ರಾಹುಲ್ ಬಜಾಜ್
ರಾಹುಲ್ ಬಜಾಜ್
ಭಾರತದಲ್ಲಿ ಬಜಾಜ್ ಹೆಸರನ್ನು ಕೇಳದವರಿಲ್ಲ. ವಾಹನಗಳ ತಯಾರಿಕೆಯಲ್ಲಿ ಅದರಲ್ಲೂ ದ್ವಿಚಕ್ರ ವಾಹನಳು ಮತ್ತು ಆಟೋರಿಕ್ಷಾದಂತಹ ವಾಹನಗಳ ತಯಾರಿಕೆಯಲ್ಲಿ ತನ್ನನ್ನು ತಾನೇ ಪರಿಷ್ಕರಿಸಿಕೊಂಡು ವಿಶ್ವವ್ಯಾಪಾರಿ ಸಮುದಾಯದ ಸವಾಲಿಗೆ ಎದೆಯೊಡ್ಡಿ ಮುನ್ನಡೆದಿರುವ ಸಂಸ್ಥೆಯಿದು. 'ಹಮಾರಾ ಬಜಾಜ್' ಎಂಬುದು ಒಂದು ಕಾಲದಲ್ಲಿ ಕೇವಲ ಪ್ರಚಾರ ಮಾತ್ರವಾಗಿಲ್ಲದೆ, ಭಾರತೀಯ ರಸ್ತೆಗಳ ಬದುಕಿನ ನಾಡಿಮಿಡಿತವನ್ನು ಮೀಟುತ್ತಿದ್ದ ವಾಸ್ತವವೂ ಆಗಿತ್ತು. ಈ ಯಶಸ್ವೀ ಬಜಾಜ್ ಸೂತ್ರದ ಹಿಂದಿದ್ದ ಪ್ರಮುಖ ವ್ಯಕ್ತಿ ರಾಹುಲ್ ಬಜಾಜ್.
ರಾಹುಲ್ ಬಜಾಜ್ 1938ರ ಜೂನ್ 10ರಂದು ಅಗರವಾಲ್ ಕುಟುಂಬದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಜಮ್ನಾಲಾಲ್ ಬಜಾಜ್ ಅವರ ಮೊಮ್ಮಗನಾಗಿ ಜನಿಸಿದರು. ಅಮೆರಿಕದ ಹಾರ್ವರ್ಡ್ ಬ್ಯುಸಿನೆಸ್ ಶಾಲೆ, ದೆಹಲಿಯ ಸೈಂಟ್ ಸ್ಟೀಫನ್ ಶಾಲೆ, ಮುಂಬೈನ ಸರ್ಕಾರಿ ಕಾನೂನು ಕಾಲೇಜು ಮತ್ತು ಕ್ಯಾಥೆಡ್ರಲ್ ಅಂಡ್ ಕಾನನ್ ಶಾಲೆ ಮುಂತಾದ ಕಡೆಗಳಲ್ಲಿ ಅವರ ವಿದ್ಯಾಭ್ಯಾಸ ನಡೆಯಿತು.
ರಾಹುಲ್ ಬಜಾಜ್ 1965ರಲ್ಲಿ ಬಜಾಜ್ ಸಮೂಹದಲ್ಲಿ ಅಧಿಕಾರ ವಹಿಸಿಕೊಂಡರು. ಇವರು ಆರ್ಥಿಕ ಉದಾರೀಕರಣದ ನಂತರದ ಮತ್ತು ಅದರ ಹಿಂದಿನ ಎರಡೂ ಸಂದರ್ಭಗಳಲ್ಲೂ ಸಂದರ್ಭಕ್ಕೆ ತಕ್ಕಂತೆ ವ್ಯಾಪಾರವನ್ನು ಯಶಸ್ವಿಯಾಗಿ ಮುನ್ನಡೆಸಿದ ಸಾಹಸಿ.
ರಾಹುಲ್ ಬಜಾಜ್ 2005ರಲ್ಲಿ ಆಡಳಿತದ ಹೊರಗಿನ ಚೇರ್ಮನ್ ಹುದ್ದೆ ಮಾತ್ರಾ ಉಳಿಸಿಕೊಂಡು ಮಗ ರಾಜೀವ್ ಅವರನ್ನು ಸಮೂಹದ ಮ್ಯಾನೇಜಿಂಗ್ ಡೈರೆಕ್ಟರ್ ಸ್ಥಾನಕ್ಕೆ ತಂದರು. 2006-2010 ಅವಧಿಯಲ್ಲಿ ರಾಜ್ಯಸಭೆಗೆ ಆಯ್ಕೆಗೊಂಡು ಕಾರ್ಯನಿರ್ವಹಿಸಿದರು. ರಾಹುಲ್ ಬಜಾಜ್ 1979-80 ಮತ್ತು 1999-2000ದ ಅವಧಿಗಳಲ್ಲಿ ಭಾರತೀಯ ಕೈಗಾರಿಕೆಗಳ ಒಕ್ಕೂಟವಾದ ಸಿಐಐ ಸಂಘಟನೆಗೆ ಅಧಕ್ಷರಾಗಿ ಚುನಾಯಿತರಾಗಿದ್ದರು. 2021ರಿಂದ ಅವರು ತಾವು ಹೊಂದಿದ್ದ ನಾನ-ಎಕ್ಸಿಕ್ಯೂಟೀವ್ ಚೇರ್ಮನ್ ಹುದ್ದೆಯಿಂದಲೂ ಹೊರಬಂದರು.
ರಾಹುಲ್ ಬಜಾಜ್ 2008ರಲ್ಲಿ ಬಜಾಜ್ ಸಂಸ್ಥೆಯನ್ನು ಬಜಾಜ್ ಆಟೋ, ಬಜಾಜ್ ಫೈನಾನ್ಷಿಯಲ್ ಸರ್ವೀಸಸ್ ಮತ್ತು ಹೋಲ್ಡಿಂಗ್ ಕಂಪನಿ ಘಟಕಗಳಾಗಿ ವಿಭಜಿಸಿದರು.
2001ರಲ್ಲಿ ರಾಹುಲ್ ಬಜಾಜ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತು. 2017ರಲ್ಲಿ ಅವರಿಗೆ ಜೀವಮಾನ ಸಾಧನೆಗಾಗಿ ಸಿಐಐ ಪ್ರೆಸಿಡೆಂಟ್ಸ್ ಅವಾರ್ಡನ್ನು ಭಾರತದ ರಾಷ್ಟ್ರಪತಿಗಳಾಗಿದ್ದ ಪ್ರಣಬ್ ಮುಖರ್ಜಿ ಸಲ್ಲಿಸಿದರು. ಫೋರ್ಬ್ಸ್ ಸಂಸ್ಥೆ 2021ರಲ್ಲಿ ರಾಹುಲ್ ಬಜಾಜ್ 6.9 ಬಿಲಿಯನ್ ಅಮೆರಿಕನ್ ಡಾಲರ್ಗಳ ಶ್ರೀಮಂತರೆಂದು ಹೇಳಿತ್ತು.
ರಾಹುಲ್ ಬಜಾಜ್ 2022ರ ಫೆಬ್ರುವರಿ 12ರಂದು ನಿಧನರಾದರು.
On the birth anniversary of great industrialist Rahul Bajaj
ಕಾಮೆಂಟ್‌ಗಳು