೋರಿಸುತ್ತವೆ. ಕಂಚಿರಾಜನ ಮಗಳನ್ನು ಬ್ರಹ್ಮರಾಕ್ಷಸ ಹಿಡಿದು ಹಿಂಸಿಸುವ ಪ್ರಸಂಗದಲ್ಲಿ ಗುರು ಯಾದವಪ್ರಕಾಶರ ಜತೆ ಶ್ರೀ ರಾಮಾನುಜರು ಬರುತ್ತಾರೆ. ಶ್ರೀ ರಾಮಾನುಜರು 'ಓಂ ನಮೋ ನಾರಾಯಣಾಯ' ಎಂದು ಮೂರು ಬಾರಿ ನೀರನ್ನು ಅಭಿಮಂತ್ರಿಸಿ ಆಕೆಯ ಮೇಲೆ ಸಿಂಪಡಿಸುತ್ತಾರೆ. ಇದೊಂದು ಪ್ರಸಂಗ ಮಾತ್ರ. ಇಲ್ಲಿ ಶ್ರೀ ರಾಮಾನುಜರ ದೈವಿಕಪಾರಮ್ಯ ಉತ್ಥಾನಗೊಳ್ಳುತ್ತದೆ. ಅವರು ಶ್ರೀರಂಗಕ್ಕೆ ಹೋಗಿ ಪೀಠಾಧಿಪತಿಗಳಾದ ಮೇಲೆ 'ವಿಶಿಷ್ಟಾದ್ವೈತ'ದ ತತ್ತ್ವಪ್ರಸಾರದ ವಿವಿಧ ನೆಲೆಗಳನ್ನು ಆಯಾಮಗಳನ್ನು ವ್ಯಾಪಕವಾಗಿ ಕಾದಂಬರಿ ವಿಸ್ತರಿಸಿಕೊಳ್ಳುತ್ತ ಹೋಗುತ್ತದೆ. ಹಲವು ಶಿಷ್ಯರು ಬರುತ್ತಾರೆ. ಅದರಲ್ಲಿ ಕೂರೇಶ ಒಬ್ಬ. ಕಾದಂಬರಿಯ ಉದ್ದಕ್ಕೂ ಕೂರೇಶ ಬಹುಮುಖ್ಯ ಪಾತ್ರವಾಗಿ ಅರಳುತ್ತಾನೆ. ಗೋವಿಂದ, ದಾಶರಥಿ, ಮಹಾಪೂರ್ಣ ಮುಂತಾದ ಪಾತ್ರಗಳು ಕಾದಂಬರಿ ಒಡಲನ್ನು ಬಂದು ಸೇರಿಕೋಳ್ಳುತ್ತವೆ. ಕಾದಂಬರಿಯ ಆಶಯ ಹಿಗ್ಗುತ್ತ ಹೋಗುತ್ತದೆ. ಬಾಬು ಕೃಷ್ಣಮೂರ್ತಿ ಅವರು ಶ್ರೀ ರಾಮಾನುಜರನ್ನು ಕಂಚಿಯಿಂದ ಶ್ರೀರಂಗಕ್ಕೆ ತಂದಮೇಲೆ ನಡೆಯುವ ಆಧ್ಯಾತ್ಮಿಕ ಕಲಾಪಗಳು ಸಾವಿರ ವರ್ಷಕ್ಕೆ ಮಾತ್ರವಲ್ಲ; ಸಾವಿರದ ವರ್ಷಕ್ಕೆ ಕರೆದುಕೊಂಡು ಹೋಗುತ್ತವೆ. ಅವು ಯಾಮುನಾಚಾರ್ಯರ ಪೂರ್ಣದರ್ಶನವನ್ನು ಮಾಡಿಸುತ್ತವೆ. ಶ್ರೀವೈಷ್ಣವ ಸಂಪ್ರದಾಯದ ಗುರುತ್ವವು ಶ್ರೀರಂಗದಲ್ಲಿ ನೆಲೆಗೊಳ್ಳುತ್ತದೆ. ಶೀ ರಾಮಾನುಜರು ಸಮಸ್ತ ಜನ ಸಮುದಾಯದ ಮೇಲೆ ವಿಶೇಷವಾಗಿ ಶೂದ್ರ ಮತ್ತು ಅಸ್ಪೃಶ್ಯರಿಗೆ ಪಂಚಸಂಸ್ಕಾರ ಮತ್ತು ಸಮಾಶ್ರಯಣ ನೀಡಿದ ಪ್ರಸಂಗಗಳು ಅತ್ಯಂತ ಮಾನವೀಯವಾಗಿ ಇಲ್ಲಿ ಚಿತ್ರಣಗೊಂಡಿವೆ. ಪೂಜೆ-ಪುನಸ್ಕಾರಕ್ಕೆ ಶೂದ್ರರು ಅರ್ಹರೆಂದು ಸಹಸ್ರ ವರ್ಷಗಳ ಹಿಂದೆ ನಿರೂಪಿಸಿದ ಸಂಗತಿಗಳನ್ನು ಓದುತ್ತಾ ಹೋದಂತೆ ಕಾದಂಬರಿ ನೂತನ ತಿರುವುಗಳನ್ನು ಪಡೆಯುತ್ತ ಹೋಗುತ್ತದೆ. ಶ್ರೀರಂಗಂ, ಕಾಂಚಿ ಇವೆರಡೂ ಕ್ಷೇತ್ರಗಳಲ್ಲಿ ಉದ್ಭವಗೊಳ್ಳುವ ಶ್ರೀವೈಷ್ಣವ ಮತ್ತು ಶೈವರ ನಡುವಣ ಧಾರ್ಮಿಕ ಕಲಹವನ್ನು ಬಹು ಸಂಯಮದಿಂದಲೇ ಕಾದಂಬರಿ ಚಿತ್ರಿಸಿದೆ. ಈ ನಡುವೆ ಶ್ರೀ ರಾಮಾನುಜರು ಕಾಶ್ಮೀರದ ಶಾರದಾಪೀಠಕ್ಕೆ ಹೋಗಿ ನಡೆಸಿದ 'ಬೋಧಾಯನವೃತ್ತಿ' ಅಧ್ಯಯನದ ಪ್ರಸಂಗ ಅಪೂರ್ವವಾಗಿದೆ. ಕಾದಂಬರಿಕಾರರು ರಾಜಕೀಯ ಸಂಘರ್ಷಕ್ಕಿಂತ ಆಧ್ಯಾತ್ಮಿಕ ಔನ್ನತ್ಯದ ಹತ್ತಾರು ಮಗ್ಗುಲುಗಳನ್ನು ಕಾದಂಬರಿಯಲ್ಲಿ ಎತ್ತಿ ತೋರಿಸಿದ್ದಾರೆ. ತಿರುಮಲೆ ದೇವಸ್ಥಾನದ ಅರ್ಚಾಮೂರ್ತಿ ವಿಷ್ಣುವಿನದ್ದೊ ಶಿವನದ್ದೊ ಎಂಬ ಜಿಜ್ಞಾಸೆ ಎದ್ದಾಗ ಆ ಪ್ರಸಂಗವು ನಮ್ಮ ಕಣ್ಣಮುಂದೆ ನಡೆದಂತೆ ಲೇಖಕರು ಇಲ್ಲಿ ನಿರೂಪಿಸಿದ್ದಾರೆ. ತಿರುಮಲೆಯು ಶ್ರೀ ರಾಮಾನುಜರ ಕಾಲಕ್ಕೆ ಒಂದು ಆಧ್ಯಾತ್ಮಿಕ ಕೇಂದ್ರವಾಗಿಯೂ ಸಮಸ್ತ ಭಕ್ತವರ್ಗದವರ ಕೇಂದ್ರಭೂಮಿಕೆಯಾಗಿಯೂ ರೂಪುಗೊಳ್ಳುತ್ತದೆ.
ಈ ಕಾದಂಬರಿಯು ಶ್ರೀಮದ್ರಾಮಾನುಜರ ಕಥಾನಕವನ್ನು ನಿರೂಪಿಸುತ್ತಲೇ ಅಪೂರ್ವವೂ ರಸಸ್ಕಂದಿಯೂ ಆದ ಹತ್ತಾರು ಪ್ರಸಂಗಗಳ ಮೂಲಕ ಬೆಳೆಯುತ್ತದೆ. ಶ್ರೀ ರಾಮಾನುಜರ ದೈವಭಕ್ತಿ-ಪ್ರಪತ್ತಿಗಳೂ ಮಾನವೀಯ ಪ್ರಸಂಗಗಳೂ ಒಟ್ಟು ಕಾದಂಬರಿಗೆ ಪ್ರಭಾವಳಿಯನ್ನು ನಿರ್ಮಿಸಿವೆ. ಕಾದಂಬರಿಯು ಕಾಂಚಿ- ಶ್ರೀರಂಗಂ-ಮೇಲುಕೋಟೆ ಈ ಮೂರೂ ನೆಲೆಗಳಲ್ಲಿ ಪ್ರವಹಿಸುತ್ತದೆ. ಕಾಂಚಿಯು ಶ್ರೀರಾಮಾನುಜರ ಜ್ಞಾನವೈರಾಗ್ಯದ ಮೊದಲ ಭೂಮಿಕೆಯಾದರೆ; ಶ್ರೀರಂಗಂ ಅವರ ಕ್ರಿಯಾಜ್ಞಾನದ ದ್ವಿತೀಯ ಭೂಮಿಕೆ. ಇಲ್ಲಿ ಭಕ್ತಿ-ಪ್ರಪತ್ತಿಗಳು ಶಿಖರವಾಗಿ ಗೋಚರಿಸುತ್ತವೆ. ಮೇಲುಕೋಟೆಯು ಅವರ ವೈಷ್ಣವ ಭಕ್ತಿಭೂಮಿಕೆಯನ್ನು ವಿಸ್ತಾರವಾಗಿ ಪ್ರತಿಮಿಸುತ್ತದೆ. ಶ್ರೀ ರಾಮಾನುಜರು ಹಂತಹಂತವಾಗಿ ಸಾಗಿದ ಬಗೆಯನ್ನು ಕಾದಂಬರಿಯು ಚೀೇತೋಹಾರಿಯಾಗಿ ನಿರೂಪಿಸುತ್ತದೆ. ಬಾಬು ಕೃಷ್ಣಮೂರ್ತಿ ಅವರ ಅಸಾಧಾರಣವಾದ ಧಾರಣಾಸಾಮರ್ಥ್ಶ ಕಾದಂಬರಿಯ ಉದ್ದಕ್ಕೂ ಕಾಣಬರುತ್ತದೆ. ಕಾದಂಬರಿಯು ಒಂದು ಕಡೆ ಸಾಮಾಜಿಕ ಜೀವನದ ಆಂತರ್ಯವನ್ನು ಕುರಿತಿದ್ದರೆ; ಇನ್ನೊಂದೆಡೆ ಆಧ್ಯಾತ್ಮಿಕ ಪ್ರಭಾವಳಿಯ ತಳುಕು ಕಾಣಿಸುತ್ತದೆ. ಇಲ್ಲಿ ಆಧ್ಯಾತ್ಮಿಕ ಅನುಭೂತಿಯ ಭಕ್ತಿ-ಪ್ರಪತ್ತಿಗಳೇ ಗುಣಾಂಶದ ಭಾಗವಾಗುತ್ತದೆ. ಇದು. ಮಹಾಪೂರ್ಣ-ಕೂರೇಶ-ದಾಶರಥಿ ಇಂಥ ಪೂರಕ ಪಾತ್ರಗಳಿಂದ ಮುಂದುವರಿಯಲು ಸಾಧ್ಯವಾಗಿದೆಯೆಂದು ನನ್ನ ಗ್ರಹಿಕೆ.
ಇನ್ನು ಮಧ್ಯಕಥನಕ್ಕೆ ಬರೋಣ. ಕುಲೋತ್ತುಂಗ ಚೋಳನ ಪ್ರಧಾನ ಅಮಾತ್ಯ ಶೈವತತ್ತ್ವದ ಕುರುಡು ಅನುಯಾಯಿ. ಈತ ದುಷ್ಟ ಸುತ್ತಮುತ್ತಣ ದುಷ್ಟಶೈವರ ಕುರುಡು ಮಾತಿಗೆ ಕಟ್ಟುಬಿದ್ದು ಶ್ರೀ ರಾಮಾನುಜರಿಗೆ ಶೈವದೀಕ್ಷೆ ತೆಗೆದುಕೊಳ್ಳುವಂತೆ - ಬಲವಂತಪಡಿಸುತ್ತಾನೆ. ಆದರೆ, ಶ್ರೀ ರಾಮಾನುಜರ ಬದಲಾಗಿ ಕೂರೇಶ ತ್ರಿದಂಡ ಹಿಡಿದು ಕಂಚಿಗೆ ಬರುವ ಪ್ರಸಂಗವಂತೂ ಧೀರೋದಾತ್ತವಾಗಿ ಚಿತ್ರಿತವಾಗಿದೆ. ಅನಂತರ ಪ್ರಧಾನ ಅಮಾತ್ಯನ ಆದೇಶದ ಮೇರೆಗೆ ಕೂರೇಶ-ಮಹಾಪೂರ್ಣರ ಕಣ್ಣುಗಳನ್ನು ಕೀಳಿಸುವ ದುರ್ಧರಪ್ರಸಂಗ ಒದಗಿ ಬರುತ್ತದೆ. ರಾಜಕೀಯವು ದುಷ್ಟರ ಕೈಗೆ ದೊರಕಿದಾಗ ಉಂಟಾಗುವ ಅನಾಹುತಕ್ಕೆ ಇದು ಸಾಂಕೇತಿಕ ರೂಪಕವಾಗಿದೆ.
'ವಿಶಿಷ್ಟ' ಕಾದಂಬರಿಯು ಒಂದು ಕಡೆ ಸನಾತನ ಧರ್ಮದ ಮೌಲ್ಯಗಳನ್ನು ಪ್ರತಿನಿಧಿಸುತ್ತಿದ್ದರೂ ಪರಿವರ್ತನಾಶೀಲ ಸಮಾಜದ ಕಡೆ ಚಲಿಸುತ್ತಿರುವ ಸೂಕ್ಷ್ಮನೆಲೆಗಳನ್ನೂ ದಾಖಲಿಸುತ್ತದೆ. ಅಧ್ಯಾತ್ಮದ ಅಥವ ಆಧ್ಯಾತ್ಮಿಕ ಭಾವಗಳು ಶಾಶ್ವತ ಮೌಲ್ಯಗಳ ಸಂಪುಟೀಕರಣ ಎಂಬುದನ್ನು ನಾವು ಮರೆಯುವಂತಿಲ್ಲ. ಮತ ಮತ್ತು ಧರ್ಮ ಮೇಲ್ತೋರಿಕೆಗೆ ಭಿನ್ನವೆನಿಸಿದರೂ ಅವು ಪಾರಸ್ಪರಿಕ ಗುಣಗಳನ್ನು ಹೊಂದಿವೆ. ಸಗುಣಾರಾಧನೆಯು ಮತದ ಪ್ರತಿನಿಧೀಕರಣವಾದರೆ; ನಿರ್ಗುಣವು ಧರ್ಮದ ಪ್ರತಿನಿಧೀಕರಣ. ಇವೆರಡು ಒಂದಕ್ಕೊಂದು ಅನ್ಯೋನ್ಯಾಶ್ರಯ. ಈ ಸಂಗತಿಯನ್ನು ಸೂಕ್ಷ್ಮವಾಗಿಯೂ ತಾತ್ತ್ವಿಕವಾಗಿಯೂ ಕಾದಂಬರಿ ಧ್ವನಿಸುತ್ತದೆ. ಇಲ್ಲಿ ಅದ್ವೈತ ಮತ್ತು ವಿಶಿಷ್ಟಾದ್ವೈತದ ಪ್ರಶ್ನೆ ಬಂದಿದೆಯಷ್ಟೆ ಇವೆರಡು ತಾತ್ವಿಕ ಜಿಜ್ಞಾಸೆಯನ್ನು ಬೇಡುತ್ತವೆ. ಆದರೆ, ಅವುಗಳನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿಟ್ಟು ಕಾದಂಬರಿಕಾರರು ನೋಡುವ ಕಾರಣದಿಂದಾಗಿ, ಹಲವು ಬಗೆಯ ಹರಹುಗಳಿಗೆ ಕಾರಣವಾಗಿವೆ. ಶ್ರೀ ರಾಮಾನುಜರ ವ್ಯಕ್ತಿತ್ವವೂ ವ್ಯಕ್ತಿಮತ್ವವೂ ಸಾಂಸ್ಕೃತಿಕ ಹಿನ್ನೆಲೆಯಲ್ಲಿಯೂ ಧಾರ್ಮಿಕ ಔನ್ನತ್ಯದಲ್ಲಿಯೂ ಬೆಳಗಲು ಸಾಧ್ಯವಾಗಿದೆ. ಇದಕ್ಕೆ ಕಾಲದ ಸಂಘರ್ಷಗಳೂ ಸಮತೆಗಳೂ ಒಟ್ಟು ರೂಪಣವನ್ನು ಕಂಡರಿಸುತ್ತವೆ! ಇಡೀ ಕಾದಂಬರಿಯು ಶ್ರೀ ರಾಮಾನುಜರ ದಿವ್ಯ ಭವ್ಯ ವ್ಯಕ್ತಿತ್ವವನ್ನು ಅನಾವರಣ ಮಾಡುವುದಂತೂ ದಿಟ,
ನಾವೀಗ ಉತ್ತರಕಥನದತ್ತ ಬರೋಣ. ಕುಲೋತ್ತುಂಗ ಚೋಳ ಹಾಗೂ ಪ್ರಧಾನಾಮಾತ್ಯನ ಕಾರಣದಿಂದ ವೇಷಮರೆಸಿಕೊಂಡು ಕಾವೇರಿ ನದಿ ತೀರದಿಂದ ಹೊರಟು ಕಾಡು-ಮೇಡುಗಳನ್ನು ಸುತ್ತಿ ತೊಣ್ಣೂರಿಗೆ ಬಂದು ಸೇರುವುದರಿಂದ ರಾಮಾನುಜರ ಉತ್ತರಕಥನ ಪ್ರಾರಂಭವಾಗುತ್ತದೆ. ಶ್ರೀ ರಾಮಾನುಜರ ದಿವ್ಯಪ್ರಭಾವಕ್ಕೆ ಜನಪದರೆಲ್ಲ ತರೆಬಾಗುತ್ತಾರೆ! ವಿಷ್ಣುವರ್ಧನನ ಮಗಳು ಹರಿಯಲದೇವಿಯ ರೋಗವನ್ನು ಸಾತ್ವಿಕ ರೂಪದಿಂದ ರಾಮಾನುಜರು ಗುಣಪಡಿಸುತ್ತಾರೆ, ಇದು ಚಾರಿತ್ರಿಕ ಸತ್ಯ. ಶ್ರೀ ರಾಮಾನುಜರು ಹೊಯ್ಸಳ ರಾಜ್ಯಕ್ಕೆ ಕಾಲಿಡುವ ವೇಳೆಗೆ ಎಂಬತ್ತುವರ್ಷ ಮೀರಿರುತ್ತದೆ. ಅವರು ಜನರನ್ನು ಧರ್ಮದ ಕಡೆ ಸೆಳೆಯುತಾರೆ, ಕೆರೆಗಳನ್ನು ಕಟ್ಟಿಸುತ್ತಾರೆ, ಗುಡಿಗಳ ನಿರ್ಮಾಣ ಯಥೇಚ್ಛವಾಗಿ ಆಗುತ್ತವೆ. ಶ್ರೀವೈಷ್ಣವ ಧರ್ಮವು ಸಮಸ್ತ ಸಾಮಾಜಿಕರ ಧರ್ಮವಾಗಿ ರೂಪಾಂತರಗೊಳ್ಳುತ್ತದೆ. ಶ್ರೀಮದ್ರಾಮಾನುಜರು ತಮ್ಮ ಶಿಷ್ಯರ ಒಡಗೂಡಿ ಯವನರ ರಾಜ್ಯಕ್ಕೆ ತೆರಳಿ ಬೀಬಿ ನಾಚ್ಚಿಯಾರ್ ಬಳಿ ಇದ್ದ ರಾಮಪ್ರಿಯ ಉತ್ಸವಮೂರ್ತಿಯನ್ನು ತರುವುದೂ, ತುರುಷ್ಕರ ದಾಳಿಯಿಂದ... ಯಾವುದೋ ಕಾಲಕ್ಕೆ ಮುಚ್ಚಿಡಲಾಗಿದ್ದ ತಿರುನಾರಾಯಣ ಮೂಲವಿಗ್ರಹವನ್ನು ಸ್ಥಾಪಿಸುವುದೂ ಇಂಥ ಕಥನ ಪ್ರಸಂಗಗಳು ಕಾದಂಬರಿಯ ಎತ್ತರ-ಬಿತ್ತರವನ್ನು ನಿರೂಪಿಸುತ್ತವೆ. ಅದರಲ್ಲೂ ತಿರುನಾರಾಯಣ ಮೂಲವಿಗ್ರಹ ದೊರಕುವ ಪ್ರಸಂಗವಂತೂ ರಮ್ಯಾದೃಶವಾದುದು. ನೂರಾರು ಭಕ್ತರು ಕೊಡಗಳಲ್ಲಿ ಹುತ್ತದ ಮೇಲೆ ಹಾಲು ಸುರಿಯುವಾಗ ಹೊರಬರುವ ಹಾವುಗಳೂ ಕ್ರಮಕ್ರಮೇಣ ವಿಗ್ರಹ ಕಾಣಿಸಿಕೊಳ್ಳುವ ಬಗೆಯೂ ಮನೋಜ್ಞವಾಗಿ ಚಿತ್ರಿತವಾಗಿದೆ. ಬಾಬು ಕೃಷ್ಣಮೂರ್ತಿ ಅವರು ನೂರ ಹದಿನೈದು ಸಂವತ್ಸರ ತುಂಬಿದ ಭಗವನ್ ರಾಮಾನುಜರನ್ನು ಚಿತ್ರಿಸುವಾಗ ಭಾಷೆ ದೈವಿಕವಾಗಿ ಬಿಡುತ್ತದೆ. ರಾಮಾನುಜರು ತಮ್ಮ ಜೀವನವಿಡೀ ಭಕ್ತಿ, ಪ್ರಪತ್ತಿಗಳನ್ನು ಹರಡುವುದರಲ್ಲೂ ತನ್ಮೂಲಕ ಜನಜೀವನದಲ್ಲಿ ಧಾರ್ಮಿಕ ಸಂಬಂಧಗಳನ್ನು ಸಂಘಟಿಸುವತ್ತ ಸಾಗುತ್ತಾರೆ. ಇದಕ್ಕೆ ಪೂರಕವಾಗಿ ಗುಡಿಗಳೂ ದೇವತಾ ಪ್ರತಿಮೆಗಳೂ ರೂಪುಗೊಳ್ಳುತ್ತವೆ. ಕಲೆ, ಸಾಹಿತ್ಯ ಸಂಗೀತ ಸಂವರ್ಧನೆಗೊಳ್ಳುತ್ತವೆ. ಬಾಬು ಕೃಷ್ಣಮೂರ್ತಿ ಅವರಿಗೆ ಚರಿತ್ರೆಯ ಸೂಕ್ಷ್ಮ ನೆಲೆಗಳು ಗೊತ್ತಿವೆ. ಆದುದರಿಂದ ಜೈನ, ಶೈವ ಮತಗಳು ಶ್ರೀವೈಷ್ಣವ ಧರ್ಮದ ಗುಪ್ತವಾಗಿ ಬೆರೆತುಹೋದ ಸಂಗತಿಗಳು ಇಲ್ಲಿ ಸೂಕ್ಷ್ಮವಾಗಿ ಕಂಡರಣೆಗೊಂಡಿವೆ. ರಾಮಾನುಜರು ವಿಷ್ಣುವರ್ಧನನನ್ನು ಒಪ್ಪಿಸಿ, ತಮ್ಮ ಕೊನೆಯ ದಿನಗಳನ್ನು ಕಳೆಯಲು ಇಚ್ಛಿಸುತ್ತಾರೆ. ವಯೋವೃದ್ಧರೂ ತಪಸ್ವಿಗಳೂ ಆದ ರಾಮಾನುಜರು ಶ್ರೀರಂಗಕ್ಕೆ ಬಂದು, ನೂರಾಇಪತ್ತು ಸಂವತ್ಸರಗಳ ಕಾಲದ ತಮ್ಮ ಕೊನೆಯ ದಿನಗಳನ್ನು ಕಳೆದು, ವಿಷ್ಣುಪಾದವನ್ನು ಸೇರುತ್ತಾರೆ.
ಕಾದಂಬರಿಯು ಒಂದು ಶಬ್ಧಶಿಲ್ಪವಷ್ಟೆ. ಶ್ರೀ ರಾಮಾನುಜರ ಭವ್ಯಮೂರ್ತಿಯನ್ನು ಬಾಬು ಕೃಷ್ಣಮೂರ್ತಿಯವರು ಅಂಥ ಶಬ್ದಶಿಲ್ಪದಲ್ಲಿಯೇ ಕೆತ್ತಿ ನಿಲ್ಲಿಸಿದ್ದಾರೆ. ಇಲ್ಲಿ ರಸಪ್ರಸಂಗಗಳು ಇರುವಂತೆ ವಿರಸಪ್ರಸಂಗಗಳೂ ಇವೆ. ಸಾಮಾಜಿಕ ಅಸಮಾನತೆ ಇರುವಂತೆ, ಸಾಮಾಜಿಕ ಸಮಾನತೆಯತ್ತ ಸಾಗುತ್ತಿರುವ ಚಿತ್ರಗಳೂ ಇಲ್ಲಿ ನಿರೂಪಿತಗೊಂಡಿವೆ. ಹಬ್ಬಹರಿದಿನಗಳೂ ಉತ್ಸವ, ಸಂಭ್ರಮಗಳೂ ರಥೋತವದ ಭವ್ಯಚಿತ್ರಗಳೂ ಶ್ರೀವೈಷ್ಣವ ಸಂಪ್ರದಾಯದ ಹತ್ತಾರು ಆಚರಣೆಗಳೂ ಕಾದಂಬರಿಯ ಮಹತ್ತಿಗೆ ಪೋಷಕವಾಗಿಯೂ ಪೂರಕವಾಗಿಯೂ ಬೆಳೆಯುತ್ತಾ ಹೋಗುತ್ತವೆ. ಇವೆಲ್ಲ ವಿವರಗಳೂ ಕಾದಂಬರಿ ಮಹಾನಾಯಕ ಶ್ರೀ ರಾಮಾನುಜರ ಭವ್ಯಶಿಲ್ಪಕ್ಕೆ ಸಾವಯವ ರೂಪಗಳಾಗಿ ರೂಪಾಂತರಗೊಂಡಿರುವುದನ್ನು ಗಮನಿಸಬೇಕು. ದ್ರಾವಿಡ ದಿವ್ಯ- ಪ್ರಬಂಧಗಳೂ ಶ್ರೀಮದ್ಭಾಗವತ-ರಾಮಾಯಣ-ಭಗವದ್ಗೀತೆಗಳೂ ಹತ್ತಾರು ವಿಷ್ಣುಸ್ತೋತ್ರಗಳೂ ಕಾದಂಬರಿಯ ಬೇರೆಬೇರೆ ನೆಲೆಗಳಲ್ಲಿ ಹಾಸು-ಹೊಕ್ಕಾಗಿವೆ. ಇಂಥ ಮಹಾಕಾದಂಬರಿಗೆ ಬೇಕಾಗುವ ಸಾಮಾಜಿಕ ಚರಿತ್ರೆ, ಮತಾಚರಣೆ, ಸಂಪ್ರದಾಯ, ಶಾಸ್ತ್ರಜಿಜ್ಞಾಸೆ, ಭೌಗೋಳಿಕ ವಿವರ-ಮುಂತಾದ ಸಮಸ್ತ ಸಂಗತಿಗಳ ಅಧ್ಯಯನ ಇಲ್ಲದಿದ್ದರೆ, ಇಂಥದೊಂದು ಮಹಾಕೃತಿ ರಚನೆ ಸಾಧ್ಯ ಇಲ್ಲವೆಂಬುದನ್ನು ಕೃತಿಯೇ ನಮಗೆ ಮನವರಿಕೆ ಮಾಡಿಕೊಡುತ್ತದೆ. ಹೀಗಾಗಿ, ಬಾಬು ಕೃಷ್ಣಮೂರ್ತಿ ಅವರು ವಿಪುಲ ವ್ಯಾಸಂಗ, ಅಪಾರವಾದ ಮಾಹಿತಿ ಇವುಗಳನ್ನು ಕಾದಂಬರಿಯ ಬೃಹತ್ ಶಿಲ್ಪಕ್ಕೆ ಊನ ಬರದಂತೆ ಜೋಡಿಸಿದ್ದಾರೆ. ನಾವು ಕಾದಂಬರಿಯ ಭವ್ಯಶೈಲಿಗೆ ಮಣಿಯಲೇಬೇಕು. ಈ ಶೈಲಿಗೆ. ಅನುಗುಣವಾಗಿ ಸೂಕ್ತವಾದ ಪರಿಸರ, ಅದಕ್ಕೆ ಹೊಂದಿಕೊಂಡ ತಾತ್ತ್ವಿಕ ನಿರೂಪಣೆ ಇವೆಲ್ಲವೂ ಒಂದಕ್ಕೊಂದು ಹೆಣೆದುಕೊಂಡು ಸಹೃದಯ ಓದುಗರನ್ನು ಕಾದಂಬರಿಯು ತನ್ನತ್ತ ಸೆಳೆದುಕೊಳ್ಳುತ್ತದೆ. ಇದಕ್ಕ ಪೂರಕವಾಗಿ... 'ವಿಶಿಷ್ಟ' ಕಾದಂಬರಿಯು 'ಓಂ ನಮೋ ನಾರಾಯಣಾಯ' ಎಂಬ ತಿರುಮಂತ್ರದ.. ಮೂಲಕ ರಾಷ್ಟ್ರಕುಂಡಲಿಯನ್ನು ಎಚ್ಚರಿಸುತ್ತದೆ. ಬಾಬು ಕೃಷ್ಣಮೂರ್ತಿಯವರು 'ವಿಶಿಷ್ಟ' ಎಂದು ಈ ಕಾದಂಬರಿಗೆ ಹೆಸರನ್ನು ಇಟ್ಟಿದ್ದಾರಷ್ಟೆ ಇದು ವಿಶೇಷಣವೂ ಹೌದು; ತಾತ್ತ್ವಿಕ ಸಂಕೇತವೂ ಹೌದು. ಶ್ರೀಮದ್ರಾಮಾನುಜರ 'ವಿಶಿಷ್ಟ' ವ್ಯಕ್ತಿತ್ವವನ್ನು ಪಡಿಮೂಡಿಸುತ್ತಲೇ ಅವರು ನಂಬಿದ ಶಾಸ್ತ್ರವ್ಯಕ್ತಿಮತ್ವವನ್ನು ಪ್ರಕಟಪಡಿಸುತ್ತದೆ. ಇದೆಲ್ಲದರೊಂದಿಗೆ ಶ್ರೀಮದ್ರಾಮಾನುಜರ ಭವ್ಯವ್ಯಕ್ತಿಮತ್ವವನ್ನು 'ಶಬ್ದಶಿಲ್ಪ'ದಲ್ಲಿ ಸ್ಥಾಪಿಸುತ್ತದೆ. ಇಂಥ ಮಹಾಕಾದಂಬರಿಯನ್ನು ಕನ್ನಡಿಗರಿಗೆ ನೀಡಿದ ಹಿರಿಯ ಕಾದಂಬರಿಕಾರರಾದ ಡಾ. ಬಾಬು ಕೃಷ್ಣಮೂರ್ತಿ ಅವರ ಅನನ್ಯ ಕಾರಯಿತ್ರೀ ಪ್ರತಿಭೆಗೆ ಸಹೃದಯ ಓದುಗನಾಗಿ ನಾನು 'ನಮೋನಮಃ! ಎನ್ನಲೇಬೇಕು. (- ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ)
ವಿಶೇಷ ಕೃತಜ್ಞತೆಗಳು: ಡಾ.ಬಾಬು ಕೃಷ್ಣಮೂರ್ತಿ,
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್
ಕಾಮೆಂಟ್ಗಳು