ವಿಶ್ವನಾಥರಾವ್
ಸಿ. ವಿಶ್ವನಾಥರಾವ್
ಸಿ. ವಿಶ್ವನಾಥರಾವ್ ಕಳೆದ ಶತಮಾನ ಕಂಡ ಮಹಾನ್ ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆಯ ಕಲಾವಿದರಲ್ಲೊಬ್ಬರು.
ಸಿ. ವಿಶ್ವನಾಥರಾವ್ 1930ರ ಮೇ 7ರಂದು ಜನಿಸಿದರು. ತಂದೆ ಶ್ರೀಧರ ರಾಮರಾಯರು, ತಾಯಿ ಶಾರದಮ್ಮ. ಮಹಾನ್ ಗಾಯಕ ಮತ್ತು ಸಂಗೀತ ಸಂಯೋಜಕರಾದ ಸಿ. ಅಶ್ವಥ್ ಇವರ ಕಿರಿಯ ಸಹೋದರ. ಇವರ ಮತ್ತೊಬ್ಬ ಸಹೋದರ ಸಿ. ನಾಗರಾಜ ರಾವ್. ಮೂವರೂ ನಾಟಕ, ಗಾಯನ ಎರಡರಲ್ಲೂ ನುರಿತಿದ್ದರು.
ವಿಶ್ವನಾಥರಾವ್ ಇನ್ನೂ 6 ವರ್ಷದವರಿದ್ದಾಗಲೇ ಗೆಳೆಯರ ಮುಂದೆ ಹರಿಕಥೆ ಮಾಡುವುದು, ಮನೆ ಮಂದಿಯ ಮುಂದೆ ಅಭಿನಯಿಸುವುದು ಮುಂತಾದ ಪ್ರತಿಭಾ ಪ್ರದರ್ಶನ ಮಾಡುತ್ತಿದ್ದರು. ಹನ್ನೆರಡನೇ ವಯಸ್ಸಿನಲ್ಲಿ (1942) 'ಮನ್ಮಥ ವಿಜಯ' ನಾಟಕದಲ್ಲಿ ಪಾರ್ವತಿ ಪಾತ್ರದಲ್ಲಿ ಅಭಿನಯಿಸಿದರು. 1944ರಲ್ಲಿ ಕೈಲಾಸಂ ಅವರ 'ಬಂಡ್ವಾಳಿಲ್ಲದ ಬಡಾಯಿ' ನಾಟಕದಲ್ಲಿ ಇವರದ್ದು 'ಮುದ್ದು ಮಾಣಿ' ಪಾತ್ರ. ಅತ್ಯಂತ ಮುದ್ದಾಗಿದ್ದ ಇವರು ಅಭಿನಯಿಸಿದ ಸ್ತ್ರೀ ಪಾತ್ರಗಳು ಅನೇಕ. 'ಕಲಹ ಕುತೂಹಲ'ದ ಲಕ್ಷಮ್ಮನ ಪಾತ್ರ ನಿರ್ವಹಣೆ ಬಹಳ ಜನಪ್ರಿಯವಾಗಿತ್ತು. ಈ ನಾಟಕವನ್ನು ವೀಕ್ಷಿಸುತ್ತಿದ್ದ 'ಪ್ರಭಾತ್'ನ ಕರಿಗಿರಿ ಆಚಾರ್ ಈ ಹುಡುಗಿ ತಮ್ಮ 'ಸೀತಾ ದೇವಿ' ಪಾತ್ರಕ್ಕೆ ಸೂಕ್ತ ಎಂದು ನಿರ್ಧರಿಸಿಯೇ ಬಿಟ್ಟು, ನಾಟಕ ಮುಗಿದ ಮೇಲೆ ನೇಪಥ್ಯಕ್ಕೆ ಬಂದು ನೋಡಿದಾಗಲೇ ಆ ಪಾತ್ರ ನಿರ್ವಹಿಸಿದ್ದು ಈ ವಿಶ್ವನಾಥ ಎಂದು!
1947ರಲ್ಲಿ ಪ್ರಸಿದ್ಧ 'ರವಿ ಕಲಾವಿದರು' ಹವ್ಯಾಸಿ ರಂಗತಂಡ ಆರಂಭಗೊಂಡಾಗ ವಿಶ್ವನಾಥರಾವ್ ಅದರ ಸಂಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದರು. ಅಂದಿನ ದಿನಗಳಲ್ಲಿ ಇದ್ದದ್ದು ವೃತ್ತಿ ನಾಟಕ ಸಂಸ್ಥೆಗಳು ಮಾತ್ರ ಎಂಬ ನಿಟ್ಟಿನಲ್ಲಿ 'ರವಿ ಕಲಾವಿದರು' ಬಳಗದ ಉದಯ ಮತ್ತು ಮುಂದೆ ಅದರ ಕೊಡುಗೆಗಳು ಮಹತ್ವದ್ದು. ಅಂದಿನ ದಿನಗಳಲ್ಲೇ ಶ್ರೀರಂಗರ ನಾಟಕಗಳನ್ನು ಪ್ರಯೋಗಕ್ಕೆ ತಂದ ಕೀರ್ತಿ ಈ ಬಳಗದ್ದು.
1954ರಲ್ಲಿ ವಿಶ್ವನಾಥರಾವ್ ಬಿಇಎಲ್ ಸಂಸ್ಥೆಗೆ ಉದ್ಯೋಗಕ್ಕೆ ಸೇರಿದರು. ಅಲ್ಲಿ ಮೂಡಿದ ಬಿಇಎಲ್ ಫೈನ್ ಆರ್ಟ್ಸ್ ಕ್ಲಬ್ ಸ್ಥಾಪಕ ಸದಸ್ಯರಲ್ಲೊಬ್ಬರಾದರು. ಅಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೆ ನಿರ್ದೇಶನವನ್ನೂ ಮಾಡಿದರು.
ಬೆನಕ ತಂಡದ 'ಸತ್ತವರ ನೆರಳು' ನಾಟಕದ ದಿವಾನ್ ಕೃಷ್ಣಾಚಾರ್ಯ, 'ಗುಲಾಮನ ಸ್ವಾತಂತ್ರ್ಯ ಯಾತ್ರೆ'ಯಲ್ಲಿ ಖಾಜಿ, ಸ್ಪಂದನದ 'ಕರಿಮಾಯಿ'ಯ ಗೌಡ, ರಂಗಸಂಪದದ 'ಸಂದರ್ಭ'ದ ಮಾಯಣ್ಣ, 'ಫಾದರ್' ನಾಟಕದ ಡಾಕ್ಟರ್ ಮುಂತಾದ ಅನೇಕ ವಿಭಿನ್ನ ಪಾತ್ರನಿರ್ವಹಣೆಗಳಿಂದ ಹೆಸರಾದರು. ಪು. ಲ. ದೇಶಪಾಂಡೆ ಅವರು ಹೇಳುವಂತೆ ವಿಶ್ವನಾಥರಾವ್ 'ತನುವು ನಿನ್ನದೇ ಮನವು ನಿನ್ನದೇ' ನಾಟಕದ ಆಚಾರ್ಯ ಪಾತ್ರಕ್ಕೆ ಜೀವ ತುಂಬಿದವರು. ಆ ನಾಟಕಕ್ಕೆ ನಿರ್ದೇಶನವನ್ನೂ ಮಾಡಿ ರಾಜ್ಯ ಮಟ್ಟದ ಶ್ರೇಷ್ಠ ನಟ, ನಿರ್ದೇಶಕ ಮತ್ತು ಶ್ರೇಷ್ಠ ನಾಟಕ ಪ್ರಶಸ್ತಿ ಗಳಿಸಿದರು. 'ಭುಟ್ಟೋ' ನಾಟಕದ ಜೆನರಲ್ ಜಿಯಾ ಪಾತ್ರ ಚಾಲೆಂಜಿಂಗ್ ಆಗಿತ್ತು ಎನ್ನುತ್ತಿದ್ದರು. 'ಸ್ಪಂದನ', 'ರಂಗ ಸಂಪದ', 'ಪ್ರಭಾತ್ ಕಲಾವಿದರು' ತಂಡದ ಅನೇಕ ನಾಟಕಗಳಲ್ಲಿ ಪಾತ್ರವಹಿಸಿದ್ದರು. 1957ರಲ್ಲಿ ಬೆಂಗಳೂರಿನಲ್ಲಿ ಆಕಾಶವಾಣಿ ಆರಂಭವಾದಾಗಿನಿಂದ 1974ರ ವರೆಗೆ ಅಲ್ಲಿನ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ಕೆಲವು ನಾಟಕಗಳನ್ನು ತಾವೇ ರಚಿಸಿದ್ದರು. 'ಅಯ್ಯೋ ಪಾಪ', 'ಶ್ರೀಕಾಂತನ ಏಕಾಂತ', 'ಸಂದರ್ಶನ' ಮುಂತಾದವು ಅವರು ರಚಿಸಿದ ನಾಟಕಗಳಲ್ಲಿ ಸೇರಿವೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ಥಾನಿ ಸಂಗೀತಗಳೆರಡರಲ್ಲೂ ಪರಿಣತಿ ಹೊಂದಿದ್ದ ವಿಶ್ವನಾಥರಾವ್ ಅವರು ಬೆಂಗಳೂರು, ಚಿಕ್ಕಮಗಳೂರು ಮುಂತಾದೆಡೆ ರಾಮೋತ್ಸವ ಸಂಗೀತ ಕಚೇರಿಗಳನ್ನೂ ನಡೆಸಿಕೊಟ್ಟಿದ್ದರು. 1962-65 ಅವಧಿಯಲ್ಲಿ ಆಕಾಶವಾಣಿಯಲ್ಲಿ ಸುಗಮ ಸಂಗೀತದ ಗಾಯನವನ್ನೂ ಮಾಡಿದ್ದರು.
ವಿಶ್ವನಾಥರಾವ್ ಅವರನ್ನು ಚಿತ್ರರಂಗಕ್ಕೆ ಕರೆದು ತಂದವರು ಮಹಾನ್ ನಿರ್ದೇಶಕ ಎನ್. ಲಕ್ಷ್ಮೀನಾರಾಯಣ್ ಅವರು. ಅಬಚೂರಿನ ಪೋಸ್ಟಾಫೀಸು ಚಿತ್ರದಲ್ಲಿನ ಕಿರುಪಾತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ಪುಟ್ಟಣ್ಣ ಕಣಗಾಲರ 'ಧರ್ಮಸೆರೆ', ಗಿರೀಶ್ ಕಾಸರವಳ್ಳಿ ಅವರ 'ಮೂರು ದಾರಿಗಳು', ಪ್ರೇಮಾ ಕಾರಂತರ 'ಫಣಿಯಮ್ಮ', ಶ್ರೀನಿವಾಸ್ ಅವರ 'ಏನೇ ಬರಲಿ ಪ್ರೀತಿ ಇರಲಿ', 'ಅಭಿಮಾನ', ನಾಗಾಭರಣ ಅವರ 'ರಾವಣ ರಾಜ್ಯ' ಮುಂತಾದ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದರು. ರಾಷ್ಟ್ರಪ್ರಶಸ್ತಿ ಪಡೆದ 'ತಬರನ ಕೆಥೆ'ಯ ತಬರನ ಪಾತ್ರಧಾರಿ ಚಾರುಹಾಸನ್ ಅವರ ಧ್ವನಿ ವಿಶ್ವನಾಥರಾವ್ ಅವರದ್ದು.
ವಿಶ್ವನಾಥರಾವ್ ದೂರದರ್ಶನ ನಾಟಕ ವಿಭಾಗಕ್ಕಾಗಿ ಆಯ್ಕೆ ಮಾಡಿದ ಪ್ರತಿಭೆಗಳಲ್ಲಿ ಒಬ್ಬರಾಗಿದ್ದರು. ಇದಲ್ಲದೆ ದೂರದರ್ಶನದ 'ನಮ್ಮ ನಮ್ಮಲ್ಲಿ', 'ಶ್ರೀಮಾನ್ ಶ್ರೀಸಾಮಾನ್ಯ' ಮತ್ತು ಮಾಸ್ತಿ ಕಥಾ ಆಧಾರಿತ 'ಪ್ರತಿಧ್ವನಿ' ಮುಂತಾದ ಧಾರಾವಾಹಿಗಳಲ್ಲಿನ ಪಾತ್ರ ನಿರ್ವಹಣೆಗಳಿಂದ ಪ್ರಸಿದ್ಧರಾಗಿದ್ದರು.
ವಿಶ್ವನಾಥರಾವ್ 1995ರ ಏಪ್ರಿಲ್ ಮಾಸದಲ್ಲಿ ಈ ಲೋಕವನ್ನಗಲಿದರು.
ಕೃತಜ್ಞತೆ: ಮಹಾನ್ ಕಲಾವಿದ ಬಿ. ಎಸ್ . ನಾರಾಯಣರಾವ್ ಅವರ ಸುಪುತ್ರ ಮತ್ತು ಸಿ. ವಿಶ್ವನಾಥರಾವ್ ಅವರ ಅಳಿಯಂದಿರಾದ Bangalore Narayanarao Prakash
On the birth anniversary of great artiste of last century C. Vishwanath Rao
ಕಾಮೆಂಟ್‌ಗಳು