ಎ. ವಿ. ಆನಂದ್
ಎ. ವಿ. ಆನಂದ್
ವಿದ್ವಾನ್ ಎ.ವಿ. ಆನಂದ್ ಅವರು ಕರ್ನಾಟಕದ ಅತ್ಯಂತ ಹಿರಿಯ ಮತ್ತು ಅತ್ಯಂತ ಜನಪ್ರಿಯ ಮೃದಂಗ ಕಲಾವಿದರಲ್ಲಿ ಒಬ್ಬರಾಗಿದ್ದಾರೆ.
ಆನಂದ್ ಅವರು 1936ರ ಏಪ್ರಿಲ್ 16ರಂದು ಎ. ವೆಂಕೋಬಾಚಾರ್ ಮತ್ತು ನಾಗಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. ಆನಂದ್ ನಾಲ್ಕು ವರ್ಷದವರಾಗಿದ್ದಾಗಲೇ ತಾಳವಾದ್ಯಕ್ಕೆ ಅದ್ಭುತವಾದ ಅಂತಃಪ್ರಜ್ಞೆ ಪ್ರದರ್ಶಿಸಿದರು. ಇದನ್ನು ಗುರುತಿಸಿದ ಅವರ ಪೋಷಕರು ಇವರ ಆರನೇ ವಯಸ್ಸಿನಲ್ಲೇ ಮೃದಂಗದಲ್ಲಿ ಮಹಾನ್ ಘಟಂ ವಿದ್ವಾನ್ ಕೆ.ಎಸ್. ಮಂಜುನಾಥನ್ ಅವರಲ್ಲಿ ಮೃದಂಗ ಕಲಿಕೆಗೆ ಏರ್ಪಾಡು ಮಾಡಿದರು. ಎರಡು ವರ್ಷಗಳ ಕಠಿಣ ತರಬೇತಿ ಮತ್ತು ತೀವ್ರ ಸಾಧನೆಗಳು ಬಾಲಕ ಆನಂದ್ ಅವರನ್ನು
ಭರವಸೆಯ ಮೃದಂಗ ಕಲಾವಿದನನ್ನಾಗಿ ರೂಪಿಸಿತು. ಆನಂದ್ ಒಂಬತ್ತನೇ ವಯಸ್ಸಿನಲ್ಲಿ ತಮ್ಮ ಮೊದಲ ಸಾರ್ವಜನಿಕ ಪ್ರದರ್ಶನವನ್ನು ನೀಡಿದರು.
ಆನಂದ್ 11 ವರ್ಷದವರಾಗಿದ್ದಾಗ ಇವರ ಪ್ರತಿಭೆಯನ್ನು ಗುರುತಿಸಿ ತಮ್ಮ ಅನೇಕ ಕಚೇರಿಗಳಿಗೆ ಅವಕಾಶ ಕಲ್ಪಿಸಿಕೊಟ್ಟವರು ಪಿಟೀಲು ಚೌಡಯ್ಯ ಅವರು. ಇದು ಆನಂದ್ ಅವರ ಜ್ಞಾನ ಮತ್ತು ಅನುಭವವನ್ನು ಶ್ರೀಮಂತಗೊಳಿಸಿತು. ಹೀಗೆ ಅವರು ಯುವ ವಯಸ್ಸಿಗೆ ಕಾಲಿಡುವ ಮುಂಚೆಯೇ ಪ್ರಖ್ಯಾತ ಕಲಾವಿದರಾದರು.
ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ, ಆನಂದ್ ಮೈಸೂರು ವಿಶ್ವವಿದ್ಯಾನಿಲಯದಿಂದ ವಿಜ್ಞಾನದಲ್ಲಿ ಪದವಿ ಪಡೆದು ಬೆಂಗಳೂರಿನ ಜನಪ್ರಿಯ ಉದ್ಯಮವೊಂದರಲ್ಲಿ ಸೇವೆ ಸಲ್ಲಿಸಿದರು.
ಪ್ರಬುದ್ಧ ಕಲಾವಿದರಾಗಿ ಜನಪ್ರಿಯತೆ ಮತ್ತು ಮೆಚ್ಚುಗೆಯನ್ನು ಗಳಿಸಿದ ಆನಂದ್ ಅವರು ಅನೇಕ ಹಿರಿಯ ಮತ್ತು ಜನಪ್ರಿಯ ಕಲಾವಿದರ ಜೊತೆಯಲ್ಲಿ ಮುಂದುವರೆದರು. ಕರ್ನಾಟಕ ಸಂಗೀತದ ದಿಗ್ಗಜರಾದ ಚೆಂಬೈ ವೈದ್ಯನಾಥ ಭಾಗವತರ್, ಟಿ ಆರ್ ಮಹಾಲಿಂಗಂ, ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಆರ್.ಕೆ. ಶ್ರೀಕಂಠನ್, ಎಂ.ಎಸ್. ಗೋಪಾಲಕೃಷ್ಣನ್, ಲಾಲ್ಗುಡಿ ಜಿ. ಜಯರಾಮನ್, ಎಂ.ಎಲ್. ವಸಂತಕುಮಾರಿ, ಡಿ ಕೆ ಪಟ್ಟಮ್ಮಾಳ್, ರಾಧಾ - ಜಯಲಕ್ಷ್ಮಿ, ಡಿ.ಕೆ. ಜಯರಾಮನ್, ಎಂ. ಡಿ. ರಾಮನಾಥನ್, ಎಸ್. ರಾಮನಾಥನ್, ಯಮಾನಿ ಶಂಕರ ಶಾಸ್ತ್ರಿ, ಕೆ. ವಿ. ನಾರಾಯಣಸ್ವಾಮಿ, ಚಿಟ್ಟಿಬಾಬು, ಎನ್. ರಮಣಿ, ಎಂ. ಬಾಲಮುರಳಿಕೃಷ್ಣ, ಕೆ. ಜೆ.ಯೇಸುದಾಸ್, ಎಂ. ಚಂದ್ರಶೇಖರನ್ ಮತ್ತು ಮುಂದುವರೆದ ಇಂದಿನವರೆಗಿನ ಪೀಳಿಗೆಯ ಅನೇಕ ಪ್ರತಿಭಾವಂತ ಹಿರಿಯ ಮತ್ತು ಕಿರಿಯ ಕಲಾವಿದರಿಗೆ ಇವರು ಮೃದಂಗ ವಾದನದ ಜೊತೆಗಾರಿಕೆ ನೀಡಿದರು.
ಆನಂದ್ ಅವರು ಆಕಾಶವಾಣಿಯ ‘ಎ ಟಾಪ್’ ದರ್ಜೆಯ ಕಲಾವಿದರಾಗಿದ್ದಾರೆ. ಅವರು ಆಕಾಶವಾಣಿ ಸಂಗೀತ ಸಮ್ಮೇಳನದ ಸಂಗೀತ ಕಚೇರಿಗಳು ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸಿದ್ದಾರೆ. ದೂರದರ್ಶನದಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾಗುವ ಸಂಗೀತ ಕಚೇರಿಗಳಿಗೆ ಪಕ್ಕವಾದ್ಯವನ್ನು ನೀಡಿದ್ದಾರೆ. ದೇಶದಾದ್ಯಂತ ಜನಪ್ರಿಯ ಸಭೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ತಮ್ಮ ಏಕವ್ಯಕ್ತಿ ಪ್ರದರ್ಶನದ ಹಲವಾರು ಕ್ಯಾಸೆಟ್‌ಗಳು ಮತ್ತು ಸಿಡಿಗಳನ್ನು ಹೊರತಂದಿದ್ದಾರೆ.
ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ.
ಆನಂದ್ ಅವರು, ಕರ್ನಾಟಕದ ಕೆಲವು ಪ್ರಮುಖ ತಾಳವಾದ್ಯ ವಿದ್ವಾಂಸರೊಂದಿಗೆ ಸೇರಿ, ಕರ್ನಾಟಕ ಶಿಕ್ಷಣ ಇಲಾಖೆಯು ನಡೆಸುವ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಿಗೆ ಮೃದಂಗದ ಪಠ್ಯ ರೂಪಿಸಿದ್ದಾರೆ. ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರಾಗಿ ಸಹ ಸೇವೆ ನೀಡಿದ್ದಾರೆ
ಆನಂದ್ ಅವರು ವಿದೇಶಗಳಲ್ಲಿಯೂ ವ್ಯಾಪಕವಾಗಿ ಪ್ರವಾಸ ಮಾಡಿದ್ದಾರೆ, ಯುಎಸ್, ಕೆನಡಾ, ಯುಕೆ, ಮಲೇಷ್ಯಾ, ಸಿಂಗಾಪುರಕ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಆಹ್ವಾನಿತರಾಗಿ ಸಂಗೀತ ಕಚೇರಿಗಳು, ಉಪನ್ಯಾಸಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. 1984 ಅಕ್ಟೋಬರ್-ನವೆಂಬರ್‍ನಲ್ಲಿ ಪದ್ಮಭೂಷಣ ಸಂಗೀತ ಕಲಾನಿಧಿ ಡಾ. ವಿ ದೊರೆಸ್ವಾಮಿ ಅಯ್ಯಂಗಾರ್ ಮತ್ತು ಪ್ರೊ. ಟಿ ಆರ್ ಸುಬ್ರಮಣ್ಯಂ ಅವರೊಂದಿಗೆ ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಸ್ಕಾಟ್‌ಲ್ಯಾಂಡ್ ಮತ್ತು ಇನ್ನಿತರ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಕಾಲೇಜುಗಳಲ್ಲಿ ಸಂಗೀತ ಕಚೇರಿಗಳು ಮತ್ತು ಉಪನ್ಯಾಸ ಪ್ರದರ್ಶನಗಳನ್ನು ನೀಡುವುದಕ್ಕಾಗಿ ಯುಕೆ ಮತ್ತು ಐರ್ಲೆಂಡ್‌ಗೆ ಪ್ರವಾಸ ಮಾಡಿದ್ದರು. ಅವರು 800 ಕ್ಕೂ ಹೆಚ್ಚು ವಿಶಿಷ್ಟವಾದ ತೀರ್ಮಾನಂಗಳು ಮತ್ತು ಮುಕ್ತಾಯಮ್ಗಳನ್ನು ರಚಿಸಿದ್ದಾರೆ.
ಇವುಗಳನ್ನು ಕೊರ್ವೈಸ್ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ಅನೇಕ ಪ್ರಸಿದ್ಧ ಸಂಗೀತಗಾರರನ್ನು ತರಬೇತುಗೊಳಿಸಿದ್ದಾರೆ. ಅವರು ತಾಳವಾದ್ಯ ಕಲೆಯ ವಿವಿಧ ಅಂಶಗಳ ಕುರಿತು ಅನೇಕ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಆನಂದ್ ಅವರು ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಕೆ. ಪುಟ್ಟು ರಾವ್ ಸ್ಮಾರಕ ಪಾಲ್ಘಾಟ್ ಮಣಿ ಅಯ್ಯರ್ ಪ್ರಶಸ್ತಿ, ಬೆಂಗಳೂರಿನ ತಾಳವಾದ್ಯ ಕಲಾ ಕೇಂದ್ರದಿಂದ ‘ಮೃದಂಗ ಕಲಾ ಶಿರೋಮಣಿ’ ಬಿರುದು, ‘ಸಂಗೀತ ಕಲಾರತ್ನ’, ಪಳನಿ ಸುಬ್ರಹ್ಮಣ್ಯಂ ಪಿಳ್ಳೈ ಪ್ರಶಸ್ತಿ, ಬೆಂಗಳೂರಿನ ತಾಳವಾದ್ಯ ಕಲಾ ಕೇಂದ್ರದ ‘ಲಯ ಕಲಾ ನಿಪುಣ’ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’, ವಿದ್ವಾನ್ ಆರ್. ಕೆ ಶ್ರೀಕಂಠನ್ ಟ್ರಸ್ಟ್‌ನಿಂದ ‘ಶ್ರೀಕಂಠ ಶಂಕರ’ ಬಿರುದು, ಶ್ರೀರಾಮಸೇವಾ ಮಂಡಳಿಯಿಂದ ‘ಮೃದಂಗ ವಾದನ ರತ್ನ’,ಅನನ್ಯ ಪುರಸ್ಕಾರ, ಪರಿಮಳ ಗೆಳೆಯರ ಬಳಗದ ಪರಿಮಳ ಪ್ರಶಸ್ತಿ, ಇಸ್ಕಾನ್ ಶ್ರೀ ರಾಧಾಕೃಷ್ಣ ಮಂದಿರದ ಆಸ್ಥಾನ ವಿದ್ವಾನ್, ಕಂಚಿ ಕಾಮಕೋಟಿ ಪೀಠದ ಶ್ರೀ ಶ್ರೀ ಜಯೇಂದ್ರ ಸರಸ್ವತಿ ಸ್ವಾಮಿಗಳವರು ನೀಡಿದ ಆಸ್ಥಾನ ವಿದ್ವಾನ್, ತಿರುಪತಿಯಲ್ಲಿ ತಿರುಮಲ-ತಿರುಪತಿ ದೇವಸ್ತಾನದ ಗೌರವ, ಚಿಂತಲಪಲ್ಲಿ ಪರಂಪರಾ ಟ್ರಸ್ಟ್ ವತಿಯ ಗೌರವ, ಕರ್ನಾಟಕ ಸರ್ಕಾರದ ಪ್ರತಿಷ್ಠಿತ,
ರಾಜ್ಯ ಸಂಗೀತ ವಿದ್ವಾನ್, ಮೈಸೂರು ದಸರಾ ಉತ್ಸವ ಗೌರವ, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಂದ ಗೌರವವೂ ಸೇರಿ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಸಂಗೀತ ಲೋಕದ ಹಿರಿಯ ಸಾಧಕರಾದ ವಿದ್ವಾನ್ ವಿ. ಆನಂದ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
On the birthday of Great Mrudanga Vidwan A. V. Anand Sir 🌷🙏🌷
ಕಾಮೆಂಟ್‌ಗಳು