ಗೋಪಾಲ ಕೆ ಕಾರಂತ್
ಗೋಪಾಲ ಕೆ ಕಾರಂತ್
ಕನ್ನಡಿಗರಾದ ಗೋಪಾಲ ಕೆ ಕಾರಂತ್ ವಿಶ್ವಖ್ಯಾತ ಸಮಾಜಶಾಸ್ತ್ರಜ್ಞರೆನಿಸಿದ್ದವರು.
ಗೋಪಾಲ ಕೆ ಕಾರಂತರು 1952ರ ಫೆಬ್ರುವರಿ 6ರಂದು ಜನಿಸಿದರು. ಅವರು ಆನೇಕಲ್ ಮೂಲದವರು. ಆನೇಕಲ್ನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರು ಎಪಿಎಸ್ ಕಾಲೇಜಿನಲ್ಲಿ ಮತ್ತು ಸೆಂಟ್ರಲ್ ಕಾಲೇಜಿನ ಓದಿನ ನಂತರ ಮುಂಬೈನ ಟಾಟಾ ಇನ್ಸ್ಟಿಟೂಟ್ ಆಫ್ ಸೋಷಿಯಲ್ ಸೈನ್ಸಸ್ನಲ್ಲಿ ಉನ್ನತ ಸಂಶೋಧನಾ ಅಧ್ಯಯನ ನಡೆಸಿದರು.
ಗೋಪಾಲ ಕೆ ಕಾರಂತರು ಬೆಂಗಳೂರಿನ ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್ ಸಂಸ್ಥೆಯಲ್ಲಿ 1989ರಿಂದ 2014ರವರೆಗೆ ಕಾರ್ಯನಿರ್ವಹಿಸಿದ್ದರು. ಐಸಿಎಸ್ಎಸ್ಆರ್ ನ್ಯಾಷನಲ್ ಫೆಲೊ ಗೌರವ ಹೊಂದಿದ್ದ ಅವರು ಜೈನ್ ವಿಶ್ವವಿದ್ಯಾಲಯದ ಅಫಿಲಿಯೇಟೆಡ್ ಸ್ಕಾಲರ್ ಆಗಿದ್ದರು. ಕರ್ನಾಟಕ ಸ್ಟೇಟ್ ಲೇಬರ್ ಇನ್ಸ್ಟಿಟ್ಯೂಟ್ನಲ್ಲಿ ನಿರ್ದೇಶಕರಾಗಿದ್ದರು.
ಗೋಪಾಲ್ ಕೆ ಕಾರಂತರು ಸಮಾಜಶಾಸ್ತ್ರಜ್ಞರಾಗಿ Peasant Economy and Society; Caste and Social Stratification; Rural-Urban Linkages ಮತ್ತು Sociology of Development ಮುಂತಾದ ಕ್ಷೇತ್ರಗಳಲ್ಲಿ ಹೆಸರಾಗಿದ್ದರು. ವಿಶ್ವದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಆಹ್ವಾನಿತ ಪ್ರೊಫೆಸರ್ ಆಗಿದ್ದರು. ಅನೇಕ ಪ್ರಸಿದ್ಧ ಗ್ರಂಥಗಳನ್ನು ರಚಿಸಿದ್ದ ಅವರ ಬರೆಹಗಳು ವಿಶ್ವದಾದ್ಯಂತ ಪ್ರಕಟಗೊಂಡಿದ್ದವು.
ಗೋಪಾಲ ಕಾರಂತರು 2024ರ ಜೂನ್ 10ರಂದು ನಿಧನರಾದರು.
ವಿಸ್ಮಯವೆಂದರೆ ಫೇಸ್ಬುಕ್ನಲ್ಲಿ ನನ್ನ ಆಪ್ತರಾಗಿ ಆಗಾಗ ಮೆಸೇಜ್ ಮಾಡುತ್ತಿದ್ದ ಗೋಪಾಲ್ ಕೆ ಕಾರಂತರು ಇಷ್ಟೊಂದು ಎತ್ತರದವರು ಎಂದು ಅವರು ನಿಧನರಾಗುವವರೆಗೆ ಅರಿವಾಗಿರಲೇ ಇಲ್ಲ. ನನ್ನ ಬಗ್ಗೆ ಅವರಿಗಿದ್ದ ಪ್ರೀತಿ ಅಪಾರ. ತಮ್ಮ ಪತ್ನಿಗೆ ಆರೋಗ್ಯ ಸರಿಯಿಲ್ಲದ ಆಸ್ಪತ್ರೆ ವಾಸ, ತಮಗಾದ ಕಣ್ಣಿನ ಪೊರೆ ಚಿಕಿತ್ಸೆ ಎಲ್ಲ ಹೇಳುತ್ತ, “ನಿಮ್ಮ ಚಿಂತನೆ, ಬರಹ, ವಿದ್ಯೆಗಳ ಅಭಿಮಾನಿ ಬಳಗದಲ್ಲಿ ನಾನೂ ಒಬ್ಬ" ಎಂದು ಮೆಸೇಜ್ ಮಾಡಿದ್ದರು. "ವಿಪರ್ಯಾಸವೆಂದರೆ, ಅವರಿರುವವರೆಗೆ ನನಗೆ ಅವರು ಮಹಾನ್ ಸಮಾಜ ಶಾಸ್ತ್ರಜ್ಞ ಎಂಬ ಅರಿವೇ ಮೂಡಲಿಲ್ಲ. ಅವರಿಗೆ ನಾನೊಬ್ಬ ಏನೂ ಅರಿಯದ ಮೂರನೆ ದರ್ಜೆ ಪದವೀಧರ ಎಂದು ತಿಳಿಯಲಿಲ್ಲ. ಅದರೂ ನಮ್ಮಲ್ಲಿ ಅನ್ಯೋನ್ಯ ಬಂಧವಿತ್ತು. ಏನೆನ್ನುವುದು ಈ ವಿಧಿ ಲೀಲೆಗೆ"
ಪ್ರೀತಿ ತುಂಬಿದ್ದ ಅಸಾಮಾನ್ಯರಾಗಿದ್ದ ಗೋಪಾಲ ಕಾರಂತರಿಗೆ ಸಾಷ್ಟಾಂಗ ನಮನ. ನಿಮ್ಮ ಪ್ರೀತಿ ಮರೆಯಲಾಗದ್ದು ಸಾರ್ 🌷🙏🌷
Gopal K Karanth
ಕಾಮೆಂಟ್‌ಗಳು