ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಲರಾಮನ ಸಂಸ್ಮರಣೆ


 ಬಲರಾಮನ ಸಂಸ್ಮರಣೆ 🌷🙏🌷


ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ್ಧ ಆನೆ 'ಬಲರಾಮ'.  ಇಂದು ಬಲರಾಮನ ಸಂಸ್ಮರಣೆ ದಿನ.  ಬಲರಾಮ ಎಲ್ಲರ ಕಣ್ಮಣಿಯಾಗಿತ್ತು. 

ಆನೆ ಮೈಸೂರು ದಸರಾ ಅಂಬಾರಿ ಹೊತ್ತಾಗ ಕಣ್ಮಣಿ ಎನ್ನುವ ನಾವು ಆ ಆನೆ ನಮ್ಮ ಮನೆಗೋ ತೋಟಕ್ಕೆ ಬಂದರೆ ಏನು ಮಾಡುತ್ತೇವೆ? ಬಲರಾಮ ಆನೆ ಅದಕ್ಕೆ ಹೊರತಾಗಲಿಲ್ಲ🥲.  ಬಲರಾಮ ಆನೆಗೆ ವ್ಯಕ್ತಿಯೊಬ್ಬ ಗುಂಡು ಹೊಡೆದ ಪ್ರಸಂಗ 2022ರ ಡಿಸೆಂಬರ್ 22ರಂದು ನಡೆದಿತ್ತು ಎನ್ನಲಾಗಿದೆ. ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪದ ಜಮೀನೊಂದಕ್ಕೆ ಬಲರಾಮ ಹೋಗಿದ್ದಾಗ  ಜಮೀನಿನ ಮಾಲೀಕ ಬಲರಾಮನಿಗೆ ಗುಂಡು ಹಾರಿಸಿದ್ದನಂತೆ. ಈ ವೇಳೆ ಗುಂಡು ಆನೆಯ ತೊಡೆ, ಕಾಲು ಸೇರಿದಂತೆ ದೇಹದ ಅರ್ಧ ಭಾಗಕ್ಕೆ ಹೊಕ್ಕಿ ಬಲರಾಮನಿಗೆ ತೀವ್ರ ಘಾಸಿಗೊಳಿಸಿತ್ತು. ವಿಷಯ ತಿಳಿಯುತ್ತಿದ್ದಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶು ವೈದ್ಯಾಧಿಕಾರಿ ಡಾ. ರಮೇಶ್ ಅವರು ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಿದ್ದರು. ಆದಾದ ಬಳಿಕ ಬಲರಾಮ ಆನೆ ಚೇತರಿಸಿಕೊಂಡಿತ್ತು ಎನ್ನಲಾಗಿದೆ. 

ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಬಲರಾಮನಿಗೆ ಚಿಕಿತ್ಸೆ ನೀಡುತ್ತಾ ಬಂದಿತ್ತು. ಬಲರಾಮನ ಬಾಯಿಯಲ್ಲಿ ಹುಣ್ಣಾಗಿದ್ದರಿಂದ ಆಹಾರ ಸೇವಿಸಲು ನೀರು‌ ಕುಡಿಯಲು ಆಗದೇ ಅಸ್ವಸ್ಥಗೊಂಡಿತ್ತು. ವೈದ್ಯರು ನೀಡುತ್ತಿದ್ಧ ಚಿಕಿತ್ಸೆಗೆ ಸ್ಪಂದಿಸದೇ ಬಲರಾಮ 2023ರ ಮೇ 7ರಂದು ಅನಾರೋಗ್ಯದಿಂದ ಮೃತಪಟ್ಟಿತ್ತು. ಅದಕ್ಕೆ 67 ವರ್ಷ ವಯಸ್ಸಾಗಿತ್ತು.  ಅತ್ಯಂತ ಸೌಮ್ಯ ಸ್ವಭಾವದ ಆನೆ ಬಲರಾಮ ತನ್ನ ಕೊನೆಯ ದಿನಗಳಲ್ಲಿ ತೀವ್ರ ಅಸ್ವಸ್ಥಗೊಂಡಿತ್ತು. 

ಸಾವಿಗೆ  ಏನೋ ಒಂದು ಕಾರಣ ಎಂಬುದು ನಿಜವಾದರೂ ಮನುಷ್ಯ , ಪ್ರಾಣಿ, ಉತ್ಸವಗಳ ಹೆಸರಲ್ಲಿ ಅವುಗಳ ಉಪಯೋಗ, ಅಷ್ಟು ದುಡಿದರೂ ಅವುಗಳಿಗೆ ನೆಲೆ ಇಲ್ಲದಿರುವಿಕೆ, ಕಾಡಿನ ಪಕ್ಕದಲ್ಲಿ  ಜಮೀನು ಇರಬಹುದೆ?, ಹಾಗೆ ಇರಬಹುದು ಎಂದಾದಲ್ಲಿ ಅಲ್ಲಿಯವರು ಬೆಳೆದ ಫಸಲು ಬಳಿ ಪ್ರಾಣಿಗಳು ಬಂದರೆ ಅವರು ಸುಮ್ಮನಿರಬೇಕೇ? ಇವೆಲ್ಲ ಹಲವು ಪ್ರಶ್ನೆಗಳು ಮೂಡಿ ಓಡಿಹೋಗುತ್ತವೆ.  ಹಾಗೆ ಪ್ರಶ್ನೆ ಮೂಡಿಸಿಕೊಳ್ಳುವುದೂ ಕೆಲವರಿಗೆ ಇಷ್ಟವಾಗದಿರಬಹುದು!

ಓ ಗಜರಾಜನೆ  ನಮ್ಮ ಕ್ಷಮಿಸಿ ಬಿಡು ಎಂದು ಕೇಳುವುದು ಕೂಡ ಯಾಂತ್ರಿಕವೇನೊ.  ನಮ್ಮ ದುಃಖವೂ ಪ್ರಾಮಾಣಿಕ ಅನಿಸುವುದಿಲ್ಲ.🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ